ಸುಳ್ಯ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬಾರದು. ಹೊರಗಿನ ಅಭ್ಯರ್ಥಿಗೆ ಅವಕಾಶ ನೀಡುವುದಕ್ಕಿಂತ ಎಸ್.ಅಂಗಾರ ಅವರನ್ನೇ ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವುದು ಒಳಿತು ಎಂದು ಸುಳ್ಯ ತಾಲೂಕು ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಮನ್ವಯ ವೇದಿಕೆ ಹೇಳಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು ಹಾಗೂ
ಬಿಜೆಪಿಯ ಪರಿಶಿಷ್ಟ ಜಾತಿ ಮುಖಂಡರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಸುಳ್ಯ ಕ್ಷೇತ್ರದಿಂದ ಹೊರಗಿನ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿದ್ದಾರೆ
ವೇದಿಕೆಯ ಮುಖಂಡ ಸಂಜಯ್ ಕುಮಾರ್ ಪೈಚಾರ್ ಮಾತನಾಡಿ’ ಸುಳ್ಯ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಕಳೆದ ಆರು ಅವಧಿಯಲ್ಲಿ ಬಿಜೆಪಿಯಿಂದ ಎಸ್.ಅಂಗಾರ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಬದಲಾವಣೆಯಾಗುತ್ತಾರೆ, ಸುಳ್ಯ ವಿಧಾನಸಭಾ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂಬ ಮಾಹಿತಿಗಳು ಇದೆ. ಆದುದರಿಂದ ಸುಳ್ಯ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸರಿಯಲ್ಲ. ಸುಳ್ಯದಲ್ಲಿಯೇ ಅರ್ಹ ಅಭ್ಯರ್ಥಿಗಳು ಇದ್ದಾರೆ. ಇಲ್ಲಿರುವ ಮುಖಂಡರನ್ನು ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಸುವುದಕ್ಕಿಂತ ಎಸ್ ಅಂಗಾರ ಅವರನ್ನು ಮತ್ತೆ ಅಭ್ಯರ್ಥಿಯಾಗಿ ಇಳಿಸಬೇಕು ಎಂದು ಹೇಳಿದರು.
ವೇದಿಕೆಯ ಮುಖಂಡ ಕೇಶವ ಮಾಸ್ತರ್ ಹೊಸಗದ್ದೆ ಮಾತನಾಡಿ ‘ಪಕ್ಷದಲ್ಲಿ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಮತ್ತು ಸಂಘಟನೆ ತೀರ್ಮಾನ ಕೈಗೊಳ್ಳುತ್ತದೆ. ನಮ್ಮಲ್ಲಿ ಪಕ್ಷಕ್ಕಾಗಿ ದುಡಿದವರು ಸಾಕಷ್ಟು ಮಂದಿ ಅರ್ಹ ನಾಯಕರು ಇದ್ದಾರೆ. ಹಾಗಿರುವಾಗ ಹೊರಗಿನಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವುದನ್ನು ನಾವು ವಿರೋಧಿಸುತ್ತೇವೆ. ಅರ್ಹರು ನಮ್ಮಲ್ಲೇ ಇರುವಾಗ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಅವಕಾಶ ನೀಡಬೇಕೆಂದು ಅವರು ಹೇಳಿದರು.
ಜಗನ್ನಾಥ ಜಯನಗರ ಮಾತನಾಡಿ’ ಹೊರಗಿನವರನ್ನು ಸುಳ್ಯದ ಅಭ್ಯರ್ಥಿಯಾಗಿ ಕಣಕ್ಕಿಳಿಸಬಾರದು. ನಮ್ಮ ಸುಳ್ಯದವರಿಗೆ ಅವಕಾಶವನ್ನು ನೀಡಬೇಕು. ಚುನಾವಣೆಯ ದೃಷ್ಟಿಯಿಂದ ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಮನ್ವಯ ವೇದಿಕೆಯನ್ನು ರಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಮುದಾಯದ ಜನಾಂಗದ ಪರವಾಗಿ,ಮತ್ತು ಅವರ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು. ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಇಂದಿಗೂ ಕೂಡ ನಮ್ಮ ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರ ಸೇವೆ, ಅಭಿವೃದ್ಧಿಗಾಗಿ ಈ ವೇದಿಕೆ ಕಾರ್ಯಚರಿಸಲಿದೆ ಎಂದು ಹೇಳಿದರು.
ಚನಿಯ ಕಲ್ತಡ್ಕ ಮಾತನಾಡಿ ಯಾವುದೇ ಕಾರಣಕ್ಕೂ ಹೊರಗಿನ ವ್ಯಕ್ತಿಗಳನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಬಾರದು. ಸುಳ್ಯದಿಂದಲೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ಶಂಕರ್ ಪೆರಾಜೆ, ಬಾಬು ಕೆ.ಎಂ.ಜಾಲ್ಸೂರು, ಅಚ್ಚುತ ಗುತ್ತಿಗಾರು ಉಪಸ್ಥಿತರಿದ್ದರು.