ಬಳ್ಪ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಬಳ್ಪ ಗ್ರಾಮದಲ್ಲಿ ಕಳೆದ 5 ವರ್ಷದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದು ಅಭಿವೃದ್ಧಿ ಪರ್ವವೇ ನಡೆದಿದೆ. ಇದೀಗ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ 2024 ಜ.10ರಂದು ಬಳ್ಪ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನಡೆಯಲಿದೆ. ಗ್ರಾಮವಿಕಾಸ ಪ್ರತಿಷ್ಠಾನ ಬಳ – ಕೇನ್ಯ, ಗ್ರಾಮ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವ ನಡೆಯಲಿದೆ.ಬೆಳಿಗ್ಗೆ 10 ಗಂಟೆಗೆ ಕೃಷಿ ಹಾಗೂ

ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಬಳಿಕ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ ಬಳ್ಳ, ಕೇನ್ಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಳಿಕ ಸಾಂಸ್ಕೃತಿಕ ವೈಭವ, ಸಂಜೆ 5 ಗಂಟೆಯಿಂದ ಒಡಿಯೂರು ಶ್ರೀಗಳ ಉಪಸ್ಥಿತಿಯೊಂದಿಗೆ ಭಜನಾ ಸಂಕೀರ್ತನಾ ಮೆರವಣಿಗೆ ನಡೆಯಲಿದೆ.
ಸಭಾ ಕಾರ್ಯಕ್ರಮ:
ಸಂಜೆ 6ರಿಂದ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ರಾಸಾಯನಿಕೆಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರಾದ ಭಗವಂತ್ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಎಸ್. ಅಂಗಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಳ್ಳಿ ಭಾಗವಹಿಸಲಿದ್ದಾರೆ. ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಬಲ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಬಳ್ಪ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಉಮೇಶ್ ಬುಡೆಂಗಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ ಉಪಸ್ಥಿತರಿರುವರು.

ಅಭಿನಂದನೆ ಮತ್ತು ಸನ್ಮಾನ:
ಎಂಆರ್ಪಿಎಲ್ ಗ್ರೂಪ್ ಜನರಲ್ ಮೆನೇಜರ್ ಕೃಷ್ಣ ಹೆಗ್ಡೆ ಅವರನ್ನು ಅಭಿನಂದಿಸಲಾಗುವುದು. ಆಯುರ್ವೇದ ವೈದ್ಯ ಡಾ.ರಾಮಕೃಷ್ಣ ಭಟ್ ದೇವಸ್ಯ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ತುಕಾರಾಮ ಏನೆಕಲ್ಲು, ರಾಷ್ಟ್ರೀಯ ಯೋಗಪಟು ಹಾರ್ದಿಕ ಕೆರೆಕೋಡಿ, ರಾಷ್ಟ್ರೀಯ ಕ್ರೀಡಾಪಟು ಜಶ್ಮಿತ ಕೊಡೆಂಕಿರಿ, ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅನುಶ್ ಎ.ಎಲ್, ಮಹತಿ ಬಿ, ಎಂ.ಬಿ.ಬಿ.ಎಸ್ನಲ್ಲಿ ಚಿನ್ನದ ಪದಕ ಪಡೆದ ಪ್ರಿಯಾಂಕ ರೈ ಅವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಕಲಾ ಸಂಗಮ ಕಲಾವಿದರಿಂದ ಶಿವದೂತ ಗುಳಿಗೆ ಎಂಬ ವಿಭಿನ್ನ ಶೈಲಿಯ ನಾಟಕ ನಡೆಯಲಿದೆ ಎಂದು ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಳಲೆ ತಿಳಿಸಿದ್ದಾರೆ.
ಕೃಷಿ ಮಳಿಗೆ, ಪ್ರಾತ್ಯಕ್ಷಿಕೆ:
ಗ್ರಾಮೋತ್ಸವದ ದಿನ ವಿಧದ ಕೃಷಿ ಉಪಕರಣಗಳ ಸ್ಟಾಲ್ (ಮಳಿಗೆ)ಗಳನ್ನು ತೆರೆಯಲಾಗುತ್ತದೆ. ವಿಜ್ಞಾನಿಗಳಿಂದ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಡ್ರೋನ್ ಪ್ರಾತ್ಯಕ್ಷಿಕೆ, ವಿವಿಧ ಕೃಷಿ ಉಪಕರಣಗಳ ಪ್ರದರ್ಶನ. ಡ್ರೋನ್ ಮೂಲಕ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆ ಮುತ್ತು ಬಳಸುವವರ ಮಾಹಿತಿ,
ಕೀಟನಾಶಕ ಸಿಂಪಡಿಸುವ ಪ್ರಾತ್ಯಕ್ಷಿಕೆ, ವಿವಿಧ ಕೃಷಿ ಉಪಕರಣಗಳ ಪ್ರದರ್ಶನ ಇರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆ , ಸೌಲಭ್ಯಗಳ ಮಾಹಿತಿ (ಬ್ಯಾಂಕ್ ಅಧಿಕಾರಿಗಳಿಂದ) ಹಾಗೂ ಗ್ಯಾಸ್ ಬಳಕೆದಾರರ ಕೆವೈಸಿ ಯನ್ನು ಸ್ಥಳದಲ್ಲೆ ಮಾಡಿಕೊಡಲಾಗುವುದು (ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮತ್ತು ಒಟಿಪಿಗಾಗಿ ಮೊಬೈಲ್ ತರಬೇಕು. ಕುಂಬಾರರ ಮೂಲಕ ಮಡಿಕೆ ತಯಾರು ಮಾಡುವ ಪ್ರಾತ್ಯಕ್ಷಿಕೆ, ಮುತ್ತು ಬಳಸುವವರ ಮಾಹಿತಿ ಇರಲಿದೆ. ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಗ್ರಾಮೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು
ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಳಲೆ ವಿನಂತಿಸಿದ್ದಾರೆ.

ಸಂಸದರ ಆದರ್ಶ ಗ್ರಾಮದಲ್ಲಿ ಅಭಿವೃದ್ಧಿ ಪರ್ವ- ನಡೆದ ಕಾಮಗಾರಿಳ ವಿವರ:
ಅಂಗನವಾಡಿ ಹೊಸ ಕಟ್ಟಡ ರಚನೆ,ಅಭಿವೃದ್ಧಿ, ಶಾಲಾ ಕಟ್ಟಡ ನವೀಕರಣ ಮತ್ತು ಹೊಸ ಸಭಾಂಗಣ ನಿರ್ಮಾಣ, ಆರೋಗ್ಯ ಉಪಕೇಂದ್ರ ನವೀಕರಣ,ಬಸ್ಸ್ಟ್ಯಾಂಡ್ ನಿರ್ಮಾಣ, ಬ್ಯಾಂಕ್ ಶಾಖೆಗಳ ಸ್ಥಾಪನೆ, ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಪರಿವರ್ತಕಗಳು ಮತ್ತು ಹಳೆ ಲೈನ್ ಬದಲಾವಣೆ, ಬೋಗಾಯನಕೆರೆ ಅಭಿವೃದ್ಧಿ, ಶಿಶುಮಂದಿರ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಘಟಕ ಮತ್ತು ಟ್ಯಾಂಕ್ ನಿರ್ಮಾಣ, ಮೊಬೈಲ್ ಟವರ್ ಸ್ಥಾಪನೆ,ಕಿಂಡಿ ಅಣೆಕಟ್ಟುಗಳು ನಿರ್ಮಾಣ, ಕೃಷಿ ಹೊಂಡಗಳು, ತೋಟಗಾರಿಕೆ ಕೃಷಿ ಇಲಾಖೆ ಸೌಲಭ್ಯ ಮತ್ತು ಸಹಾಯಧನ ಹಾಗೂ ಮಾಹಿತಿ ಕಾರ್ಯಕ್ರಮ, ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಶಿಬಿರಗಳು, ವಿವಿಧ ಇಲಾಖೆಗಳ ಮಾಹಿತಿ ಕಾರ್ಯಕ್ರಮ, ವಸತಿ ನಿರ್ಮಾಣ,ಉಚಿತ ಅನಿಲ ಸಂಪರ್ಕ, ಪಶುಸಂಗೋಪನಾ ಇಲಾಖಾ ಮಾಹಿತಿ ಮತ್ತು ಸೌಲಭ್ಯಗಳು, ಮೀನುಗಾರಿಕಾ ಇಲಾಖಾ ಸೌಲಭ್ಯ ಮತ್ತು ಮಾಹಿತಿ, ಸ್ವಾವಲಂಬನೆಗಾಗಿ ಟೈಲರಿಂಗ್ ಮೆಷಿನ್ ವಿತರಣೆ ಹಾಗೂ ಜೇನು ಪೆಟ್ಟಿಗೆ ವಿತರಣೆ, ಕಿರು ಸೇತುವೆಗಳ ನಿರ್ಮಾಣ,ಸೋಲಾರು ದೀಪ ಅಳವಡಿಕೆ, ಪ್ರತಿ ಶಾಲೆಗೂ ಈ ಶಿಕ್ಷಣದ ಮೂಲಕ ಕಂಪ್ಯೂಟರ್ಗಳ ಕೊಡುಗೆ, ಪಂಚಾಯತ್ ಕಟ್ಟಡಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆ, ಪಂಚಾಯತ್ ಹಾಗೂ ಶಾಲೆಗಳಿಗೆ ಕುಡಿಯುವ ನೀರಿನ ಶುದ್ದೀಕರಣ ಘಟಕ ವಿತರಣೆ.









