ಬನಾರಿ:ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80ನೇ ವಾರ್ಷಿಕೋತ್ಸವ ಯಕ್ಷಗಾನ, ಸಾಂಸ್ಕೃತಿಕ ಸಂಭ್ರಮದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಿನಪೂರ್ತಿ ಬನಾರಿಯ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬನಾರಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮತ್ತು
ವಾಗ್ದೇವಿ ಭಜನಾ ಮಂಡಳಿ ಕಾವು ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ – ಸಮರಸನ್ನಾಹ, ವೀರಾಭಿಮನ್ಯು ನಡೆಯಿತು.ಮಧ್ಯಾಹ್ನ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಇತರ ಸಾಮಾಜಿಕರಿಂದ ಪ್ರತಿಭಾ ಪ್ರದರ್ಶನ, ಭರತನಾಟ್ಯ ಮತ್ತು ವಿವಿಧ ನೃತ್ಯಗಳು ಮನಸೂರೆಗೊಂಡಿತು. ಸಂಜೆ ಯಕ್ಷಗಾನ ತಾಳಮದ್ದಳೆ – ಧುರವೀಳ್ಯ ಕರ್ಣಭೇದನ ಸಂಪನ್ನಗೊಂಡಿತು. ಪ್ರಸಿದ್ಧ
ಅರ್ಥಧಾರಿಗಳಾಗಿ ವಿದ್ವಾನ್ ಕೆರೆಕ್ಕೆ ಉಮಾಕಾಂತ ಭಟ್ಟ, ಡಾ. ಶ್ರೀಪತಿ ಕಲ್ಲೂರಾಯ, ವೆಂಕಟರಾಮ ಭಟ್ಟ ಸುಳ್ಯ, ಗಣರಾಜ ಕುಂಬ್ಳೆ, ಡಾ. ರಮಾನಂದ ಬನಾರಿ ಭಾಗವಹಿಸಿದ್ದರು. ಬಳಿಕ ನೃತ್ಯಗುರು ಸರೋಜಿನಿ ಬನಾರಿ ನಿರ್ದೇಶನದಲ್ಲಿ ಉದಯೋನ್ಮುಖ ಕಲಾವಿದರಿಂದ ನಡೆದ
ಯಕ್ಷಗಾನ ಬಯಲಾಟ ನರಕಾಸುರ ವಧೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ರಾತ್ರಿ ಸಂಘದ ಹಿರಿಯ ಕಲಾವಿದರಿಂದ
‘ಪಾರ್ಥ ಸತ್ವ ಪರೀಕ್ಷೆ’ ಯಕ್ಷಗಾನ ಬಯಲಾಟ ತುಂಬಿದ ಪ್ರೇಕ್ಷಕರಿಗೆ ಯಕ್ಷ ರಸದೌತಣ ಉಣ ಬಡಿಸಿತು.