ಬಳ್ಪ:ದೇಶದ ಸಮಗ್ರ ಅಭಿವೃದ್ಧಿಯ ಕಲ್ಪನೆ, ಸರ್ವ ಜನರ ವಿಕಾಸದ ಕನಸು ಆದರ್ಶ ಗ್ರಾಮ. ಬಳ್ಪ ಗ್ರಾಮದಲ್ಲಿ ನಡೆದ ಮಾದರಿ ಅಭಿವೃದ್ಧಿ ಕಾರ್ಯಗಳಿಂದ ನರೇಂದ್ರ ಮೋದಿಯವರ ಆದರ್ಶ ಗ್ರಾಮದ ಕನಸು ಸಾಕಾರಗೊಂಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ರಾಸಾಯನಿಕೆಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರಾದ ಭಗವಂತ್ ಖೂಬಾ ಹೇಳಿದ್ದಾರೆ. ಗ್ರಾಮವಿಕಾಸ ಪ್ರತಿಷ್ಠಾನ ಬಳ್ಪ – ಕೇನ್ಯ, ಗ್ರಾಮ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಬಳ್ಪ ಗ್ರಾಮದ ಬಳ್ಪ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನಡೆದ

ಗ್ರಾಮೋತ್ಸವ-2024 ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಂಸದರಿಗೆ ಮಾತ್ರ ಅಲ್ಲಾ ಜನಸೇವೆ ಮಾಡುವ, ಅಭಿವೃದ್ಧಿ ಮಾಡುವ ಕಳಕಳಿ ಇರುವ ಎಲ್ಲಾ ಜನಪ್ರತಿನಿಧಿಗಳಿಗೆ ಆದರ್ಶ ಗ್ರಾಮ ಕಲ್ಪನೆ ಮಾದರಿ. ಕಲ್ಪನೆಗೂ ಮೀರಿದ ಅಭಿವೃದ್ಧಿಯ ಮೂಲಕ ಬಳ್ಪ ದೇಶಕ್ಕೆ ಮಾದರಿಯಾಗಿದೆ. ಸಮಾಜ ಸರ್ವ ತೋಮುಖ ಅಭಿವೃದ್ಧಿ ಆಗಬೇಕು, ಧರ್ಮ ರಹಿತ, ಜಾತಿ ರಹಿತ ಲಿಂಗ ಭೇದ ರಹಿತವಾಗಿ ಯುವಜನತೆ, ಮಹಿಳೆಯರ ಅಭಿವೃದ್ಧಿ ಆಗಬೇಕು ಎಂದು ಕನಸು ಕಂಡವರು ನರೇಂದ್ರ ಮೋದಿಯವರು. ವಿಶ್ವ ನಾಯಕನಾಗಿ ಬೆಳೆದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬಡವರಿಗೆ ಸೌಲಭ್ಯಗಳು ನೇರವಾಗಿ ತಲುಪಿಸಿ ಬಡವರ ಬದುಕನ್ನು ಹಸನುಗೊಳಿಸಿದ್ದಾರೆ.13 ಕೋಟಿ ಬಡವರ ಬದುಕು ಉತ್ತಮವಾಗಿದೆ ಎಂದು ಅವರು ಹೇಳಿದರು. ಮೋದಿ ಅವರ ಆಡಳಿತ ಅವಧಿಯಲ್ಲಿ ರೈಲ್ವೇ, ರಸ್ತೆ, ವಿಮಾನ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ದೇಶ ಅಭಿವೃದ್ಧಿಯ ನಾಗಾಲೋಟ ಕಂಡಿದೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ’ ಕೃಷಿ ಮತ್ತು ಋಷಿ ಪ್ರಧಾನವಾಗಿರುವ ಕಡೆ ಬೆಳವಣಿಗೆ ಆಗುತ್ತದೆ. ಇಂದು ಜಾಗತೀಕರಣದ ಜೊತೆಗೆ ಭಾರತೀಯತೆ ಬೇಕು ಆಗ ಮಾತ್ರ ನಮ್ಮತನ ಉಳಿಯುತ್ತದೆ ಎಂದರು. ಭಾರತೀಯತೆ ಇದ್ದಲ್ಲಿ ಆಧ್ಯಾತ್ಮಿಕತೆ ಇರುತ್ತದೆ ರಾಷ್ಟ್ರ ಎಂದರೆ ರಾಮ, ರಾಮ ಎಂದರೆ ರಾಷ್ಟ್ರ ಎಂದ ಅವರು ಬಳ್ಪದಲ್ಲಿ ಆದರ್ಶದ ಬೆಳಕು ಮೂಡಿದೆ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ’ ಭಾರತವು 3ನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ ಎಂದರು.ರಾಜ್ಯದ ಮಾದರಿ ಗ್ರಾಮ ಪಂಚಾಯತ್ ಬಳ್ಪ ಎಂದ ಅವರು ಶಿರಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ ಆಗಬೇಕು. ಅದು ನಳಿನ್ಕುಮಾರ್ ಕಟೀಲ್ ಅವಧಿಯಲ್ಲಿಯೇ ಅಗಬೇಕು ಎಂದರು.
ಮಾಜಿ ಸಚಿವ ಎಸ್. ಅಂಗಾರ ಮಾತನಾಡಿ’ ಆದರ್ಶ ಎಂಬುದು ಪ್ರಚಾರದ ವಸ್ತುವಾಗಿರಬಾರದು. ಅದು ನಮ್ಮ ನಡೆ, ನುಡಿಯಲ್ಲಿ ಬದುಕಿನಲ್ಲಿ ಇರಬೇಕು. ನಮ್ಮ ಕೆಲಸದ ಮೂಲಕ ಆದರ್ಶರಾಗಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಭಾಗವಹಿಸಿದ್ದರು.
ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಬಲ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಬಳ್ಪ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಉಮೇಶ್ ಬುಡೆಂಗಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಸಚಿವ ಭಗವಂತ್ ಖೂಬಾ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

ಎಂಆರ್ಪಿಎಲ್ ಗ್ರೂಪ್ ಜನರಲ್ ಮೆನೇಜರ್ ಕೃಷ್ಣ ಹೆಗ್ಡೆ, ಆದರ್ಶ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಿ ಕೊಟ್ಟ ರಾನ್ ರಾಡ್ರಿಗಸ್, ಗ್ರಾಮದಲ್ಲಿ ವಿವಿಧ ನಿರ್ಮಾಣ ಕಾಮಗಾರಿ ಮಾಡಿದ ಮೊಗ್ರೊಡಿ ಕನ್ಸ್ಸ್ಟ್ರಕ್ಷನ್ ಹಾಗೂ ಬೋಗಾಯನಕೆರೆ ಅಭಿವೃದ್ಧಿ ಪಡಿಸಿದ ಗುತ್ತಿಗೆದಾರರನ್ನು ಅಭಿನಂದಿಸಲಾಯಿತು. ಆಯುರ್ವೇದ ವೈದ್ಯ ಡಾ.ರಾಮಕೃಷ್ಣ ಭಟ್ ದೇವಸ್ಯ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ತುಕಾರಾಮ ಏನೆಕಲ್ಲು, ರಾಷ್ಟ್ರೀಯ ಯೋಗಪಟು ಹಾರ್ದಿಕ ಕೆರೆಕೋಡಿ, ರಾಷ್ಟ್ರೀಯ ಕ್ರೀಡಾಪಟು ಜಶ್ಮಿತ ಕೊಡೆಂಕಿರಿ, ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅನುಶ್ ಎ.ಎಲ್, ಮಹತಿ ಬಿ, ಎಂ.ಬಿ.ಬಿ.ಎಸ್ನಲ್ಲಿ ಚಿನ್ನದ ಪದಕ ಪಡೆದ ಪ್ರಿಯಾಂಕ ರೈ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ವಿಕಾಸ ಸಮಿತಿಯ ಸದಸ್ಯ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು.
ಬಲ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವದಾಸ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.









