ಅಹಮದಾಬಾದ್:ಏಕದಿನ ಕ್ರಿಕೆಟ್ ವಿಶ್ವಕಪ್ ಆರನೇ ಬಾರಿ ಎತ್ತುವ ಮೂಲಕ ಆಸ್ಟ್ರೇಲಿಯ ಕ್ರಿಕೆಟ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೈನಲ್ನಲ್ಲಿ ಆತಿಥೇಯ ಭಾರತದ ಎದುರು 6 ವಿಕೆಟ್ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಭಾರತ ತಂಡದ ಮೂರನೇ ಪ್ರಶಸ್ತಿ ಕನಸು ನುಚ್ಚುನೂರಾಯಿತು.ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್ಗಳಲ್ಲಿ 240 ರನ್ ಗಳಿಸಿ ಆಲೌಟ್ ಆಯಿತು. ಟ್ರಾವಿಸ್ ಹೆಡ್ ಗಳಿಸಿದ ಅಮೋಘ ಶತಕದ

ಬಲದಿಂದ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಇನ್ನೂ 7 ಓವರ್ಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ತಲುಪಿತು.
ಮೊದಲು ಬ್ಯಾಟ್ ಮಾಡಿದ ಭಾರತ ಪರ ಭಾರತದ ಬ್ಯಾಟರ್ಗಳು ರನ್ ಗಳಿಸಲು ತಿಣುಕಾಡಿದರು.ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (4) ಐದನೇ ಓವರ್ನಲ್ಲೇ ಔಟಾದರು. ಆದರೂ, ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ ಕೇವಲ 31 ಎಸೆತಗಳಲ್ಲಿ 47 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ವಿಕೆಟ್ ಕೈಚೆಲ್ಲಿದರು. ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಶ್ರೇಯಸ್ ಅಯ್ಯರ್ಗೆ (4) ಪ್ಯಾಟ್ ಕಮಿನ್ಸ್ ಪೆವಿಲಿಯನ್ ದಾರಿ ತೋರಿದರು. 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ಕೊಹ್ಲಿ, 107 ಎಸೆತಗಳಲ್ಲಿ 66 ರನ್ ಗಳಿಸಿ ರಾಹುಲ್ ಮರಳಿದರು. ರವೀಂದ್ರ ಜಡೇಜ (9), ಸೂರ್ಯಕುಮಾರ್ ಯಾದವ್ (18) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನಿಂಗ್ಸ್ ಕೊನೇ ಎಸೆತದಲ್ಲಿ ರನೌಟ್ ಆದ ಕುಲದೀಪ್ ಯಾದವ್ (10), ಮೊಹಮ್ಮದ್ ಸಿರಾಜ್ ಜೊತೆಗೂಡಿ ತಂಡದ ಮೊತ್ತವನ್ನು 240ಕ್ಕೇರಿಸಿದರು.ಸಾಧಾರಣ ಗುರಿ ಬೆನ್ನತ್ತಿದ
ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ವೇಗಿಗಳಾದ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದರು. ಹೀಗಾಗಿ ತಂಡದ ಮೊತ್ತ 47 ರನ್ ಆಗುವಷ್ಟರಲ್ಲಿ ಡೇವಿಡ್ ವಾರ್ನರ್ (7), ಮಿಚೇಲ್ ಮಾರ್ಷ್ (15) ಹಾಗೂ ಸ್ಟೀವ್ ಸ್ಮಿತ್ (4) ವಿಕೆಟ್ ಔಟಾದರು.
ಈ ಹಂತದಲ್ಲಿ ಜೊತೆಯಾದ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಷೇನ್, ಭಾರತದ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಲಾಬುಷೇನ್ ರಕ್ಷಣಾತ್ಮಕವಾಗಿ ಆಡಿದರೆ ಟ್ರಾವಿಸ್ ಎಂದಿನಂತೆ ಲೀಲಾಜಾಲವಾಗಿ ಬ್ಯಾಟ್ ಬೀಸಿದರು.ಈ ಇಬ್ಬರು ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 192 ರನ್ ಗಳಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.
120 ಎಸೆತಗಳನ್ನು ಎದುರಿಸಿದ ಹೆಡ್, 15 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 137 ರನ್ ಚಚ್ಚಿ, ಗೆಲುವಿಗೆ ಎರಡು ರನ್ ಬೇಕಿದ್ದಾಗ ಔಟಾದರು. ಲಾಬುಷೇನ್ 110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್ ಗಳಿಸಿ ಅಜೇಯವಾಗಿ ಉಳಿದರು.









