ಕೇಪ್ ಕೆನವೆರಾಲ್: ಭೂಮಿಯ ಸುತ್ತಲ ವಾತಾವರಣವನ್ನೂ ಮೀರಿ (ಡೀಪ್ ಸ್ಪೇಸ್ ಎನ್ವಿರಾನ್ಮೆಂಟ್) ಚಂದ್ರನನ್ನು ಒಂದು ಸುತ್ತು ಹಾಕಿ ಬರುವ ‘ನಾಸಾ’ದ ‘ಆರ್ಟೆಮಿಸ್–2’ರ ರಾಕೆಟ್, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದೆ.ಈ ಯೋಜನೆಯಲ್ಲಿ ನಾಲ್ವರು ಗಗನಯಾನಿಗಳನ್ನು ಹೊತ್ತ ನೌಕೆ ಚಂದ್ರನತ್ತ ಹೊರಟಿದೆ. ಈ ಹಾದಿಯಲ್ಲಿ ಗಗಯಾನಿಗಳು
ಭೂಮಿ ಹೇಗೆ ಕಾಣುತ್ತದೆ ಎನ್ನುವ ಚಿತ್ರವನ್ನು ಸೆರೆ ಹಿಡಿದು ಕಳುಹಿಸಿದ್ದಾರೆ.
ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿರುವ ನಾಸಾ, ನಾವು ನಮ್ಮ ಮನೆ ಇರುವ ಗ್ರಹವನ್ನು ಇಡಿಯಾಗಿ ನೋಡುತ್ತಿದ್ದೇವೆ. ಅದ್ಭುತವಾದ ನೀಲಿ ಮತ್ತು ಕಂದು ಬಣ್ಣಗಳಲ್ಲಿ ಬೆಳಗುತ್ತಿದೆ. ಹಸಿರು ಅರೋರಾ ವಾತಾವರಣವನ್ನು ಬೆಳಗಿಸುತ್ತಿದೆ. ನಮ್ಮ ಗಗನಯಾತ್ರಿಗಳು ಚಂದ್ರನತ್ತ ಪ್ರಯಾಣ ಬೆಳೆಸುವುದನ್ನು ನಾವು ಒಟ್ಟಿಗೆ ವೀಕ್ಷಿಸುತ್ತಿದ್ದೇವೆ’ ಎಂದು ಬರೆದುಕೊಂಡಿದೆ.
ಭೂಮಿಯ ಚಿತ್ರವನ್ನು ಸೆರೆ ಹಿಡಿದಿರುವ ಕಮಾಂಡರ್ ರೀಡ್ ವೈಸ್ಮನ್, ಮೊದಲು ಅರ್ಧ ಕಾಣುವ ಭೂಮಿಯ ಒಂದು ಭಾಗದ ಫೋಟೊ ಹಾಗೂ ಇನ್ನೊಂದು ಪೂರ್ತಿಯಾಗಿ ವೃತ್ತಾಕಾರದಲ್ಲಿ ಕಾಣುವ ಭೂಮಿಯ ಫೋಟೊವನ್ನು ಕ್ಲಿಕ್ಕಿಸಿದ್ದಾರೆ.
ಶುಕ್ರವಾರದ ಹೊತ್ತಿಗೆ ವೈಸ್ಮನ್ ಹಾಗೂ ಅವರ ತಂಡ ಭೂಮಿಯಿಂದ 90 ಸಾವಿರ ಮೈಲಿ ಅಂದರೆ 1,45 ,000 ಕಿ.ಮೀ ದೂರ ಪ್ರಯಾಣಿಸಿದೆ. ಇನ್ನು ಚಂದ್ರನತ್ತ ಹೋಗಲು ಅವರು 1,68,000 ಮೈಲಿ ಅಂದರೆ 2,70,000 ಕಿ.ಮೀ ಪ್ರಯಾಣಿಸಬೇಕಿದೆ. ಸೋಮವಾರ ಅವರು ತಲುಪುವ ಸಾಧ್ಯತೆಯಿದ್ದು, ಚಂದ್ರನ ಸುತ್ತಲೂ ಸುತ್ತುತ್ತಾರೆ.
ಗಗನಯಾನಿಗಳು ರೀಡ್ ವೈಸ್ಮನ್ (ಅಮೆರಿಕ),ವಿಕ್ಟರ್ ಗ್ಲೊವೇರ್ (ಅಮೆರಿಕ),ಕ್ರಿಸ್ಟಿನಾ ಕೋಚ್ (ಅಮೆರಿಕ),ಜೆರೆಮಿ ಹ್ಯಾನ್ಸನ್ (ಕೆನಡಾ)









