ಢಾಕಾ: ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಐದು ದಿನಗಳ ಬಳಿಕ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಧ್ಯಕ್ಷ ತಾರಿಕ್ ರೆಹಮಾನ್ ಮಂಗಳವಾರ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ರಾಜಧಾನಿಯ ಸಂಸತ್ ಭವನದಲ್ಲಿ ನಡೆದ ಸಮಾರಂಭದಲ್ಲಿ
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ತಾರಿಕ್ ರೆಹಮಾನ್ ಅವರಿಗೆ ಅಧಿಕಾರ ಮತ್ತು ಗೋಪ್ಯತಾ ಪ್ರಮಾಣ ಬೋಧಿಸಿದರು. ಇದೇ ವೇಳೆ ನೂತನ ಸಚಿವ ಸಂಪುಟದ ಸದಸ್ಯರೂ ಪ್ರಮಾಣವಚನ ಸ್ವೀಕರಿಸಿದರು. ಸುಮಾರು 35 ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ ಪುರುಷ ನಾಯಕನೊಬ್ಬ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವುದು ಗಮನ ಸೆಳೆಯಿತು.
ಸಮಾರಂಭದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಭಾರತದ ಪರವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆ 11.30ಕ್ಕೆ ಸಂಸತ್ ಭವನದಲ್ಲಿ ನಡೆದ ಬಿಎನ್ಪಿ ಸಂಸದೀಯ ಪಕ್ಷದ ಸಭೆಯಲ್ಲಿ ತಾರಿಕ್ ರೆಹಮಾನ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಸ್ಥಾಯಿ ಸಮಿತಿ ಸದಸ್ಯ ಸಲಾಹುದ್ದೀನ್ ಅಹ್ಮದ್ ತಿಳಿಸಿದ್ದಾರೆ. ಫೆಬ್ರುವರಿ 12ರಂದು ನಡೆದ 13ನೇ ಸಂಸತ್ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಿಎನ್ಪಿ 297 ಸ್ಥಾನಗಳಲ್ಲಿ 212 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.





