ಸುಳ್ಯ:ಮಕ್ಕಳು ಪ್ರತಿ ಶಾಲೆಯ ಆಸ್ತಿ,ಶಾಲೆಯಲ್ಲಿ ಕಲಿತ ಶಿಕ್ಷಣ, ಶಿಸ್ತು ಅವರನ್ನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದರೆ,ಊರಿನ ಸರ್ವ ಜನರ ಸಹಕಾರದಿಂದ ಸೈಂಟ್ ಬ್ರಿಜಿಡ್ಸ್ ಶಾಲೆ ಉತ್ತಮ ಹೆಸರು ಗಳಿಸಿ, ಉತ್ತುಂಗಕ್ಕೆ ಏರಲು ಸಾಧ್ಯವಾಗಿದೆ ಎಂದು ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರು, ಹಾಗೂ ಮಂಗಳೂರು ಧರ್ಮಪಾಂತ್ಯದ ಧರ್ಮಾಧ್ಯಕ್ಷರಾದ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಹೇಳಿದ್ದಾರೆ. ಸುಳ್ಯ ಬೀರಮಂಗಲದಲ್ಲಿರುವ
ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಮಣ್ಣಿನ ಮಡಿಲಲ್ಲಿ 75 ವರ್ಷಗಳ ಹಿಂದೆ ಹಿರಿಯರು ಬೆಳಗಿಸಿದ ಜ್ಞಾನದ ದೀಪ ಇಂದು ಅಖಂಡ ದೀಪವಾಗಿ ಬೆಳಗಿದೆ. ಮಕ್ಕಳು ಈ ಶಾಲೆಯ ಮುಂದಿನ ಅಧ್ಯಾಯಗಳು, ಇಲ್ಲಿ ಕಲಿತ ಶಿಸ್ತು, ವಿದ್ಯೆ ಅವರ ಮುಂದಿನ ಬದುಕಿಗೆ ದಾರಿ ದೀಪವಾಗಿರಲಿ ಎಂದು ಅವರು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮಕ್ಕಳ ಬೆಳವಣಿಗೆಗೆ ಮೌಲ್ಯಯುತ ಶಿಕ್ಷಣ ನೀಡಬೇಕು.ಸೈಂಟ್ ಬ್ರಿಜಿಡ್ಸ್ ಶಾಲೆ ಈ ರೀತಿಯಲ್ಲಿ ಮೌಲ್ಯಯುತ ಶಿಕ್ಷಣ ನೀಡಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.
ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ರೆ.ಫಾ.ಪ್ರವೀಣ್ ಲಿಯೋ ಲಸ್ರಾದೊ, ಜೊತೆ ಕಾರ್ಯದರ್ಶಿ ರೆ.ಫಾ.ಒಲ್ವಿನ್ ಎಡ್ವರ್ಡ್ ಡಿಕುನ್ಹಾ,ಸೈಂಟ್ ಬ್ರಿಜಿಡ್ಸ್ ಶಾಲೆ ಹಿರಿಯ ವಿದ್ಯಾರ್ಥಿ ಪದ್ಮಶ್ರೀ ಗಿರೀಶ್ ಭಾರದ್ವಾಜ್, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫಾ, ಮಂಗಳೂರು ಪ್ರಾಂತ್ಯದ ಪ್ರಾಂತೀಯ ಮುಖ್ಯಸ್ಥರಾದ ಸಿಸ್ಟರ್ ಕ್ಲೇರಾ ಮಿನೇಜಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸುನಿಲ್ ಮಸ್ಕರೇನಸ್,

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ, ಸೈಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆ್ಯಂಟನಿ ಮೇರಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ನವೀನ್ ಮಚಾದೋ,ಪೋಷಕ ಸಮಿತಿಯ ಉಪಾಧ್ಯಕ್ಷ ನವೀನ್ ಚಂದ್ರ ಚಾತುಬಾಯಿ ಉಪಸ್ಥಿತರಿದ್ದರು.ಶಾಲೆಯಲ್ಲಿ ಸೇವೆ ಸಲ್ಲಿಸಿದ ಸಂಚಾಲಕರುಗಳು, ಮುಖ್ಯ ಶಿಕ್ಷಕರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಶಾಲೆಯ ಜೊತೆ ಕಾರ್ಯದರ್ಶಿ ರೆ.ಫಾ.ಒಲ್ವಿನ್ ಎಡ್ವರ್ಡ್ ಡಿಕುನ್ಹಾ ಸ್ವಾಗತಿಸಿ, ಸಿಸ್ಟರ್ ಗ್ರೇಸ್ ಡಿಸೋಜ ವಂದಿಸಿದರು. ದೀಪಿಕಾ ಅತ್ಯಾಡಿ ಹಾಗೂ ಆಶಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.












