*ಚಂದ್ರಾವತಿ ಬಡ್ಡಡ್ಕ.
ಜೂನ್ ತಿಂಗಳ ಒಂದು ದಿನ ಫೋನ್ ಮಾಡ್ದ ನಮ್ಮ ಕುಸುಮಕ್ಕ ಮೌಂಟ್ ಅಬುಗೆ ಹೋಗುವ ಛಾನ್ಸ್ ಉಂಟು ಬರ್ತೀರಾಂತ ಕೇಳ್ದೋ. ತುಕ್ಕಿ ತಿರ್ಗಿಕೆ ನಾ ನಂಬರ್ ವನ್! ಏನ್ ಎತ್ತಾಂತ ಕೇಳದೆ ಆಯ್ತೂಂತ ಹೇಳ್ದೆ. ಛಾನ್ಸ್ ಸಿಕ್ಕಿಕನ ಊರ್ ಸುತ್ತೊಕೂಂತ ಹೇಳ್ವಂತದ್ ನನ್ನ ಪರ್ಸನಲ್ ಪಾಲಿಸಿ. ಆ ದಿನ ಏನೋ ಅರ್ಜೆಂಟ್ಲಿ ಇದ್ದ ಕಾರ್ಣ ಹೆಚ್ಚಿ ಇವರ್ಣೆ ಕೇಳದೆ ಫೋನ್ ಇಸಿದೆ. ಮತ್ತೆನ ಸೆರ್ತಿ ಸಿಕ್ಕಿಕಾಕನ ಎಂತ ಟೂರ್, ಯಾರ್ ಕಂಡಕ್ಟ್ ಮಾಡ್ದೂಂತ ಕೇಳಿಕನ ಬ್ರಹ್ಮಕುಮಾರಿಯವರೊಟ್ಟಿಗೆ ಹೋದು. ಅಲ್ಲಿ ರಾಷ್ಟ್ರ ಮಟ್ಟದ ಕೃಷಿ ಸಮ್ಮೇಳನಕೆಂತ ಹೇಳ್ದೊ. ನಂಗೇನ್ ಸೊಂತ ಕೃಸಿ ಇತ್ತ್ಲರೂ ಊರು ಸುತ್ತಿಬರಕಲೇಂತ ಹೊರ್ಟೆ.
ಎಲ್ಲಿಗಾರ್ ಹೋಕನ, ಅಂತೇಳ್ರೆ, ಟೂರು, ದೇವಸ್ಥಾನ, ಭಜನೆ, ಮತ್ತೊಂದು- ಇನ್ನೊಂದು ಕೆಲ್ಲ ಹೋದಾರ್ ಒಟ್ಟಿಗೇ ಹೋವ ಚಿಕಮಂಗೆ ಬಂದರೆನೋಂತ ಕೇಳದಿದ್ದರೆ ಹೇಂಗೆ? ಅವುಕೆ ಸಾ ಊರುಗಳ ನೋಡುವ

ಇಂಟ್ರೆಸ್ಟ್. ಅವು ಕೊಡಿಕಾಲ್ಲಿ ಇದ್ದರೆನೂ, ಚಿಕ್ಕಪ್ಪನೊಟ್ಟಿಗೆ ಕೇಳಿ ಹೇಳ್ನೇಂತ ಹೇಳ್ದೋ. ಮತ್ತೆ ಅಳ್ದ್ ಸುರ್ದು ಎಲ್ಲ ಆಗಿ ನಾ ಬನ್ನೆ, ಚಿಕ್ಕಪ್ಪ ಬಾದ್ಲೆಗಡಾಂತ ಸುದ್ದಿ ಬಾತ್. ಅಂದರೂ ಚಿಕಮಂಗೆ ಒಬ್ಬಂಗೆ ಬಾಕೆ ಅಷ್ಟ್ ಸಮ್ದಾನ ಇಲ್ಲೆ. ಚಿಕಪನ ಒಬ್ಬನನೇ ಹೇಂಗೇ ಬುಟ್ಟ್ ಹೋದು, “ನೀವೊಮ್ಮೆ ಬನ್ನಿ ಪೋಯಪ್ಪ, ಈಗ ಕೈಕಾಲ್ ಗಟ್ಟಿ ಇರಿಕನ ನೋಡಿಕಂಡ್ರೆ ಆತ್ಂತ” ಒತ್ತಾಯ ಮಾಡ್ದೊ. ಅವು ಹಂಞ ದಿನದ ಹಿಂದೆ ಪಂಡರಾಪುರ ಶಿರ್ಡಿ ಎಲ್ಲ ಹೋಗಿ ಬಂದ್ ಅದರ ಬೊಚ್ಚೆಲೇ ಸೆರಿ ಹೋಗಿತ್ಲೆ. ಇತ್ತಂದ, ನಾನೂ ಸರ್ದಾರ್ ವಲ್ಲಭ ಬಾಯ್ ಪಟೇಲ್ ಸ್ಟಾಚೂ, ಸ್ವಾಮೀ ನಾರಾಯಣ ದೇವಸ್ಥಾನ, ಸೋಮನಾಥೇಶ್ವರ ದೇವಸ್ಥಾನನೆಲ್ಲ ಇಂಟರ್ನೆಟ್ಲಿ ಹುಡ್ಕಿ ತೋರ್ಸಿ ಎಡ್ವಟೈಸ್ ಮಾಡ್ದೆ. ‘ನಾ ಬಾದೇ ಇಲ್ಲೇಂತ’ ಇದ್ದ ಚಿಕ್ಕಪ್ಪನ, ಚಿಕಮ ಒತ್ತಾಯ ಮಾಡಿಮಾಡಿಮಾಡಿ, ದುಡ್ಡು ಕೊಡಿಕೆ ಲಾಸ್ಟ್ ಡೇಟ್ ಇರಿಕಾಕನ ಒಂದು ಹದಾಕೆ ಚಿಕಪ ಮನ್ಸ್ ಮಾಡೀದೋ.
ರೈಲ್ಲಿ ಹೇಂಗೆ, 26 ಗಂಟೆ ಪ್ರಯಾಣ ಮಾಡಿಕನ ಉಂಬಕೆ ತಿಂಬಕೆ, ಮತ್ತೊಂದು ಇನ್ನೊಂದೂತ ಅವರ ಡೌಟುನೆಲ್ಲ ನಂಗೆ ತಿಳ್ದಾಂಗೆ ಸಮ್ದಾನ ಮಾಡಿ ಆಗೀತಷ್ಟೆ. ಅಷ್ಟೊತ್ತಿಗೆ ಬ್ರಹ್ಮಕುಮಾರಿ ಆಶ್ರಮಂದ ಫೋನ್ ಮಾಡಿ, ಚಿಕಪನೊಟ್ಟಿಗೆ “ನಿಮ್ಮ ದೋಸ್ತಿಗಳೆಲ್ಲ ಟು ಟಯರಲ್ಲಿ ಬುಕ್ ಮಾಡ್ತಾರೆ, ನಿಮ್ಗೂ ಅವ್ರೊಟ್ಟಿಗೆ ಮಾಡ್ಲಾಂತ” ಕೇಳ್ದೋ. “ಅದೆಂತ ಟೂ ಟಯರ್, ತ್ರಿ ಟಯರ್…. ನಾವು ಬೇರೆಬೇರೆ ಇರ್ದಾರ್ ಬೇಡೇ ಬೇಡ ನಾ ಬಾದೇಲೇಂತ” ವಾಪಾಸ್ ಮನ್ಸ್ ಚೇಂಜಿ ಆವಾಂಗೆ ಆತ್. ಕಡೆಗೆ ನಾನೇ ಅವುಕೆ (ಬಿ.ಕೆ) ಪೋನ್ ಮಾಡಿ ಬೇರೆಬೇರೆ ಏಕೇಂತ ಕೇಳ್ದೆ. ‘ಅಲ್ಲ ಎಲ್ಲರಿಗೆ ಲೋವರ್ ಬರ್ತ್ ಸಿಗುದು ಕಷ್ಟಾಂತ’ ಅತ್ತಂದ ಉತ್ತರ ಬಾತ್. ನಮ್ಮ ಆರ್ ಜನರ್ಲಿ ಇಬ್ಬೊರಿಗೆ ಲೋವರ್ ಬರ್ತ್ ಸಾಕ್. ಒಳ್ದವುಕೆಲ್ಲ ಯಾವ ಬರ್ತ್ ಆದರೂ ತೊಂದರೆ ಇಲ್ಲೆ, ಒಂದೇ ಬೋಗಿಲಿ ಒಟ್ಟಿಗೆ ಇರುವಾಂಗೆ ಬುಕ್ ಮಾಡೀಂತ ರಿಕ್ವೆಸ್ಟಿಕಂಡೆ.
ಅಂತೂ ಕಡೆಗೂ ಹೋವ ದಿನ ಬಾತ್. ರೈಲ್ ಹತ್ತಿಕೆ ಹಂಞ ಮುಂದೆ, ಎಲೆಕ್ಷನ್ಗೆ ಟಿಕೆಟ್ ಡಿಕ್ಲೇರ್ ಮಾಡುವಾಂಗೆ ನಮ್ಮ ನಮ್ಮ ಸೀಟ್ ನಂಬರ್ ಡಿಕ್ಲೇರ್ ಮಾಡ್ದೋ. ಯಾರ್ಯಾರಿಗೆ ಯಾವ ಯಾವ ಬೋಗೀಂತ ಗೊತ್ತಾತ್. ನಾವು ಇದ್ದ ಒಟ್ಟು 22 ಜನ ನಾಲ್ಕೈದ್ ಬೋಗಿಗಳ್ಲಿ ಹಂಚಿ ಹೋಗೀದೋ. ನಮ್ಮ ಸೆಟ್ಟ್ನ ಐದಾರ್ ಜನ ಒಂದೇ ಬೋಗಿಲಿ ಇದ್ದೋ. ಮಂಗ್ಳೂರುಂದ ರೈಲ್ ಹತ್ತಿಕೆ ಅಂತಾ ಬಂಗ ಏನ್ ಆತ್ಲೆ. ಅಂತೂ ಹನ್ನೆರ್ಡ್-ಹದಿಮೂರ್ ದಿನಕ್ಕೆ ಆಗುವ ಲಗೇಜ್ಗಳೆಲ್ಲ ಹೊತ್ತ್ಕಂಡ್ ರೈಲ್ ಒಳಗೆ ಬಿದ್ದೋ. ನಾ ಎಲ್ಲಿ, ನಾ ಎಲ್ಲೀಂತ ಕೇಳ್ದ ಎಲ್ಲವುಕೂ ಅವರವರ ಜಾಗೆ ತೋರ್ಸಿ ಕಡೆಗೂ ಸೆಟ್ಲ್ ಆಕನ ರೈಲು ಸುರತ್ಕಲ್ಗೆ ಎತ್ತೀತ್.

ಸೀಟ್ ನಂಬರ್ಗಳ ನೋಡ್ರೆ ಒಂದು ಮಾತ್ರ ಲೋವರ್ ಬರ್ತ್. ಮತ್ತೆಲ್ಲ, ಮಿಡ್ಲ್, ಅಪ್ಪರ್. ಚಿಕ್ಕಪ್ಪನ ಲೋವರ್ ಬರ್ತ್ಲಿ ಕುದ್ರುಸಿದೆ. ಕುಸುಮಕ್ಕಂಗೆ ರೈಲ್ಲಿ ಓಡಾಡಿ ಅಭ್ಯಾಸ ಇದ್ದರ್ಂದ ಅವರ ಹೆಸರಿಲಿ ಇದ್ದ ಅಪ್ಪರ್ ಬರ್ತ್ಗೆ ಅಟ್ಟಕೆ ಹತ್ತಿದಾಂಗೆ ಪುರುಪುರು ಹತ್ತಿ ಕುದ್ದೋ. ಚಿಕಮಂದ್ ಮಿಡ್ಲ್, ಕೋಮಲಕ್ಕ ಮತ್ತೆ ನಂದ್ ಅಪ್ಪರ್. ಚಂದ್ರಕ್ಕ ನಾ ಹೇಂಗೆ ಇದ್ಕೆ ಹೋದೂಂತ ಕೇಳ್ದವುಕೆ ಸಮ್ದಾನ ಮಾಡಿ ನೇಲ್ಸಿಕಂಡಿದ್ದ ಅವರ ಸೀಟ್ನ ಸೆಕ್ಕ್ಸಿ ಆತ್. ಇದ್ಕೆ ಹತ್ತುದೇಂಗೆಂತ ಅವುಕೆ ದೊಡ್ಡ ಟೆನ್ಷನ್ ಆಗ್ಯೋತ್. ಅವು ತುಂಬ ಚುರ್ಕು. ಇಲ್ಲಿ ಒಂದು ಕಾಲಿಸಿ, ಇಲ್ಯೊಂದು ಕಾಲ್ ಇಸಿ ಹೀಂಗೆ ಕುದ್ದ್ ಅತ್ತಕೆ ಜಾರೀಂತ ಹೇಳ್ದೆ. ನೆಟ್ಟಂಗೆ ಕುದ್ರಿಕೆ ಆದ್ಲೆ, ಇದ್ ಎಂತ ಸೀಟ್ಂತ ಪಿರಿಪಿರಿ ಮಾಡಿಕಂಡ್ ಬೇರೆ ಉಪಾಯ ಮಲ್ಗಿದೊ ಅತ್ತ. ಕೆಳಗೆ ಬರ್ತ್ನವರಕ್ಕಲೆ ರಿಕ್ವೆಸ್ಟ್ ಮಾಡೊನೋಂತ ಹೇಳ್ರೆ, ಕೆಳಗೆ ಯಾರ್ ಇತ್ಲೆ. ಇನ್ನ್ ಎಡೆಲಿ ಎಲ್ಯಾರ್ ಹತ್ತಿ “ನಮ್ಮ ಬರ್ತ್ಂತ” ರಗಳೆ ಮಾಡ್ದು ಬೇಡಾಂತ ಅವರವರ ಬರ್ತ್ಲೇ ಮಲ್ಕ್ಯೊಂಡೋ. ಚಿಕ್ಕಮ್ಮ ಮಿಡ್ಲ್ ಇದ್ದರೆ, ಕೋಮಲಕ್ಕ ಮೇಲೆ. ಅವರ ಹತ್ತ್ಸಿಕೆ ಇನ್ನೂ ಬಂಗ ಆತ್. ಎಲ್ಲೆಲ್ಲ ಕಾಲಿಸಿ ಹೇಂಗೆ ಮೇಲೆ ಹೋಕೂಂತ ಥಿಯರಿ ಹೇಳ್ದೆ. ಅವು ಒಮ್ಮೆ ಟ್ರೈ ಮಾಡಿ ಎರ್ಡ್ ಸ್ಟೆಪ್ಪ್ ಹೋದೋ. ಆಗುದಿಲ್ಲ ಚಂದ್ರಕ್ಕಾಂತ ಇಳ್ದೋ.
ತಲೆ ಬಿಸಿ ಆಗ್ಯೋತ್, ಎಂತರ ಮಾಡ್ದೂಂತ. ಕುದ್ದ್ಕಂಡ್ ಬೊಳ್ಪು ಮಾಡೊಮೋಂತೇಳ್ರೆ ನಮ್ಮಕ್ಕಲೆ ಒಟ್ಟು ಒಂದೇ ಲೋವರ್ ಬರ್ತ್ ಇದ್ದದ್. ಅದ್ ಚಿಕಪಂಗೆ ಬೇಕು. ಮತ್ತೆ ವಾಪಾಸ್ ಎಲ್ಲೆಲ್ಲ ಹೇಂಗೇಂಗೆ ಕಾಲಿಸೊಕೂಂತ ನಾನೇ ಹತ್ತಿ ಡೆಮೋ ತೋರ್ಸಿದೆ. ಹಾಂಗೆ ಕಾಲಿಸಿ ಹೇಂಗೋ ಸೀಟಕ್ಕಲೆ ಎತ್ತಿದವರ ದೂಡಿಬುಟ್ಟೆ ಅತ್ತ. ಚಿಕಮ ಮುಂದೇ ಅವರ ಸೀಟ್ನ ಸೆಕ್ಕ್ಸಿಕನ ಸಂಕೋಲೆ ಗಟ್ಟಿ ಉಟ್ಟಾಂತ ಎರ್ಡೆರ್ಡ್ ಸೆರ್ತಿ ಎಳ್ದ್, ಜಗ್ಗಿ ನೋಡಿದೋ. ಇದ್ ಬಿದ್ದರೇಂತ ಸಂಸಯನನೂ ಹೇಳಿಕಂಡೋ. ಏನ್ ಆದ್ಲ ಚಿಕ್ಕಮ್ಮ, ರೈಲ್ಲಿ ಇಷ್ಟೆಲ್ಲ ಸೀಟ್ ಉಟ್ಟು ಯಾದ್ ಬೀತ್ಲೆ, ಮಲ್ಗೀಂತ ಹೇಳ್ದೆ. ಎಲ್ಲವು ಅವರವರ ಸೀಟ್ಲಿ ಜೋಜಿ ಮಾಡ್ದ ಮೇಲೆ. ನಾ ನನ್ನ ಸೀಟ್ಗೆ ಹೋದೆ. ಮಲ್ಗಿ ಒಂಚೂರ್

ಹೊತ್ತಾಗುಟಷ್ಟೆ. ಮಲ್ಗಿದ ಚಿಕಮ, ಚಂದ್ರಕ್ಕ ನಾ ಇಳ್ದನೇಂತ, ಇಳ್ದೋ. ನಂಗೆ ಬೆಚ್ಚ ಆತ್. ಎಂತಾತ್ಂತ ಕೇಳ್ದೆ. ಅಲ್ಲ ಏನಿಲ್ಲೆ, ನಾ ಇಳ್ದೇಂತ ಹೇಳ್ವೆ. ಬಾತ್ರೂಂಗೆ ಮೆನಿ ಹೋಕೇನೋಂತ ನಾ ಸುಮ್ಮನಾದೆ. ಇವು ವಾಪಾಸ್ ಸೀಟ್ನ ಸೆಕ್ಕ್ಸಿದ ಸಂಕೋಲೆ ಗಟ್ಟಿ ಉಟ್ಟಾಂತ ಎಳ್ದ್ ಟೆಸ್ಟ್ ಮಾಡ್ತಿದ್ದೋ. ನಂಗೆ ಕುಸಿ ಆತ್, ಇವು ಸ್ವಂತ ಆಗಿ ಮಿಡ್ಲ್ ಬರ್ತ್ಗೆ ಹತ್ತಿಕೆ ಇಳಿಯಕೆ ಕಲ್ತೊಂತ. ರೈಲ್ ಇಳ್ದ ಮೇಲೆ ಎಂತೋ ಮಾತಾಡಿಕನ ಚಿಕಮ ಹೇಳ್ದ್, ಅವುಕೆ ಸಡನ್ನೆ ಮೇಲೆ ಇದ್ದ ಕೋಮಲಕ್ಕ ಮನಿ ಬಿದ್ದರೇಂತ ಟೆನ್ಷನ್ ಆತ್ಗಡ ಅದ್ಕೆ ಇಳ್ದದ್ಂತ! ಅತ್ತ ನೋಡ್ರೆ ಕೋಮಲಕ್ಕಂಗೆ ಹತ್ತಿಕೆ ಹೇಂಗೋ ಹತ್ಯಳೆ. ಬೊಳ್ಪುಗೆ ಇಳಿದು ಹೇಂಗೇಂತ ಎತೆ ಆತಿತ್ತ್ಗಡ.
ರೈಲ್ಲಿ ತಿಂಬಕೆ ಬೇಕರೆ ತಿಂಡಿ ಮಾಡಿ ಹಿಡ್ಕಣೀಂತ ಹೇಳಿದೋ. ನಾ ಎಂತ ತಕಂತ್ಲೆ. ಒಂದು, ಉದಾಸೀನದ ಮಾರಿ, ಎರ್ಡ್ನೇದ್ ಕೆಲ್ಸ, ಕೆಲ್ಸ, ಕೆಲ್ಸಂದಾಗಿ ನಂಗೆ ಸೆರಿ ತಯಾರಿ ಮಾಡಿಕಂಬಕೆ ಆತ್ಲೆ. ಕಡೆಗೆ ಹಂಞ ಬೇಕರಿ ತಿಂಡಿ, ಉಂಡೆಗಳೆಲ್ಲ ಪೇಕ್ ಮಾಡಿಕಂಡೆ. ನಮ್ಮೊಟ್ಟಿಗಿದ್ದ, ಚಿಕಮ, ಕುಸುಮಕ್ಕ ಮತ್ತೆ ಕೋಮಲಕ್ಕ ಮೂರೂ ಜನನೂ ಚಪಾತಿ, ಟೋಮೇಟೋ ಪೊಜ್ಜಿ, ಹೊಡಿ ಪೊಜ್ಜಿ, ಹಾಳಾಗಾದಾಂಗೆ ಕೊದ್ದ್ಸಿ ಆರ್ಸಿದ ಗೈಪು ಹೀಂಗೆಲ್ಲ ಹಿಡ್ಕಂಡೀದೋ. ನಂಗೆ ಗೇರೆಂಟಿ ಉಟ್ಟು. ಯಾರ್ ಕಟ್ಟಿಕಂಡ್ರೂ ನಂಗೆ ಅದರ್ಲಿ ಪಾಲ್ ಇರ್ದೂಂತ. ನಾವು ಬೆಳ್ಜರ್ಂದ ಹನೀಸ್ ಮುಂದೆ ತೇಳ್ರೆ ನಾಕ್ ಕಾಲ್ ಗಂಟೆಗೆ ರೈಲ್ ಹತ್ತಿದ್. ಹಾಂಗೆ ನಂಗೆ ಬೊಳ್ಪಾಕನ ಲೇಟ್ ಆಗೀತ್. ಎದ್ದ್, ತಿಂದ್ ಕುದ್ದುರ್ದ್ ಬುಟ್ರೆ ರೈಲ್ಲಿ ಬೇರೆಂತ ಕೆಲ್ಸ? ಅದ್ಕೆ ನಾ ಕಣ್ಣ್ ಮುಚ್ಚಿ ನಿಲ್ಗಿದಾಂಗೆ

ಮಲ್ಗೀದೆ. ಇವೆಲ್ಲ ಮಾಮೂಲು ಹೊತ್ತುಗೆ ಎದ್ದ್, ಚಂದ್ರಕ್ಕನಿಗೆ ನಿದ್ದೆ, ಅವರಿಗೆ ತಿಂಡಿ ಇಡುವುದು ಬೇಡಾಂತ ಹೇಳಿ ತಮಾಸ್ ಮಾಡಿಕಂಡ್ ಬುತ್ತಿ ಗಂಟ್ ಬಿಚ್ಚ್ತ್ತಿದ್ದೋ. ಅವೆಲ್ಲ ತಿಂದ್ ಕೈ ಬಾಯಿ ಎಲ್ಲ ತೊಳ್ದ್ ಆದ ಮೇಲೆ ಮೆಲ್ಲಂಗೆ ನಾ ಬಾಯಗೊಳ್ಸಿಕಂಡ್ ಎದ್ದೆ. ಅಷ್ಟೊತ್ತಿಗೆ ಚಿಕಮ ರೈಲ್ಲಿ ಕೆಲವರ ದೋಸ್ತಿ ಮಾಡಿಕಂಡೀದೋ. ನಮ್ಮಾಂಗೆ ಮಂಗ್ಳೂರೂಂದ ರಾಜಸ್ಥಾನಕೆ ಹೋವ 70 ಜನರ ತಂಡ ಒಂದು ನಮ್ಮೊಟ್ಟಿಗೆ ರೈಲ್ ಹತ್ತೀದೋ. ಅದರ್ಲಿ ಕೆಲವು ಸುಳ್ಯ ಗೊತ್ತಿದ್ದವು, ಇನ್ನ್ ಕೆಲವು ಸುಳ್ಯಲಿ ನಂಟ್ರ್ ಇರವು, ಮತ್ತೆ ಕೆಲವು ಜನ ಸುಳ್ಯಲೇ, ಅದೂ ನಮ್ಮ ಏರಿಯಾಲೇ ಇದ್ದವುನೂ ಇದ್ದೋ. ಹಾಂಗಾಗಿ ನಾವುಗೆ ಒಟ್ಟಿಗಿದ್ದವು ಸ್ಟ್ರೇಂಜರ್ಗಾಂತ ಅನ್ಸಿತ್ಲೆ. ಅವರೊಟ್ಟಿಗೆ ಪಳ್ಮೆ ಹೊಡಿಯಕೆ ಚಿಕಮ ಹೋಗೀದೋ. ನಾ ಎದ್ದಾಕನ ಕುಸುಮಕ್ಕನೂ ಕೋಮಲಕ್ಕನೂ ಇದ್ದೋ. ತಿಂಡಿ ಕೊಡೀಂತ ಪ್ಲೇಟ್ ಹಿಡ್ದ್ ಕುದ್ದೆ. ಕೋಮಲಕ್ಕ ತಂದ ಊರಗಲದ ಚಪಾತಿನೂ ಅದರೊಟ್ಟಿಗಿದ್ದ ಒಳ್ಳ ರುತೀನ ಟೋಮೇಟ್ ಪೊಜ್ಜಿನೂ ಸಮಾ ತಿಂದೆ. ಇನ್ನೂ ತಿನ್ನಿ ಇನ್ನೂ ತಿನ್ನಿಂತ ಕೊಟ್ಟವೆ. ಎಷ್ಟ್ಂತ ತಿನಕ್. ನೋಡ್ರೆ ಅವು ಇಪ್ಪತ್ತೈದ್ ಚಪಾತಿ, ಚಿಕಮ 25, ಕುಸುಮಕ್ಕ (ಅವು ಜಾಣೆ, ಲೆಕ್ಕಾಚಾರ ಮಾಡಿ) 11 ಚಪಾತಿ ತಂದೊಳೋ. ಚಪಾತಿ ಉತ್ಸವ ಮಾಡಕ್, ಅಷ್ಟಿತ್ತ್. ಒಳ್ದದರ ಇಸಿಕಮೋ, ಕೆಲವೊಮ್ಮೆ ತಿಂಬಕೆ ಎಂತ ಸಿಕ್ಕದಿರಿಕನ ತಿನಕ್ಂತ ಕೋಮಲಕ್ಕನ ಸಮ್ದಾನ ಮಾಡಿ ಒಳ್ದ ಚಪಾತಿನ ಗಂಟ್ ಕಟ್ಟಿ ಇಸಿದೋ. ಅಷ್ಟೊತ್ತಿಗೆ ರೈಲೊಳಗೆ ಟೂರ್ ಹೋಗಿದ್ದ ಚಿಕಮ ಬಂದ್, ಓ .. ಎದ್ದಳರಿಯಾ ಚಪಾತಿ ತಿನೀಂತ ಬುತ್ತಿಗೆ ಕೈ ಹಾಕಿಕೆ ಹೊರ್ಟೋ. ನಾ ತಿಂದೆ, ಕೋಮಲಕ್ಕ ಕೊಟ್ಟೋಂತೇಳಿಕನ ಇಷ್ಟ್ ಉಟ್ಟು ಇದರ ಎಂತ ಮಾಡ್ದೂಂತ ಬೆಚ್ಚ ಆತ್ ಅವುಕೆ. ಅಷ್ಟೊತ್ತಿಗೆ 2 ಟಯರ್ ಎಸಿಲಿ ಇರವುಕೆ ತಿಂಡಿ ಆತ್ಲೆಗಡ, ಅವುಕೆಂತ ತಿಂಡಿ ಸಿಕ್ಕಿತ್ಲೆಗಡ ಮತ್ತೆ ಅವು ಎಂತ ತಾತ್ಲೆಗಡಾಂತೇಳುವ ಬ್ರೇಕಿಂಗ್ ನ್ಯೂಸ್ ಬಾತ್. ಪಟ್ಕ ಎದ್ದ ಚಿಕಮ ಚಪಾತಿ ಗಂಟ್ ಚೆಲ್ಕ್ಯಂಡ್ ಪುಸ್ಕ ಡಿ5 ಬೋಗಿಗೆ ಹೋದೋ. ಅವು ಹೇಂಗಾರ್ ಸುಮಾರ್ ಚಪಾತಿ ಖಾಲಿ ಮಾಡಿಕಂಡೋ. ಮೂರೊತ್ತೂ ಎಂತ ಸಾವ್ ಚಪಾತಿನೇ ತಿಂಬೋದೂಂತತಿರ್ಮಾನಕೆ ಬಂದ್ ಊಟ ರೈಲ್ಲೇ ತಕಂಡೋ. ಕತ್ತಲೆಗೆ ನಾ ವಾಪಾಸ್ ಕೋಮಲಕ್ಕನ ಬುತ್ತಿಗಂಟ್ಲಿದ್ದ ಚಪಾತಿನೇ ತಿಂದೆ. ಎಷ್ಟ್ಂತ ತಿಂಬಕಾದೆ. ಸುಮಾರ್ ಒಳ್ತ್. ಅಟ್ಟಿನ ಹಾಂಗೆ ಕಟ್ಟಿಸಿದೋ. ಇದನ್ನು ಇಲ್ಲೇ ಬಿಸಾಡ್ವಾಂತ ಹೇಳ್ದವರ, ನಾನೇ,

ಅಯ್ಯಯ್ಯೋ… ತಿನ್ನೋ ಪದಾರ್ಥ ಬಿಸಾಡುದುಂಟಾ, ಹೋದಲ್ಲೆಲ್ಲಾದ್ರೂ ತಿಂಡಿ ಪಸಂದ ಆಗದಿದ್ರೆ ತಿನ್ನುವಾಂತ ಇವು ಇಡಿಕೆ ಹೋಕನ ತಡ್ದೆ. ಉಂಬಕನ ಒಂದಗಳು ಗೆಂಜಿ ಬಿದ್ದರೂ ಹೆರ್ಕಿ ತಿಂಬ ಜಾತಿ ನಾ. ಹಾಂಗಿರಿಕನ ಇಷ್ಟ್ ಚಪಾತಿ ಇಡ್ದುಂತೇಳಿಕನ ಹೊಟ್ಟೆ ಉರ್ತ್. ಪಾಪದ ಕೋಮಲಕ್ಕ ಆಯ್ತೂಂತ ವಾಪಾಸ್ ಕಟ್ಟಿಸಿದೋ.
ರೈಲ್ ಇಳ್ದ ಮೇಲೆ ಹೋದಲೆಲ್ಲ ನಾವು ಫ್ರೆಶ್ಶಪ್ಪಾದ್ದ್, ಉಂಡದ್, ನಿತ್ತದ್ ಎಲ್ಲ ಬ್ರಹ್ಮಕುಮಾರಿ ಆಶ್ರಮಗಳ್ಲೇ. ಅಲ್ಲೆಲ್ಲ ಕಾಪಿತಿಂಡಿ ಊಟ ಸಿಕ್ಕಿದರ್ಂದಾಗಿ ಚಪಾತಿ ಡಿಮಾಂಡಿಲ್ಲದೆ ಕುದ್ದೀತ್. ಇನ್ನ್ ಇದರ ವಿಲೇವಾರಿ ಮಾಡ್ತಲರೆ ಬಂಗ ಆದೂಂತ ಹೇಳಿ ಇಡಿಕೆ ಹೋಕನ, ಏ.. ಬೇಡಾ ನಾಯಿಗಳು ಸಿಕ್ಕಿದ್ರೆ ಹಾಕುವಾಂತ ಕುಸುಮಕ್ಕನ ಸಜೆಷನ್ ಬಾತ್. ಹಾಂಗಾಗಿ ವಿಲೆವಾರಿ ಪೋಸ್ಟ್ಪೋನ್. ನಾವು ರೈಲ್ ಇಳ್ದ್, ಅಹಮದಾಬಾದ್ಂದ ಪೋರಬಂದರ್ಗೆ ಹೊರ್ಟೀದೋ. ಪೋರಬಂದರ್ ಆಶ್ರಮಲಿ ನಿತ್ತ್ ಬೊಳ್ಪುಗೆ ಕಾಪಿಗೀಪಿ ಆಗಿ ಊರ್ ಸುತ್ತಿಕೆ ಹೊರ್ಟ್ ಬಸ್ಸಕ್ಕಲೆ ನಿತ್ತಕಂಡಿರಿಕನ ನಾಯಿಗ ಕಂಡೋ. ನಾಯಿಗ ಒಳ್ಳ ಪುಡ್ಕನೆ ಪುಡ್ಕನೆ ಆಗಿ ಲಾಯ್ಕಿ ಇದ್ದೋ. ನಾಯಿ ಕಂಡಾಕನ ನಾರಾಯಣ ದೇವ್ರ ಕಂಡಷ್ಟೇ ಕುಸಿಲೀ ಏ…… ಕೋಮಲಕ್ಕ…… ನಾಯಿ…. ಚಪಾತಿ ಎಲ್ಲುಂಟೂಂತ, ಬಸ್ಸ್ಲಿ ಇದ್ದ ಚಪಾತಿ ತಕಂಡ್ ‘ಪಣವು ಕಿಣಿ ತಾರಾಯಿ ಮಲ್ಲೆಂತೇಳುವ’ ಗಾದೆನಾಂಗೆ ಚಪಾತಿ ಹಿಡ್ಕಂಡ್ ಹೋದೆ. ಹಿಂದಿ ಬಾಸೆಲಿ ‘ಕೂರ ಕೂರಾಂತ’ ಕರಿದು ಹೇಂಗೇಂತ ಗೊತ್ತಾಗದೆ ಕುತ್ತೇ… ಲೇಲೋ…. ಅಂತೇಳಿಕಂಡ್, ಕಚ್ಚಿರೆಮನೀಂತ ಹೆದರಿ ಹೆದರಿ ದೂರಲಿ ಒಂದು ಚಪಾತಿ ತೆಗ್ದ್ ಹಾಕಿದೆ. ನಾಯಿ ಕ್ಯಾರೇ ಮಾಡ್ತ್ಲೆ. ನಮ್ಮ ಇಲ್ಲಿನ ಪಾಪದ ನಾಯಿಗಳ

ಮೋರೆಲಿ ಇರುವಾಂಗೆ ಒಂದು ಯೇವುರದ ನೆಗೆ ಸಾ ಇಲ್ಲೆ ನಾಯಿನ ಮೋರೆಲಿ. ಮೂಸಿ ಸಮೆತ ನೋಡದೆ, ನಾಯಿ ತಿರ್ಗಿ ಹೋತ್. ಬಸ್ಸ್ಲಿ ಇದ್ದವೆಲ್ಲ ನೆಗಾಡ್ದೋ. ನಾನೂ ಅವರರೊಟ್ಟಿಗೆ ನೆಗಾಡ್ದೆ. ಮತ್ತೆಂತ ಮಾಡ್ದು. ಇನ್ನೊಂದು ನಾಯಿಗೆ ತಕಂಡೋಗಿ ದಂಡ್ಸಿದೆ. ಆ ನಾಯಿನೂ ನನ್ನ ಒಮ್ಮೆ ನೋಡಿ ಮುಸುಂಡ್ ತಿರ್ಗ್ಸಿ, ಬೀಲ ಆಡ್ಸಿಕಂಡ್ ಹೋತ್. ಯಬ್ಬಾ ಪೋರ್ಬಂದರ್ ನಾಯಿಗೆ ಹಾಂಕಾರಪ್ಪಾಂತ ತಿರ್ಮಾನಕೆ ಬಂದೆ! ಚಪಾತಿ, ರೋಟಿ, ಪೇಟ್ಲಾ, ಪರೋಟಾಗಳ ಕಾರ್ಬಾರದ ಊರುಲಿ ಇರುವ ನಾಯಿಗಳಿಗೆ ನಮ್ಮ ಸುಳ್ಯದ ಚಪಾತಿ ಒಗ್ಗಿತ್ಲೆ ಕಂಡದೆ..!

(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ ಹಾಗು ಅಂಕಣಕಾರರು. ವೃತ್ತಿಪರ ಅನುವಾದಕಿ).