ಸುಳ್ಯ:ಗ್ರಾಮೀಣ ಪ್ರತಿಭೆಗಳ ಕಲೆಯ ಅನಾವರಣವು ಶಿಬಿರದಿಂದ ಈಡೇರಿದೆ.ರಂಗ ಕಲಿಕೆಯಿಂದ ಅದ್ಭುತ ಕಲಾ ಶಕ್ತಿ ಪ್ರಾಪ್ತಿಯಾಗುವುದು ಎಂದು ರಂಗಭೂಮಿ ನಿರ್ದೇಶಕಿ, ಹಿರಿಯ ನಟಿ ಗೀತಾ ಸುರತ್ಕಲ್
ಅಭಿಪ್ರಾಯಪಟ್ಟಿದ್ದಾರೆ. ರಂಗಮಯೂರಿ ಕಲಾ ಶಾಲೆಯ ವತಿಯಿಂದ ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಳದ ವಠಾರದಲ್ಲಿ ನಡೆದ 8 ದಿನಗಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಬಣ್ಣ 2024ರ ಸಮಾರೋಪ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಈರಯ್ಯ ದೂಂತೂರು ಮಾತನಾಡಿ ‘ಬಣ್ಣ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪ್ರತಿಭೆಯು ಕಾಮನ ಬಿಲ್ಲಿನ ಏಳು ಬಣ್ಣದಂತೆ ಹೊಳಪುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ತಾಂತ್ರಿಕ ನಿರ್ದೇಶಕ ವಿನೋದ್ ಕರ್ಕೇರ, ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ, ಶಿಬಿರದ ನಿರ್ದೇಶಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಕಲಾ ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯ ಗೀತೆಯನ್ನು ಪ್ರಸ್ತುತ ಪಡಿಸಿದರು.ವೈಷ್ಣವಿ ಸ್ವಾಗತಿಸಿದರು. ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಶಾಲೆಯ
ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.ಪೋಷಕ ಕಮಿಟಿ ಸದಸ್ಯರು ಸಹಕರಿಸಿದರು. ವಿದ್ಯಾರ್ಥಿಗಳ ಪೋಷಕ ರು ಭಾಗವಹಿಸಿದರು.
ಸಾಂಸ್ಕೃತಿಕ ಸಂಭ್ರಮ:
ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ಶಿಬಿರದಲ್ಲಿ ಕಲಿಸಲಾದ ಕರ್ಣ ಭಾರ ನಾಟಕ, ಒಗಟಿನ ರಾಣಿ ನಾಟಕ, ಸ್ವಾಮಿ ಅಯ್ಯಪ್ಪ ನೃತ್ಯ ರೂಪಕ, ದೇಸೀ ಸೊಗಡಿನ ತಿತ್ತೀರಿ ನೃತ್ಯ, ಜಾನಪದ ನೃತ್ಯಗಳು, ದೇಸೀ ಸಮರ ಕಲೆ ಕಳರಿಪಯಟ್, ವಿವಿಧ ನೃತ್ಯಗಳು, ಜಾನಪದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶಿಸಿದರು.