ಮಂಗಳೂರು:ವಿರೋಧ, ಗೊಂದಲದ ಬಳಿಕ ಪುತ್ತಿಲ ಪರಿವಾರದ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. ಶನಿವಾರ ಸಂಜೆ ಮಂಗಳೂರಿನ ಬಿಜೆಪಿ ಚುನಾವಣಾ ಕಚೇರಿಗೆ ನೂರಾರು ಬೆಂಬಲಿಗರ ಜೊತೆಗೆ ಬಂದಿದ್ದ ಅರುಣ್ ಪುತ್ತಿಲ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಬರಮಾಡಿಕೊಂಡರು. ಇದೇ ವೇಳೆ ಮಾತನಾಡಿದ ಸತೀಶ್ ಕುಂಪಲ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರೂ
ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಆಗಿಸುವುದಷ್ಟೇ ನಮ್ಮ ಗುರಿ. ಅರುಣ್ ಪುತ್ತಿಲ ಅವರು ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ. ನಾವು ಪಕ್ಷದ ಪ್ರಮುಖರ ಸೂಚನೆಯಂತೆ ಕೆಲಸ ಮಾಡುವುದಾಗಿದ್ದು ಪಕ್ಷದ ಕೆಲಸ ಎನ್ನುವುದು ಜವಾಬ್ದಾರಿ. ಜಿಲ್ಲಾಧ್ಯಕ್ಷನಾಗಿ ನಾನು ಪಕ್ಷದ ಎಲ್ಲ ಕಾರ್ಯಕರ್ತರನ್ನೂ ಜೋಡಿಸಿಕೊಂಡು ಹೋಗಬೇಕಾಗಿದೆ ಎಂದರು. ರಾಜ್ಯಾಧ್ಯಕ್ಷರ ಸೂಚನೆಯಂತೆ ನಾವು ಕೆಲಸ ಮಾಡಬೇಕಾಗಿದೆ. ನಾವೆಲ್ಲ ಈಗ ಒಂದಾಗಿದ್ದು ನಮ್ಮ ಗುರಿ ಇನ್ನು ಅತ್ಯಧಿಕ ಮತಗಳಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಅಷ್ಟೇ ಎಂದು ಹೇಳಿದರು.
ಅರುಣ್ ಪುತ್ತಿಲ ಮಾತನಾಡಿ, ನಾವು ನರೇಂದ್ರ ಮೋದಿ ಅವರನ್ನು ಮತ್ತೆ ಹತ್ತು ವರ್ಷಗಳ ಕಾಲ ಪ್ರಧಾನಿ ಮಾಡುವ ಉದ್ದೇಶದಿಂದ ಜೊತೆಯಾಗಿದ್ದೇವೆ. ಹಿಂದಿನ ಕಹಿ ನೆನಪುಗಳನ್ನು ಮರೆತು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಪಕ್ಷದ ಜಿಲ್ಲಾ ಪ್ರಮುಖರು, ಪುತ್ತಿಲ ಪರಿವಾರದ ಪ್ರಮುಖರು ಇದ್ದರು.
ಆನಂತರ, ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಹಿಂದಿನ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಅರುಣ ಪುತ್ತಿಲ ಸೇರಿದಂತೆ ಪರಿವಾರದ ಪ್ರಮುಖರಿಗೆ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು. ಅಲ್ಲದೆ, ಸಾಂಕೇತಿಕವಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಅರುಣ ಪುತ್ತಿಲರಿಗೆ ಕೊಟ್ಟು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿದರು.









