ಸುಳ್ಯ: ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿ ಐದು ಕಡೆ ಚೆಕ್ ಪೋಸ್ಟ್ಗಳನ್ನು ತೆರೆಯಲಾಗುವುದು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಡಾ.ಜಗದೀಶ್ ಕೆ ನಾಯ್ಕ ಹೇಳಿದ್ದಾರೆ. ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣಾ
ಅಕ್ರಮ, ಹಣ ಮತ್ತು ವಸ್ತುಗಳ ಸಾಗಾಟ ತಡೆಯುವ ದೃಷ್ಟಿಯಿಂದ ಕೇರಳ ಗಡಿಯಲ್ಲಿ ಮುರೂರು, ಮಂಡೆಕೋಲು, ನಾರ್ಕೋಡು, ಕೊಡಗಿನ ಗಡಿ ಕಲ್ಲುಗುಂಡಿಯಲ್ಲಿ ಹಾಗೂ ಹಾಸನ ಗಡಿ ಗುಂಡ್ಯದಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು. ಗಡಿಯಲ್ಲು ಹದ್ದಿನ ಕಣ್ಣಿಟ್ಟು ತೀವ್ರ ತಪಾಸಣೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ದ.ಕ.ಲೋಕಸಭಾ ಚುನಾವಣೆಯಲ್ಲಿ ಮಾ.28 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು, ಎ.4ರಂದು ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ಎ.5ರಂದು ನಾಮಪತ್ರ ಪರಿಶೀಲನೆ, ಎ.8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಎ.26ರಂದು ಚುನಾವಣೆ ನಡೆಯಲಿದೆ. ಜೂ.4ರಂದು ಮತ ಎಣಿಕೆ ನಡೆಯಲಿದೆ. ಜೂ.6ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ಒಟ್ಟು ಮತದಾರರು:
ಸುಳ್ಯ ಕ್ಷೇತ್ರದಲ್ಲಿ 1,02,214 ಪುರುಷರು ಹಾಗೂ1,04,993 ಮಹಿಳೆಯರು ಸೇರಿ ಒಟ್ಟು 207207 ಮತದಾರರಿದ್ದಾರೆ. 4563 ಹೊಸ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮಾ.24ರವರೆಗೆ ಹೊಸ ಮತದಾರರ ಸೇರ್ಪಡೆಗೆ ಅವಕಾಶ ಇದೆ ಎಂದು ಅವರು ಹೇಳಿದರು.
ಮತಗಟ್ಟೆಗಳು:
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 233 ಮತಗಟ್ಟೆಗಳು ಇದೆ. ಇದರಲ್ಲಿ 38 ಕ್ರಿಟಿಕಲ್ ಮತಗಟ್ಟೆಗಳು ಎಂದು ವಿಂಗಡಿಸಲಾಗಿದೆ ಚುನಾವಣೆಗಾಗಿ ವಿಶೇಷ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 9 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮನೆಯಿಂದಲೇ ಮತದಾನಕ್ಕೆ ಅವಕಾಶ:
85 ವರ್ಷ ಮೀರಿದ ಹಿರಿಯ ಮತದಾರರಿಗೆ ಮತ್ತು ಅಂಕವಿಲತೆ ಇರುವ ಮತದಾರರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಇದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ದಾಟಿದ 1932 ಮತದಾರರು ಹಾಗೂ ಅಂಗವಿಕಲತೆ ಇರುವ 2ಸಾವಿರ ಸೇರಿ ಒಟ್ಟು 3932 ಮತದಾರರು ಇದ್ದಾರೆ. ಚುನಾವಣೆಗೆ ಮುಂಚಿತವಾಗಿ ಈ ಮತದಾರರ ಮನೆಗೆ ತೆರಳಿ ಮತ ಚಲಾಯಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ, ಸುಳ್ಯ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರ ಪರಮೇಶ್, ಸುಳ್ಯ ವೃತ್ತನಿರೀಕ್ಷಕ ಸತ್ಯನಾರಾಯಣ, ಸುಳ್ಯ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್, ಕಡಬ ಉಪತಹಶೀಲ್ದಾರ್ ಮನೋಹರ ಕೆ.ಟಿ. ಉಪಸ್ಥಿತರಿದ್ದರು.









