ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತ ನಿರಾಶ್ರಿತರಿಗೆ ಸರಕಾರದಿಂದ ಕೊಡಮಾಡುವ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 455 ಮಂದಿ ಫಲಾನುಭವಿಗಳು ಕಾಯುತ್ತಿದ್ದಾರೆ. ಆದರೆ ಕಳೆದ 20 ವರ್ಷಗಳಿಂದ ಸುಳ್ಯ ನಗರದಲ್ಲಿ ಆಶ್ರಯ ನಿವೇಶನ ಹಂಚಿಕೆ ಆಗಿಲ್ಲ. ಇದರಿಂದ ನಿವೇಶನ ರಹಿತರ ಬದುಕು ದುಸ್ತರವಾಗಿದೆ. ಆದುದರಿಂದ ಆಶ್ರಯ ಸಮಿತಿ ರಚಿಸಿ ಅರ್ಹರಿಗೆ
ಕೂಡಲೇ ನಿವೇಶನ ಹಂಚಿಕೆ ಮಾಡಬೇಕು ಎಂದು ಸುಳ್ಯ ನಗರ ಆಶ್ರಯ ಯೋಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ರಶೀದ್ ಜಟ್ಟಿಪಳ್ಳ ನಗರ ಆಡಳಿತಕ್ಕೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಬಡ ಫಲಾನುಭವಿಯರೆಗೆ 15-20 ವರ್ಷ ಕಳೆದರೂ ಯಾವುದೇ ನಿವೇಶನ ದೊರಕಿಲ್ಲ ಇದಕ್ಕೆ ಸಂಬಂಧಿಸಿ ಫಲಾನುಭವಿಗಳು ಅನೇಕ ಬಾರಿ ನಗರ ಆಡಳಿತಕ್ಕೆ ಮನವಿ ಸಲ್ಲಿಸಿದರೂ, ಹೋರಾಟ ಸಮಿತಿ ರಚಿಸಿ ನಗರ ಆಡಳಿತ ಮತ್ತು ಸ್ಥಳೀಯ ಜನಪ್ರಗತಿ ನಿಧಿಗಳಿಗೆ ಒತ್ತಡ ಹೇರುತ್ತಾ ಬಂದರೂ ಪ್ರಯೋಜನ ಆಗಿಲ್ಲ. ನಿವೇಶನ ಹಂಚಲು ಸುಳ್ಯ ನಗರ ಭಾಗದಲ್ಲಿ ಸರಕಾರಿ ಜಾಗ ಇಲ್ಲ ಎಂಬ ಸಮಜಾಯಿಷಿಕೆ ಕೊಡುತ್ತಾ ಸತಾಯಿಸಿ ಫಲಾನುಭವಿಗಳನ್ನು ಹಿಂದಕ್ಕೆ ಕಳುಹಿಸುತ್ತಾರೆ. ಸರಕಾರದಿಂದ ವಸತಿ ಯೋಜನೆಯಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿದ ಸರ್ವೆ ನಂಬ್ರ 94/1A1 ಮತ್ತು ಸರ್ವೆ ನಂಬ್ರ 374/2 ಎರಡು ಸರಕಾರಿ ನಿವೇಶನಗಳು

ಮಂಜೂರಾಗಿ ಕಂದಾಯ ಇಲಾಖೆ ಸರ್ವೆ ಮಾಡಿ ಭೂಮಿಯನ್ನು ನಗರ ಪಂಚಾಯತ್ಗೆ ಹಸ್ತಾಂತರ ಮಾಡಲಾಗಿದ್ದರುಊ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಮೀನ ಮೇಷ ಎಣಿಸುತ್ತಾ ಇದ್ದಾರೆ. ಇದೀಗ ಎರಡು ಸ್ಥಳಗಳನ್ನು ಗುರುತಿಸಿ ಸಮತಟ್ಟು ಮಾಡಲು ಟೆಂಡರ್ ಕರೆಯಲಾಗಿದೆ ಎಂದು ನಗರ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಆದಷ್ಟು ಬೇಗ ಆಶ್ರಯ ಸಮಿತಿ ಮಾಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಶಾಸಕರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ. ಎಲ್ಲಾ ನಗರ ಪಂಚಾಯತ್ ಸದಸ್ಯರನ್ನು, ಕಾಂಗ್ರೆಸ್, ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು.
ಆದಷ್ಟು ಬೇಗ ನಿವೇಶನ ಒದಗಿಸಿ:
ಸುಮಾರು 20 ವರ್ಷದಿಂದ ಮೇಲ್ಪಟ್ಟು ನಿವೇಶನಕ್ಕೆ ಸಲ್ಲಿಸಿದ 455 ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ. 2016ರಲ್ಲಿ 74 ಮಂದಿಯ ಆಯ್ಕೆ ಮಾಡಲಾಗಿದ್ದರೂ ಅವರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಹಕವು ವರ್ಷಗಳಿಂದ
ನಿವೇಶನಕ್ಕಾಗಿ ಕಾಯುತ್ತಾ ಬಾಡಿಗೆ ಮನೆಯಲ್ಲಿ ವಾಸಿಸುವ ಅನೇಕ ಫಲಾನುಭವಿಗಳಿಗೆ ಆದಷ್ಟು ಬೇಗನೆ ನಿವೇಶನ ಒದಗಿಸಬೇಕು ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದರು. ದಶಕಗಳಿಂದ ಬಾಡಿಗೆ ಮನೆಯಲ್ಲಿದ್ದು ಏರುತ್ತಿರುವ ಬಾಡಿಗೆ ಮತ್ತು ಇತರ ಖರ್ಚಿನಿಂದ ಬಡ ನಿವೇಶನ ರಹಿತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಪದ್ಮನಾಭ ನಾಯ್ಕ್ ಜಟ್ಟಿಪಳ್ಳ, ರಾಜು ಮಣಿಯಾಣಿ, ಕವಿತಾ ಅಶೋಕ ಜಟ್ಟಿಪಳ್ಳ, ಸಾವಿತ್ರಿ ಶಿವಶಂಕರ ಜಟ್ಟಿಪಳ್ಳ, ಮಮತಾ ಉಪಸ್ಥಿತರಿದ್ದರು.









