ಸುಳ್ಯ: ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಜಂಟಿ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ಮದ್ಯದಂಗಡಿ ತೆರೆದಿರುವುದನ್ನು ವಿರೋಧಿಸಿ ಪ್ರತಿಭಟನಾ ಸಭೆ ಕೊಲ್ಲಮೊಗ್ರ ಮಯೂರ
ಕಲಾ ಮಂದಿರದಲ್ಲಿ ನಡೆಯಿತು. ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಅನೇಕರನ್ನು ಮದ್ಯಮುಕ್ತರನ್ನಾಗಿಸಿ ಮಾಡಲಾಗುತಿದೆ. ಅದರಂತೆ ಕೊಲ್ಲಮೊಗ್ರದಲ್ಲೂ ಎರಡು ಬಾರಿ ಮದ್ಯವರ್ಜನ ಶಿಬಿರಗಳಾಗಿದೆ. ಈ ಮೂಲಕ ಅನೇಕ ಕುಟುಂಬಗಳು ಹೊಸ ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಇಲ್ಲಿ ಮದ್ಯದಂಗಡಿ ತೆರೆದ ಕಾರಣ ಮತ್ತೆ ಅನೇಕ ಕುಟುಂಬಗಳು ಆತಂಕದಲ್ಲಿ ಕಳೆಯುವಂತಾಗಿದೆ ಎಂದರು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಮಹೇಶ್ ರೈ ಮೇನಾಲ,
ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಹಿಮ್ಮತ್ ಕೆ.ಸಿ. ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷ ಉದಯ ಕೊಪ್ಪಡ್ಕ ಮಾತನಾಡಿದರು.ಮದ್ಯಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಪಿ. ಗಿರಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘ-ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಮದ್ಯದಂಗಡಿ ತೆರವು ಮಾಡುವಂತೆ ಗ್ರಾಮ ಪಂಚಾಯತ್‌ಗೆ ಮನವಿ ನೀಡಲಾಯಿತು. ಇದಕ್ಕೂ ಮುನ್ನ ಪ್ರತಿಭಟನಾ ಮೆರವಣಿಗೆ ನಡೆಯಿತು.