ಮುಂಬೈ: ಮಹಾನಗರ ಮುಂಬೈ ಹಾಗೂ ಉಪನಗರ ನವಿ ಮುಂಬೈ ನಡುವೆ ಹೊಸದಾಗಿ ನಿರ್ಮಿಸಲಾಗಿರುವ ‘ಅಟಲ್ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.ದಕ್ಷಿಣ ಮುಂಬೈ ಪ್ರದೇಶವನ್ನು ನವಿ ಮುಂಬೈನ ನವ–ಶೇವಾ ಪ್ರದೇಶದ ಜೊತೆ ಸಂಪರ್ಕಿಸುವ ಈ ಸೇತುವೆಯು ಭಾರತದ ಅತಿ ಉದ್ದದ ಸೇತುವೆ. ಇದು ದೇಶದಲ್ಲಿ ಸಮುದ್ರದ ಮೇಲೆ ಸಾಗುವ ಅತಿ ಉದ್ದದ ಸೇತುವೆ ಎಂಬ
ಹೆಗ್ಗಳಿಕೆಯನ್ನೂ ಹೊಂದಿದೆ. ಈ ಸೇತುವೆಗೆ ಶಂಕುಸ್ಥಾಪನೆಯನ್ನು ಮೋದಿ ಅವರು 2016ರ ಡಿಸೆಂಬರ್ನಲ್ಲಿ ನಡೆಸಿದ್ದರು. ‘ಹಲವು ಅಡ್ಡಿಗಳನ್ನು ಎದುರಿಸುತ್ತಿದ್ದ ಈ ಸೇತುವೆಯ ಶಂಕುಸ್ಥಾಪನೆಗೆ ನಾನು 2016ರ ಡಿಸೆಂಬರ್ನಲ್ಲಿ ಬಂದಿದ್ದಾಗ, ದೇಶದಲ್ಲಿ ಬದಲಾವಣೆ ತರುವ ನಿರ್ಣಯ ಕೈಗೊಂಡಿದ್ದೆ. ಕೋವಿಡ್–19 ಸಾಂಕ್ರಾಮಿಕದ ನಡುವೆಯೂ ಈ ಸೇತುವೆ ಕಾರ್ಯ ಪೂರ್ಣಗೊಳಿಸಿರುವುದು ಬಹಳ ಮಹತ್ವದ್ದು’ ಎಂದು ಅವರು ಪನ್ವೇಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಸಮುದ್ರದ ಮೇಲೆ ಸಾಗುವ ಸೇತುವೆಯು ವಿಕಸಿತ ಭಾರತದ ಪ್ರತಿಬಿಂಬ.ಇದು ಭಾರತದ ಮೂಲಸೌಕರ್ಯ ವಲಯದ ಶಕ್ತಿಯನ್ನು ಹಾಗೂ ಭಾರತವು ಅಭಿವೃದ್ಧಿ ಹೊಂದಿದ ದೇಶ ಆಗುವೆಡೆ ಸಾಗುತ್ತಿರುವುದನ್ನು ತೋರಿಸುತ್ತಿದೆ’ ಎಂದು ಮೋದಿ ಹೇಳಿದರು. ಇದೇ ವೇದಿಕೆಯಿಂದ ಮೋದಿ ಅವರು ಇನ್ನೂ ಕೆಲವು ಸ್ಥಳೀಯ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.









