ಸುಳ್ಯ:ಚುನಾವಣಾ ಸಂದರ್ಭದಲ್ಲಿ ಕೋವಿ ಠೇವಣಾತಿ ಇಡುವುದರಿಂದ ಕೃಷಿಕರಿಗೆ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಮಾ.26 ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ರೈತರ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಕೋವಿ ಪರವಾನಗಿದಾರರಾದ ಕೃಷಿಕರು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರಾದ ಎಂ.ವೆಂಕಪ್ಪ ಗೌಡ ‘ಈ ಬೇಡಿಕೆಯನ್ನು ಮುಂದಿಟ್ಟು ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬೆಳೆ ರಕ್ಷಣೆಗೆಂದು
ನೀಡಿರುವ ಕೋವಿಗಳನ್ನು ಚುನಾವಣಾ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಸಮಯ ಡಿಪಾಸಿಟ್ ಇಡುವುದರಿಂದ ಕೃಷಿಕರಿಗೆ ಸಮಸ್ಯೆ ಆಗುತಿದೆ. ರಾತ್ರಿಯ ವೇಳೆಯಲ್ಲಿ ತೋಟಕ್ಕೆ ನೀರು ಹಾಹಿಸುವ ಸಮಯ ತಮ್ಮ ರಕ್ಷಣೆಗೆ ಕೋವಿ ಬೇಕಾಗಿದೆ. ಅಲ್ಲದೆ ಆನೆ, ಚಿರತೆ, ಕಡವೆ, ಕಾಡು ಹಂದಿ ಸೇರಿ ವಿವಿಧ ಕಾಡು ಪ್ರಾಣಿಗಳು ಕೃಷಿ ಹಾನಿ ಮಾಡುತ್ತವೆ. ಈ ಸಂದರ್ಭದಲ್ಲಿ ಶಬ್ದ ಮಾಡಿ ಕಾಡು ಪ್ರಾಣಿಗಳನ್ನು ಓಡಿಸಲು ಬಂದೂಕು ಅತೀ ಅಗತ್ಯವಾಗಿದೆ. ಅಲ್ಲದೆ ಕಾಡಂಚಿನ ಗಡಿ ಗ್ರಾಮಗಳಲ್ಲಿ ನಕ್ಸಲ್ಗಳು ಭೇಟಿ ನೀಡಿರುವುದು ಕೂಡ ಜನರಲ್ಲಿ ಆತಂಕ ಉಂಟಾಗಿದೆ. ಇದರಿಂದ ಜನರಿಗೆ ಧೈರ್ಯಕ್ಕೆ ಬಂದೂಕು ಮನೆಯಲ್ಲಿ ಅನಿವಾರ್ಯವಾಗಿದೆ.

ಆದುದರಿಂದ ತಾಲೂಕಿನ ಕೃಷಿಕರಿಗೆ ಕೋವಿ ಡಿಪಾಸಿಟ್ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಕ್ರಿಮಿನಲ್ ಹಿನ್ನಲೆ ಇರುವವರ ಬಂದೂಕುಗಳನ್ನು ಡಿಪಾಸಿಟ್ ಮಾಡುವುದರಲ್ಲಿ ತಮ್ಮ ಅಭ್ಯಂತರ ಇಲ್ಲ. ಆದರೆ ಎಲ್ಲಾ ಕೃಷಿಕರಿಗೆ ಇದು ಕಡ್ಡಾಯ ಮಾಡಬಾರದು ಎಂದು ಹೇಳಿದ್ದಾರೆ.ಕಳೆದ ಚುನಾವಣೆ ಸಂದರ್ಭದಲ್ಲಿ ಕೆಲವು ಕೃಷಿಕರಿಗೆ ವಿನಾಯಿತಿ ನೀಡಲಾಗಿದೆ. ರೈತರ ಸಮಸ್ಯೆ ಪರಿಗಣಿಸಿ ಎಲ್ಲಾ ರೈತರಿಗೆ ವಿನಾಯಿತಿ ನೀಡಬೇಕು ಎಂದರು.
ರೈತರ ಈ ಸಮಸ್ಯೆಯ ಪರಿಹಾರಕ್ಕೆ ನಡೆಸುವ ಹಕ್ಕೊತ್ತಾಯಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳ ಬೆಂಬಲವನ್ನು ಕೋರುತ್ತೇವೆ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ರೈತರ ಪರವಾಗಿ ಈ ಸಮಸ್ಯೆ ಪರಿಹರಿಸಬೇಕು ಎಂದು ಅವರಲ್ಲಿ ವಿನಂತಿ ಮಾಡುತ್ತೇವೆ ಎಂದರು. ಹಕ್ಕೊತ್ತಾಯ ಸಭೆಯ ನಂತರವೂ ಕೋವಿ ಡಿಪಾಸಿಟ್ ಮಾಡಲು ವಿನಾಯಿತಿ ನೀಡದಿದ್ದರೆ ಗ್ರಾಮಗಳಲ್ಲಿ ಕೃಷಿಕರು ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಿ ಕೃಷಿಕರು ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ವೆಂಕಪ್ಪ ಗೌಡ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಪಿ.ಎಸ್.ಗಂಗಾಧರ, ಕೆ.ಪಿ.ಜಗದೀಶ್, ಎನ್.ಎಸ್.ದಾಮೋದರ ನಾರ್ಕೋಡು, ಲೋಲಜಾಕ್ಷ ಭೂತಕಲ್ಲು ಭರತ್ ಕುಮಾರ್, ಹರೀಶ್ ಮೂರ್ಜೆ ಉಪಸ್ಥಿತರಿದ್ದರು.





