ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ:ಇಪ್ಪತ್ತೊಂದನೇ ಶತಮಾನವು ಜ್ಞಾನಾಧಾರಿತ ಶತಮಾನ.ಜ್ಞಾನಾಭಿವೃದ್ಧಿಗೆ ಒತ್ತು ನೀಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಉತ್ಕೃಷ್ಠವಾದ ಸುಧಾರಣೆಗಳನ್ನು ಮತ್ತು ಅಭಿವೃದ್ಧಿಯನ್ನು ಜ್ಞಾನಕ್ಷೇತ್ರಕ್ಕೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಸಿ.ಎನ್ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಯೋಜನೆ ಮೂಲಕ ಸರ್ವರಿಗೂ ಸಮಾನ ಶಿಕ್ಷಣ
ದೊರಕುವಂತಾಗಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ಕೊಡಲಾಗಿದೆ. ಈಗಾಗಲೇ ಕೆಲವೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸದಾಗಿ ಕಾಲೇಜು ಆರಂಭಿಸಲಾಗಿದೆ. ಹೊಸದಾಗಿ ಆರಂಭಗೊಂಡ ಕಡಬ ತಾಲೂಕಿನ ಕೇಂದ್ರ ಸ್ಥಳ ಕಡಬದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗುವುದು. ಗುಣಮಟ್ಟದ ಶಿಕ್ಷಣವೇ ಆಧುನಿಕ ಯುಗದ ಪ್ರಧಾನ ಆಧ್ಯತೆಯಾಗಿದೆ.ಆದುದರಿಂದ ಈಗಾಗಲೇ ಇರುವ ಪದವಿ ಕಾಲೇಜುಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲು ಒತ್ತನ್ನು ನೀಡಲಾಗಿದೆ.ರಾಜ್ಯದಲ್ಲಿ ಸುಮಾರು ೪೪೦ ಕಾಲೇಜುಗಳಿವೆ ಇದರಲ್ಲಿ ೩೬೦ ಕಾಲೇಜುಗಳು ಗುಣಮಟ್ಟದ ಗ್ರೇಡ್ ಅನ್ನು ನ್ಯಾಕ್ ನಿಂದ ಪಡೆದಿದೆ. ಎ, ಎ ಪ್ಲಸ್, ಬಿ, ಬಿ ಪ್ಲಸ್ ಶ್ರೇಣಿಯನ್ನು ಹೆಚ್ಚಿನ ಕಾಲೇಜುಗಳು ಪಡೆದಿವೆ. ಸುಮಾರು ೧೦ ಕಾಲೇಜುಗಳು ಮತ್ತು ಸಿ ಶ್ರೇಯಾಂಕ ಗಳಿಸಿದೆ.ಇದು ರಾಜ್ಯದ ಪದವಿ ಕಾಲೇಜುಗಳಲ್ಲಿ ಉತ್ಕೃಷ್ಠವಾದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದಕ್ಕೆ ಕೈಗನ್ನಡಿಯಾಗಿದೆ.ರಾಜ್ಯದಲ್ಲಿ ಗುಣ ಮಟ್ಟದ ಶಿಕ್ಷಣ ದೊರಕುವ ಕಾರಣ ಇಲ್ಲಿನ ಕಾಲೇಜುಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಇದರೊಂದಿಗೆ ಅನೇಕ ಐಟಿಐಗಳನ್ನು, ಡಿಪ್ಲಮೋ, ಪಾಲಿಟೆಕ್ನಿಕ್, ಇಂಜೀನಿಯರ್ ಕಾಲೇಜುಗಳನ್ನು ಹೆಚ್ಚು ಹೆಚ್ಚು ಆರಂಭಿಸಲಾಗಿದೆ ಎಂದು ಅಶ್ವಥ್ ನಾರಾಯಣ್ ನುಡಿದರು. ಎಚ್೩ ಎನ್೨ ಎಂಬ ಹೊಸ ವೈರಸ್ ತಳಿ ಇದೀಗ ಕಂಡು ಬಂದಿದೆ.ಇದಕ್ಕೆ ಜನತೆ ಭಯ ಪಡುವ ಆಶವಶ್ಯಕತೆ ಇಲ್ಲ ಮುಂಜಾಗೃತಾ ಕ್ರಮಗಳನ್ನು ವಹಿಸಿಕೊಳ್ಳಬೇಕು. ಈ ಬಗ್ಗೆ ಸರಕಾರವು ಈಗಾಗಲೇ ಸುತ್ತೋಲೆ ಹೊರಡಿಸಿದೆ. ಪ್ರಧಾನಮಂತ್ರಿಗಳು ಅತ್ಯವಶ್ಯಕವಾದ ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟಿಸಲಿದ್ದಾರೆ. ರೋಡ್ ಫಾರ್ ಡೆವಲಪ್ಮೆಂಟ್ ಧ್ಯೇಯ ವ್ಯಾಖ್ಯೆಯ ಮೂಲಕ ರಸ್ತೆಗಳು ಗಣನೀಯವಾಗಿ ನಮ್ಮ ಕಾಲದಲ್ಲಿ ಅಭಿವೃದ್ಧಿಯಾಗಿದೆ. ದಶಪಥ ರಸ್ತೆಯು ಬೆಂಗಳೂರು-ಮೈಸೂರು-ಮಡಿಕೇರಿ ಮೂಲಕ ಬಂಟ್ವಾಳ ತನಕ ವಿಸ್ತೃತವಾಗಲಿದೆ. ಮುಂದೆ ಮೈಸೂರಿನಿಂದ ಮಡಿಕೇರಿ ತನಕ, ಮಡಿಕೇರಿಯಿಂದ ಬಂಟ್ವಾಳ ತನಕ ರಸ್ತೆ ಕಾಮಗಾರಿ ಆರಂಭವಾಗಲಿದೆ. ಈ ಮೂಲಕ ಬೆಂಗಳೂರಿನಿಂದ-ಮೈಸೂರು – ಮಡಿಕೇರಿ ಮೂಲಕ ಬಂಟ್ವಾಳ ತನಕ ದಶಪಥ ಹೆದ್ದಾರಿ ರಚಿತವಾಗಲಿದೆ. ಬಹುದಿನಗಳ ಬೇಡಿಕೆಯಾದ ಇದು ಜನತೆಗೆ ಹೆಚ್ಚು ಅನುಕೂಲತೆ ಒದಗಿಸಲಿದೆ.ಇದು ಅಭಿವೃದ್ದಿಗೆ ಪೂರಕವಾದ ರಸ್ತೆ ಇದಾಗಿದೆ. ಇದರೊಂದಿಗೆ ಬ್ರಾಡ್ಗೇಜ್ ರೈಲು ವ್ಯವಸ್ಥೆ, ವಂದೇ ಭಾರತ್ ರೈಲು ವ್ಯವಸ್ಥೆ ಈಗಾಗಲೇ ಚಾಲನೆಗೊಂಡು ಜನತೆಯ ಉಪಯೋಗಕ್ಕೆ ಸಮರ್ಪಿತವಾಗಿದೆ.ಮುಂದೆ ಅತ್ಯಾಧುನಿಕ ರೈಲುಗಳು ದೇಶಾದ್ಯಂತ ಓಡಾಟ ನಡೆಸಲಿದೆ.ಇವುಗಳು ಐಷಾರಾಮಿ ಕಾರುಗಳಿಗೆ ಕಡಿಮೆ ಇಲ್ಲದಂತಹ ವ್ಯವಸ್ಥೆಗಳನ್ನು ಹೊಂದಿರಲಿದೆ. ಈ ಬಾರಿ ರಾಜ್ಯದಲ್ಲಿ ೧೫೦ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿಯು ಜಯಭೇರಿ ಬಾರಿಸಿ ಮತ್ತೆ ಸರಕಾರ ನಡೆಸಲಿದೆ ಎಂದು ಅವರು ತಿಳಿಸಿದರು. ಡಿಜಿಟಲ್ ಸಾಕ್ಷರತೆ, ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ ಮಾಡಿ ಸರ್ವರೂ ಆಧುನಿಕ ಯುಗದಲ್ಲಿ ತಂತ್ರಜ್ಞಾನಯುಕ್ತ ಅತ್ಯಾಧುನಿಕ ಕೌಶಲ್ಯ ಪಡೆಯಲು ಸರಕಾರವು ವ್ಯವಸ್ಥಿತ ಯೋಜನೆ ಮಾಡಿದೆ.
ಸ್ಕಿಲ್ ಕಲೆಕ್ಟ್ ಅನ್ನುವ ಪ್ಲಾಟ್ಫಾರಂ ಅನ್ನು ವಿನೂತನವಾಗಿ ಜಾರಿಗೆ ತರಲಾಗಿದೆ.ಇದರಿಂದ ರಾಜ್ಯದ ಎಲ್ಲರೂ ಎಲ್ಲಿ ಓದಬೇಕು, ಏನು ಓದಬೇಕು, ರಾಜ್ಯ, ರಾಷ್ಟçದಲ್ಲಿನ ಉದ್ಯೋಗವಕಾಶ, ವಿದೇಶದಲ್ಲಿನ ಉದ್ಯೋಗವಕಾಶದ ಬಗ್ಗೆ ಇದು ತಿಳಿಸುತ್ತದೆ.ಅಲ್ಲದೆ ವಿದೇಶಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ತರಬೇತಿ, ಜ್ಞಾನ, ಕೌನ್ಸಿಲಿಂಗ್, ಪಾಸ್ಪೋರ್ಟ್, ಮೈಗ್ರೇಷನ್ ಸರ್ಟಿಫಿಕೇಟ್, ಪ್ಲೇಸ್ ಮೆಂಟ್ ಇತ್ಯಾದಿಗಳನ್ನು ಸರಕಾರದಿಂದ ಮಾಡಿಕೊಡಲಾಗುತ್ತದೆ. ಸದೃಡ ಪ್ರಜೆಯ ನಿರ್ಮಾಣಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡಿದೆ.ಈ ಮೂಲಕ ಜನತೆ ಉದ್ಯೋಗ ಪಡೆಯಲು ಸರಕಾರ ಸಂಪೂರ್ಣ ಸಹಕಾರವನ್ನು ನೀಡಿದೆ ಎಂದು ನುಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್ ಉಪಸ್ಥಿತರಿದ್ದರು.