ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಿದ್ಧಗೊಂಡ ‘ಅಪ್ಪ’ ಅರೆಭಾಷೆ ನಾಟಕದ ರಂಗ ಪ್ರದರ್ಶನ ಹಾಗೂ ಉದ್ಘಾಟನೆ ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರಂಗಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ
ಭಾಷೆಯ ಬೆಳವಣಿಗೆಗೆ
ಕಲೆಯೂ ಒಂದು ಮಾಧ್ಯಮ. ರಂಗಭೂಮಿಯ ಮೂಲಕ ಭಾಷೆಯು ಬೆಳವಣಿಗೆ ಸಾಧ್ಯ. ಅಪ್ಪ ನಾಟಕ ನೂರಾರು ಪ್ರದರ್ಶನ ಕಂಡು ಅರೆಭಾಷೆಯ ಬೆಳವಣಿಗೆಗೆ ಸಹಾಯಕವಾಗಲಿ ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಹಲವು ಸಮಯದ ಪ್ರಯತ್ನದಿಂದ ಅರೆಭಾಷೆ ನಾಟಕ ಸಿದ್ಧಗೊಂಡಿದೆ. ಸ್ಥಳೀಯ ಕಲಾವಿದರನ್ನೇ ಒಳಗೊಂಡ ನಾಟಕ ಸಿದ್ಧಪಡಿಸಲಾಗಿದೆ. ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಪ್ರದರ್ಶನ ಮಾಡುವ ಉದ್ದೇಶ ಇದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್, ರಂಗನಿರ್ದೇಶಕರಾದ ಬಾಸುಮಾ ಕೊಡಗು, ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಂ. ರುದ್ರಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅರೆಭಾಷೆ ಅಕಾಡೆಮಿ ಸದಸ್ಯ,ನಾಟಕದ ನಿರ್ದೇಶಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರೆಭಾಷೆ ಅಕಾಡೆಮಿಯ ಸದಸ್ಯರಾದ ವಿನೋದ್ ಮೂಡಗದ್ದೆ ಸ್ವಾಗತಿಸಿ, ಲೋಕೇಶ್ ಊರುಬೈಲು ವಂದಿಸಿದರು.ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.












