ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭಾರತ ಆರು ರನ್ ಅಂತರದ ಸೋಲನುಭವಿಸಿದೆ.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ತಂಡ 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 265 ರನ್ ಕಲೆಹಾಕಿತು. ಭಾರತ 49.5 ಓವರ್ಗಳಲ್ಲಿ 259 ರನ್ಗಳಿಗೆ ಅಲೌಟಾಯಿತು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಬಾರಿಸಿದ ಶತಕ ವ್ಯರ್ಥವೆನಿಸಿದೆ. ಬಾಗ್ಲಾದೇಶ ವಿರುದ್ಧದ ಸೋಲಿನೊಂದಿಗೆ
ಟೂರ್ನಿಯಲ್ಲಿ ಭಾರತದ ಅಜೇಯ ಓಟಕ್ಕೆ ತೆರೆ ಬಿದ್ದಿದೆ. ಪ್ರಮುಖ ಕೊಹ್ಲಿ, ಬುಮ್ರಾ, ಸಿರಾಜ್, ಪಾಂಡ್ಯ ಸೇರಿ ಪ್ರಮುಖ ಆಟಗಾರರಿಗೆ ಭಾರತ ವಿಶ್ರಾಂತಿ ನೀಡಿತ್ತು.
ಏಕದಿನ ಕ್ರಿಕೆಟ್ನಲ್ಲಿ ಶುಭಮನ್ ಗಿಲ್ 5ನೇ ಶತಕ ಸಾಧನೆ ಮಾಡಿದರು. 133 ಎಸೆತಗಳನ್ನು ಎದುರಿಸಿದ ಗಿಲ್ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 121 ರನ್ ಗಳಿಸಿದರು. ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಗಳಿಸಿದ್ದ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಅನುಭವಿಸಿದರು. 42 ರನ್ ಗಳಿಸಿದ ಅಕ್ಷರ್ ಪಟೇಲ್ ಗೆಲುವಿಗಾಗಿ ಹೋರಾಟ ನಡೆಸಿದರೂ ಫಲ ನೀಡಲಿಲ್ಲ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ 11 ವರ್ಷಗಳ ಬಳಿಕ ಬಾಂಗ್ಲಾದೇಶ ವಿರುದ್ಧ ಭಾರತ ಸೋಲು ಕಂಡಿದೆ. ಈ ಹಿಂದೆ 2012ರಲ್ಲಿ ಮೀರ್ಪುರದಲ್ಲಿ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಒಟ್ಟಾರೆ ಬಹುರಾಷ್ಟ್ರೀಯ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಮೂರನೇ ಸೋಲು ಕಂಡಿದೆ.