ಸುಳ್ಯ:ಮಕ್ಕಳ ಬದುಕಿನ ವರ್ಣ ಲೋಕ ಬೇಸಿಗೆ ರಜಾ ದಿನಗಳು.ಆ ಬೇಸಿಗೆ ರಜೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಬಣ್ಣ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಸುಳ್ಯದ ಸಾಂಸ್ಕೃತಿಕ ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’. ಕಳೆದ ಹಲವು ವರ್ಷಗಳಿಂದ ಆಕರ್ಷಕ ಮತ್ತು ವೈವಿಧ್ಯಮಯ ಶಿಬಿರವಾಗಿ ಮೂಡಿ ಬರುತ್ತಿದ್ದು ಈ ಬಾರಿ ರಂಗಮಯೂರಿಯ
ಬಣ್ಣದ ಲೋಕ ಎಪ್ರಿಲ್ 13ರಿಂದ ತೆರೆದುಕೊಳ್ಳಲಿದೆ. ಎಪ್ರಿಲ್ 13 ರಿಂದ 21ರ ತನಕ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಬಣ್ಣ ಶಿಬಿರ ನಡೆಯಲಿದೆ. ಪ್ರಶಾಂತ ಸುಂದರ ವಾತಾವರಣದಲ್ಲಿ ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ನಲಿಯುವ ಸುಂದರ ಶಿಬಿರ ಇದು. ಎಲ್ಲರೂ ಒಂದಾಗಿ ಒಂದೇ ಸೂರಿನಡಿ ಹಾಡಿ ಕುಣಿಯುವ ಸಮಯ, ಹಾಡುಗಳು, ಪಾಡ್ದನಗಳು, ಕುಣಿತ, ನಾಟಕದ ಮೂಲಕ ಸಂಭ್ರಮಿಸುವ ದಿನಗಳು.
ಕಳೆದ 8ವರ್ಷದಿಂದ ಮಕ್ಕಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ರಂಗ ಮಯೂರಿ ಕಲಾಶಾಲೆ ರಾಜ್ಯಮಟ್ಟದ ಅತ್ಯುತ್ತಮ ಕಲಾಶಾಲೆಗಳಲ್ಲಿ ಒಂದು.

ಕಾಯರ್ತೋಡಿಯಲ್ಲಿ ತೆರೆದು ಕೊಳ್ಳುವ ‘ಬಣ್ಣದ ಲೋಕ’: ರಂಗಮಯೂರಿ ಕಲಾಶಾಲೆಯ ಆಕರ್ಷಕ ಬೇಸಿಗೆ ಶಿಬಿರಕ್ಕೆ ದಿನ ಗಣನೆ ಆರಂಭಗೊಂಡಿದ್ದು ನೋಂದಾವಣೆ ಅಂತಿಮ ಹಂತದಲ್ಲಿದೆ. ಸೀಮಿತ ಸಂಖ್ಯೆ ಶಿಬಿರಾರ್ಥಿಗಳಿಗೆ ಅವಕಾಶ ಇದ್ದು ಮೊದಲು ನೋಂದಾವಣೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.ಭಾಷೆ ಶುದ್ಧಿ, ಅಭಿನಯ ಪ್ರಧಾನ ಮಕ್ಕಳ ನಗುವಿನ ಬೇಸಿಗೆ ಶಿಬಿರ ಇದಾಗಿರಲಿದೆ.
ಮಕ್ಕಳ ಪುಟಾಣಿ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಗ್ರಾಮೀಣ ಮಕ್ಕಳ ಕನಸನ್ನ ಉತ್ತುಂಗಕ್ಕೆ ಏರಿಸುವ ಕಾರ್ಯ ಬಣ್ಣ ಶಿಬಿರದ ಮೂಲಕ ಮಾಡಲಾಗುತ್ತಿದೆ. ಶಿಬಿರದ ವಿಶೇಷವೆಂದರೆ ಈ ಬಾರಿ ಹಲವು ವೈವಿಧ್ಯತೆಯ ಜೊತೆ ಹೊಸ ಕ್ರಿಯಾತ್ಮಕ ಯೋಜನೆಯೊಂದಿಗೆ ಶಿಬಿರ ಮೂಡಿಬರಲಿದೆ. ಕಳೆದ ಎಂಟು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಸುಳ್ಯದ ರಂಗಮಯೂರಿ ಕಲಾಶಾಲೆ. ಬೇಸಿಗೆ ರಜಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು

ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ.
ಈ ಬಾರಿಯ ಶಿಬಿರದಲ್ಲಿ ದೇಸೀಯ ಕಲೆಗಳ ಅನಾವರಣದೊಂದಿಗೆ ಹಲವು ಶೈಲಿಯ ರಂಗ ತರಬೇತಿ ನೀಡಲಾಗುವುದು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಶೈಲೀಕೃತ ನಾಟಕಗಳ ಕಲಿಕೆ, ಪ್ರದರ್ಶನ, ಜನಪದ ಹಾಡು, ನೃತ್ಯ, ದೇಸೀ ಆಟ, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಇತ್ಯಾದಿ ವಿಭಿನ್ನ ಚಟುವಟಿಕೆಗಳ ಜೊತೆಗೆ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು, ರಂಗಮಯೂರಿ ಶಿಕ್ಷಕರು, ವ್ಯವಸ್ಥಾಪಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಜೊತೆಗಿರುತ್ತಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ರಂಗ ನಿರ್ದೇಶಕರಾದ ಚರಿತ, ಮೋಹನ್ ಶೇಣಿ, ಮಹೇಶ್ ಆಚಾರ್ಯ ಹೊನ್ನಾವರ, ಶುಭಕರ ಪುತ್ತೂರು, ಹೇಮಂತ್ ಕುಮಾರ್ ಬೆಂಗಳೂರು, ರೋಹಿತ್ ಬೈಕಾಡಿ, ಪಲ್ಲವಿ ಕೊಡಗು, ವಿನೋದ್ ಕರ್ಕೇರ್, ಡಾನ್ಸ್ ಮಾಸ್ಟರ್ ರಾಹುಲ್ ಎಸ್.ರಾವ್ ಮತ್ತಿತರರು ಭಾಗವಹಿಸಲಿದ್ದಾರೆ.

ಪ್ರತೀ ಮಗುವಿಗೂ ಸಹಭೋಜನ, ಆಟ ಪಾಠ ತರಬೇತಿಗೆ ವಿಶಾಲ ಸಭಾಂಗಣ, ಸ್ವಚ್ಛ ಗಾಳಿ, ಬೆಳಕು, ಕುಡಿಯುವ ನೀರು, ಅಚ್ಚುಕಟ್ಟಾದ ಶೌಚಾಲಯ ವ್ಯವಸ್ಥೆ ಜೊತೆಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. 7ವಯಸ್ಸಿನಿಂದ 17 ವಯಸ್ಸಿನ ಮಕ್ಕಳಿಗೆ ಶಿಬಿರದಲ್ಲಿ
ಭಾಗವಹಿಸುವ ಅವಕಾಶ ನೀಡಲಾಗಿದೆ. ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ. ಸುಳ್ಯದಲ್ಲಿ 2018ರಲ್ಲಿ ಆರಂಭಗೊಂಡ ರಂಗಮಯೂರಿ ಕಲಾಶಾಲೆ. ಕಲಾಶಿಕ್ಷಣದ ಜೊತೆಗೆ ಬೇಸಿಗೆ ರಜಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಪ್ರತಿ ಕ್ಷಣವೂ ಕಲಿಕೆ, ಪ್ರತಿ ಗಳಿಗೆಯೂ ಖುಷಿಯ ನಗು ಹಂಚುವ ಮಕ್ಕಳ ಕನಸಿನ ಬಣ್ಣದ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ.

ಕಲಾಶಾಲೆಯ ಬಗ್ಗೆ ;
ಈ ಸಮಾಜದಲ್ಲಿ ಉತ್ತಮ ಪೋಷಕರು ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡಿ ಪ್ರಜೆಯಾಗಿಸುವುದರ ಜೊತೆಗೆ, ಪ್ರತಿಭೆಗಳನ್ನು ಪೋಷಿಸಿ, ಬೆಳೆಸಿ ಸತ್ಪಜೆಯನ್ನಾಗಿಸುವ ಸಲುವಾಗಿ ಕಲಾಶಾಲೆಗಳನ್ನು ಅರಸುತ್ತಾರೆ. ಅಂತಹ ಪೋಷಕರಿಗೆ ತೆರೆದ ಬಾಗಿಲಾಗಿ ಪ್ರತಿಭೆಗಳಿಗಾಗಿ, ಪ್ರತಿಭೆಗಳಿಗೋಸ್ಕರ ಬೆಳೆಯುತ್ತಿರುವ ಸಂಸ್ಥೆ ರಂಗಮಯೂರಿ ಕಲಾಶಾಲೆ.
ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಎಲ್ಲರನ್ನೂ ಬೆಳೆಸುವ ಉದ್ದೇಶದಿಂದ ಪ್ರತೀ ದಿನ ಹೊಸತನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಭಿನ್ನ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದರ ಜೊತೆಗೆ, ಮಕ್ಕಳು ಸ್ವತಂತ್ರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ, ಪ್ರಶಂಸೆಗಳನ್ನು

ಗಳಿಸಿಕೊಳ್ಳುವಲ್ಲಿ ಈ ಕಲಾಶಾಲೆಯು ಮಾದರಿಯಾಗುತ್ತಾ ಬಂದಿರುತ್ತದೆ.ರಂಗಮಯೂರಿ ಕಲಾಶಾಲೆಯಲ್ಲಿ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ಅಭಿನಯ ಇತ್ಯಾದಿ ತರಗತಿಗಳನ್ನು ಆಯಾಯ ಶಿಕ್ಷಕರ ಮಾರ್ಗದರ್ಶನದ ಮುಖಾಂತರ ವಾರಪೂರ್ತಿ ನಡೆಸುತ್ತಿರುತ್ತದೆ. ಅಲ್ಲದೇ, ಪ್ರಸ್ತುತ ಸಮಯದಲ್ಲಿ ರಂಗಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳನ್ನು ಸ್ಥಳೀಯ ವೇದಿಕೆಯ ಜೊತೆಗೆ ಹೊರಗಿನ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮ, ಸ್ಪರ್ಧೆಗಳೊಂದಿಗೆ ವಿಜೇತರಾಗಿಸಿರುವುದನ್ನು ಕಾಣಬಹುದು.
ಶಿಬಿರದ ದಾಖಲಾತಿ ಮಾಹಿತಿ ;
ಏಪ್ರಿಲ್ 13 ರಿಂದ 21 (2026)ರವರೆಗೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ನಡೆಯಲಿರುವ ಶಿಬಿರದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 08, 2026 ರ ಒಳಗಾಗಿ, ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ.
ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : 9611355496
6363783983 ಎಂದು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.










