ಸುಳ್ಯ:’ಜೀವನತೇಳುವ ಸುಳ್ಳು..ಎಲ್ಲಾ ಮುಗ್ದ ಮೇಲೆ ಅರ್ಥ ಆದೆ’…! ಬದುಕಿರುವಾಗ ಅರ್ಥ ಆಗದ ಹಲವು ವಿಚಾರಗಳು ಜೀವನ ಮುಗಿದ ಮೇಲೆ ಅರ್ಥ ಆಗುತ್ತದೆ. ಆವಾಗ ಕಾಲ ಮಿಂಚಿ ಹೋಗಿರುತ್ತದೆ ಎಂಬ ಸಂದೇಶ ನೀಡುವ ಅರೆಭಾಷೆ ನಾಟಕ ‘ಅಪ್ಪ’ ತಲೆಮಾರುಗಳ ಮಧ್ಯೆಯ ತೊಳಲಾಟವನ್ನು ಮತ್ತು ಅಪ್ಪ ಮಕ್ಕಳ ಮಧ್ಯೆಯ ಪ್ರೀತಿಯ ಅಗಾಧತೆಯನ್ನು ತೆರೆದಿಟ್ಟು ನೋಡುಗರ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತದೆ.ಅರೆಭಾಷೆಯ ಗ್ರಾಮ್ಯ ಸೊಗಡು ಮತ್ತು
ಲಾಲಿತ್ಯ ನಾಟಕವನ್ನು ಸೊಗಸಾಗಿಸಿದೆ.ಕಲಾವಿದ,ರಂಗನಿರ್ದೇಶಕ ಲೋಕೇಶ್ ಊರುಬೈಲು ರಚನೆ ಮತ್ತು ನಿರ್ದೇಶನ ಮಾಡಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿರ್ಮಿಸಿದ ಅಪ್ಪ ನಾಟಕದ ಮೊದಲ ರಂಗ ಪ್ರದರ್ಶನ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಮಣ್ಣನ್ನು ಪ್ರೀತಿಸುವ, ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡ, ಕೌಟುಂಬಿಕ ನೆಲೆಗಟ್ಟನ್ನು ಗಟ್ಟಿಯಾಗಿ ಅಪ್ಪಿಕೊಂಡ ಕುಟುಂಬದ ಯಜಮಾನ ಅಪ್ಪ. ಉನ್ನತ ಶಿಕ್ಷಣ ಪಡೆದು ಪಪೇಟೆಯ ಉದ್ಯೋಗವನ್ನೂ, ಆಧುನಿಕ ಬದುಕಿನ ವರ್ಣ ಜಗತ್ತನ್ನು ಬಯಸುವ ಮಗ. ಇವರ
ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿಯಾದ ಅಪ್ಪ ಮತ್ತು ಮಗನ ನಡುವಿನ ಸಂಬಂಧಗಳೇ ನಾಟಕದ ಕಥಾ ಹಂದರ.ಇವರ ಮಧ್ಯೆಯ ಆತ್ಮ ಸಂಘರ್ಷದ ಕಥೆಯನ್ನು ಅಪ್ಪ ನಾಟಕ ಹೇಳುತ್ತದೆ. ಮಕ್ಕಳು ತಂದೆ, ತಾಯಂದಿರ ಜೊತೆಯಲ್ಲೇ ಇದ್ದು ತಾನು ಮಾಡಿದ ಕೃಷಿ, ಭೂಮಿಯ

ವಾರಿಸುದಾರಿಯನ್ನು ಮಗ ಮುಂದುವರಿಸಬೇಕು, ತನ್ನ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಬಯಸುವ ಅಪ್ಪ, ಆಧುನಿಕ ಬದುಕನ್ನು ಬಯಸಿ ಅದನ್ನು ಅರಸಿ ಹೊರಡುವ ಮಗ.. ಅಪ್ಪನ ಮರಣದ ನಂತರ ಅಪ್ಪನ ಪ್ರೀತಿ, ಮಾತುಗಳು ಮಗನ ಸ್ಮೃತಿ ಪಟಲದಲ್ಲಿ ಪ್ಲಾಶ್ಬ್ಯಾಕ್ ಆಗಿ ಮತ್ತು ವಾಸ್ತವತೆಯೊಂದಿಗೆ
ನಾಟಕ ಮುಂದುವರಿಯುತ್ತದೆ. ಕೊನೆಗೂ ಮಗನೇ ಅಪ್ಪನಾಗುವ, ಅಪ್ಪನ ಜವಾಬ್ದಾರಿಯನ್ನು ಅರಿತು ಮಣ್ಣಿನೆಡೆಗೆ, ಕೃಷಿಯೆಡೆಗೆ ಮರಳುವುದರೊಂದಿಗೆ ನಾಟಕ ಕೊನೆಯಾಗುತ್ತದೆ.

ಅಪ್ಪನ ಪ್ರೀತಿ, ವಾತ್ಸಲ್ಯ, ಧೈರ್ಯ,ಅಭಯ,ಕರುಣೆ.. ಸುರಕ್ಷತೆ ಸಾಮಾಜಿಕ ಜವಬ್ದಾರಿ, ಸಾಲದ ಶೂಲದಿಂದ ಕುಟಂಬವನ್ನೂ, ರೋಗ ರುಜಿನ, ವನ್ಯ ಪ್ರಾಣಿಗಳ ಹಾವಳಿಯಿಂದ ಕೃಷಿ ರಕ್ಷಣೆಯ ಸವಾಲುಗಳನ್ನು ಎದುರಿಸುವ ಅಪ್ಪನೆಂಬ ಆಲದ ಮರದ ಕಥೆಯೇ ನಾಟಕದ ಸಂದೇಶ.ಇಡೀ ಕುಟುಂಬವನ್ನು ಹೆಗಲ ಮೇಲೆ ಹೊತ್ತು ಸಾಕಿ ಸಲಹುವ, ಸುರಕ್ಷಿತ ಕೈಗಳಲ್ಲಿ ಎದೆಗಪ್ಪಿಕೊಳ್ಳುವ ಕರುಣಾಮಯಿ.. ಎಲ್ಲರ ಭಾವ, ಭಾವನೆಗಳಿಗೆ ಶಕ್ತಿ ತುಂಬುವ ಅಪ್ಪನ ಬದುಕು ಒಂದೂವರೆ ಗಂಟೆಯ ನಾಟಕದಲ್ಲಿ ಅಪ್ಯಾಯಮಾನವಾಗಿ ಮೂಡಿ ಬಂದಿದೆ. ಪ್ರತಿ ಹಳ್ಳಿಯ ಕೃಷಿ ಕುಟುಂಬದಲ್ಲಿ ಕಂಡು ಬರುವ ಯಜಮಾನನೇ ಈ ನಾಟಕದ ಅಪ್ಪ. ಗ್ರಾಮೀಣ ಸೊಗಡಿನ ಅಚ್ಚ ಅರೆಭಾಷೆಯೇ ನಾಟಕದ ಇನ್ನೊಂದು

ಹೈಲೈಟ್ಸ್. ಗ್ರಾಮೀಣ ಜನರ ಬದುಕಿನ ನೈಜ ಚಿತ್ರಣವನ್ನು, ಮಾನವ ಸಂಬಂಧಗಳನ್ನು, ಕೃಷಿ ಬದುಕಿನ ತಲ್ಲಣಗಳನ್ನು ಸುಂದರವಾಗಿ ಪ್ರಸ್ತುತಪಡಿಸಲಾಗಿದೆ. ತೀರಾ ಸಾಮಾನ್ಯ ಕೃಷಿ ಕುಟುಂಬದ ಯಜಮಾನ ‘ಅಪ್ಪ’ನ ಪಾತ್ರದಲ್ಲಿ ರಾಜ್ ಮುಖೇಶ್ ಹಾಗೂ ಮಗನ ಪಾತ್ರದಲ್ಲಿ ವಿನೋದ್ ಮೂಡಗದ್ದೆ ಮನಮುಟ್ಟುವಂತೆ ಅಭಿನಯಿಸಿದ್ದಾರೆ.
ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅರೆಭಾಷಿಕರ ಗ್ರಾಮೀಣ ಜೀವನ, ಕೃಷಿ ಬದುಕು, ಆಚಾರ ವಿಚಾರ ಹಾಗೂ ಸಂಸ್ಕೃತಿಗಳ ವಾಸ್ತವ ಚಿತ್ರಣ ಅತ್ಯಂತ ನವಿರಾಗಿ ಪ್ರಸ್ತುತಪಡಿಸಲಾಗಿದೆ.
ಹಾಡು,ಜಾನಪದ ಹಾಡುಗಳು, ನೇಜಿ ಹಾಡುಗಳು ಅರೆಭಾಷೆಯಲ್ಲಿ ಮೂಡಿ ಬಂದಿದ್ದು, ನೃತ್ಯ, ಕೋಲಾಟಗಳು ನಾಟಕವನ್ನು ರಂಜನೀಯವಾಗಿಸಿದೆ.ನಾಟಕದ ಅಪ್ಪನ ಜೊತೆಗೆ ಅಜ್ಜಿ, ಸಣ್ಣಪ್ಪ, ದೊಡ್ಡಪ್ಪ, ಮಗ, ನೆರೆಮನೆಯ ಅಕ್ಕಂದಿರು, ಅಣ್ಣಂದಿರು, ಪಟೇಲರು, ವ್ಯಾಪಾರಿ ಹೀಗೆ ಎಲ್ಲರೂ ರಂಗವೇದಿಕೆಯಲ್ಲಿ ಗ್ರಾಮ್ಯ ಸೊಗಡನ್ನು ಸೊಂಪಾಗಿ ಮೂಡಿಸಿದೆ.

ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು ಹಾಗೂ ಎಲ್ಲಾ ಸದಸ್ಯರ ಸಹಕಾರದಲ್ಲಿ ನಿರ್ಮಿಸಿದ ಸಾಮಾಜಿಕ ನಾಟಕ ನ.30 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡನೇ ಪ್ರದರ್ಶನ ಕಾಣಲಿದೆ.
ನಾಟಕ ತಂಡ:
ರಚನೆ ನಿರ್ದೇಶನ: ಲೋಕೇಶ್ ಊರುಬೈಲ್,ವಿನ್ಯಾಸ: ಮಹೇಶ್ ಆಚಾರಿ ಹೊನ್ನಾವರ, ಸಂಗೀತ: ರೋಹಿತ್ ಮಲ್ಪೆ, ದಿವಾಕರ್ ಕಟೀಲ್, ಧ್ವನಿ : ಕಾವ್ಯವಾಣಿ ಕೊಡಗು, ಶಿವಪ್ರಸಾದ್ ಆಲೆಟ್ಟಿ,ಬೆಳಕು:ಪ್ರಶಾಂತ್ ಬೆಳ್ಳಾರೆ,
ಪ್ರಸಾಧನ- ಶಿವರಾಮ ಕಲ್ಮಡ್ಕ, ರಂಗ ನಿರ್ವಹಣೆ-ರಾಜ್ ಮುಕೇಶ್, ವಿನೋದ್ ಮೂಡಗದ್ದೆ ನಾಟಕ ಸದಸ್ಯ ಸಂಚಾಲಕರು: ಚಂದ್ರಶೇಖರ ಪೇರಾಲ್

ಕಲಾವಿದರು:ರಾಜ್ ಮುಖೇಶ್, ವಿನೋದ್ ಮೂಡಗದ್ದೆ, ಶಶಿಕಾಂತ್ ಮಿತ್ತೂರು,ಪ್ರಸನ್ನ ಅಚ್ಚಿಪಳ್ಳ, ಚೈತನ್ ಬೊಳ್ಳೂರು, ಸುನಿಲ್ ಅಜ್ಜಾವರ,ಯುವರಾಜ್ ಬಾಳೆಗುಡ್ಡೆ, ತಿರುಮಲೇಶ್ವರಿ ಅರ್ಬಡ್ಕ, ಪ್ರಾಪ್ತಿ ಆಲಂಕಲ್ಯ, ಅರ್ಪಿತಾ ಚೊಕ್ಕಾಡಿ, ಮೌರ್ಯ ನಾರ್ಕೋಡು, ಸುನಂದಾ ಶೆಟ್ಟಿ, ಗ್ರೀಷ್ಮಾ ಕೇದ್ಕಾರ್, ಗೌತಮ್ ಎಂ.ಬಿ., ಗೌತಮಿ ಬಂಗಾರಕೋಡಿ, ಕೆ.ಟಿ.ಭಾಗೀಶ್, ಚಂದ್ರಶೇಖರ ಪೇರಾಲ್, ನಿತ್ಯಾನಂದ ಮಲೆಯಾಳ, ಸೌಮ್ಯ ಆಲಂಕಲ್ಯ













