ಸುಳ್ಯ:2018ರಲ್ಲಿ ಕರ್ನಾಟಕ ಸರಕಾರ ಆದೇಶಿಸಿ ತೆಗೆದಿಟ್ಟ ಸಾಲ ಮನ್ನಾದ ಹಣ ಹಲವು ಮಂದಿ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ. ಸಾಲ ಮನ್ನಾ ವಂಚಿತ ಅರ್ಹ ಕೃಷಿಕರಿಗೆ ಆದಷ್ಟು ಶೀಘ್ರದಲ್ಲಿ ಸಾಲಮನ್ನಾ ಹಣ ನೀಡಲು
ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ತಾಲೂಕು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ
2018ರಲ್ಲಿ ಆಗಿನ ಕರ್ನಾಟಕ ಸರಕಾರವು ರೈತರ ಸಂಕಷ್ಟ ಪರಿಹರಿಸಲು ರೈತರು ಸಹಕಾರಿ ಸಂಘಗಳಿಂದ ಪಡೆದ ಸಾಲಗಳಲ್ಲಿ
ರೂಪಾಯಿ 1 ಲಕ್ಷದವರೆಗಿನ ಮೊಬಲಗನ್ನು ಮನ್ನಾ ಮಾಡಿ ಆದೇಶ ನೀಡಿತು. ಸಾಲವಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ಈ ಕುರಿತು ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಇದನ್ನು ನಂಬಿ ಸರಕಾರ ಸೂಚಿಸಿದ ಅರ್ಹತಾಪಟ್ಟಿಯಲ್ಲಿ ಬರುವ ರೈತರಿಂದ ಅರ್ಜಿಗಳನ್ನು ಸಹಕಾರಿ ಸಂಘಗಳ ಮೂಲಕ ಸಲ್ಲಿಕೆಯಾಯಿತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಾಲಮನ್ನಾದ ಮೊಬಲಗು ರೈತರ ಖಾತೆಗಳಿಗೆ ಜಮೆಯಾಗತೊಡಗಿತು. ಎರಡು ವರ್ಷಗಳ ತನಕ ಕೆಲವು ರೈತರಿಗೆ ಹಣ ಬಂದಿದ್ದು, ಆಮೇಲೆ ಈ ಪ್ರಕ್ರಿಯೆ ನಿಂತಿತು. ಇನ್ನೂ ಹಲವಾರು ರೈತರಿಗೆ ಸಾಲ ಮನ್ನಾ ಮೊಬಲಗು ಬರಲು ಬಾಕಿಯಿದ್ದು ‘ಸಾಲಮನ್ನಾ’ ಸೌಲಭ್ಯ ವಂಚಿತರಾಗಿದ್ದಾರೆ. ಈ ಕುರಿತು ಹಿಂದಿನ ಅವಿಭಜಿತ ಸುಳ್ಯ ತಾಲೂಕಿನ ರೈತರ ‘ಸಾಲಮನ್ನಾ’ ಮೊಬಲಗು ಬರಲು ಬಾಕಿಯಿರುವ ರೈತರ
ವಿವರಗಳನ್ನು ಸಂಗ್ರಹಿಸಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಸಮಿತಿಯು ಸಾರ್ವಜನಿಕ ಹಿತಾಸಕ್ತಿ ದೂರು ನೀಡಿರುತ್ತದೆ. ಈ ದೂರಿನಲ್ಲಿ 334 ರೈತರು ತಮಗೆ ಇನ್ನೂ ಕೂಡ ಸಾಲಮನ್ನಾದ ಮೊಬಲಗು ಬಂದಿಲ್ಲವೆಂದು ವಿವರ ನೀಡಿದ್ದು ಆ ಮೊತ್ತ ಮೂರು ಕೋಟಿಗಿಂತಾ ಅಧಿಕ ಇದೆ ಎಂದು ವಿವರಿಸಿದರು. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಈಗಲೂ ಕೂಡ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯ ಮಾಡುತ್ತಿರುವುದು ಕಾಣುತ್ತದೆ. ರಾಜಕೀಯ ಪಕ್ಷಗಳ ನಾಯಕರು ಪ್ರಾಮಾಣಿಕ ಪ್ರಯತ್ನ ನಡೆಸಿ ಹಿಂದೆ ಘೋಷಿಸಿದ ರೈತರ ಸಾಲ ಮನ್ನಾ ಮೊಬಲಗು ರೈತರಿಗೆ ಸಿಗುವಂತೆ ಮಾಡಬೇಕು ಎಂದು ಅವರು ಹೇಳಿದರು.
ಅಡಿಕೆ ಆಮದು ನಿಷೇಧಿಸಿ-ಬೆಂಬಲ ಬೆಲೆ ನೀಡಿ:
ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಸಾಯಿಶೇಖರ ಬಿ. ಕರಿಕಳ ಮಾತನಾಡಿ’ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಕುಸಿಯುತಿರುವುದು ಕಂಡು ಬರುತ್ತಿದೆ. ಅಡಿಕೆ ವಿದೇಶದಿಂದ ಆಮದಾಗುವ ಕಾರಣ ಬೆಲೆ ಕುಸಿಯಲು ಕಾರಣವಾಗುತಿದೆ. ಆದುದರಿಂದ ಅಡಿಕೆಯ ಆಮದನ್ನು ಸಂಪೂರ್ಣ ನಿಷೇಧಿಸಬೇಕು ಮತ್ತು ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಹೇಳಿದರು. ಬೆಳೆಗಳ ಬೆಲೆ ಕುಸಿತ ಆಗಿ ಕೃಷಿಕರು ಸಂಕಷ್ಟ
ಎದುರಿಸುತ್ತಿರುವುದರ ಜೊತೆಗೆ ರೈತರ ಮಕ್ಕಳಿಗೆ ಬರುತ್ತಿದ್ದ ಸ್ಕಾಲರ್ಶಿಪ್ ಕೂಡ ನಿಂತು ಹೋಗಿದೆ. ಆದುದರಿಂದ ರೈತರ ಮಕ್ಕಳಿಗೆ ನೀಡುವ ಶಿಕ್ಷಣ ಸಹಾಯಧನವನ್ನು ಸರಕಾರ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು. 2024-27ನೇ ಸಾಲಿನ ಭಾರತೀಯ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನ ಈಗಾಗಲೇ ಪ್ರಾರಂಭಗೊಂಡಿದ್ದು ತಾಲೂಕಿನ ಎಲ್ಲಾ ರೈತರು 10 ರೂ ನೀಡಿ ಸದಸ್ಯತ್ವ ಪಡೆದು ಸಂಘವು ಕೃಷಿಕರಿಗಾಗಿ ನಡೆಸುವ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಸಾಯಿಶೇಖರ್ ವಿನಂತಿಸಿದರು.
110 ಕೆವಿ ಸಬ್ಸ್ಟೇಷನ್ ಶೀಘ್ರ ಪೂರ್ಣಗೊಳಿಸಿ:
ಸಂಘದ ಮಾಜಿ ಕಾರ್ಯದರ್ಶಿ ನೆಟ್ಟಾರು ಗೋಪಾಲಕೃಷ್ಣ ಭಟ್ ಮಾತನಾಡಿ ಸುಳ್ಯದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಳ್ಯದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಆದಷ್ಟು ಶೀಘ್ರ ಪೂರ್ತಿಗೊಳಿಸಬೇಕು. ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಈ ಹಿಂದೆ ಭಾಕಿಸಂ ಸಾಕಷ್ಟು ಹೋರಾಟವನ್ನು ನಡೆಸಿದೆ. ಜನರು, ಕೃಷಿಕರು ಬೆಂಬಲ ನೀಡಿದರೆ ಇನ್ನಷ್ಟು ಹೋರಾಟ ನಡೆಸಲು ಸಿದ್ಧ. ಕೃಷಿಕರಿಗೆ ತ್ರಿಫೇಸ್ ವಿದ್ಯುತ್ ನೀಡುವ ನಿರ್ದಿಷ್ಟ ಸಮಯವನ್ನು ತಿಳಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಸದಸ್ಯ ಈಶ್ವರ ಭಟ್ ಕಾವಿನಮೂಲೆ ಉಪಸ್ಥಿತರಿದ್ದರು.