ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಯಕ್ಷಗಾನ ಭಾಗವತಿಕೆಯ ಪ್ರಥಮ ರಂಗಪ್ರವೇಶ ಮತ್ತು ಪಾರ್ತಿಸುಬ್ಬ ವಿರಚಿತ ಪಂಚವಟಿ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.ಆರಂಭದಲ್ಲಿ ಶ್ರೀರಾಮ ಗೀತಾಭ್ಯಾಸ ತಂಡ ದೇಲಂಪಾಡಿ ಅವರಿಂದ
ಭಗವದ್ಗೀತೆ ಪಾರಾಯಣವು ಸ್ಥಳ ಸಾನ್ನಿಧ್ಯ ಗೋಪಾಲಕೃಷ್ಣ ದೇವರ ವಿಶೇಷ ಪೂಜಾರ್ಚನೆಯೊಂದಿಗೆ ಪ್ರಸ್ತುತಗೊಂಡಿತು.
ಗುರು ವಿಶ್ವವಿನೋದ ಬನಾರಿ ಅವರ ಶಿಷ್ಯೆ ಹಸ್ತ ಬೆಳ್ಳಿಪ್ಪಾಡಿ ತನ್ನ ಯಕ್ಷಗಾನ ಭಾಗವತಿಕೆಯ ಪ್ರಥಮ ರಂಗಪ್ರವೇಶವನ್ನು ವಿಘ್ನ ನಿವಾರಕ ಶ್ರೀಗಣೇಶನ ಸ್ತುತಿ ಪದ್ಯ ಹಾಡುವುದರ ಮೂಲಕ ಮಾಡಿದರು.

ತಾಳಮದ್ದಳೆಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ವಿಷ್ಣು ಶರಣ ಬನಾರಿ, ಸದಾನಂದ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಮತ್ತು ಚಕ್ರತಾಳದಲ್ಲಿ ಬಿ.ಯಚ್. ಆಶ್ಲೇಷ್ ಕಾಣಿಸಿಕೊಂಡರು.
ಅರ್ಥಧಾರಿಗಳಾಗಿ ವಿಕೇಶ್ ರೈ ಶೇಣಿ, ಶಾಂತಾಕುಮಾರಿ ದೇಲಂಪಾಡಿ, ಪೂಜಾ ಸಿ.ಯಚ್, ಬಿ.ಯಚ್. ವೆಂಕಪ್ಪ ಗೌಡ, ಗೋಪಾಲಕೃಷ್ಣ ರೈ ಮುದಿಯಾರು ಭಾಗವಹಿಸಿದರು.ಬನಾರಿಯ “ಬನಸಿರಿ” ಮನೆಯವರಿಂದ ಸೇವಾರೂಪವಾಗಿ ಆಯೋಜಿಸಲ್ಪಟ್ಟ ಕಲಾರಾಧನೆಯಲ್ಲಿ ನಂದಕಿಶೋರ ಬನಾರಿ ಸ್ವಾಗತಿಸಿದರು. ಸರೋಜಿನಿ ಬನಾರಿ ವಂದನಾರ್ಪಣೆಗೈದರು.




