ಸುಳ್ಯ:ಆಧುನಿಕ ಜಗತ್ತಿನಲ್ಲಿ ಮನುಷ್ಯನ ಪ್ರಸ್ತುತತೆಯನ್ನು ಉಳಿಸಲು ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಬೇಕು ಎಂದು ವಿಶ್ರಾಂತ ಉಪಕುಲಪತಿ ಡಾ. ಡಾ.ಕೆ.ಚಿನ್ನಪ್ಪ ಗೌಡ ಹೇಳಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ
‘ಭಾಷಾ ವಿಚಾರ ಸಂಕಿರಣ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಯನ್ನು ಉಳಿಸಿ, ಪೋಷಿಸಿ, ಬೆಳೆಸುವುದರ ಮೂಲಕ ಎಲ್ಲಾ ಆಧುನಿಕ ಸವಾಲುಗಳನ್ನು ಎದುರಿಸಿ ಮನುಷ್ಯ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಬಹುದು ಎಂದ ಅವರು ಒಂದು ಕನ್ನಡ ಶಾಲೆ ಮುಚ್ಚಿದರೆ ಒಂದು ಪರಂಪರೆಯಿಂದ ವಿಮುಖ ಆದಂತೆ, ಸಾಹಿತ್ಯ, ಸಾಂಸ್ಕೃತಿಕ ಬೇರು ಕಳಚಿಕೊಂಡಂತೆ ಎಂದು ಅವರು ಹೇಳಿದರು.
‘ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಮಂಗಳೂರು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ ‘ ಬಹುಭಾಷೆಯ ಆವರಣದಲ್ಲಿ ಭಾಷಾ ಸೌಹಾರ್ದತೆ ಉಳಿಸಿಕೊಂಡಿರುವುದು ಇಲ್ಲಿನ ಅನನ್ಯತೆ ಎಂದು ಹೇಳಿದರು. ಭಾಷೆಯ ಮಧ್ಯೆ ವೈಷಮ್ಯ ಬಿತ್ತುವ ಪ್ರಯತ್ನ ನಡೆಯುತಿದೆ. ಪದವಿ, ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡವನ್ನು ಬಿಟ್ಟು ಬಿಡುತ್ತಿರುವ ಕಾರಣ ಕನ್ನಡದ ಸೃಜನಶೀಲತೆಗೆ ಅಪಾಯ ತಟ್ಟುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

‘ಜಾಗತೀಕರಣ ಹಾಗೂ ಸಾಂಸ್ಕೃತಿಕ ಪಲ್ಲಟಗಳು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಸಾಹಿತಿ ಹಾಗೂ ವಿಶ್ರಾಂತ ಪ್ರಧ್ಯಾಪಕರಾದ ಡಾ.ನರೇಂದ್ರ ರೈ ದೇರ್ಲ ಮಾತನಾಡಿ ‘ಜಾಗತೀಕರಣದ ಪರಿಣಾಮದಿಂದ ಸಾಂಸ್ಕೃತಿಕ, ಸಾಮಾಜಿಕ ಬದುಕಿನಲ್ಲಿ ದೊಡ್ಡ ಪಲ್ಲಟಗಳು ಉಂಟಾಗಿದ್ದು ಹಣದಲ್ಲಿ, ಯಂತ್ರದಲ್ಲಿ ಎಲ್ಲಾ ಸುಖಗಳು ಅಡಗಿದೆ ಎಂಬ ಭ್ರಮೆ ಆವರಿಸಿದೆ.ನೆಲದ ಬದುಕು ಕೂಡ ಯಾಂತ್ರೀಕರಣಗೊಂಡಿದ್ದು ಹಿತದ ಪರಿಕಲ್ಪನೆಯು ಲಾಭದ ಪರಿಕಲ್ಪನೆಯಾಗಿ ಮಾರ್ಪಾಡಾಗಿದೆ ಎಂದು ಅವರು ಹೇಳಿದರು.








