ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 19 ನೇ ವರ್ಷದ ಸಂಸ್ಮರಣೆ ಹಾಗೂ ಯಕ್ಷದಿಗ್ಗಜ ಬಣ್ಣದ ಮಾಹಾಲಿಂಗರ ನೆನಪಿನಲ್ಲಿ ನಡೆಸುವ ಬಣ್ಣದಜ್ಜನ ಸ್ಮೃತಿಯಾನ ತಿಂಗಳ ಸರಣಿ ಕಾರ್ಯಕ್ರಮದ ನಡೆಯಿತು. ಗೋಪಾಲಕೃಷ್ಣ ದೇವರ ಪೂಜೆ ಮತ್ತು ಭಗವದ್ಗೀತಾ ಪಾರಾಯಾಣದ ಬಳಿಕ
ಹಿರಿಯ ವೈದ್ಯ, ಸಾಹಿತಿ, ಅರ್ಥಧಾರಿ ಡಾ ರಮಾನಂದ ಬನಾರಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಲಾವಿದ, ವೇಷಧಾರಿ ಕುತ್ತಿಮುಂಡ ಕೃಷ್ಣಪ್ಪ ಗೌಡರನ್ನು ಬಣ್ಣದ ಮಹಾಲಿಂಗ ಸ್ಮೃತಿ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅವರಿಗೆ ಕಲಾಸಂಘದ ವತಿಯಿಂದ ಗೌರವಧನವನ್ನಿತ್ತು ಅಭಿನಂದಿಸಲಾಯಿತು. ಮಹಾಸೀತಾ ಪ್ರಕಾಶನದ ವತಿಯಿಂದ ಕೊಡಮಾಡುವ ದೇಲಂಪಾಡಿ ಮಹಾಲಿಂಗ ಪಾಟಾಳಿ ಸೀತಮ್ಮ ಸ್ಮೃತಿ ಪುರಸ್ಕಾರವನ್ನು ಹಿರಿಯ ಮದ್ದಳೆವಾದಕ ಮಂಡಕ್ಕೋಲು ಅಪ್ಪಯ್ಯ ಮಣಿಯಾಣಿಯವರಿಗೆ ಪ್ರದಾನ ಮಾಡಲಾಯಿತು. ನಾರಾಯಣ ತೋರಣಗಂಡಿ ಬಣ್ಣದ ಮಹಾಲಿಂಗರ ಸಂಸ್ಮರಣೆ ಮಾಡಿದರು.

ಯಕ್ಷಗಾನ ಕಲಾವಿದರಾದ ದೇಲಂಪಾಡಿ ರಮಾನಂದ ರೈಯವರು ದೇಲಂಪಾಡಿ ಮಹಾಲಿಂಗ ಪಾಟಾಳಿಯವರ ಸಂಸ್ಮರಣೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಕಲಾವಿದರೂ ಆದ ದೇಲಂಪಾಡಿ ರಾಮಣ್ಣ ಮಾಸ್ತರ್ ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು.ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಉಪಾಧ್ಯಕ್ಷ ಸುಬ್ಬಪ್ಪ ಪಟ್ಟೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರುಗಳೂ ಕಲಾಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ರಾಜಸೂಯಾಧ್ವರ ಯಕ್ಷಗಾನ ತಾಳಮದ್ದಳೆಯು ಜರಗಿತು.





