ಸುಳ್ಯ:ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮಯೂರಿ ಕಲಾ ಶಾಲೆಯ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ‘ಬಣ್ಣ’ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಏ.9ರಂದು ಆರಂಭಗೊಂಡಿತು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್ ಶಿಬಿರವನ್ನು ಉದ್ಘಾಟಿಸಿದರು. ಅಡಿಕೆ ಮರದ ಹಾಳೆಯಲ್ಲಿ
ಮಗುವನ್ನು ಕುಳ್ಳಿರಿಸಿ ಹಾಳೆಯನ್ನು ಎಳೆಯುವುದರೊಂದಿಗೆ ಶಿಬಿರಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು.
ಬೇಸಿಗೆ ಶಿಬಿರಕ್ಕೆ ಕಳಿಸುವುದರಿಂದ ಅತ್ಯುತ್ತಮ ಪರಿಸರದಲ್ಲಿ ಮಕ್ಕಳಿಗೆ ಕ್ರಿಯಾಶೀಲವಾಗಿ ರಜೆಯನ್ನು ಕಳೆಯಲು ಸಹಾಯಕವಾಗುತ್ತದೆ. ಮೊಬೈಲ್ನಿಂದ ದೂರವಾಗಿ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಶಿಬಿರಗಳು ಸಹಾಯಕ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ದೇಸಿಯ ಕಲೆ, ಸಂಸ್ಕೃತಿಗೆ ಒತ್ತು ನೀಡುವ ಮೂಲಕ ಶಿಬಿರ ವಿಶೇಷತೆಯನ್ನು ಸಾರಿದೆ. ಮಕ್ಕಳಲ್ಲಿ ದೇಸೀಯ ಕಲೆ, ಸಂಸ್ಕೃತಿಯ ಅರಿವು ಅಗತ್ಯ. ಮುಂದಿನ ದಿನಗಳಲ್ಲಿ ದೇಸಿ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅರೆಭಾಷೆ ಅಕಾಡೆಮಿಯ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್ ಕುಕ್ಕುಜಡ್ಕ ಮಾತನಾಡಿ ‘ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಬೇಸಿಗೆ ಶಿಬಿರಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ. ಆ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಬುನಾದಿ ಹಾಕಿದಂತೆ ಎಂದು ಹೇಳಿದರು.
ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಪೋಷಕ ಕಮಿಟಿ ಸದಸ್ಯ ಚಂದ್ರಶೇಖರ ಗುಡ್ಡೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಶಾಲೆಯ ಸದಸ್ಯ ಶಶಿಕಾಂತ್ ಮಿತ್ತೂರು ವಂದಿಸಿದರು. ಸಿಂಚನಾ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಮೇನಾಲ ಸಹಕರಿಸಿದರು.
ಎ.9 ರಿಂದ 17 ತನಕ ಬೇಸಿಗೆ ಶಿಬಿರವು ನಡೆಯಲಿದ್ದು 7 ರಿಂದ 17 ರ ವಯೋಮಾನದ ಮಕ್ಕಳಿಗೆ ಶಿಬಿರದಲ್ಲಿ ವಿವಿಧ ಬಗೆಯ
ದೇಸಿಯ ಕಲೆಗಳ ಅನಾವರಣದೊಂದಿಗೆ ನುರಿತ ಸಂಪನ್ಮೂಲ ವ್ಯಕ್ತಿ ಗಳಿಂದ ತರಬೇತಿ ಕಾರ್ಯಾಗಾರ ನಡೆಯಲಿರುವುದು ಎಂದು ಲೋಕೇಶ್ ಊರುಬೈಲು ತಿಳಿಸಿದ್ದಾರೆ.