ಸುಳ್ಯ:ಪ್ರೊ ಕಬಡ್ಡಿ ಹಾಗೂ ರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡ ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿತು. ಬ್ಯಾಂಕ್ ಆಫ್ ಬರೋಡ ತಂಡ ಎನ್ಸಿಆರ್ ದೆಹಲಿ ತಂಡದ ವಿರುದ್ಧ 42-16 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಪ್ರೋ ಕಬಡ್ಡಿ ಆಟಗಾರರಾದ

ಸುಕೇಶ್ ಹೆಗ್ಡೆ, ರತನ್, ರೋಹಿತ್ ಮಾರ್ಲ, ಸುನಿಲ್ ಹನುಮಂತಪ್ಪ, ಸಚಿನ್ ಸುವರ್ಣ ಸೇರಿ ಖ್ಯಾತ ಆಟಗಾರರನ್ನು ಒಳಗೊಂಡ ಬ್ಯಾಂಕ್ ಆಫ್ ಬರೋಡಾ ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ ನಿರಂತರ ಅಂಕಗಳನ್ನು ಏರಿಸುತ್ತಾ ಸಾಗಿ ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಂಡಿತು. ಮಧ್ಯಮ ವಿರಾಮದ ವೇಳಗೆ 18-7 ಅಂಕಗಳನ್ನು ಮುನ್ನಡೆ ಕಾಯ್ದುಕೊಂಡಿತು. ಕೆಲವು ಆಕರ್ಷಕ ಹಿಡಿತಗಳ ಮೂಲಕ ಎನ್ಸಿಆರ್ ತಂಡವೂ ಗಮನ ಸೆಳೆಯಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.









