ಧರ್ಮಸ್ಥಳ: ಭಜನಾ ಕಮ್ಮಟದಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಅನಾವರಣವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಭಜನಾ ಕಮ್ಮಟದ ಮೂಲಕ
ಹೆಗ್ಗಡೆಯವರು ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಸ್ವಾಮೀಜಿ ಅಭಿನಂದಿಸಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನದೊಂದಿಗೆ ಏಕತೆ ಮತ್ತು ಏಕಾಗ್ರತೆ ಸಾಧಿಸಲು ಭಜನೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಕೂಡಾ ಭಜನೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ.
ಭಜನಾಪಟುಗಳು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಮಾತನಾಡಿದರು.
ಕುಂದಾಪುರದ ಕೃಷ್ಣ ಪೂಜಾರಿ ಮತ್ತು ನೆಲ್ಯಾಡಿಯ ಕುಮಾರಿ ಭವಿಷ್ಯ ಕಮ್ಮಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.
ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರಪಡಿಸಿದರು.
ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.





