ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನಕ್ಕೆ 368 ರನ್ ಬೃಹತ್ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭಿಕರಾರದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅವರ ಅಬ್ಬರದ ಶತಕದ ನೆರವಿನಿಂದ 50 ಓವರ್ಗಳಲ್ಲಿ
9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿದೆ. ಮೊದಲ ವಿಕೆಟ್ಗೆ 259 ರನ್ ಗಳ ಜೊತೆಯಾಟ ಮೂಲಕ ಡೇವಿಡ್ ವಾರ್ನರ್ ಮತ್ತು ಮಿಷೆಲ್ ಮಾರ್ಷ್ ಭದ್ರ ಅಡಿಪಾಯ ಹಾಕಿದರು. ಆಸೀಸ್ ಆರಂಭಿಕರ ಭರ್ಜರಿ ಹೊಡೆತ್ತಕ್ಕೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿತು. ಬೌಂಡರಿ, ಸಿಕ್ಸರ್ಗಳ ಸುರಿ ಮಳೆ ಸುರಿಸಿದ ಈ ಇಬ್ಬರು ಬ್ಯಾಟರ್ಗಳು ರನ್ ಹೊಳೆ ಹರಿಸಿದರು. ಡೇವಿಡ್ ವಾರ್ನರ್ 124 ಎಸೆತಗಳಲ್ಲಿ 14 ಬೌಂಡರಿ 9 ಸಿಕ್ಸರ್ ಸಹಿತ 163 ಬಾರಿಸಿದರೆ, ಮಿಚೆಲ್ ಮಾರ್ಷ್ 108 ಎಸೆತಗಳಲ್ಲಿ 10 ಬೌಂಡರಿ 9 ಸಿಕ್ಸರ್ ಸಹಿತ 121 ರನ್ ಬಾರಿಸಿದರು. ಆರಂಭದಲ್ಲಿ ಡೇವಿಡ್ ವಾರ್ನರ್ ಕ್ಯಾಚ್ ಕೈ ಚೆಲ್ಲಿದ ಪಾಕಿಸ್ತಾನಕ್ಕೆ ಭಾರೀ ದೊಡ್ಡ ಬೆಲೆ ತೆರಬೇಕಾಗಿ ಬಂತು.
ಇವರಿಬ್ವರು ಔಟಾದ ಬಳಿಕ ಲಯಕ್ಕೆ ಮರಳಿದ ಪಾಕ್ ಬೌಲರ್ಗಳು ಪಂದ್ಯದ ನಿಯಂತ್ರಣ ಪಡೆದರು. ಬಳಿಕ ಆಸೀಸ್ ಬ್ಯಾಟರ್ಗಳು ಪೆವಿಲಿಯನ್ಗೆ ಪೆರೇಡ್ ನಡೆಸಿದರು. ಕೊನೆಯ ಓವರ್ಗಳಲ್ಲಿ ಶಾಹಿನ್ ಅಫ್ರಿದಿ ಮಾರಕ ದಾಳಿ ಸಂಘಟಿಸಿ ಆಸೀಸ್ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು. ಅಫ್ರಿದಿ 54 ರನ್ ನೀಡಿ 5 ವಿಕೆಟ್ ಪಡೆದರು.ಹ್ಯಾರೀಸ್ ರೌಫ್ 3 ವಿಕೆಟ್ ಉರುಳಿಸಿದರು.