ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾ.12 ರಾಜ್ಯಕ್ಕೆ ಆಗಮಿಸುತ್ತಿದ್ದು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಹಾಗೂ ಧಾರವಾಡದ ಐಐಟಿ ಲೋಕಾರ್ಪಣೆ ಸೇರಿದಂತೆ ಸುಮಾರು 16ಸಾವಿರ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 8,480 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್
ಹೆದ್ದಾರಿಯನ್ನು ಪ್ರಧಾನಿ ಮೋದಿ ಮಂಡ್ಯದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ,ಮೈಸೂರು-ಕುಶಾಲನಗರ ನಡುವಿನ ನಾಲ್ಕು ಪಥಗಳ 92 ಕಿ.ಮೀ. ಉದ್ದದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಬಹುನಿರೀಕ್ಷಿತ ಬೆಂಗಳೂರು–ಮೈಸೂರು ದಶಪಥಗಳ ಹೆದ್ದಾರಿಯು ಬೆಂಗಳೂರು-ಮೈಸೂರು ನಗರಗಳನ್ನು ಇನ್ನಷ್ಟು ಹತ್ತಿರವಾಗಿಸಲಿದೆ. 3 ಗಂಟೆಗಳ ಪ್ರಯಾಣ ಸರಾಸರಿ 90 ನಿಮಿಷಕ್ಕೆ ಇಳಿಸಲಿದೆ.

ರಾಜ್ಯದ ಮೊದಲ ನಿಯಂತ್ರಿತ ಎಕ್ಸ್ಪ್ರೆಸ್ ವೇ ಎಂಬ ಖ್ಯಾತಿ ಈ ರಸ್ತೆಯದ್ದು. ಹತ್ತು ಪಥಗಳ ಪೈಕಿ ಆರು ಪಥದ ಎಕ್ಸ್ಪ್ರೆಸ್ವೇನಿಂದಾಗಿ ವಾಹನಗಳ ವೇಗ ಹೆಚ್ಚಿದ್ದು, ಬೆಂಗಳೂರು–ಮೈಸೂರು ನಡುವಿನ ಪ್ರಯಾಣದ ಅವಧಿ ಇಳಿಯಲಿದೆ. ಬೆಂಗಳೂರು–ಮೈಸೂರು ನಡುವಿನ 118ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಆಗಿದೆ.ಆರು ಪಥದ ಎಕ್ಸ್ಪ್ರೆಸ್ವೇ, ಎಕ್ಸ್ಪ್ರೆಸ್ ವೇನ ಎರಡೂ ಬದಿಯಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.
ರಾಜ್ಯದ ಮೊದಲ ಆಕ್ಸಸ್ ಕಂಟ್ರೋಲ್ಡ್ ಹೈವೆ ಎಂಬ ಖ್ಯಾತಿಯ
ಎಕ್ಸ್ಪ್ರೆಸ್ವೇನ ಎರಡೂ ಬದಿ 7 ಅಡಿ ಎತ್ತರದ ತಂತಿಬೇಲಿ ನಿರ್ಮಾಣ ಆಗಲಿದೆ. ಗಂಟೆಯಲ್ಲಿ ಸರಾಸರಿ 100 ಕಿ.ಮಿ.ವೇಗದಲ್ಲಿ ಸಂಚರಿಸಬಹುದಾದ ರಸ್ತೆಯಲ್ಲಿ 9 ದೊಡ್ಡ ಸೇತುವೆಗಳು, 42 ಚಿಕ್ಕ ಸೇತುವೆಗಳು, 11 ಮೇಲ್ಸೇತುವೆಗಳು. 2018 ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಬೆಂಗಳೂರು- ಮೈಸೂರು ಮಧ್ಯೆ ಬಿಡದಿ,ರಾಮನಗರ, ಚೆನ್ನಪಟ್ಟಣ,ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣವನ್ನು ಹಾದು ಹೋಗಲಿದೆ.