ಸುಳ್ಯ:ಅಡಿಕೆ ಹಾಗೂ ರಬ್ಬರ್ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತಿದೆ. ಇದರ ಜೊತೆಗೇ ಎರಡೂ ಬೆಳೆಯಲ್ಲಿ ಕೊಳೆರೋಗವೂ ಸಾಮಾನ್ಯ ಅಂಶವಾಗಿದೆ. ಹೀಗಾಗಿ ಎರಡೂ ಬೆಳೆಯಲ್ಲಿ ಕಂಡುಬರುವ ವೈರಸ್ ಗಳು ಸಾಮಾನ್ಯ ಪ್ರಬೇಧವೇ ಎಂಬುದರ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಬೇಕು ಎಂದು ಕೇಂದ್ರ ಸರಕಾರದ ಅಧೀನದಲ್ಲಿರುವ ಭಾರತೀಯ ರಬ್ಬರ್ ಬೋರ್ಡ್ ಸಭೆಯಲ್ಲಿ ರಬ್ಬರ್ ಮಂಡಳಿ ನಿರ್ದೇಶಕರಾದ ಮುಳಿಯ ಕೇಶವ ಭಟ್ ಪ್ರಸ್ತಾಪಿಸಿದ್ದಾರೆ.ಇದನ್ನು ಪರಿಗಣಿಸಿದ
ರಬ್ಬರ್ ಬೋರ್ಡ್ ಈ ಕುರಿತು ಸಂಶೋಧನೆ ನಡೆಸುವ ಬಗ್ಗೆ ಚರ್ಚೆ ನಡೆಸಿ ಪೂರಕ ಮಾಹಿತಿ ಕಲೆ ಹಾಕಿದೆ. ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಹಾಗೂ ರಬ್ಬರ್ ಸಾಮಾನ್ಯ ಬೆಳೆಯಾಗಿದೆ. ಎರಡೂ ಬೆಳೆಯಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತದೆ. ಹಲವು ವರ್ಷಗಳಿಂದ ರಬ್ಬರ್ ಕೃಷಿಯಲ್ಲಿ ಎಲೆಚುಕ್ಕಿ ರೋಗ ಕಂಡು ಬಂದಿದೆ. ಕಳೆದ ವರ್ಷಗಳಲ್ಲಿ ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿಯೂ ನಾಶವಾಗುತಿದೆ. ಅಡಿಕೆ ಮತ್ತು ರಬ್ಬರ್ ಕೃಷಿಯಲ್ಲಿ ಕೊಳೆ ರೋಗ ಮತ್ತು ಎಲೆಚುಕ್ಕಿ ರೋಗ ಸಾಮಾನ್ಯವಾಗಿದೆ. ಅಡಿಕೆಯಲ್ಲಿ ಪ್ರಮುಖವಾಗಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಕೊಳೆರೋಗ ಒಂದು. ಇದನ್ನು ನಿಯಂತ್ರಿಸಲು ಬೋರ್ಡೋ ಸ್ಪ್ರೇ ಅನ್ನು ಶಿಫಾರಸು ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ
ಎಲೆ ಚುಕ್ಕಿ ರೋಗದಿಂದ ಅಡಿಕೆ ಕೃಷಿ ವ್ಯಾಪಕವಾಗಿ ನಾಶವಾಗುತಿದೆ. ಈ ರೋಗದಿಂದ ತಕ್ಷಣವೇ ಅಡಿಕೆ ಮರಗಳೂ ಸಾಯುತ್ತಿರುವುದು ಕಂಡುಬಂದಿದೆ. ಇದರ ಜೊತೆಗೆ ಹಳದಿ ಎಲೆರೋಗ ಕೂಡಾ ಇನ್ನೊಂದು ಸಮಸ್ಯೆಯಾಗಿದೆ. ಇದಕ್ಕೆ ಯಾವುದೇ ಪರಿಹಾರವಿಲ್ಲ. ಎಲೆಚುಕ್ಕಿ ರೋಗ ಮತ್ತು ಕೊಳೆರೋಗ ಎರಡೂ ಕೂಡಾ ರಬ್ಬರ್ ಹಾಗೂ ಅಡಿಕೆ ತೋಟದಲ್ಲಿ ಸಾಮಾನ್ಯವಾಗಿದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಹೀಗಾಗಿ ಈಗ ಈ ವೈರಸ್ಗಳು ಪರಸ್ಪರ ಸಂಪರ್ಕ ಹೊಂದಿವೆಯೇ, ಇವುಗಳನ್ನು ಸೃಷ್ಟಿಸುವ ಶಿಲೀಂಧ್ರ,ಬ್ಯಾಕ್ಟೀರಿಯಾ, ವೈರಸ್ ಒಂದೇ ರೀತಿಯದ್ದೇ ಅಥವಾ ಸಾಮಾನ್ಯವೇ?, ಸಮಸ್ಯೆಗಳು ರಬ್ಬರ್ ಮತ್ತು ಅಡಿಕೆ ಎರಡರಲ್ಲೂ ಕಂಡುಬರುವುದರಿಂದ, ಇದು ರಬ್ಬರ್ ತೋಟದಿಂದ ಅಡಿಕೆಗೆ ಹರಡುತ್ತದೆಯೇ ? ಎಂಬ ಸಂಶಯಗಳು ರೈತರಲ್ಲಿದೆ. ಇದಕ್ಕಾಗಿ ವೈಜ್ಞಾನಿಕ ಸಂಶೋಧನೆಯ ಅಗತ್ಯ ಇದೆ ಎಂದು ಮುಳಿಯ ಕೇಶವ ಭಟ್ ಅವರು ರಬ್ಬರ್ ಮಂಡಳಿ ಸಭೆಯಲ್ಲಿ ಅವರು ಹೆಳಿದ್ದರು. ಎಲೆಚುಕ್ಕಿ ರೋಗ ಹಾಗೂ ಕೊಳೆರೋಗದ ವೈರಸ್ ರಬ್ಬರ್ ಹಾಗೂ ಅಡಿಕೆಯಲ್ಲಿ ಸಾಮ್ಯತೆ ಇದೆಯೇ ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಲು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ರಬ್ಬರ್ ಬೋರ್ಡ್ ಚೆಯರ್ಮೆನ್ ಸವಾರ್ ಧನಾನಿಯ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಸಂತಗೇಸನ್ ಅವರು ಈ ಕುರಿತು ಪೂರಕ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.