*ಅನಿಲ್ ಎಚ್.ಟಿ.
(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)
ಅಯೋಧ್ಯೆಯ ಹೆಸರಾಂತ ಸರಯೂ ನದಿ ತೀರದಲ್ಲಿನ ಆ ಬಡಾವಣೆಯ ಮನೆಗೆ ಪ್ರವೇಶಿಸುತ್ತಿದ್ದಂತೆ ಗೖಹಿಣಿಯೋವ೯ಳು ನಗುಮುಖದಿಂದ ನಮಸ್ಕರಿಸುತ್ತಾ ನಮ್ಮನ್ನು ಬರಮಾಡಿಕೊಂಡರು.
ಆ ಪುಟ್ಟ ಕೋಣೆಯಲ್ಲಿ ಇದ್ದದ್ದು ಎರಡೇ ಕುಚಿ೯, ಕೋಣೆಗೆ ಹೊಂದಿಕೊಂಡಂತೆ ಒಬ್ಬರು ಮಾತ್ರ ನಿಲ್ಲಬಹುದಾದ ಮತ್ತೊಂದು ಕೋಣೆ. ಅಲ್ಲಿದ್ದ ಸ್ಟವ್ ಇದು ಅಡುಗೆಕೋಣೆ ಎಂಬುದನ್ನು ಸೂಚಿಸಿತ್ತು.
ಟೀ ಮಾಡಿಕೊಡಲಾ.. ಕುಡಿತೀರಾ ಎಂದರು ಮಹಿಳೆ.
ನಾವು ಕಾಫಿ ನಾಡಿನಿಂದ ಬಂದಿದ್ದೇನೆ. ಆದರೆ ನಿಮ್ಮ ಮನೆಯಲ್ಲಿ ಟೀ ಕುಡಿಯುವುದಿಲ್ಲ ಎನ್ನಲು ಸಾಧ್ಯವಿಲ್ಲ. ಯಾಕೆಂದರೆ ನೀವು ಮಾಡಿದ ಟೀ ಈಗ ವಲ್ಡ್೯ ಫೇಮಸ್ ಆಗಿದೆ ಎಂದಾಗ ಮಹಿಳೆಯ ಮುಖದಲ್ಲಿ ಜೋರಾದ ನಗು.. ಈ ಮಹಿಳೆಯ ಹೆಸರು ಮೀರಾ ಮಾಂಜಿ. ಈಕೆಯ
ಮನೆಗೆ ಡಿಸೆಂಬರ್30 ರಂದು ಹೇಳದೇ ಕೇಳದೇ ದಿಡೀರನೇ ಬಂದ ಅತಿಥಿಯೋವ೯ರು ಮೀರಾಮಾಂಜಿಯಿಂದ ಟೀ ಮಾಡಿ ಎಂದು ಕೇಳಿಸಿಕೊಂಡು ಚಯಾ ಕುಡಿದರು. ಈ ಕಾರಣದಿಂದಲೇ ಮೀರಾ ಮಾಂಜಿ ಮತ್ತು ಆಕೆ ಮನೆ ಬಹಳ ಖ್ಯಾತಿಯಾಯಿತು.
ಅಂದಂತೆ, ಮೀರಾ ಮಾಂಜಿ ಮನೆಗೆ ಏಕಾಏಕಿ ಬಂದು ಚಹಾ ಸೇವಿಸಿದ ಗಣ್ಯರ ಹೆಸರು. ನರೇಂದ್ರ ಮೋದಿ. ಭಾರತದ ಪ್ರಧಾನಿ.
ಪ್ರಧಾನಿಗೆ ಟೀ ನೀಡಿದ ಮನೆಯಲ್ಲಿ ಆ ಘಟನೆ ಕಳೆದು 14 ದಿನದಲ್ಲಿ ನಾವಿದ್ದೆವು. ಮೀರಾ ಮಾಂಜಿ ನೀಡಿದ ಟೀ ಕುಡಿದೆವು. ನಿಜಕ್ಕೂ ಬಹಳ ಚೆನ್ನಾಗಿತ್ತು.

ನಿಮ್ಮ ಟೀ ಕುಡಿದು ಪ್ರಧಾನಿ ಏನು ಹೇಳಿದರು ಎಂದು ಕೇಳಿದರೆ ಮೀರಾ ಹೇಳಿದರು. ನಿಜಕ್ಕೂ ನನಗೆ ಮೋದಿ ನನ್ನ ಮನೆಗೆ ಬರುತ್ತಾರೆ ಎಂದು ಗೊತ್ತೇ ಇರಲಿಲ್ಲ. ಅಯೋಧ್ಯೆಗೆ ಅಂದು ಬಂದಿದ್ದ ಪ್ರಧಾನಿ ನನ್ನ ಪಾಲಿಗೆ ದೇವರಂತೆ ನನ್ನ ಮನೆಗೆ ಬಂದು ನಾನೇ ಕೈಯಾರೆ ನೀಡಿದ ಟೀ ಕುಡಿದದ್ದು ನನ್ನ ಭಾಗ್ಯವಾಗಿತ್ತು. ಸೈರನ್ ಶಬ್ದ ಮನೆ ಎದುರು ಕೇಳಿದಾಗಲೇ ಪ್ರದಾನಿ ನನ್ನ ಮನೆಗೆ ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದು ಗೊತ್ತಾಗಿ ಕೈಕಾಲು ಸ್ಥಬ್ದವಾದಂತಾಗಿತ್ತು. ಮನೆಯೊಳಕ್ಕೆ ಸೀದಾ ಬಂದು ಏನು ಅಡುಗೆ ಮಾಡಿದ್ದೀರಿ ಎಂದು ಕೇಳಿದರು. ಚಪಾತಿ, ಧಾಲ್, ಅನ್ನ, ತರಕಾರಿ ಸಾಂಬಾರು ಮತ್ತು ಟೀ ಮಾಡಿದ್ದೇನೆ ಎಂದೆ. ನಿಮ್ಮೂರಿನ ಈ ಛಳಿಗೆ ಟೀ ಕುಡಿಯದಿದ್ದರೆ ಆದೀತೇ ಎಂದರು. ಮನೆ ಮೂಲೆಯಲ್ಲಿದ್ದ ಕುಚಿ೯ಯೊಂದನ್ನು ತಾವೇ ಎಳೆದುಕೊಂಡು ಕುಳಿತರು. ಕೆಲವೇ ಕ್ಷಣಗಳಲ್ಲಿ ಟೀ ಮಾಡಿಕೊಟ್ಟೆ, ಸಿಹಿ ಸ್ವಲ್ಪ ಜಾಸ್ತಿಯಾಯಿತು ಎಂದು ಪ್ರಧಾನಿ ಹೇಳಿದಾಗ ನಾನು ಹೀಗೇ ಟಿೀ ಮಾಡೋದು ಎಂದೆ.
ಗಂಡ ಸೂರಜ್ ಜತೆ ಮಾತನಾಡಿದರು. ಮಕ್ಕಳು ಬಿಡಿಸಿದ ಚಿತ್ರಗಳನ್ನೂ ವೀಕ್ಷಿಸಿದರು. ಟೀಗಾಗಿ ಥ್ಯಾಂಕ್ಯು ಎಂದು ನಮಸ್ಕರಿಸಿ ಮನೆಯಿಂದ ತೆರಳಿದರು ಎಂದು ಮೀರಾ ಮಾಂಜಿ ಸ್ಮರಿಸಿಕೊಂಡರು.
ಪ್ರಧಾನಿ ಇಲ್ಲಿಗೆ ಭೇಟಿ ನೀಡಲೂ ಕಾರಣವಿತ್ತು. ಮೀರಾ ಮಾಂಜಿ ಪ್ರಧಾನಿ ಆವಾಜ್ ಯೋಜನೆಯಡಿ ನಿಮಿ೯ಸಿದ್ದ ಮನೆಯಲ್ಲಿ ವಾಸವಾಗಿದ್ದಾರೆ. ಹಾಗೇ ಕೇಂದ್ರ ಸಕಾ೯ರದ ಉಜ್ವಲ ಯೋಜನೆಯ ಫಲಾನುಭವಿಗಳ ಪೈಕಿ 100 ಕೋಟಿ ಸಂಖ್ಯೆಯವರಾಗಿದ್ದಾರೆ. 100 ಕೋಟಿ ಫಲಾನುಭವಿಯಾದ ಮೀರಾ ಮನೆಗೆ ಪ್ರಧಾನಿ ಭೇಟಿ ನೀಡಿ ಯೋಜನೆ ಉಪಯೋಗವಾಯಿತೇ ಎಂದೂ ಮಾಹಿತಿ ಪಡೆದುಕೊಂಡರು.

ಚಿತ್ರಗಳು: ಅನಿಲ್ ಎಚ್.ಟಿ
ಪ್ರಧಾನಿ ಭೇಟಿ ನೀಡಿದ 5 ನೇ ದಿನಕ್ಕೆ ಪ್ರಧಾನಿ ಸಚಿವಾಲಾಯದಿಂದ ಮೀರಾ ಮಾಂಜಿಗೆ ಧನ್ವವಾದ ಸೂಚಿಸಿದ ಪತ್ರ ಮತ್ತು ಟೀ ಸೆಟ್ ಕೊಡುಗೆಯಾಗಿ ಬಂದಿದೆ. ಮಕ್ಕಳಿಗೆ ಚಿತ್ರಕಲಾ ಬಾಕ್ಸ್ ಮತ್ತು ಕ್ರೇಯಾನ್ಸ್ ಕೂಡ ದೊರಕಿದೆ. ಯೋಜನೆಯ ಫಲಾನುಭವಿಯಾದ ನಿಮ್ಮ ಸಂತೋಷದಿಂದ ನಾನು ಮತ್ತಷ್ಟು ಪ್ರೋತ್ಸಾಹಿತನಾದೆ. ದೇಶಕ್ಕಾಗಿ ದುಡಿಯುವ ನನ್ನ ಸೇವೆಗೆ ಮತ್ತಷ್ಟು ಚೈತನ್ಯ ದೊರಕಿದಂತಾಗಿದೆ. ಭಾರತವನ್ನು ಅಮೖತ್ ಕಾಲಕ್ಕೆ ಕೊಂಡೊಯ್ಯುವಲ್ಲಿ ನಿಮ್ಮಂಥವರೇ ನಿಜವಾದ ಸ್ಪೂತಿ೯ ಎಂದೂ ಮೋದಿ ಸಹಿ ಹಾಕಿರುವ ಪತ್ರದಲ್ಲಿ ಹೇಳಲಾಗಿದೆ.
ಈ ಪತ್ರ ಎಲ್ಲಿದೆ ಎಂದು ಕೇಳಿದಾಗ ದೇವರಫೋಟೋದತ್ತ ಮಾಂಜಿ ಕೈತೋರಿದರು. ಅಲ್ಲಿ ಪ್ರಧಾನಿ ಬರೆದ ಪತ್ರವನ್ನು ಫೋಟೋ ಪಕ್ಕ ಇರಿಸಲಾಗಿತ್ತು. ಜತೆಗೇ ಹನುಮಂತನ ಫೋಟೋ ಮುಂದೆ ಚಹಾ ಕಪ್ ಕೂಡ ಇರಿಸಲಾಗಿತ್ತು. ಇದೇನಿದು ಎಂದಾಗ ಮೀರಾ ಮಾಂಜಿ ಹೇಳಿದರು. ಪ್ರಧಾನಿಯೋವ೯ರು ನನ್ನ ಮನೆಯಲ್ಲಿ ಚಹಾ ಕುಡಿದ ಪುಣ್ಯಕ್ಕಾಗಿ ಚಹಾ ಕಪ್ಗೂ ದಿನನಿತ್ಯ ದೇವರ ಜತೆಗೇ ಪೂಜೆ ಸಲ್ಲಿಸುತ್ತಿದ್ದೇನೆ!
ಅಂದಂತೆ, ಪ್ರಧಾನಿ ಪತ್ರದ ಜತೆಗೇ ಮೀರಾ ಮಾಂಜಿಗೆ ಜ.22 ರಂದು ಮಂದಿರ ಲೋಕಾಪ೯ಣೆಗೆ ಆಹ್ವಾನ ಕೂಡ ದೊರಕಿದೆ. ತಾನೂ ಆ ದಿನ ರಾಮಮಂದಿರಕ್ಕೆ ತೆರಳುವುದಾಗಿ ಮಾಂಜಿ ಹೇಳಿದರು.
ಅಯೋಧ್ಯೆಯ ಮೀರಾ ಮಾಂಜಿ ಮನೆ ಈಗ ಅಯೋಧ್ಯೆ ನಿವಾಸಿಗಳ ಪಾಲಿಗೆ ಪಿಎಂ ಟೀ ಸೇವಿಸಿದ ಮನೆಯಾಗಿ ಖ್ಯಾತವಾಗಿದ್ದು ಸ್ಥಳೀಯರು ದಿನನಿತ್ಯ ಇಲ್ಲಿಗೆ ಭೇಟಿ ನೀಡಿ ಮಾಂಜಿಯನ್ನು ಅಭಿನಂದಿಸುತ್ತಿದ್ದಾರೆ.

1,008 ಹೋಮಕುಂಡಗಳಲ್ಲಿ 2 ಸಾವಿರ ಅಚ೯ಕರಿಂದ ಹವನ:
ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ಸಮಾರಂಭಕ್ಕೆ ಕೇವಲ 5 ದಿನಗಳು ಮಾತ್ರ ಇರುವಂತೆಯೇ ಬೖಹತ್ ಪ್ರಮಾಣದ ಹೋಮ ಹವನಗಳು ಪ್ರಾರಂಭವಾಗಿದೆ. ಹೋಮ ಕುಂಡಗಳು ಎಷ್ಟು ಸಂಖ್ಯೆಯಲ್ಲಿದೆ ಗೊತ್ತೆ? ಹತ್ತು, ನೂರಲ್ಲ.. ಬದಲಿಗೆ ಬೖಹತ್ ಪೆಂಡಾಲ್ ನಡಿಯಲ್ಲಿ 1,008 ಯಾಗ ಕುಂಡಗಳನ್ನು ನಿಮಿ೯ಸಲಾಗಿದ್ದು ಇಲ್ಲಿಯೇ ಜ.22 ರ ಸೋಮವಾರದವರೆಗೆ ಹೋಮಹವನಗಳು ನಡೆಯಲಿದೆ. ಹೋಮ ಕೈಗೊಳ್ಳಲು ನೇಪಾಳದಲ್ಲಿ ನೆಲಸಿರುವ ಅಯೋಧ್ಯೆ ಮೂಲದವರಾದ ಆತ್ಮಾನಂದ ದಾಸ್ ಮಹಾತ್ಯಾಗಿ (ನೇಪಾಳಿ ಬಾಬ) ಎಲ್ಲಾ ಸಿದ್ದತೆ ಕೈಗೊಂಡಿದ್ದಾರೆ. ರಾಮನಾಮ ಮಹಾಯಾಗ ಎಂದೇ ಖ್ಯಾತವಾಗಿರುವ ಈ ಯಾಗದಲ್ಲಿ 1008 ಶಿವಲಿಂಗಗಳನ್ನು ಇರಿಸಲಾಗಿದ್ದು, 2 ಸಾವಿರ

ಅಚ೯ಕರು ಪಾಲ್ಗೊಳ್ಳುತ್ತಿದ್ದಾರೆ. ದೇಶದಲ್ಲಿನ ಬೖಹತ್ ಯಾಗಗಳಲ್ಲಿ ಇದು ದಾಖಲೆಯಾಗಲಿದೆ. ಪ್ರತಿನಿತ್ಯ 1 ಲಕ್ಷ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾಮಾಯಣ ಶ್ಲೋಕಗಳನ್ನು ಪಠಿಸಲಾಗುತ್ತಿದ್ದು, 1,100 ದಂಪತಿ ಕೂಡ ಹೋಮ ಹವನಾದಿ ಕಾಯ೯ಗಳಲ್ಲಿ ಪಾಲ್ಗೊಂಡಿದ್ದಾರೆ.
ಇಲ್ಲಿ ಪಠಿಸಲಾಗುತ್ತಿರುವ ಶ್ಲೋಕ, ಹೋಮದ ಹೊಗೆ ಅಯೋಧ್ಯೆಯ ಹಲವೆಡೆ ಪಸರಿಸಿದೆ. ಯಾಗಶಾಲೆಗೆ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿದೆ. ಅಯೋಧ್ಯೆಯಲ್ಲಿನ 200 ಕ್ಕೂ ಅಧಿಕ ದೇವಾಲಯಗಳಲ್ಲಿಯೂ ಸಂಕ್ರಾಂತಿ ಬಳಿಕ ( ಉತ್ತರ ಪ್ರದೇಶದಲ್ಲಿ ಲೋರಿ ಉತ್ಸವ) ವಿವಿಧ ಪೂಜೆ, ಹೋಮ, ಹವನಗಳು ಆರಂಭವಾಗಿದ್ದು ಎಲ್ಲೆಲ್ಲೂ ಭಕ್ತಿಸಾಗರದ ವಾತಾವರಣ ಕಂಡುಬರುತ್ತಿದೆ.

(ಅನಿಲ್ ಹೆಚ್.ಟಿ.ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)









