ಶಿರೂರು:ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿ ಸುಮಾರು 72 ದಿನಗಳ ನಂತರ ಚಾಲಕ ಅರ್ಜುನ್ ಮೃತ ದೇಹದೊಂದಿಗೆ ಪತ್ತೆಯಾದ ಕೇರಳದ ಭಾರತ್ ಬೆಂಜ್ ಲಾರಿಯನ್ನು ಗಂಗಾವಳಿ ನದಿಯಿಂದ ಮೇಲಕ್ಕೆ ಎತ್ತಿ ರಾಷ್ಟ್ರೀಯ ಹೆದ್ದಾರಿ ಬದಿಗೆ ತರಲಾಗಿದೆ. ಲಾರಿಯಲ್ಲಿ ಪರಿಶೀಲನೆ ವೇಳೆ ಅರ್ಜುನ್ನ ಹಲವು ವಸ್ತುಗಳನ್ನು
ಹೊರ ತೆಗೆಯಲಾಯಿತು. ತನ್ನ ಮಗನಿಗಾಗಿ ಅರ್ಜುನ್ ಖರೀದಿಸಿದ್ದ ಆಟಿಕೆ ಲಾರಿ ನೋಡುಗರ ಮನ ಕಲಕುವಂತಿತ್ತು. ಮನೆಗೆ ಹಿಂತಿರುಗುತ್ತಿದ್ದ
ಅರ್ಜುನ ತನ್ನ ಪುಟ್ಟ ಮಗನಿಗಾಗಿ ಆಟಿಕೆ ಸಾಮಾಗ್ರಿಗಳನ್ಬು ಖರೀದಿಸಿ ಲಾರಿಯಲ್ಲಿ ಇಟ್ಟಿದ್ದರು.ಅರ್ಜುನ ಉಪಯೋಗಿಸುತ್ತಿದ್ದ ಬಟ್ಟೆ, ಮೊಬೈಲ್ ಪೋನ್, ಆಹಾರ ಸಾಮಾಗ್ರಿಗಳು, ಬ್ಯಾಗ್ ಮತ್ತಿತರ ವಸ್ತುಗಳನ್ನು ಲಾರಿಯ ಕ್ಯಾಬಿನ್ನಿಂದ ಹೊರ ತೆಗೆಯಲಾಗಿದೆ.
ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಲಾರಿ ದುರಂತದಲ್ಲಿ ಛಿದ್ರಗೊಂಡರೂ ಲಾರಿಯ ಕ್ಯಾಬಿನ್ನಲ್ಲಿ ಆತ ತನ್ನ ಮಗನಿಗಾಗಿ ಖರೀದಿಸಿದ್ದ ಆಟಿಕೆಯ ಲಾರಿ ಸೇರಿದಂತೆ ಇತರ ವಸ್ತುಗಳು ಉಳಿದಿತ್ತು. ಇದನ್ನು ನೋಡುತ್ತಿದ್ದಂತೆ ಹಲವರು ಭಾವುಕರಾದರು, ಕಣ್ಣಂಚಿನಲ್ಲಿ ನೀರ ಹನಿ ಪುಟಿಯುತ್ತಿತ್ತು.