ಆ್ಯಂಟಿಗುವಾ:ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ ನೆರವಿನಿಂದ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ವಿರುದ್ಧ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ 28 ರನ್ ಅಂತರದ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ
ಬಾಂಗ್ಲಾದೇಶ ಎಂಟು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ನಾಯಕ ನಜ್ಮುಲ್ ಹೊಸೈನ್ ಶಾಂಟೊ 41 ಹಾಗೂ ತೌಹಿದ್ ಹೃದೋಯ್ 40 ರನ್ ಗಳಿಸಿದರು.ಆಸ್ಟ್ರೇಲಿಯಾದ ಪರ ನಾಯಕ ಪ್ಯಾಟ್ ಕಮಿನ್ಸ್, ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. 29 ರನ್ ತೆತ್ತ ಕಮಿನ್ಸ್ ಮೂರು ವಿಕೆಟ್ ಗಳಿಸಿದರು. ಸ್ಪಿನ್ನರ್ ಆ್ಯಡಂ ಜಂಪಾ ಎರಡು ವಿಕೆಟ್ ಗಳಿಸಿ ಮಿಂಚಿದರು.ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆಯಿಂದಾಗಿ ಮೊದಲ ಸಲ ಪಂದ್ಯ ಸ್ಥಗಿತಗೊಂಡಿತ್ತು. ಎರಡನೇ ಬಾರಿ ಮಳೆಯಿಂದಾಗಿ ಪಂದ್ಯ ನಿಲುಗಡೆಗೊಂಡಾಗ ಆಸೀಸ್ 11.2 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಬಳಿಕ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಡೇವಿಡ್ ವಾರ್ನರ್ 35 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಅವರ ಬಿರುಸಿನ ಇನಿಂಗ್ಸ್ನಲ್ಲಿಐದು ಬೌಂಡರಿ ಹಾಗೂ ಮೂರು ಸಿಕ್ಸರ್ಗಳು ಸೇರಿದ್ದವು.
ನಾಯಕ ಮಿಷೆಲ್ ಮಾರ್ಷ್ (1) ನಿರಾಸೆ ಮೂಡಿಸಿದರು. ಟ್ರಾವಿಸ್ ಹೆಡ್ 31 ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 14 ರನ್ ಗಳಿಸಿದರು. ಬಾಂಗ್ಲಾ ಪರ ರಿಶಾದ್ ಹೊಸೈನ್ ಎರಡು ವಿಕೆಟ್ ಗಳಿಸಿದರು.