ಸುಳ್ಯ: ಪುತ್ತೂರಿನ ಇತಿಹಾಸದಲ್ಲಿಯೇ ಅತೀ ದೊಡ್ಡ ಯೋಜನೆ 1010 ಕೋಟಿಯ ಬೃಹತ್ ಕುಡಿಯುವ ನೀರಿನ ಮಂಜೂರಾಗಿ ಟೆಂಡರ್ ಆಗಿದೆ.ಯೋಜನೆಯಿಂದ ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಸರಬರಾಜು ಆಗಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ಗೆ ಆಗಮಿಸಿದ ಅವರು ‘ಸುಳ್ಯ ಪ್ರೆಸ್ ಕ್ಲಬ್ನ ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಜನೆಯಂತೆ ಅಲಂಕಾರು ಮತ್ತು ಕೆದಿಲದಲ್ಲಿ ಎರಡು ಬೃಹತ್ ಘಟಕಗಳು ನಿರ್ಮಾಣ ಆಗಲಿದೆ. ಅಲಂಕಾರಿನಿಂದ ಕಡಬ ತಾಲೂಕಿನ
ಹಾಗೂ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಿಗೆ ಶುದ್ಧೀಕೃತ ನೀರು ಸರಬರಾಜಾಗಲಿದೆ. ಕೆದಿಲದಲ್ಲಿ 3 ಕೋಟಿ ಲೀಟರ್ನ ಯೋಜನೆ ಅನುಷ್ಠಾನ ಆಗಲಿದೆ. ಅಲ್ಲಿಂದ ಪೆರುವಾಯಿ, ಪುಣಚ, ಬೆಟ್ಟಂಪಾಡಿ ಮೂಲಕ ಸುಳ್ಯ ತಾಲೂಕಿನ ಇನ್ನೊಂದು ಭಾಗಕ್ಕೆ ನೀರು ಸರಬರಾಜಾಗಲಿದ್ದು ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳಿಗೆ 24 ಗಂಟೆ ಶುದ್ದೀಕೃತ ಕುಡಿಯುವ ನೀರು ಸರಬರಾಜಾಗಲಿದೆ. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಿದ ಟ್ಯಾಂಕ್ಗಳಿಗೆ ಈ ಶುದ್ಧ ಕುಡಿಯುವ ನೀರು ಸರಬರಾಜಾಗಲಿದ್ದು ಅಲ್ಲಿಂದ ವಿತರಣೆ ಆಗಲಿದೆ. ಇದರ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿದ್ದು ಮುಂದಿನ ತಿಂಗಳು ದೊಡ್ಡ ಕಾರ್ಯಕ್ರಮ ಮಾಡಿ ಯೋಜನೆಗೆ ಚಾಲನೆ ನೀಡಲಾಗುವುದು. 18 ತಿಂಗಳಲ್ಲಿ ಯೋಜನೆ ಅನುಷ್ಠಾನ ಆಗಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಡಿಪಿಆರ್ ಟೆಂಡರ್:
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಡಿಪಿಆರ್ ಟೆಂಡರ್ ಆಗಿದೆ. 3 ತಿಂಗಳಲ್ಲಿ ಡಿಪಿಆರ್ ಪೂರ್ತಿ ಆಗಲಿದೆ ಡಿಪಿಆರ್ ಆದ ಬಳಿಕ ಎಲ್ಲಿ ಅಂಡರ್ಪಾಸ್, ಬೈಪಾಸ್ ಆಗುತ್ತದೆ ಎಂಬ ಸ್ಪಷ್ಟತೆ ಸಿಗಲಿದೆ. 2600 ಕೋಟಿಯ ಯೋಜನೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಆಗಲಿದೆ ಎಂದರು.
ಕೊಯಿಲ ಪಶು ವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಅಧ್ಯಯನ ವರ್ಷದಿಂದ ತರಗತಿಗಳು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಮೂಲ ಸೌಕರ್ಯ ಒದಗಿಸಲು 40 ಕೋಟಿ ಮಂಜೂರಾಗಿದೆ. ಮುಂದಿನ ಅಭಿವೃದ್ಧಿಗಾಗಿ 210 ಕೋಟಿ ಬಜೆಟ್ನಲ್ಲಿ ಘೋಷಣೆ ಆಗಲಿದೆ. ಪಶು ವೈದ್ಯಕೀಯ ಡಾಕ್ಟರ್ಗಳಿಗೆ ದೇಶ ವಿದೇಶದಲ್ಲಿ ದೊಡ್ಡ ಬೇಡಿಕೆ ಇದೆ. ಆದುದರಿಂದ ಆದಷ್ಟು ಬೇಗ ಇಲ್ಲಿ ತರಗತಿಗಳು ಆರಂಭಿಸಬೇಕು. ಕೊಯಿಲದಲ್ಲಿ ಇನ್ನೂ 625 ಎಕ್ರೆ ಸ್ಥಳ ಲಭ್ಯವಿದ್ದು ಹಸು, ಕೋಳಿ ಸಾಕಣೆ ಮತ್ತಿತರ ವೆಟರಿನರಿ ಪ್ರೊಸೆಸ್ಸಿಂಗ್ ಯೂನಿಟ್ ಮಾಡುವ ಚಿಂತನೆ ನಡೆಸಲಾಗುವುದು. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಉತ್ತಮ ಅವಕಾಶ ಇದೆ ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸರಕಾರಿ ಇಲಾಖೆಗಳಲ್ಲಿನ ಕಡತ ವಿಲೇವಾರಿಯಲ್ಲಿ ಪುತ್ತೂರು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. 94ಸಿ, ಅಕ್ರಮ ಸಕ್ರಮ 1 ಟೂ 5 ಕಡತ, ಪ್ಲಾಟಿಂಗ್ ಸೇರಿದಂತೆ ನಾಲ್ಕು ಸಾವಿರಕ್ಕೂ ಅಧಿಕ ಕಡತಗಳ ವಿಲೇವಾರಿ ಮಾಡಿದ್ದೇವೆ. ನಮ್ಮದೇ ಸರಕಾರ ಇರುವ ಕಾರಣ ಸರಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ಸುಳ್ಯದವರೂ ತನ್ನನ್ನು ಸಂಪರ್ಕ ಮಾಡಬಹುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪ್ರಸ್ ಕ್ಲಬ್ಗೆ ಆಗಮಿಸಿದ ಅಶೋಕ್ ಕುಮಾರ್ ರೈ ಅವರನ್ನು ಪ್ರಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸನ್ಮಾನಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.











