ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವತಿಯಿಂದ ಕಲಾ ಸಾಂಸ್ಕೃತಿಕ ವೈಭವ ಡಿ.20ರಂದು ಶನಿವಾರ ಅಪರಾಹ್ನ 2ರಿಂದ ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ.ಅಪರಾಹ್ನ ಗಂಟೆ 2ರಿಂದ ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಶ್ರೀಮದ್ಭಗವದ್ಗೀತಾ ಪಾರಾಯಣ ನಡೆಯಲಿದೆ.2.30 ರಿಂದ ಶ್ರೀ ಶಾರದಾಂಬಾ ಕುಣಿತ ಭಜನಾ ತಂಡ ಬೆಳ್ಳಿಪ್ಪಾಡಿ ಇವರಿಂದ ಕುಣಿತ ಭಜನೆ ನಡೆಯಲಿದೆ.
ಅ.3ರಿಂದ ‘ಹಿಮ್ಮೇಳ ಮುಮ್ಮೇಳ ಸಾಂಗತ್ಯ – ಛಂದಸ್ಸು-ರಾಗ-ತಾಳ’ ಎಂಬ ವಿಷಯದಲ್ಲಿ ಯಕ್ಷಗಾನ ಚಿಂತನ ಮಂಥನ – ಹಿಮ್ಮೇಳ ಸಹಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಚಿಂತಕರು ಹಾಗೂ ಅರ್ಥಧಾರಿಗಳಾದ ವೆಂಕಟರಾಮ ಭಟ್ಟ ಸುಳ್ಯ ಅವರ ನಿರ್ದೇಶನದಲ್ಲಿ ನಡೆಯಲಿದೆ. ‘ಹಿಮ್ಮೇಳ ಮುಮ್ಮೇಳ ಸಾಂಗತ್ಯದಲ್ಲಿ ಅರ್ಥಗಾರಿಕೆ’ ಎಂಬ ವಿಷಯದಲ್ಲಿ ನಿವೃತ್ತ ಪ್ರಾಂಶುಪಾಲರು, ಹಿರಿಯ ಅರ್ಥಧಾರಿಗಳಾದ ಗಣರಾಜ ಕುಂಬಳೆ ಉಪನ್ಯಾಸ ನೀಡಲಿದ್ದಾರೆ. ಸಂಘದ ಕಲಾವಿದರು ಮತ್ತು ಅಭ್ಯಾಗತರು ಸಂವಾದದಲ್ಲಿ ಭಾಗವಹಿಸುವರು.

ಸಂಜೆ ಗಂಟೆ 6ರಿಂದ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ‘ಕಾಳಿಂಗ ಮರ್ದನ – ಸುದರ್ಶನ ಗರ್ವಭಂಗ – ದಕ್ಷಾಧ್ವರ ಯಕ್ಷಗಾನ ಬಯಲಾಟ ನಡೆಯಲಿದೆ. ನೃತ್ಯಗುರು ಸರೋಜಿನಿ ಬನಾರಿ ನಿರ್ದೇಶನದಲ್ಲಿ ನಡೆಯುವ ಯಕ್ಷಗಾನಕ್ಕೆ ರಂಗಸುರಭಿ ಕಲ್ಮಡ್ಕ ವೇಷಭೂಷಣ ಒದಗಿಸಲಿದ್ದಾರೆ ಎಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಅಧ್ಯಕ್ಷರಾದ
ಡಾ.ರಮಾನಂದ ಬನಾರಿ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













