*ಅನಿಲ್ ಹೆಚ್.ಟಿ.
(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)
ಅಯೋಧ್ಯೆ: ಶ್ರೀರಾಮ ನಗರಿ, ರಘುರಾಮನ ಪುಣ್ಯ ಕ್ಷೇತ್ರ ಸಂಪೂಣ೯ ಬದಲಾಗಿದೆ. ಕಳೆದ 1 ವಾರದಿಂದ ಈ ನಗರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಆಕಷ೯ಣೆಯ ಕೇಂದ್ರವಾಗುತ್ತಾ ಸಾಗುತ್ತಿದ್ದು, ಪ್ರತೀ ನಿತ್ಯವೂ ಒಂದಲ್ಲ ಒಂದು ವಿಶೇಷತೆಗಳಿಂದ ದೇವನಗರಿ ಕಂಗೊಳಿಸುತ್ತಿದೆ.
ಅಯೋಧ್ಯೆಯ ಎಲ್ಲಿಯೇ ಹೋದರೂ ಅಲ್ಲಿ ಶ್ರೀರಾಮ ಸ್ಮರಣೆ ಕೇಳಿಬರುತ್ತಿದೆ. ನಗರದ ಮುಖ್ಯ ರಸ್ತೆಯ ಬದಿಯಲ್ಲಿ ಧ್ವನಿವಧ೯ಕ ಅಳವಡಿಸಲಾಗಿದ್ದು ಶ್ರೀರಾಮನ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕನ್ನಡಿಗರಾದ ಗಜಾನನ ಶಮ೯ ವಿರಚಿತ ಇನ್ನಷ್ಟು

ಬೇಕೆನ್ನ ಹೖದಯಕ್ಕೆ ರಾಮ ಎಂಬ ಸುಮಧುರ ಹಾಡು ಕೂಡ ಇತರ ಭಾಷೆಗಳ ಜತೆಯೇ ಶ್ರೀರಾಮ ಸ್ಮರಣೆಯ ಹಾಡುಗಳಲ್ಲಿ ಪ್ರಸಾರಕ್ಕೆ ಸ್ಥಾನ ಪಡೆದಿದೆ. ಕನ್ನಡಿಗರಿಗೆ ತಮ್ಮ ಭಾಷೆಯ ಹಾಡಿನ ಪ್ರಸಾರ ಖುಷಿ ಕೊಡುತ್ತಿದೆ. ಮನೆಗಳಲ್ಲಿಯೂ ಭಜನೆ, ಕೀತನೆ ಕೇಳಿಬರುತ್ತಿದೆ. ಅನೇಕ ಹಿರಿಯರು ಅಲ್ಲಲ್ಲಿ ಗುಂಪುಗೂಡಿ ರಾಮಸ್ಮರಣೆಯಲ್ಲಿ ನಿರತರಾಗಿರುವ ದೖಶ್ಯಗಳು ಧಾಮಿ೯ಕ ನಗರ ಎಂಬ ಹೆಸರನ್ನು ಅಯೋಧ್ಯೆಗೆ ಅಥ೯ಪೂಣ೯ಗೊಳಿಸುವಂತಿದೆ
ಸರಾಯು ನದಿ ತೀರ, ಅಯೋಧ್ಯೆಯ ಮುಖ್ಯ ರಸ್ತೆಯಲ್ಲಿನ ಗೋಡಗಳಲ್ಲಿ ಈಗ ಶ್ರೀರಾಮ, ಸೀತೆ, ಹನುಮಂತನ ವಣ೯ಮಯವಾದ ಸುಂದರ ಚಿತ್ರಕಲೆಗಳು ರೂಪುಗೊಂಡಿದೆ. ಅಯೋಧ್ಯೆಯ ಯಾವುದೇ ಗೋಡೆಗಳು ಖಾಲಿ ಕಾಣುತ್ತಿಲ್ಲ, ಎಲ್ಲಾ ಗೋಡೆಗಳಲ್ಲಿಯೂ ರಾಮಾಯಣದ ದೖಶ್ಯಗಳನ್ನು ಕಾಣಬಹುದಾಗಿದೆ. ಉತ್ತರ ಪ್ರದೇಶದ ವಿವಿಧೆಡೆಗಳ ಚಿತ್ರಕಲಾವಿದರು ಅಯೋಧ್ಯೆಗೆ ಬಂದು ಕಳೆದ 5 ದಿನಗಳಿಂದ ಇಲ್ಲಿನ ಗೋಡೆಗಳು, ಪ್ರಯಾಣಿಕರ ತಂಗುದಾಣಗಳು, ಅಂಗಡಿಗಳ ಪಕ್ಕದಲ್ಲಿನ ಖಾಲಿ ಜಾಗಗಳಲ್ಲಿ ರಾಮಾಯಣ ದಶ೯ನಂ ಚಿತ್ರಗಳನ್ನು ರಚಿಸಿದ್ದಾರೆ. ಹೀಗಾಗಿ ಅಯೋಧ್ಯೆ ಈಗ ಇಂಥ ಸುಂದರ ಚಿತ್ರಗಳಿಂದ ಕಂಗೊಳಿಸುತ್ತಿದೆ. ಪೌರಾಣಿಕ ಮಹತ್ವ ಸಾರುವ ನೂರಾರು ಚಿತ್ರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.

ಚಿತ್ರಗಳು: ಅನಿಲ್.ಎಚ್.ಟಿ.
ಜನವರಿ 22 ರಂದು ಶ್ರೀರಾಮಮಂದಿರ ಲೋಕಾಪ೯ಣೆ ಮತ್ತು ಶ್ರೀರಾಮಪ್ರಾಣ ಪ್ರತಿಷ್ಟಾಪನೆಗಾಗಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಅಯೋಧ್ಯೆಯತ್ತ ಬರುತ್ತಲೇ ಇದ್ದಾರೆ. ಹೀಗಾಗಿ ಇಲ್ಲಿನ ಅಂಗಡಿಗಳಲ್ಲಿ ಭಕ್ತರಿಗಾಗಿ ವಿವಿಧ ಪೂಜಾಸಾಮಾಗ್ರಿಗಳು ಕಾಣಸಿಗುತ್ತಿದೆ. ಲಕ್ಷಾಂತರ ಹಣ ಕೊಟ್ಟು ಅಂಗಡಿ ಮಾಲೀಕರು ಪೂಜಾ ಸಾಮಾಗ್ರಿಗಳು, ಹಾರಗಳು, ಜಪಮಣಿ, ಕೀಚೈನ್, ಸ್ಟಿಕ್ಕರ್ ಇತ್ಯಾಧಿ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ವ್ಯಾಪಾರಕ್ಕೆ ಇಟ್ಟಿದ್ದಾರೆ. ಕುಂಕುಮ, ಶ್ರೀಗಂಧ, ಅರಿಷಿಣ ಲೇಪನದಲ್ಲಿ ಹಣೆಯಲ್ಲಿ ಶ್ರೀರಾಮ ಎಂದು ಚಿತ್ರಿಸುವ ಕಲೆಗೆ ವಿಪರೀತ ಬೇಡಿಕೆ ಇದೆ. ಅಯೋಧ್ಯೆ ಸುತ್ತು ಹಾಕುವ ಬಹುತೇಕ ಭಕ್ತರ ಹಣೆಯಲ್ಲಿ ಇಂಥ ಶ್ರೀರಾಮ ಬರಹದ ಲೇಪನವನ್ನು ಕಾಣಬಹುದಾಗಿದೆ.
ಮುಖ್ಯವಾಗಿ ಶ್ರೀರಾಮಮಂದಿರದ ಪ್ರತಿಕೖತಿಗೆ ಅಯೋಧ್ಯೆಯಲ್ಲಿ ಬಾರೀ ಬೇಡಿಕೆ ಕಂಡುಬಂದಿದೆ ಶ್ರೀರಾಮಮಂದಿರದ ಕಿರು ಮಾಡೆಲ್ 120 ರು. ಗೆ ಮಾರಾಟವಾಗುತ್ತಿದ್ದರೆ. ವಿದ್ಯುದ್ದೀಪಾಲಂಕೖತ ಮಾಡೆಲ್ ಗೆ 1200 ರು. ಇದೆ. ಮಂದಿರದ ಮಾಡೆಲ್ ಗಳು ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ 112 ರು. ನಿಂದ 20 ಸಾವಿರ ರು. ವರೆಗೂ ಇದೆ.
ಶ್ರೀರಾಮಮಂದಿರ ಲೋಕಾಪ೯ಣೆ ಸಮಾರಂಭ ಏನಿಲ್ಲವೆಂದರೂ ಭಾರತದಾದ್ಯಂತ 1 ಲಕ್ಷ ಕೋಟಿ ವಹಿವಾಟಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ದೇಶವಿದೇಶಗಳ ಭಕ್ತರು ವಿಮಾನ, ರೈಲು, ಬಸ್, ಕಾರ್ ಮೂಲಕ ಅಯೋಧ್ಯೆಗೆ ತೆರಳುವುದು, ಹೋಟೇ್ಲ್, ರೆಸಾಟ್೯, ಲಾಡ್ಜ್,ಗಳ ಕೋಣೆಗಳು, ರೆಸ್ಟೋರೆಂಟ್ ತಿನಿಸುಗಳ ವಹಿವಾಟು, ಅಂಗಡಿಗಳಲ್ಲಿ ಖರೀದಿ.. ಹೀಗೆ ವಹಿವಾಟಿನ ದೖಷ್ಟಿಯಿಂದ 1 ಲಕ್ಷ ಕೋಟಿ ರು. ಗೂ ಮೀರಿ ಶ್ರೀರಾಮಮಂದಿರ ಲೋಕಾಪ೯ಣೆ ಸಮಾರಂಭ ಕಾರಣವಾಗಬಹುದು ಎಂಬ ಅಂದಾಜಿದೆ.

ಲತಾ ಮಂಗೇಷ್ಕರ್ ಚೌಕ್ನ ಮುಂಭಾಗದಲ್ಲಿ ಅನಿಲ್ ಎಚ್.ಟಿ
ಅಯೋಧ್ಯೆಯಲ್ಲಿ ವಾಹನಗಳ ಮಲ್ಟಿ ಪಾಕಿ೯ಂಗ್ ಗಾಗಿ ಬೖಹತ್ ಕಟ್ಟಡ ಸಿದ್ದಗೊಂಡಿದೆ. ಇಲ್ಲಿ ಏಕಕಾಲಕ್ಕೆ 5 ಸಾವಿರ ವಾಹನಗಳನ್ನು ಹಂತಹಂತಗಳಲ್ಲಿ ನಿಲ್ಲಿಸಬಹುದಾಗಿದೆ. ಕಟ್ಟಡಕ್ಕೆ ಶ್ರೀರಾಮನ ಚಿತ್ರದಿಂದ ಅಲಂಕಾರ ಮಾಡಲಾಗಿದೆ. ಅಯೋಧ್ಯೆಯಲ್ಲಿ ಅನೇಕ ಉದ್ಯಾನವನಗಳು ಕೂಡ ರೂಪುಗೊಂಡಿದೆ. ಎಲ್ಲಾ ಉದ್ಯಾನವನಗಳು ಕೂಡ ಶ್ರೀರಾಮ, ಸೀತೆಯರ ಚಿತ್ರಗಳು, ಪ್ರತಿಮೆಗಳನ್ನು ಹೊಂದಿದೆ. ಶ್ರೀರಾಮ ರಾಜ್ಯದಲ್ಲಿ ಅರಳಿರುವ ಸುಂದರ ಪುಪ್ಪರಾಶಿ, ನವಿಲು, ಮೊಲ, ಜಿಂಕೆಗಳು ವನದಲ್ಲಿ ವಿಹರಿಸಿದಂತೆ ಇವೆಲ್ಲಾ ರೂಪು ಪಡೆದಿದೆ.
ಲತಾ ಮಂಗೇಷ್ಕರ್ ವೖತ್ತ: ಶ್ರೀರಾಮಮಂದಿರ ಹೊರತುಪಡಿಸಿದಂತೆ ಅಯೋಧ್ಯೆಯಲ್ಲಿ ಅತ್ಯಂತ ಜನಾಕಷ೯ಣೆ ಪಡೆದಿರುವುದೇ ಭಾರತ ರತ್ನ ಪದ್ಮಶ್ರೀ ಲತಾಮಂಗೇಷ್ಕರ್ ಚೌಕ್. ಪ್ರಧಾನಿ ಮೋದಿ ಕಳೆದ ತಿಂಗಳ 30 ರಂದು ಉದ್ಘಾಟಿಸಿದ ವೖತ್ತ ಇದು. ಭಾರತದ ಹೆಸರಾಂತ ಗಾಯಕಿ ದಿ.ಲತಾಮಂಗೇಷ್ಕರ್ ಸ್ಮರಣೆಯಲ್ಲಿ ರೂಪುತಳೆದಿರುವ ವೖತ್ತದಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.

ಅಯೋಧ್ಯೆಯಿಂದ ಫರಿದಾಬಾದ್ಗೆ ತೆರಳುವ ಹೆದ್ದಾರಿಯಲ್ಲಿ ಇರುವ ಈ ವೖತ್ತದ ಬಳಿಯೇ ಪವಿತ್ರ ಸರಾಯು ನದಿ ಇದೆ. ಹೀಗಾಗಿ ಸದಾ ಜನರಿಂದ ತುಂಬಿರುವ ರಸ್ತೆಯ ಮಧ್ಯೆಯಲ್ಲಿ 40 ಅಡಿ ಅಗಲದ 14 ಟನ್ ತೂಕವಿರುವ ಬೖಹತ್ ವೀಣೆಯ ಮಾದರಿಯನ್ನು 8 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿದೆ. ಲತಾಮಂಗೇಷ್ಕರ್ ಅವರ 92 ವಷ೯ಗಳ ಸಾಥ೯ಕ ಗಾನಜೀವನದ ಸ್ಮರಣೆಗಾಗಿ 92 ಮಾಬ೯ಲ್ ಗಳನ್ನು ವೀಣೆ ನಿಮಾ೯ಣಕ್ಕಾಗಿ ಬಳಸಲಾಗಿರುವುದು ವಿಶೇಷ. ವೀಣೆ ಎದುರುಭಾಗದಲ್ಲಿಯೇ ಗಾನಕೋಗಿಲೆ ಲತಾ ಮಂಗೇಷ್ಕರ್ ಚಿತ್ರವನ್ನು ರಚಿಸಲಾಗಿದೆ. ಶ್ರೀರಾಮಮಂದಿರಕ್ಕೆ ಭಕ್ತರು ಈ ವೖತ್ತ ಬಳಸಿಯೇ ತೆರಳಬೇಕಾಗಿದೆ. ಇಲ್ಲಿ ಲತಾಮಂಗೇಷ್ಕರ್ ಹಾಡಿರುವ ಶ್ರೀರಾಮಭಜನೆಯ ಎಲ್ಲಾ ಸಮಯದಲ್ಲಿಯೂ ಪ್ರಸಾರ ಮಾಡಲಾಗುತ್ತಿದೆ. ಈ ಕಲಾಕೖತಿಯನ್ನು ಇಲ್ಲಿ ನಿಮಿ೯ಸುವ ಮೂಲಕ ಲತಾ ಮಾತ್ರವಲ್ಲ, ಭಾರತದ ಸಂಗೀತ ಸಂಸ್ಕೖತಿಗೂ ಇಲ್ಲಿ ಮಹತ್ವ ದೊರಕಿದಂತಾಗಿದೆ.

ಹನುಮಾನ್ ವಿಗ್ರಹ:
ಲತಾ ಮಂಗೇಷ್ಕರ್ ಚೌಕ್ಗೆ ಹೊಂದಿಕೊಂಡಂತೆಯೇ 15 ಅಡಿ ಎತ್ತರದ ಹನುಮಾನ್ ವಿಗ್ರಹ ಕೂಡ ಇದೆ. ರಾಮನನ್ನು ಭುಜದ ಮೇಲೆ ಹೊತ್ತಿರುವ ಬೖಹತ್ ಆಂಜನೇಯನ ಮೂತಿ೯ ಸಂದಶ೯ಕರ ಗಮನ ಸೆಳೆಯುತ್ತಿದೆ.
ಸೂಯ೯ ಸ್ತಂಭ:
ರಾಮಪಥ ಎಂದೇ ಕರೆಯಲಾಗುವ ಅಯೋಧ್ಯೆಯ ಮುಖ್ಯ ರಸ್ತೆ ಬದಿಗಳಲ್ಲಿ 40 ಸೂಯ೯ಸ್ಥಂಭಗಳನ್ನು ಅಳವಡಿಸಲಾಗಿದೆ. ಶ್ರೀರಾಮ ಸೂಯ೯ವಂಶಜನಾಗಿರುವುದರಿಂದಾಗಿ ಸೂಯ೯ನಂತೆಯೇ ವಿನ್ಯಾಸಗೊಳಿಸಲಾಗಿರುವ ದೀಪಗಳು ಅತ್ಯಂತ ಆಕಷ೯ಣೀಯವಾಗಿದೆ. ರಾಮಪಥದಲ್ಲಿ 30 ಮೀಟರ್ ಅಂತರದಲ್ಲಿ 6 ಮೀಟರ್ ಉದ್ದದ, 46 ಅಡಿ ಎತ್ತರದಲ್ಲಿ ಜೈ ಹನುಮಾನ್ ಎಂದು ಗದೆಯ ಚಿತ್ರದೊಂದಿಗೆ ರೂಪಿಸಲಾಗಿರುವ ಸೂಯ೯ನ ತೇಜಸ್ಸಿನ ಬಣ್ಣ ಹೊಂದಿರುವ ದ್ವೀಪಗಳು ರಾತ್ರಿಯಲ್ಲಿ ನಯನ ಮನೋಹರವಾಗಿ ಕಂಗೊಳಿಸುತ್ತಿದೆ. ಅಯೋದ್ಯೆಯ ಆಕಷ೯ಣೆಗಳಲ್ಲಿ ಸೂಯ೯ಸ್ಥಂಭ ಪ್ರಮುಖ ಪಾತ್ರ ವಹಿಸಿರುವಂತೆಯೇ ಮತ್ತಷ್ಟು ರಸ್ತೆಗಳಲ್ಲಿ ಸೂಯ೯ಸ್ಥಂಭ ಅಳವಡಿಸಲು ಉದ್ದೇಶಿಸಲಾಗಿದೆ.
ಸೀತಾ ಕಂಗನ್ (ಸೀತೆಯ ಬಳೆ): ಅಯೋಧ್ಯೆಗೆ ಲಕ್ನೋದಿಂದ ಪ್ರವೇಶ ಪಡೆಯುವ ಮೊಹಬಾರ ರಸ್ತೆಯ ನಡುವಿನ ಪುಟ್ಟ ವೖತ್ತದಲ್ಲಿ ಬೖಹತ್ ಗಾತ್ರದ ಬಳೆಯೊಂದು ಕಾಣಸಿಗುತ್ತದೆ. ಇದು ಸೀತಾ ಮಾತೆಯ ಬಳೆಯ ಪ್ರತಿಕೖತಿಯಾಗಿದ್ದು 180 ಡಿಗ್ರಿ ತಿರುಗುವ ವಿನ್ಯಾಸ ಹೊಂದಿದೆ. ರಾತ್ರಿಯಲ್ಲಿ ವಿದ್ಯುದ್ದೀಪಾಲಂಕಾರದಿಂದ ಬಳೆ ಮತ್ತಷ್ಟು ಶೋಭಾಯಮಾನವಾಗಿ ಕಾಣುತ್ತದೆ.

ರಾಮಕಥಾ ಚಿತ್ರ: ಅಯೋಧ್ಯೆಯ ಎಲ್ಲೇ ಹೋಗಿ.. ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಪ್ರತಿಕೖತಿಗಳನ್ನು ಕಾಣಬಹುದು. ಹೋಟೇಲ್ ಲಾಡ್ಜ್, ಅಂಗಡಿಗಳು, ರಸ್ತೆ ಬದಿಯಲ್ಲಿ.. ಹೀಗೆ ಎಲ್ಲೆಲ್ಲೂ ರಾಮ ಕಂಗೊಳಿಸುತ್ತಿದ್ದಾನೆ. ರಾಮಾಯಣದ ಕಥಾ ಚಿತ್ರಗಳು ಸುಂದರ ವಿನ್ಯಾಸದ ವಣ೯ದಲ್ಲಿ ಆಕಷ೯ಕವಾಗಿ ಕಾಣಸಿಗುತ್ತದೆ. ಜಟಾಯು, ಶಬರಿ, ಅಳಿಲು,ಸುಗ್ರೀವ. ಹೀಗೆ ರಾಮಕಥೆಯ ಪಾತ್ರಗಳು ಅಯೋಧ್ಯೆ ನಗರದಾದ್ಯಂತ ಸುಂದರ ಮೂತಿ೯ಗಳಾಗಿ ಕಂಗೊಳಿಸುತ್ತಿವೆ.
ರಾಮಾಯಣದ ಕಥಾ ಸಾರಾಂಶವನ್ನು ಬಿಂಬಿಸುವ ವೈವಿಧ್ಯಮಯ ಕಲೆಗಳು, ದೀಪಾಲಂಕಾರಗಳು ಅಯೋಧ್ಯೆ ನಗರಿಯನ್ನು ಆವರಿಸಿದೆ. ರಾಮನ ಯುಗ ಮತ್ತೆ ತನ್ನ ವೈಭವವನ್ನು ಆಧುನಿಕ ಕಾಲಮಾನಕ್ಕೆ ತಕ್ಕಂತೆ ಅಯೋಧ್ಯೆಯಲ್ಲಿ ಮೈದೆಳೆದ ಅನುಭವ ಮನಸ್ಸಿಗೆ ಸಂಭ್ರಮ ತರುವಂತಿದೆ.
ಶೀತಗಾಳಿಯ ಸವಾಲು:
ಅಯೋಧ್ಯೆಯಲ್ಲಿ ರಾಮವೈಭವ ದಿನದಿನಕ್ಕೂ ಹೆಚ್ಚುತ್ತಿರುವಂತೆಯೇ ಛಳಿ, ಶೀತಗಾಳಿಯೂ ಹೆಚ್ಚುತ್ತಿದೆ. ಬುಧವಾರ ಅಯೋಧ್ಯೆಯಲ್ಲಿ 6 ಡಿಗ್ರಿ ಸೆ. ತಾಪಮಾನ ಇದ್ದರೆ ರಾತ್ರಿಯಲ್ಲಿ ಇದು 5 ಡಿಗ್ರಿಗೆ ಇಳಿದಿತ್ತು. ಮೈನಡಗಿಸುವ ಛಳಿ ಮತ್ತು ಬೀಸಿ ಬರುವ ಶೀತಗಾಳಿ ಅಯೋಧ್ಯೆ ನಿವಾಸಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಅಯೋಧ್ಯೆಯಿಂದ 140 ಕಿ.ಮೀ. ದೂರದ ಲಕ್ನೋ ವಿಮಾನ ನಿಲ್ದಾಣದಲ್ಲಿಯೂ ಕಳೆದ 3 ದಿನಗಳಿಂದ ಅನೇಕ ವಿಮಾನಗಳ

ಹಾರಾಟ ರದ್ದುಗೊಂಡಿದೆ. ಇದೇ ಶೀತವಾತಾವರಣ ಇನ್ನ 4-5 ದಿನ ಮುಂದುವರೆಯುವ ಸಾಧ್ಯತೆ ಇದೆ. ಜ.22 ರ ಸೋಮವಾರವೂ ಇದೇ ರೀತಿ ದಟ್ಟ ಮಂಜು, ಶೀತಗಾಳಿ ಮುಂದುವರೆದದ್ದೇ ಆದಲ್ಲಿ ರಾಮಮಂದಿರ ಲೋಕಾಪ೯ಣೆ ಬರುವ ಗಣ್ಯರಿಗೆ ಸಮಸ್ಯೆಯಾಗಲಿದೆ. ಶೀತಗಾಳಿ, ಛಳಿ ತಡೆಯಲು ಅಯೋಧ್ಯೆಯ ಅಂಗಡಿ ಮುಂಬದಿ ಬೆಂಕಿ ಹಾಕಿಕೊಂಡು ಜನರು ಮೈಕಾಯಿಸಿಕೊಳ್ಳುತ್ತಿದ್ದಾರೆ. ಆದರೂ ಈ ಬೆಂಕಿ ಜ್ವಾಲೆಗೂ ಶೀತಗಾಳಿ ತಡೆಯಲು ಸಾಧ್ಯವಾಗುತ್ತಿಲ್ಲ.
(ಅನಿಲ್ ಎಚ್.ಟಿ.ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು.










