ಕೊಲಂಬೊ: ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ತಂಡವು ಇಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ.ಭಾರತ ಕ್ರಿಕೆಟ್ ತಂಡವು ಕಳೆದ ಐದು ವರ್ಷಗಳಿಂದ ಎದುರಿಸುತ್ತಿರುವ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ಉತ್ಸುಕವಾಗಿದೆ.2018ರಲ್ಲಿ ಭಾರತ ತಂಡವು ಏಕದಿನ ಏಷ್ಯಾಕಪ್ ಜಯಿಸಿತ್ತು. ಅದರ ನಂತರ ಏಕದಿನ, ಟಿ20 ವಿಶ್ವಕಪ್ ಹಾಗೂ
ಏಷ್ಯಾ ಕಪ್ ಟೂರ್ನಿಗಳಲ್ಲಿ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿಲ್ಲ.
ರೋಹಿತ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಕೆ.ಎಲ್. ರಾಹುಲ್, ಜಸ್ಪ್ರೀತ್ ಬೂಮ್ರಾ, ಸಿರಾಜ್ ಅವರಂತಹ ಅನುಭವಿ ಆಟಗಾರರಿರುವ ಭಾರತ ತಂಡದ ಮೇಲೆ ನಿರೀಕ್ಷೆಯಿಟ್ಟಿದೆ. ಶ್ರೀಲಂಕಾದ ಬ್ಯಾಟರ್ಗಳಾದ ಕುಶಾಲ ಮೆಂಡಿಸ್, ಆಲ್ರೌಂಡರ್ ಚರಿತ ಅಸಲಂಕಾ ಹಾಗೂ ಸದೀರ ಸಮರವಿಕ್ರಮ ಅವರನ್ನು ಕಟ್ಟಿಹಾಕಲು ಭಾರತದ ಬೌಲಿಂಗ್ ಪಡೆ ಪರಿಣಾಮಕಾರಿ ತಂತ್ರಗಾರಿಕೆ ಹೆಣೆಯಲೇಬೇಕು.
ಅಮೋಘ ಲಯದಲ್ಲಿರುವ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ರವೀಂದ್ರ ಜಡೇಜ, ವೇಗಿ ಬೂಮ್ರಾ ಅವರನ್ನು ಎದುರಿಸಲು ಲಂಕಾದ ಬ್ಯಾಟರ್ಗಳೂ ಸಿದ್ಧರಾಗಬೇಕಿದೆ. ಬಾಂಗ್ಲಾ ಎದುರಿನಪಂದ್ಯದಲ್ಲಿ ಭಾರತದ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಅವರು ಈ ಪಂದ್ಯದಲ್ಲಿ ಆಡುವ ಕುರಿತು ಖಚಿತವಾಗಿಲ್ಲ.
ಲಂಕಾ ತಂಡದಲ್ಲಿರುವ ಸ್ಪಿನ್ನರ್ ದುನಿತ್ ವೆಲ್ಲಾಳಗೆ, ಧನಂಜಯ ಡಿಸಿಲ್ವಾ ಮತ್ತು ಚರಿತ ಅಸಲಂಕಾ ಅವರ ಲಂಕಾ ನಿರೀಕ್ಷೆಯಿಟ್ಟಿದೆ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ಶುಭಮನ್ ಗಿಲ್, ರನ್ ಯಂತ್ರ ಕೊಹ್ಲಿ, ಲಯ ಕಂಡುಕೊಂಡಿರುವ ರಾಹುಲ್ ಹಾಗೂ ಇಶಾನ್ ಕಿಶನ್ ಅವರನ್ನು ಕಟ್ಟಿಹಾಕುವುದೇ ಲಂಕಾ ಬೌಲರ್ಗಳ ಮುಂದಿರುವ ಕಠಿಣ ಗುರಿಯಾಗಿದೆ.
ಲಂಕಾದಲ್ಲಿ ಭಾನುವಾರವೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಇದೇ ಕಾರಣಕ್ಕಾಗಿ ಸೋಮವಾರವನ್ನು ಮೀಸಲು ದಿನವನ್ನಾಗಿ ನಿಗದಿಪಡಿಸಲಾಗಿದೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ಕೆ.ಎಲ್. ರಾಹುಲ್ (ವಿಕೆಟ್ಕೀಪರ್) ಶ್ರೇಯಸ್ ಅಯ್ಯರ್ ಶುಭಮನ್ ಗಿಲ್ ಸೂರ್ಯಕುಮಾರ್ ಯಾದವ್ ತಿಲಕ್ ವರ್ಮಾ ಇಶಾನ್ ಕಿಶನ್(ವಿಕೆಟ್ಕೀಪರ್) ಹಾರ್ದಿಕ್ ಪಾಂಡ್ಯ (ಉಪನಾಯಕ) ರವೀಂದ್ರ ಜಡೇಜ ಶಾರ್ದೂಲ್ ಠಾಕೂರ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಪ್ರಸಿದ್ಧಕೃಷ್ಣ ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್.
ಶ್ರೀಲಂಕಾ: ದಸುನ್ ಶನಕಾ (ನಾಯಕ) ಪಥುಮ್ ನಿಸಾಂಕ ದಿಮುತ್ ಕರುಣರತ್ನೆ ಕುಶಾಲ ಪೆರೆರಾ ಕುಶಾಲ ಮೆಂಡಿಸ್ (ಉಪನಾಯಕ) ಚರಿತ ಅಸಲಂಕಾ ಧನಂಜಯ್ ಡಿಸಿಲ್ವಾ ಸದೀರ ಸಮರವಿಕ್ರಮ ಮಹೀಷ ತೀಕ್ಷಣ ಕಸುನ್ ರಜಿತಾ ದುಶಾನ್ ಹೇಮಂತ ಬಿನುರಾ ಫರ್ನಾಂಡೊ ಪ್ರಮೋದ ಮಧುಶಾನ್.
ಪಂದ್ಯ ಆರಂಭ: ಮಧ್ಯಾಹ್ನ 3 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಹಾಟ್ಸ್ಟಾರ್ ಆ್ಯಪ್