ಕ್ಯಾಂಡಿ: ಭಾರತ ತಂಡ ಏಷ್ಯಾಕಪ್ ಏಕದಿನ ಟೂರ್ನಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ಸೋಮವಾರ ಉಪಖಂಡದ ‘ಕ್ರಿಕೆಟ್ ಶಿಶು’ ನೇಪಾಳ ತಂಡವನ್ನು ಎದುರಿಸಲಿದೆ. ಆದರೆ ಪಂದ್ಯದ ವೇಳೆ ನೇಪಾಳ ತಂಡಕ್ಕಿಂತ ಮಳೆಯೇ ಭಾರತಕ್ಕೆ ದೊಡ್ಡ ಸವಾಲು ಎನಿಸಲಿದೆ. ಇದರ ನಡುವೆ, ಪಂದ್ಯ ರದ್ದಾದರೂ ಸೂಪರ್-4 ಹಂತಕ್ಕೇರುವ ಅವಕಾಶವನ್ನು
ರೋಹಿತ್ ಶರ್ಮ ಪಡೆ ಹೊಂದಿದೆ.ಭಾರತ ವಿರುದ್ಧದ ಪಂದ್ಯ ರದ್ದಾಗಿ ಅಂಕ ಹಂಚಿಕೊಂಡ ಬೆನ್ನಲ್ಲೇ ಪಾಕಿಸ್ತಾನ ತಂಡ ಎ ಗುಂಪಿನಿಂದ ಸೂಪರ್-4 ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಈಗ ಭಾರತ ತಂಡ ಗೆಲುವಿನೊಂದಿಗೆ ಗುಂಪಿನ 2ನೇ ತಂಡವಾಗಿ ಸೂಪರ್-4 ಹಂತಕ್ಕೇರುವ ಹಂಬಲದಲ್ಲಿದೆ. ಆದರೆ, ನೇಪಾಳ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತಿರುವುದರಿಂದ, ಪಂದ್ಯ ರದ್ದಾದರೂ ಮತ್ತೆ ಒಂದು ಅಂಕ ಸಂಪಾದಿಸಿ ಭಾರತ ಸೂಪರ್-4 ಪ್ರವೇಶಿಸಲಿದೆ. ಶ್ರೀಲಂಕಾದಲ್ಲಿ ಈಗ ಮಳೆಗಾಲ. ಹೀಗಾಗಿ ಲಂಕಾದಲ್ಲಿ ನಡೆಯುವ ಟೂರ್ನಿಯ ಪ್ರತಿ ಪಂದ್ಯಕ್ಕೂ ಮಳೆ ಭೀತಿ ಇದೆ. ನೇಪಾಳ ವಿರುದ್ಧದ ಪಂದ್ಯವೂ ಅದರಿಂದ ಹೊರತಾಗಿಲ್ಲ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ಕೈಕೊಟ್ಟ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಸರೆಯಾಗಿದ್ದರು. ಇದೀಗ ನೇಪಾಳ ವಿರುದ್ಧದ ಪಂದ್ಯ ಭಾರತದ ಅಗ್ರ ಕ್ರಮಾಂಕಕ್ಕೆ ಬ್ಯಾಟಿಂಗ್ ಅಭ್ಯಾಸ ಅವಕಾಶ ಒದಗಿಸಲಿದೆ. ನಾಯಕ ರೋಹಿತ್ ಶರ್ಮ, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್ ಆಡುವತ್ತ ಗಮನಹರಿಸಲಿದ್ದಾರೆ. ಪಾಕ್ ವೇಗಿಗಳ ಎದುರು ತತ್ತರಿಸಿದ್ದ ಟಾಪ್-4, ನೇಪಾಳ ಎದುರು ಲಯಕ್ಕೆ ಮರಳಬೇಕಿದೆ. ನೇಪಾಳದ ಬೌಲಿಂಗ್ ವಿಭಾಗಕ್ಕೆ ಭಾರತದ ಬ್ಯಾಟಿಂಗ್ ವಿಭಾಗ ಕಠಿಣ ಸವಾಲೆನಿಸುವುದು ನಿಶ್ಚಿತ.ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮಾತ್ರ ಮಾಡಿದ್ದರಿಂದ ಬೌಲರ್ಗಳಿಗೆ ಕಣಕ್ಕಿಳಿಯುವ ಅವಕಾಶ ಲಭಿಸಲಿಲ್ಲ. ಈ ಬಾರಿ ಮಳೆ ಅವಕಾಶ ಕಲ್ಪಿಸಿದರೆ, ಭಾರತೀಯ ಬೌಲರ್ಗಳು ನೇಪಾಳಕ್ಕೆ ಕಠಿಣ ಸವಾಲಾಗಬಲ್ಲರು.
ಪಂದ್ಯಆರಂಭ: ಮಧ್ಯಾಹ್ನ 3.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್