ಪುತ್ತೂರು: ಅಲಟ್ ಬಿಹಾರಿ ವಾಜಪೇಯಿ ಅವರು ಮಾಜಿ ಪ್ರಧಾನಿಯಾಗಿ, ಕವಿ ಹೃದಯಿಯಾಗಿ, ಬರಹಗಾರರಾಗಿ, ಅಪ್ಪಟ ದೇಶಭಕ್ತರಾಗಿ, ಅಜಾತಶತ್ರುವಾಗಿ ನಮಗೆಲ್ಲಾ ಪ್ರೇರಣೆಯಾಗಿದ್ದಾರೆ. ಅವರು ಕಟ್ಟಿದ ಪಕ್ಷದಲ್ಲಿ ಕಾರ್ಯಕರ್ತರಾಗಿರುವುದು ನಮಗೆ ಹೆಮ್ಮೆ ಮತ್ತು ಸ್ಪೂರ್ತಿಯಾಗಿದೆ. ಕರ್ನಾಟಕ ಬಿಜೆಪಿಯ ಹೆಬ್ಬಾಗಿಲು ಆಗುತ್ತದೆ ಎಂಬ
ಕನಸು ವಾಜಪೇಯಿ ಅವರದ್ದಾಗಿತ್ತು. ಅದನ್ನು ಮತ್ತೊಮ್ಮೆ ನೆನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅವರು ದ.ಕ.ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿನ ಮೈದಾನದಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 100ನೇ ಜನ್ಮ ಶತಾಬ್ದಿ ಕಾರ್ಯಕ್ರಮ`ಅಟಲ್ ವಿರಾಸತ್’ ಉದ್ಘಾಟಿಸಿ ಮಾತನಾಡಿದರು. ಪಕ್ಷದಲ್ಲಿರೋ ಲಕ್ಷಾಂತರ ಕಾರ್ಯಕರ್ತರು ತನುಮನಧನ ಅರ್ಪಿಸಿ ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಮುಂದಿನ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಪಡೆಯಬೇಕಾದರೆ ಕಾರ್ಯಕರ್ತರು ವ್ಯತ್ಯಾಸ ಮರೆತು, ಪಕ್ಷದ ಮುಖಂಡರು ವೈಮನಸ್ಸು ಮರೆತು ಪ್ರಯತ್ನಿಸ ಪಡಬೇಕು. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವು ರೈತರು ಮತ್ತು ಬಡವರ ವಿರೋಧಿಯಾಗಿದೆ. ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂಬ ಸಂಕಲ್ಪವನ್ನು ನಾವು ತೊಡಬೇಕಾಗಿದೆ. ಪಕ್ಷವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅವರನ್ನು ಗೆಲ್ಲಿಸುವ ಕಾರ್ಯಕರ್ತರು ಇಲ್ಲಿದ್ದು. ದ.ಕ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಇಡೀ ರಾಜ್ಯಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು. ಪಕ್ಷವು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ತರುವುದು ನನ್ನ ಪ್ರತಿಜ್ಞೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಗಾರಿ ಒಂದು ರೂಪಾಯಿ ಖರ್ಚು ಮಾಡಿಲ್ಲ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ ರಾಜಕಾರಣದ ಎಲ್ಲಾ ಪ್ರಶ್ನೆಗಳಿಗೆ ಅಟಲ್ಜೀ ಅವರ ರಾಜಕೀಯ ಜೀವನ ಉತ್ತರವಾಗಿದೆ. ಅವರ ಧ್ಯೇಯವಾಕ್ಯದ ರಾಜಕೀಯ ನಾವು ಮಾಡಬೇಕಾಗಿದೆ ಎಂದರು.

ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದರು.
ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೊಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಎಸ್. ಅಂಗಾರ, ಮಾಜಿ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಸಂಜೀವ ಮಠಂದೂರು, ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಆರ್. ಸಿ. ನಾರಾಯಣ, ಗೋಪಾಲಕೃಷ್ಣ ಹೇರಳೆ, ಯತೀಶ್ ಆರ್ವರ್, ಪ್ರಸನ್ನ ಮಾರ್ತ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಸಂಚಾಲಕ ಕಿಶೋರ್ ಕುಮಾರ್ ಬೊಟ್ಯಾಡಿ ಪ್ರಸ್ತಾವನೆಗೈದರು. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಂದಿಸಿದರು. ಸುನಿಲ್ ಆಳ್ವ, ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸುಳ್ಯದಿಂದ ನೂರಾರು ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು.












