ಸುಳ್ಯ:ಬೂಡು-ಕೇರ್ಪಳ- ಕುರುಂಜಿಗುಡ್ಡೆ ಶ್ರೀ ಭಗವತಿ ಯುವ ಸೇವಾ ಸಂಘದ ಬೆಳ್ಳಿ ಹಬ್ಬ ಸಮಾರಂಭ ‘ಶ್ರೀಭಗವತಿ ರಜತೋತ್ಸವ’ ಮಾ.28 ಮತ್ತು 29 ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ನಡೆಯಿತು. ಎರಡು ದಿನಗಳ ನಡೆದ ಅದ್ದೂರಿ ಬೆಳ್ಳಿಹಬ್ಬ ಶ್ರೀ ಭಗವತಿ ರಜತೋತ್ಸವದಲ್ಲಿ ಸಾಂಸ್ಕೃತಿಕ ಸಂಭ್ರಮ ಮೇಳೈಸಿತು.ಮಾ.28ರಂದು
ರಾತ್ರಿ ಬೂಡು ಕಿಶೋರ್ ಕುಮಾರ್ ಶೆಟ್ಟಿ ನೇತೃತ್ವದ ಖ್ಯಾತ ನೃತ್ಯ ತಂಡ ಎಕ್ಸ್ ಟೆಸಿ ವತಿಯಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಮನಸೂರೆಗೊಂಡಿತು. ಬಳಿಕ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನವೈಭವ ಮನ ಸೆಳೆಯಿತು.
ಮಾ.29 ಆದಿತ್ಯವಾರ ಸಂಜೆಯಿಂದ ಆರ್ಯನ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಪಡೆದ ಗಾಯಕ- ಗಾಯಕಿಯರಿಂದ ಅದ್ದೂರಿಯ ಸಂಗೀತ ರಸಮಂಜರಿ ಕಾರ್ಯಕ್ರಮ ಮೋಡಿ ಮಾಡಿತು.ಜನ ಮೆಚ್ಚಿದ ನಾಟಕ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸಿದ ‘ರಂಗ್ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿದ ‘ತುಳುನಾಡ ಕಲಾಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ‘ಮಂಗಳೂರು ಮೀನನಾಥ’ ರಾಘವೇಂದ್ರ ರೈ ಅಭಿನಯದಲ್ಲಿ, ತುಳು ಹಾಸ್ಯಮಯ ನಾಟಕ ‘ಜಗತ್ತೇ ಶೂನ್ಯ ಸ್ವಾಮಿ’ ಪ್ರದರ್ಶನಗೊಂಡಿತು. ಎರಡು ದಿನಗಳ ಕಾಲ ನಡೆದ ಸಾಂಸ್ಕೃತಿಕ ವೈಭವ ವೀಕ್ಷಿಸಲು ನಾಡಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿದ್ದರು.










