ಪೇರಾಲು:ಸಂಕುಚಿತ ಮನೋಭಾವದಿಂದ ಮನುಷ್ಯತ್ವವನ್ನು ಕಳೆದು ಕೊಳ್ಳಬೇಕಾಗುತ್ತದೆ.ಇನ್ನೊಬ್ಬರ ಬಗ್ಗೆ ದ್ವೇಷ, ಅಸೂಯೆ ಪಡದೆ ತನ್ನನ್ನು ತಾನು ಅರ್ಥೈಸಿಕೊಂಡು ಬದುಕಬೇಕು. ಮರದಂತೆ, ನದಿಯಂತೆ ಎಲ್ಲರಿಗೂ ಆಶ್ರಯ ನೀಡುವ ರೀತಿಯ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು ಆಗ ಮಾನವ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗಾವಗಿ ನಡೆದ
ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಇಂದು ಎಲ್ಲೆಡೆ ಮನಸ್ಸುಗಳು ಒಡೆದು ಹೋಗಿದೆ. ಭಾವನೆಗಳು ಕಲುಷಿತವಾಗಿದೆ.ಸಂಕುಚಿತ ಭಾವ ಮತ್ತು ವೈರತ್ವಗಳು ತುಂಬಿ ಹೋಗಿದೆ.ಮೂರು ದಿನದ ಬದುಕು ನಮ್ಮದು. ಆದರೆ ಮನುಷ್ಯನು ನಾನು ಶಾಶ್ವತ ಎಂಬ ಭ್ರಮೆಯಲ್ಲಿ ಬದುಕುವುದೇ ಈ ಜಗತ್ತಿನ ದೊಡ್ಡ ಆಶ್ಚರ್ಯ ಎಂದ ಅವರು ಧರ್ಮ ಮತ್ತು ಕೀರ್ತಿ ಮಾತ್ರ ಶಾಶ್ವತ. ಆದುದರಿಂದ ಧರ್ಮದ ಆಧಾರದಲ್ಲಿ ಮಾಡಿದ ಕೀರ್ತಿ ಮಾತ್ರ ಶಾಶ್ವತವಾದುದು.ನಮ್ಮ ಬದುಕು ಧರ್ಮ ಸಾಧನೆಯ ಕೀರ್ತಿಯ ಮೂಲಕ ಅಮರತ್ವವನ್ನು ಪಡೆಯುವಂತಾಗಬೇಕು. ಅದಕ್ಕಾಗಿ ಮಾನವ ಶ್ರಮ ಸಂಸ್ಕೃತಿಯನ್ನು ಕಲಿಯಬೇಕು. ಶ್ರಮದಲ್ಲಿ ದೇವರಿದ್ದಾನೆ.ಧರ್ಮದ ವ್ಯಾಪ್ತಿ
ಬಹಳ ದೊಡ್ಡದು ನಮ್ಮ ಆಚರಣೆಗಳು ಧರ್ಮವನ್ನು ರಕ್ಷಿಸುತ್ತದೆ.ಉತ್ತಮ ಭಾವನೆಗಳಿಂದ ಅಂತಕರಣಪೂರ್ವಕವಾಗಿ ಆಚರಣೆ ಮಾಡಬೇಕು. ಆಗ ಆತ್ಮೋದ್ಧಾರ ಆಗುತ್ತದೆ. ಪೇರಾಲಿನಲ್ಲಿ ಶ್ರದ್ಧಾ ಭಕ್ತಿಯ ಸೇವೆ ಮತ್ತು ಅರ್ಪಣೆಯಿಂದ ಕ್ಷೇತ್ರ ನಿರ್ಮಾಣವಾಗಿದೆ. ಪ್ರತಿಯೊಬ್ಬರ ಹೃದಯದಲ್ಲಿ ಉರಿಸಿದ ಭಕ್ತಿಯ ದೀಪ ಎಲ್ಲೆಡೆ ಬೆಳಕನ್ನು ಪಸರಿಸಿದೆ ಎಂದು ಅವರು ಹೇಳಿದರು.ಧಾರ್ಮಿಕ ನಂಬಿಕೆಗಳನ್ನು, ದೇವರ, ದೈವಗಳನ್ನು ಆರಾಧಿಸುವ ನೆಲೆಗಟ್ಟನ್ನು ತಿಳಿದು ತನ್ನನ್ನು ತಾನು ಅರ್ಥೈಸಿಕೊಂಡು ಆಚರಣೆ ಮಾಡಬೇಕು. ಆ ರೀತಿಯ ಕೆಲಸದ ಮೂಲಕ ನಮ್ಮ ಸಂಸ್ಕೃತಿ, ನಂಬಿಕೆಗಳು ನಶಿಸಿ ಹೋಗದಂತೆ ಪುನರುತ್ಥಾನ ಮಾಡುವ ಕೆಲಸ ಆಗಿದೆ ಎಂದು ಅವರು ಹೇಳಿದರು.
ಪೇರಾಲು ಶ್ರೀ ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕೇಸರರಾದ ಹೇಮಂತ್ಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸಸರ ಡಾ.ಹರಪ್ರಸಾದ್ ತುದಿಯಡ್ಕ, ತೊಡಿಕಾನ
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಮೇನಾಲ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಗುಡ್ಡಪ್ಪ ರೈ ಮೇನಾಲ , ಶ್ರೀಪಾದ ಕನ್ಸಲ್ಟೆನ್ಸಿಸಿವಿಲ್ ಇಂಜಿನಿಯರ್ ಶ್ಯಾಮ್ಪ ಪೇರಾಲು ಪ್ರಸಾದ್ ಅಡ್ಡಂತಡ್ಕ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಬಜಪ್ಪಿಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಹರಿ ಕುಕ್ಕುಡೇಲು, ಕೋಶಾಧಿಕಾರಿ ತೀರ್ಥೇಶ್ ಬಲಂದೋಟಿ, ಸಂಚಾಲಕರಾದ ಜಯರಾಮ ಗೌಡರಮನೆ, ಆಡಳಿತ ಸಮಿತಿಯ ಕಾರ್ಯದರ್ಶಿ ಪ್ರವೀಣ್ಕುಮಾರ್ ಬಾಳೆಕೋಡಿ, ಕೋಶಾಧಿಕಾರಿ ಮೇದಪ್ಪ ಗೌಡ ಪೇರಾಲುಮೂಲೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಮಂಜುನಾಥ ಪಿ.ಪೇರಾಲು, ದಾಮೋದರ ಮಿತ್ತಪೇರಾಲು, ರಾಜಣ್ಣ ಪೇರಾಲುಮೂಲೆ, ದಿನೇಶ್ ಗಬ್ಬಲಡ್ಕ, ಅರ್ಚಕರಾದ ದಿನೇಶ್ ರೈ ಪೇರಾಲು ದರ್ಖಾಸು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದರು, ಕಾರ್ಯದರ್ಶಿ ಮಂಜುನಾಥ ಪಿ.ಪೇರಾಲು ಕ್ಷೇತ್ರದ ಕುರಿತು ಮಾತನಾಡಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಬೀಟ್ಸ್ ಜೀವನ್ ಟಿ. ಎನ್. ಬೆಳ್ಳಾರೆ ಇವರ ನಿರ್ದೇಶನ ತಂಡದಿಂದ ‘ನೃತ್ಯ ಸಂಭ್ರಮ, ನಡೆಯಿತು.