ಬನಾರಿ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ನಾರಾಯಣ ಭಟ್ ಬಾಳಿಲ ಮತ್ತು ಮನೆಯವರಿಂದ ಹಿರಿಯ ಯಕ್ಷಗಾನ ಕಲಾ ಚೇತನ ‘ಕೀರ್ತಿ ಶೇಷ’ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣೆಯೊಂದಿಗೆ ವಿಶೇಷ ಯಕ್ಷಗಾನ ತಾಳಮದ್ದಳೆ “ಇಂದ್ರಜಿತು ಕಾಳಗ” ವು ಪ್ರಸ್ತುತಗೊಂಡಿತು.ಶ್ರೀ ಗೋಪಾಲಕೃಷ್ಣ ದೇವರ
ಪೂಜಾರ್ಚನೆಯೊಂದಿಗೆ ಆರಂಭಗೊಂಡ ಸಂಸ್ಮರಣಾ ಕಾರ್ಯಕ್ರಮದದಲ್ಲಿ ಡಾ. ಸೂರ್ಯನಾರಾಯಣ ಭಟ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಶಿವ ಶಂಕರ ಭಟ್ ದಿವಾಣ ಸುಬ್ರಹ್ಮಣ್ಯ ಭಟ್ಟರ ನೆನಪುಗಳನ್ನೂ, ನವರಸಗಳ ಭಾವನೆಯೊಂದಿಗೆ ಅವರ ಅರ್ಥಗಾರಿಕೆಯ ವೈಶಿಷ್ಟ್ಯವನ್ನೂ ನೆರೆದವರಿಗೆ ಪರಿಚಯಿಸಿ ಪುಣ್ಯಸಂಸ್ಮರಣೆಯನ್ನು ಮಾಡಿದರು. ಡಾ. ಸುಬ್ಬಣ್ಣಯ್ಯ ಕೋಟಿಗದ್ದೆ, ಸದಾಶಿವ ರೈ ಬೆಳ್ಳಿಪ್ಪಾಡಿ, ವಿಶ್ವವಿನೋದ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈಶ್ವರಿ ಪೃಥ್ವಿ ಯ ಪ್ರಾರ್ಥನೆಯೊಂದಿಗೆ ಹಾಗೂ ಜಯಂತಿ ಕೇಶವ ಗೌಡ ಗುಂಡ್ಯಡ್ಕರ ದೇವರಸ್ತುತಿಯೊಂದಿಗೆ, ರಮಾನಂದ ರೈ ಸ್ವಾಗತಿಸಿ, ನಾರಾಯಣ ಭಟ್ ಧನ್ಯವಾದ ಸಮರ್ಪಿಸಿದರು. ಶ್ವೇತಾ ರಮೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ಸಂಘದ ಕಾರ್ಯದರ್ಶಿ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ
ಮುಂದುವರಿಯಿತು. ಭಾಗವತರಾಗಿ ಶ್ರೀ ಮೋಹನ ಮೆಣಸಿನಕಾನ ತಮ್ಮ ಮಧುರ ಕಂಠಸಿರಿಯಿಂದ ಹಾಡಿ ಜನಮೆಚ್ಚುಗೆ ಗಳಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಸ್ಕಂದ ದಿವಾಣ,ಶ್ರೀ ನಾರಾಯಣ ಪಾಟಾಳಿ ಮಯ್ಯಾಳ, ಕಲ್ಲಡ್ಕ ಶಿವರಾಮ ಕಲ್ಲೂರಾಯ ತಮ್ಮ ಕೈಚಳಕ ತೋರ್ಪಡಿಸಿದರು.
ಅರ್ಥಧಾರಿಗಳಾಗಿ, ಡಿ.ವೆಂಕಟ್ರಮಣ ಮಾಸ್ತರ್ (ಶ್ರೀ ರಾಮ),ಯಂ. ರಮಾನಂದ ರೈ (ರಾವಣ) ಯಂ. ರಾಮನಾಯ್ಕ ದೇಲಂಪಾಡಿ (ದೂತ, ಶುಕ್ರಾಚಾರ್ಯ) ಸದಾಶಿವ ರೈ, ಗಣೇಶ್ ಶರ್ಮ (ಇಂದ್ರಜಿತ್) ಸೂರ್ಯನಾರಾಯಣ ಭಟ್ (ಹನುಮಂತ) ಐತ್ತಪ್ಪ ಗೌಡ ಮುದಿಯಾರು (ಮಾಯಾಸೀತೆ), ಶಿವ ಶಂಕರ ಭಟ್ ದಿವಾಣ (ಜಾಂಬವಂತ), ವೀರಪ್ಪ ಸುವರ್ಣ (ವಿಭೀಷಣ), ಜಯರಾಮ ಭಟ್ ದೇವಸ್ಯ ನೀರ್ಚಾಲು (ಲಕ್ಷ್ಮಣ) ಭಾಗವಹಿಸಿ ತಮ್ಮ ವಾಕ್ಚಾತುರ್ಯದಿಂದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ನಂದಕಿಶೋರ ಬನಾರಿ, ಹಾಗೂ ಸ್ಥಳಿಯ ಪ್ರಮುಖರು ಮತ್ತು ಸಂಘದ ಸದಸ್ಯರು ಈ ಎಲ್ಲಾ ಕಾರ್ಯಕ್ರಮಗಳನ್ನು ನೆರೆವೇರಿಸಿ ಕೊಡುವಲ್ಲಿ ಸಹಕಾರವನ್ನಿತ್ತು ಯಶಸ್ವಿಗೊಳಿಸಿದರು.