ಸುಳ್ಯ: ಮುಸ್ಲಿಮರು ಇಂದು ದೇಶದಾದ್ಯಂತ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪ್ರವಾದಿ ಇಬ್ರಾಹಿಂ ನೆಬಿ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾ’. ಎಂಬ ‘ಬಕ್ರೀದ್’ ಹಬ್ಬ.ರಂಜಾನ್’ ತಿಂಗಳ ಉಪವಾಸದ ಬಳಿಕ ‘ಈದುಲ್ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್ಜ್’ ತಿಂಗಳ 10ರಂದು ಬಕ್ರೀದ್ ಅಚರಿಸಲಾಗುತ್ತದೆ. ಪ್ರವಾದಿ
ಇಬ್ರಾಹಿಂ ನೆಬಿ ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್’ನ ಮುಖ್ಯ ಆಶಯ.ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ದೇವನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಬಕ್ರೀದ್ನ ದಿನ ಬೆಳಿಗ್ಗೆ ಈದ್ಗಾಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಜ್ ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ನಮಾಜ್ಗೂ ಮುನ್ನ ಕೆಲ ಹೊತ್ತು ‘ತಕ್ಬೀರ್’ ಮೊಳಗಿಸಲಾಗುತ್ತದೆ. ನಮಾಜ್ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಳ್ಳುವರು.ಹೊಸ ಬಟ್ಟೆ ಧರಿಸಿ, ಸಂಭ್ರಮದಲ್ಲಿ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸುವರು.
ಇಬ್ರಾಹಿಂ ನೆಬಿ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಪ್ರಾಣಿ ಬಲಿ ಅರ್ಪಿಸಲಾಗುತ್ತದೆ. ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ.ಈ ಬಾರಿ ವಿದೇಶದ 8.50 ಲಕ್ಷ ಯಾತ್ರಿಕರು ಸೇರಿದಂತೆ ಒಟ್ಟು 10 ಲಕ್ಷ ಮಂದಿಗೆ ಹಜ್ನಲ್ಲಿ ಪಾಲ್ಗೊಳ್ಳಲು ಸೌದಿ ಸರ್ಕಾರ ಅವಕಾಶ ನೀಡಿದೆ. ಕೋವಿಡ್ ಕಾರಣ 2020 ಮತ್ತು 2021ರಲ್ಲಿ ವಿದೇಶಿಯರಿಗೆ ಹಜ್ಗೆ ಅವಕಾಶ ನೀಡಿರಲಿಲ್ಲ.ಕೋವಿಡ್ಗೆ ಮುಂಚೆ ಅಂದರೆ 2019 ರಲ್ಲಿ ಸುಮಾರು 25 ಲಕ್ಷ ಮಂದಿ ಹಜ್ನಲ್ಲಿ ಭಾಗವಹಿಸಿದ್ದರು.