*ಅನಿಲ್ ಎಚ್. ಟಿ.
(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)
ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ, ದಿವ್ಯ ಮಂದಿರ ಇಂದು ಲೋಕಾಪ೯ಣೆಯಾಗುತ್ತಿರುವ ಸಂಭ್ರಮ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಕಂಡುಬಂದಿದೆ. ಕೊನೆಗೂ ಜಯರಾಮನಿಗೆ ದೇವಾಲಯದಲ್ಲಿ ಪೂಜಿಸಲ್ಪಡುವ ಭಾಗ್ಯ ದೊರಕಿತು ಎಂದು ಭಕ್ತರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.ಇಂಥ ಮಂದಿರ ನಿಮಾ೯ಣವಾಗಲು ಸಾವಿರಾರು ಮಂದಿ ಶ್ರಮಿಸಿದ್ದಾರೆ. ಅನೇಕರ ಪ್ರಾಥ೯ನೆ, ಯೋಜನೆಗಳು ಮಂದಿರ ನಿಮಾ೯ಣದ ಹಿನ್ನಲೆಯಲ್ಲಿದೆ. ಇಂಥವರ ಪೈಕಿ ಮರೆಯಲೇಬಾರದವರು ಮಂದಿರಕ್ಕಾಗಿ ಹಗಲಿರುಳು ಶ್ರಮವಹಿಸಿ ಶಿಲ್ಪಗಳನ್ನು ಕೆತ್ತಿದ ಶಿಲ್ಪಕಾರರು.ಈ ಶಿಲ್ಪಕಾರರು ನೂರಾರು ಸುಂದರ ಶಿಲ್ಪಗಳನ್ನು ಕೆತ್ತಿದ ಪರಿಣಾಮವೇ ರಾಮನ ಮಂದಿರ ನಿರೀಕ್ಷೆಗೂ

ಮೀರಿ ಸೌಂದಯ೯ ಪಡೆಯುವಂತಾಗಿದೆ. ಮಂದಿರ ಲೋಕಾಪ೯ಣೆಯಾಗುವ ದಿನಕ್ಕೆ ಕೆಲವೇ ಗಂಟೆಗಳಿರುವಂತೆಯೇ ಸಹಜವಾಗಿಯೇ ಇಂಥ ಶಿಲ್ಪಿಗಳ ಮನದಲ್ಲಿಯೂ ಸಮಧಾನ, ತೖಪ್ತಿಯ ಜತೆಗೆ ಸಂತೋಷ ಮನೆ ಮಾಡಿದೆ.
ಅಯೋಧ್ಯೆಯಲ್ಲಿರುವ ಮಂದಿರ್ ನಿಮಾ೯ಣ್ ಕಾಯ೯ಶಾಲಾ ಎಂಬ ಶಿಲಾಕೆತ್ತನೆ ಕೇಂದ್ರದಲ್ಲಿ ಶಿಲ್ಪ ಕಲಾವಿದರ ಉತ್ಸಾಹ ಉತ್ಸವದಂತೆ ಗೋಚರಿಸುತ್ತಿದೆ.
32 ವಷ೯ಗಳಿಂದಲೇ ಅಯೋಧ್ಯೆಯಲ್ಲಿ ಮಂದಿರ್ ನಿಮಾ೯ಣ್ ಕಾಯ೯ಶಾಲಾ ಕಾಯಾ೯ಚರಿಸುತ್ತಿದೆ. ಸ್ಥಳೀಯವಾಗಿರುವ ನೂರಕ್ಕೂ ಹೆಚ್ಚು ಕೆಲಸಗಾರರು ಇಲ್ಲಿ ವಷ೯ಗಳಿಂದ ಶ್ರೀರಾಮದೇವಾಲಯಕ್ಕೆ ಅಗತ್ಯವಾಗಿ ಬೇಕಾದ ಶಿಲೆಗಳ ಕೆತ್ತನೆಯಲ್ಲಿ ನಿರತರಾಗಿದ್ದಾರೆ.
ಮಂದಿರ್ ನಿಮಾ೯ಣ್ ಕಾಯ೯ಶಾಲಾ ಹೆಸರಿನ ಶಿಲಾ ಕೇಂದ್ರವನ್ನು ಪ್ರಾರಂಭಿಸಿದಾಗ ವಿಶ್ವಹಿಂದೂ ಪರಿಷತ್ ಪ್ರಮುಖರಿಗೆ ಕೂಡ ರಾಮಮಂದಿರ ಯಾವಾಗ ನಿಮಾ೯ಣ ಆದೀತು ಎಂದು ಗೊತ್ತಿರಲಿಲ್ಲ. ಹೀಗಾಗಿ ಶಿಲ್ಪಕೆತ್ತನೆಯಲ್ಲಿ ಸಕ್ರಿಯವಾಗಿದ್ದ ಶಿಲ್ಪಿಗಳು, ಕಾಮಿ೯ಕರಿಗೂ ತಾವು ರೂಪುಗೊಳಿಸುತ್ತಿರುವ ಕೆತ್ತನೆ ಯಾವಾಗ ಪ್ರಯೋಜನಕ್ಕೆ ಬಂದೀತು ಎಂದು ತಿಳಿದಿರಲು ಸಾಧ್ಯವೇ ಇರಲಿಲ್ಲ.
ಆದರೂ ನೂರಾರು ಶಿಲ್ಪಿಗಳು ಕಲ್ಲುಕೆತ್ತನೆಯಲ್ಲಿ ಛಳಿ, ಗಾಳಿ, ಬಿಸಿಲು ಮಳೆಯನ್ನೂ ಲೆಕ್ಕಿಸದೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೊಂದು ನಿಸ್ವಾಥ೯ ಕಾಯ೯. ಶಿಲೆಗಳು ರಾಶಿ ರಾಶಿಯಾಗಿ ತಯಾರಾಗುತ್ತಲೇ ಇದ್ದವು. ಎಲ್ಲಿಗೆ, ಯಾವಾಗ ಉಪಯೋಗವಾದೀತು ಎಂಬ ಗೊತ್ತುಗುರಿಯಿಲ್ಲದೇ ಒಂದಲ್ಲ ಒಂದು ದಿನ ಪ್ರಭು ಶ್ರೀರಾಮನಿಗೆ ಮಂದಿರ ನಿಮಾ೯ಣವಾಗುವ ಸಂದಭ೯ ಇಲ್ಲಿ ರೂಪಿಸಲಾದ ಶಿಲೆಗಳು ಖಂಡಿತಾ ಬೇಕಾಗುತ್ತದೆ ಎಂಬ ಅಚಲ ವಿಶ್ವಾಸ, ಮತ್ತು ಮಂದಿರ ನಿಮಾ೯ಣದ ಸಂಕಲ್ಪ ಈಡೇರುವುದು ಖಂಡಿತಾ ಎಂಬ ಬಲವಾದ ನಂಬಿಕೆಯಿಂದಲೇ ಈ ಶಿಲೆಗಳು ನಿಮಾ೯ಣವಾಗುತ್ತಲೇ ಇದ್ದವು.
ಈಗ ಇವರೆಲ್ಲರ ನಂಬಿಕೆ ಈಡೇರುವ ಕಾಲ ಬಂದಿದೆ. ಶಿಲೆಗಳೂ ದೇವಾಲಯದಲ್ಲಿ ಜೀವಂತಿಕೆ ಪಡೆಯುವ ದಿನ ಬಂದೇ ಬಿಟ್ಟಿದೆ.

ಚಿತ್ರಗಳು: ಅನಿಲ್ ಎಚ್. ಟಿ.
ನೂರಾರು ಶಿಲೆಗಳು ಅಂದವಾಗಿ ರೂಪುಗೊಂಡು ಶ್ರೀರಾಮಮಂದಿರದ ವಿವಿಧ ಕಡೆಗಳಲ್ಲಿ ಅಲಂಕರಿಸಿಕೊಳ್ಳುವ ಹೊತ್ತು ಬಂದಿದೆ.
ಅಯೋಧ್ಯೆಯ ರಾಮ್ ಘಾಟ್ ನಲ್ಲಿರುವ ಮಂದಿರ್ ನಿಮಾ೯ಣ್ ಕಾಯ೯ಶಾಲೆಯ ವಿಶಾಲವಾದ ಜಾಗದಲ್ಲಿ ಶ್ರೀರಾಮಮಂದಿರದ ಪ್ರತಿಕೖತಿ ಇರಿಸಲಾಗಿದೆ. ಇದಕ್ಕೆ ನಮಸ್ಕರಿಸಿ ಮುಂದೆ ಸಾಗಿದರೆ ಇಲ್ಲಿ ಅಯೋಧ್ಯೆಯ ಪ್ರಮುಖ ಸಂತ, ಮಂದಿರ ನಿಮಾ೯ಣಕ್ಕಾಗಿ ಹೋರಾಡಿದ ಮಹಂತ ರಾಮಚಂದ್ರ ಪರಮಹಂಸ ಮತ್ತು ಥಾಕೂರ್ ಗುರುದತ್ ಸಿಂಹ್ , ಕೆ.ಕೆ.ನಾಯರ್ ಅವರ ಫೋಟೋಗಳನ್ನು ನೋಡಬಹುದಾಗಿದೆ. ಇಲ್ಲಿಯೇ ಸಾಲುಸಾಲಾಗಿ ಕರಸೇವಕರ ಫೋಟೋಗಳಿದೆ. ಬಾಬರ್ ನ ವಿವಾದಿತ ಕಟ್ಟಡದ ಮೇಲೆ 1990 ರಲ್ಲಿ ಹತ್ತಿ ಮೊದಲ ಬಾರಿಗೆ ಬಾಬರ್ ಕಟ್ಟಡದ ಮೇಲೆ ಭಗವಾನ್ ದ್ವಜ ಹಾರಿಸಿದ ಸಂದಭ೯ ನಡೆದ ಪೊಲೀಸ್ ಫೈರಿಂಗ್ ನಲ್ಲಿ ಬಲಿಯಾದ ಕರಸೇವಕರ ಫೋಟೋಗಳನ್ನು ಇಲ್ಲಿ ಇರಿಸಿ ಗೌರವ ಸಲ್ಲಿಸಲಾಗಿದೆ. ಹಾಗೇ ವಿವಾದಿತ ಕಟ್ಟಡದ ಅಡಿಯಲ್ಲಿ ಸಿಕ್ಕಿದ ದೇವಾಲಯದ ಪ್ರಾಚೀನ ಶಿಲೆಗಳು, ರಾಮ ಇಲ್ಲಿಯೇ ಇದ್ದ ಎಂಬುದನ್ನು ಉತ್ಖಖನ ಸಂದಭ೯ ಸಾಬೀತುಪಡಿಸಿದ ಸಾಕ್ಷ್ಯರೂಪಿ ಶಿಲೆಗಳು, ತಾಳೆ ಗರಿಗಳನ್ನೂ ದಾಖಲೆಯಾಗಿ ಇರಿಸಲಾಗಿದೆ. ಮಂದಿರ ನಿಮಾ೯ಣ ಹೋರಾಟದಲ್ಲಿ ತೊಡಗಿಸಿಕೊಂಡ ಹಿಂದೂ ಸಂಘಟನೆಗಳ ಪ್ರಮುಖ ನಾಯಕರ ಪೋಟೋಗಳೂ ಕೂಡ ಇಲ್ಲಿ ಕಂಡು ಬರುತ್ತವೆ. ಪ್ರಮುಖವಾಗಿ ಬಾಬರಿ ಕಟ್ಟಡದ ಮೇಲೆ ಹತ್ತಿ ಧ್ವಜವನ್ನು ಹಾರಿಸಿದ ಸಂದಭ೯ ಪೊಲೀಸರ ಗುಂಡಿಗೆ ಬಲಿಯಾದ ಕೋಲ್ಕಾತ್ತಾದ ಕೋಥಾರಿ ಸಹೋದರರಾದ ರಾಮ್ ಕೋಥಾರಿ ಮತ್ತು ಶರದ್ ಕೋಥಾರಿ ಅವರ ಫೋಟೋ ಮತ್ತು ಮಾಹಿತಿಯನ್ನೂ ಇಲ್ಲಿ ಗಮನಿಸಲು ಸಾಧ್ಯವಿದೆ.

ಇದನ್ನು ನೋಡಿಕೊಂಡು ಮುಂದೆ ಸಾಗಿದರೆ ಇಲ್ಲಿಯೇ ನೂರಾರು ಮಹಿಳೆಯರು ಶ್ವೇತ ಶಿಲೆಗಳನ್ನು ಸ್ವಚ್ಚಗೊಳಿಸುವ ಕಾಯ೯ದಲ್ಲಿ ನಿರತರಾಗಿದ್ದಾರೆ. ಇಲ್ಲಿಗೆ ಬರುವ ಕಲ್ಲುಗಳು ಮಲೀನವಾಗಿರುತ್ತದೆ. ಬಣ್ಣ ಕೆಟ್ಟಿರುತ್ತದೆ. ಹೀಗಾಗಿ ಇಂಥ ಕಲ್ಲುಗಳನ್ನು ಸ್ವಚ್ಚಗೊಳಿಸಿದ ಮೇಲೆ ಅವು ಶ್ವೇತ ವಣ೯ದಿಂದ ಕಂಗೊಳಿಸುತ್ತದೆ. ಹೀಗಾಗಿ ಅ್ಯಸಿಡ್ ಬಳಸಿ ಶಿಲೆಗಳ ಸ್ವಚ್ಚತೆ ಅನಿವಾಯ೯.
ಇದನ್ನು ವೀಕ್ಷಿಸಿ ಮುಂದೆ ಸಾಗಿದರೆ ಕಣ್ಣು ಹಾಯಿಸಿದಷ್ಟೂ ಉದ್ದಕ್ಕೆ ನಾನಾ ಶಿಲ್ಪಿಗಳು ವೈವಿಧ್ಯಮಯ ಕೆತ್ತನೆ ಕಾಯ೯ದಲ್ಲಿ ಬಿಡುವಿಲ್ಲದೇ ನಿರತರಾಗಿರುವುದು ಗೋಚರಿಸುತ್ತದೆ. ದೇವಾಲಯ ಸಂಕೀಣ೯ಕ್ಕೆ ಬೇಕಾದ ಶಿಲೆಗಳನ್ನು ಇದೀಗ ಕೆತ್ತಲಾಗುತ್ತಿದ್ದು ಬಹುತಕ ಶಿಲಾ ಕೆತ್ತನೆ ಕಾಯ೯ ಮುಕ್ತಾಯ ಹಂತದಲ್ಲಿದೆ, ಹಲವಾರು ವಷ೯ಗಳ ಹಿಂದೆ ಇಲ್ಲಿ ಕೆತ್ತಲಾಗಿದ್ದ ಶಿಲೆಗಳನ್ನು ಈಗ ನಿಮಾ೯ಣವಾಗಿರುವ ಬಾಲರಾಮನ ಮಂದಿರಕ್ಕೆ ಬಳಸಿಕೊಳ್ಳಲಾಗಿದೆ. ಹೀಗಿದ್ದರೂ ವೈಭವದಿಂದ ರೂಪುಗೊಳ್ಳುತ್ತಿರುವ ರಾಮಮಂದಿರ ಸಂಕೀಣ೯ಕ್ಕೆ ಮತ್ತೆ ಸಾವಿರಾರು ಶಿಲೆಗಳ ಅಗತ್ಯವಿದೆ. ಹೀಗಾಗಿ ಶಿಲಾ ಕೆತ್ತನೆ ಕಾಯ೯ ಬಿರುಸಿನಿಂದಲೇ ಸಾಗಿದೆ.ಇಲ್ಲಿ ಕರಕುಶಲ ಕಲೆಯಲ್ಲಿ ನಿರತರಾಗಿರುವ ಶಿಲ್ಪಿಗಳಲ್ಲಿ ಬಹುತೇಕರು ರಾಜಸ್ತಾನದವರು. ಕಳೆದ 4-5 ವಷ೯ಗಳಿಂದ ಅಯೋಧ್ಯೆಯಲ್ಲಿ ಕಾಮಿ೯ಕ ಕುಟೀರಗಳಲ್ಲಿ ವಾಸಿಸುತ್ತಾ ಶಿಲ್ಪ ಕೆತ್ತನೆ, ಸ್ವಚ್ಚಕಾ ಕಾಯ೯ಗಳಲ್ಲಿ ಸಕ್ರಿಯರಾಗಿದ್ದಾರೆ.
32 ವಷ೯ಗಳ ಮೊದಲು ಇಲ್ಲಿ ಕಾಯಾ೯ಶಾಲೆ ಪ್ರಾರಂಭಿಸಿದಾಗ ಇದ್ದ 3 ಎಕ್ರೆ ಜಾಗ ಶಿಲ್ಪ ಕೆತ್ತನೆಗೆ ಸಾಕಾಗುವುದಿಲ್ಲ ಎಂಬ ಕಾರಣದಿಂದ ಇದರ ಪಕ್ಕದಲ್ಲಿಯೇ 4 ಎಕ್ರೆ ಜಾಗವನ್ನು ಪಡೆದು ಇಲ್ಲಿ ರಾಮಸೇವಕಪುರಂ ಎಂಬ ಹೆಸರಿನಲ್ಲಿ ಶಿಲ್ಪಕೆತ್ತನೆ ಕಾಯ೯ ಪ್ರಾರಂಭಿಸಲಾಗಿತ್ತು. ಇದೇ ರಾಮಸೇವಕಪುರಂನಲ್ಲಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬಾಲರಾಮನನ್ನು ಕೆತ್ತಿದ್ದು ಇದೇ ಶಿಲ್ಪ ಶ್ರೀರಾಮಮಂದಿರದಲ್ಲಿ ಪೂಜೆಗೆ ಆಯ್ಕೆಯಾಗಿದೆ.
ಈ ಎರಡೂ ಶಿಲ್ಪ ಕೆತ್ತನೆ ಕೇಂದ್ರಗಳು ಎರಡು ಕಿ.ಮೀ. ಅಂತರದಲ್ಲಿದ್ದು ಅಯೋಧ್ಯೆಗೆ ಬರುವ ಪ್ರವಾಸಿ ಸಂದಶ೯ಕರು ಇಲ್ಲಿಗೆ ಭೇಟಿ ನೀಡದೇ ರಾಮನೂರಿನ ಭೇಟಿ ಸಮಾಪನವಾಗದು. ಅನೇಕರು ಇಲ್ಲಿಗೆ ಬಂದಾಗ, ನಾವೂ ಕೂಡ ಕರಸೇವೆ ಮಾಡುವ ಮೂಲಕ ಶ್ರೀರಾಮನ ಸೇವೆಗೆ ಮುಂದಾಗುತ್ತೇವೆ. ನಮ್ಮ ಸೇವೆಯನ್ನೂ ಬಳಸಿಕೊಳ್ಳಿ ಎಂದು ಮನವಿ ಸಲ್ಲಿಸುವುದಿದೆ.

ಇಲ್ಲಿ ಬಳಸಲ್ಪಡುವ ಶಿಲೆಗಳು ಪ್ರಾಚೀನ ಕಾಲದ ಶಿಲೆಗಳಾಗಿದ್ದು ನೇಪಾಳ, ಕೊಲ್ಕೋತ್ತಾಗಳ ಕಾಳಿ ಘಂಡಕಿ ನದಿಬದಿಯಿಂದಲೂ ತರಲಾಗಿದೆ. ರಾಜಾಸ್ತಾನದಿಂದಲೂ ಟನ್ ಗಟ್ಟಲೆ ಶಿಲೆಗಳನ್ನು ತರಲಾಗಿದ್ದು ಅಲ್ಲಿನ ಸಕಾ೯ರ ವಿಳಂಭರಹಿತವಾಗಿ ಮಂದಿರಕ್ಕೆ ಅಗತ್ಯವಾದ ಶಿಲೆಗಳನ್ನು ಕಳುಹಿಸಲು ವ್ಯವಸ್ಥೆ ಮಾಡಿತ್ತು. ಅಂತೆಯೇ ಮಂದಿರ ನಿಮಾ೯ಣಕ್ಕಾಗಿ ಕನಾ೯ಟಕದಿಂದಲೂ ಉತ್ಕ್ಟಷ್ಟ ಶಿಲೆಗಳು ಅಯೋಧ್ಯೆಗೆ ತಲುಪಿದೆ. ದೇಶದ ಹೆಸರಾಂತ ಕಾಮಗಾರಿ ಸಂಸ್ಥೆಯಾದ ಲಾಸ೯ನ್ ಅಂಡ್ ಟಬೋ೯ ಸಂಸ್ಥೆಯೇ ಶ್ರೀರಾಮಮಂದಿರದ ನಿಮಾ೯ಣ ಕಾಯ೯ ಕೈಗೊಂಡಿದೆ. ಕಲ್ಲುಕೆತ್ತನೆಗಾಗಿ ಆಧುನಿಕ ಯಂತ್ರಗಳನ್ನು ಬಳಸಲಾಗಿದೆಯಾದರೂ ಅತ್ಯಂತ ಪುಟ್ಟದಾದ ಕೆತ್ತನೆಗಳಿಗೆ ಶಿಲ್ಪಿಗಳ ನೆರವೇ ಅನಿವಾಯ೯ವಾಗಿದೆ.
ಕಳೆದ 3 ವಷ೯ಗಳ ಹಿಂದೆ ಸವೋ೯ಚ್ಚ ನ್ಯಾಯಾಲಯ ಶ್ರೀರಾಮಮಂದಿರವನ್ನು ಅಯೋಧ್ಯೆಯಲ್ಲಿಯೇ ನಿಮಿ೯ಸಬಹುದು ಎಂದು ಆದೇಶ ನೀಡಿದ ನಂತರ ಮಂದಿರಕ್ಕೆ ಶಿಲಾನ್ಯಾಸ ನಡೆದ ಕೂಡಲೇ ಈ ಜಾಗದಿಂದ ಹಲವಷ್ಟು ಶಿಲೆಗಳನ್ನು ಮಂದಿರ ನಿಮಾ೯ಣ ನಡೆಯುತ್ತಿರುವ ಹನುಮಾನ್ ಗುಡಿ ಹತ್ತಿರದ ಸ್ಥಳಕ್ಕೇ ಸ್ಥಳಾಂತರ ಮಾಡಲಾಯಿತು. ಶಿಲೆಗಳ ಜತೆಯಲ್ಲಿಯೇ ನೂರಾರು ಶಿಲ್ಪಿಗಳು ಕೂಡ ಮೂಲ ಮಂದಿರ ನಿಮಾ೯ಣ ಸ್ಥಳಕ್ಕೆ ತೆರಳಿದರು. ಇದೀಗ ಪೊಲೀಸ್ ಭದ್ರತೆಯ ಸಪ೯ಗಾವಲಿನಲ್ಲಿ ಮಂದಿರ ನಿಮಾ೯ಣ ಸ್ಥಳದಲ್ಲಿ ಶಿಲ್ಪಿಗಳು ಶಿಲಾಕೆತ್ತನೆ ಮುಂದುವರೆಸಿದ್ದಾರೆ. ಶ್ರೀರಾಮನ ಮಂದಿರದ ತಳಪಾಯಕ್ಕೆ ಅಂದಾಜು 1,200 ಬೖಹತ್ ಕಲ್ಲುಗಳನ್ನು ಬಳಸಲಾಗಿದೆ.

ಶಿಲ್ಪಗಳಿಗೆ ಜೀವಂತಿಕೆಯನ್ನು ನೀಡಿದ ನೂರಾರು ಕರಸೇವಕರ ಬೆವರಿನ ಶ್ರಮಕ್ಕೆ ಮೌಲ್ಯ ಲಭಿಸಿದೆ. ಶ್ರೀರಾಮಮಂದಿರದ ಸೌಂದಯ೯ದಲ್ಲಿ ಅನೇಕ ಶಿಲ್ಪಿಗಳ ಕರಕುಶಲ ಕಲೆಯ ಶ್ರೀಮಂತಿಕೆ ಅಡಗಿದೆ.
ದೇವಾಲಯಕ್ಕಾಗಿ ಹಗಲಿರುಳು ತೊಡಗಿಸಿಕೊಂಡು ಅಂದಚಂದದ ಶಿಲ್ಪಕಲೆಗಳನ್ನು ರೂಪಿಸಿದ ಶ್ರಮಿಕ ಶಿಲ್ಪಿಗಳಿಗೂ ದೇವಾಲಯದ ನಿಮಾ೯ಣದ ಕೀತಿ೯ ಸಲ್ಲಲೇಬೇಕು.
ಪಣವಿಡು ರಾಮನ ಮೇಲಾಣೆ.. ಮಂದಿರವಲ್ಲೇ ಕಟ್ಟುವೆವು..!:
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣಕ್ಕಾಗಿ ಹೋರಾಟ ನಡೆಸಿ, ಪಣವಿಡು ರಾಮನ ಮೇಲಾಣೆ.. ಮಂದಿರವಲ್ಲೇ ಕಟ್ಟುವೆವು ಎಂಬ ಘೋಷಣೆಯೊಂದಿಗೆ ದೇಶವ್ಯಾಪಿ ಸಂಚಲನ ಉಂಟು ಮಾಡಿದ್ದು ಲಕ್ಷಾಂತರ ಕರಸೇವಕರು. ಈ ಪೈಕಿ 3 ಸಾವಿರಕ್ಕೂ ಅಧಿಕ ಕರಸೇವಕರು ಶ್ರೀರಾಮಮಂದಿರ ಬೇಕೆಂಬ ಹೋರಾಟಕ್ಕಾಗಿ ತಮ್ಮ ಪ್ರಾಣತ್ಯಾಗ ಕೂಡ ಮಾಡಿದ್ದಾರೆ. ಅನೇಕ ಕರಸೇವಕರು ಅಂಗವೈಕಲ್ಯತೆ ಹೊಂದಿದ್ದಾರೆ. ಇಂಥ ಕರಸೇವಕರ ಸ್ಮರಣೆಯಲ್ಲಿ ಅಯೋಧ್ಯೆಯ ಹೖದಯ ಭಾಗದಲ್ಲಿಯೇ ಕರಸೇವಕಪುರಂ ಎಂಬ ಕೇಂದ್ರ ಇದೆ. .ಶ್ರೀರಾಮನಿಗೆ ಮಂದಿರ ನಿಮಾ೯ಣವಾಗಿರುವ ಈ ಸಂದಭ೯ ವಿವಾದಿತ ಕಟ್ಟಡವನ್ನು ನಾಶಮಾಡಿ, ಈ ಜಾಗ ಶ್ರೀರಾಮನಿಗೇ ಸೇರಬೇಕು ಎಂದು ಸಂಕಲ್ಪ ತೊಟ್ಟು ಬಲಿದಾನಗೈದವರೂ ಸೇರಿದಂತೆ ಇಂದಿಗೂ ರಾಮನಿಗೆ ಮಂದಿರದ ಕನವರಿಕೆಯಲ್ಲಿದ್ದಾರೆ.

ಪಣವಿಡು ರಾಮನಾಣೆ.. ಮಂದಿರವಲ್ಲೇ ಕಟ್ಟುವೆವು.. ಹನುಮನ ನಾಡಿನ ಮಕ್ಕಳು ನಾವು. ಮಂದಿರ ಅಲ್ಲೇ ಕಟ್ಟುವೆವು.. ಸೌಗಂಧ್ ರಾಮ್ ಸೇ ಕೆಹ್ ಥೇ ಹೇ ..ಮಂದಿರ್ ವಹೀಂ ಬನಾಯೆಂಗೇ.. ಎಂಬ ಕರಸೇವಕರ ಉದ್ಗೋಷ ಸಾಥ೯ಕತೆ ಪಡೆಯುತ್ತಿರುವ ಈ ಸಂದಭ೯ ಇಂಥ ಸಾವಿರಾರು ಕರಸೇವಕರಿಗೆ ಖಂಡಿತವಾಗಿಯೂ ರಾಮಭಕ್ತರ ಗೌರವ ನಮನಗಳು ಸಲ್ಲಲೇಬೇಕು.
ಪ್ರಾಣ ಪ್ರತಿಷ್ಟೆ ಎಂದರೇನು?:
ಪ್ರತಿಷ್ಟಾಪನೆ ಮಾಡಿದ ಆಕೖತಿಗೆ ಪ್ರಾಣ ತುಂಬುವುದೇ ಪ್ರಾಣ ಪ್ರತಿಷ್ಟೆಯಾಗಿದೆ. ಹಿಂದೂ ಸಂಪ್ರದಾಯದಲ್ಲಿ ಇದೊಂದು ಮಹತ್ವದ ಪ್ರಕ್ರಿಯೆ. ದೇವಾಲಯಗಳಲ್ಲಿ ದೇವಾನುಗೇವತೆಗಳ ಮೂತಿ೯ಯನ್ನು ಸ್ಥಾಪಿಸುವ ಸಂದಭ೯ ಅಂಥ ಶಿಲಾ ಮೂತಿ೯ಗಳಿಗೆ ಪ್ರಾಣ ಅಥವಾ ಶಕ್ತಿಯನ್ನು ತುಂಬುವ ಪ್ರಕ್ರಿಯೆ ಇದಾಗಿದೆ. ಈ ರೀತಿ ವಿವಿಧ ಶಕ್ತಿಗಳನ್ನು ತುಂಬಿ ಪ್ರತಿಷ್ಟಾಪನೆ ಮಾಡಿದ ವಿಗ್ರಹಕ್ಕೆ ಪೂಜೆ ಸಲ್ಲಿಸಿದರೆ ಆ ಮೂತಿ೯ಯಿಂದ ಭಕ್ತರಿಗೆ ಶಕ್ತಿ ಅನುಗ್ರಹ ದೊರಕಲಿದೆ.
ವಿಗ್ರಹದ ಕಣ್ಣಿಗೆ ಕಟ್ಟಲಾಗಿರುವ ವಸ್ತ್ರವನ್ನು ಪ್ರಾಣ ಪ್ರತಿಷ್ಟಾಪನೆ ವಿಧಿ ವಿಧಾನದ ಸಂದಭ೯ ತೆಗೆಯಲಾಗುತ್ತದೆ. ಅಲ್ಲಿಯವರೆಗೂ ವಿಗ್ರಹದ ಕಣ್ಣಿಗೆ ಬಟ್ಟೆ ಕಟ್ಟಲಾಗಿರುತ್ತದೆ. ಕಣ್ಣಿನ ಶಕ್ತಿ ಹೊರಹೋಗದಂತೆ ನೋಡಿಕೊಳ್ಳಲಾಗುತ್ತದೆ.

(ಅನಿಲ್.ಎಚ್.ಟಿ.ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)












