*ಚಂದ್ರಾವತಿ ಬಡ್ಡಡ್ಕ.
ಕುತ್ಪಾಜೆ ಸಂಜೀವಣ್ಣನೊಟ್ಟಿಗೆ ಪೋನ್ ಮಾತ್‌ಕತೆನ ಆಡಿಯೋ ಒಂದು ಮಾಡಿದೋ. ಆರ್.ಕೆ. ಬಟ್ರ ಉಮೇದ್‌ಲಿ. ಅದ್, ಒಬ್ಬ ಅಣ್ಣ, ತಂಗೆಗೆ ಮೊದುವೆ ಹೇಳಿಕೆ ಕೊಡುವ ವಿಷಯ. ಆ ಆಡಿಯೋ ಏನೋ ವೈರಲ್ ಆಗಿ ನಂಗೇ ವಾಪಾಸ್ ಏಳ್ ಸರ್ತಿ ಬಂದುಟು. ಅದರ್ಲಿ ಹೊಸ ನೆಕ್ಲೀಸ್ ಮಾಡ್‌ಸ್ಯಳೆ, ಹಾಕಿಕೆ ಒಂದು ಚಾನ್ಸ್ ಸಿಕ್ಕಿತ್ಂತ ಹೇಳ್ದ್ ಹೆಚ್ಚಿನವುಕೆ ಕುಸಿ ಆಗಿರೊಕು. ಅದರ್ಂದ ಮೇಲೆ ಯಾರಾರ್ ಎಲ್ಯಾರ್ ಸಿಕ್ಕಿರೆ ದಾರಿಲೋ, ಪೇಟೆಲೋ, ಜಂಬರಲೋ ‘ಓ… ಕುಂಞಕ್ಕ ನೆಕ್ಲೀಸ್ ಹಾಕಿತ್ಲೆನೋಂತ’ ಕೇಳ್ದು ಉಟ್ಟು. ಎಲ್ಲಿಗಾರ್ ಹೊರ್ಡಿಕನ ಆ ನೆಕ್ಲೀಸ್ ಒಂದು ಕಟ್ಟಿಕಣೀಂತ ನಮ್ಮ ಬಜನೆ ಅಕ್ಕಂದರ್ ಕಾಲೆಳ್ದವೆ. ಅದಾದಮೇಲೆ ಸುಮಾರ್ ಆಟಿ ಉತ್ಸವಗ, ಜಂಬರಗಳಿಗೆಲ್ಲ ಹೋಗೀದೆ. ಕೆಲವು ಕಡೆ ನನ್ನೊಟ್ಟಿಗೆ ಇರ್ತಿದ್ದ ಸುಮತಿ, ನೊಡೂಲಿ, ನೀವು ಫಂಕ್ಷನ್‌ಗೆ ಹೋಗ್ವಾಗ ನೆಕ್ಲೀಸ್ ಹಾಕ್ಲಿಲ್ವಾಂತ ಡಯಲಾಗ್ ಹಾಕ್ತಿತ್ತ್.
ಹಾಂಗೆ ಮೊನ್ನೆ ಮೋಂಟಟ್ಕ ಪ್ರಶಾಂತಣ್ಣ ಅವರ ಮನೆ ಒಕ್ಲು ಕಾಗದ ವಾಟ್ಸಾಪ್ ಮಾಡಿ ಫೋನ್ ಮಾಡೀದೋ. ಮನೆ ಒಕ್ಲಿಗೆ ಬನ್ನಿ, ಬಾಕನ ಆ ನೆಕ್ಲೀಸ್ ಹಾಕಣೀಂತ. ಮನೆಒಕ್ಲು ದಿನ ಹೊಸಮನೆಲಿ ನಮ್ಮ ಬಜನಾ ತಂಡದ ಬಜನೆ ಇತ್ತ್. ನಮ್ಮ ಹರ್ಷಕ್ಕ ಯಾವಯಾವ ಬಜನೇಂತ ಪಟ್ಟಿ ಹಾಕಿಕನ ಒಟ್ಟಿಗೆ ವಾಯಿಸ್ ಮೆಸೇಜ್‌ನೂ ಹಾಕಿ, ಎಲ್ಲವೂ ಲಾಯ್ಕಿಲಿ

ಹೊರ್ಟ್ ಬನ್ನಿ, ಯೂನಿಫಾರಂ ಬೇಡ, ಪೊರ್ಲುನ ಸೀರೆ ಉಟ್ಟ್ ಸಿಂಗಾರ ಮಾಡಿಕಂಡ್ ಬನ್ನೀಂತ ಹೇಳೀದೋ. ನಾ ಮೆಲ್ಲ ಎಡೇಲಿ ಕೇಳ್ದೇ, ನೆಕ್ಲೀಸ್ ಹಾಕೊಕೋ ಹರ್ಷಕ್ಕಾಂತ. ತಕಣೀ… ಎಲ್ಲವೂ ಎದ್ದ್‌ಕಂಡೋ. ಕೆಲವು ಜನ ಮೊನ್ನೆ ಮೊದುವೆಗೆ ಹೋಕೆ ತಕಂಡ ನೆಕ್ಲೀಸ್ ಹಾಕೀಂತೇಳ್ರೇ, ಮತ್ತೆ ಕೆಲವು ಅಕ್ಕಂದರ್ ನೆಕ್ಲೀಸ್ ಮಾತ್ರ ಅಲ್ಲ ಸೊಂಟಪಟ್ಟಿನೂ ಕಟ್ಟಿಕಣೀಂತ. ಪ್ರಶಾಂತಣ್ಣನ ಹೆಣ್ಣ್ ಮಮತಕ್ಕ ನಮ್ಮ ಬಜನೆ ತಂಡಲಿ ಒಳೋ. ಹಾಂಗಾಗಿ ಅದ್ ನಾವುಗೆ ನಮ್ಮದೇ ಕಾರ್ಯಕ್ರಮದಾಂಗೇಂತ ಹಂಞ ಹೆಚ್ಚಿನ ಉಮೇದ್‌ಲಿ ನಾವೆಲ್ಲ ಹೊರ್ಟ್ ಹೋಗೀದೋ.
ನಾ ಕುಸಾಲ್‌ಗೆ ಇರ್ಲೀಂತ; ಯಾಗೋಳು ಎಲ್ಲವೂ ತಮಾಸ್ ಮಾಡ್ವೆಂತ ಮೊನ್ನೆ ಮೌಂಟ್ ಅಬುಗೆ ಹೋಗಿರಿಕಾಕನ ಅಲ್ಲಿ ಬೆಟ್ಟದ ಮೇಲೆ ಜೈನ್ ಟೆಂಪಲ್ ಹಕ್ಕಲೆ ಒಂದು ಅಂಗ್ಡಿಂದ ತಕಂಡ ನೆಕ್ಲೀಸ್ ಹಾಕಂಡ್ ಹೋಗಿದೆ. ಎಲ್ಲವೂ ಲಾಯ್ಕಿಲಿ ಹೊರ್ಟ್, ಚಿನ್ನ-ಬಣ್ಣ ಎಲ್ಲ ಹಾಕಂಡ್ ಬಂದೀದೋ. ನಮ್ಮ ಪಲ್ಲತ್ತಡ್ಕ ಜಯಶ್ರೀ ಅಕ್ಕ ಇತ್ತೀಚೆಗೆ ನಮ್ಮೊಟ್ಟಿಗೆ ಬಜನೆಗೆ ಬಾಕೆ ಸುರು ಮಾಡ್ದ್. ಅವು ಬಜನೆ ತಂಡಂದ ಮತ್ತೆ ನಂಟ್ರನೆಲೆಲಿನೂ ಕಾರ್ಯಕ್ರಮಕ್ಕೆ ಬಂದವು. ಹಾಂಗೆ ಬೇಗ ಬಂದೀದೋ. ನಮ್ಮ ತಂಡದ ಪೈಕಿ ಸುರೂಗೆ ಪೆರ್ಜೆ ಗಾಯತ್ರಕ್ಕ ಬಂದೊಗಡ. ಇಲ್ಲರೆನೇ ಲಾಯ್ಕಿ ತಲೆಬಾಚಿ, ಪೊರ್ಲುನ ಸೀರೆ ಉಟ್ಟು, ಗಂಟ್ಲ್‌ಲಿ ಬೇಕಾದಷ್ಟ್ ಉದ್ದ, ಗಿಡ್ಡ, ಹದಾಂತ ಎರ್ಡ್ಮೂರು ಮಾಲೆ ಹಾಕಿ ಒಳ್ಳ ಲಕ್ಷ್ಮಿನಾಂಗೆ ಕಾಂಬವು, ಆ ದಿನ ಇನ್ನೂ ಲಾಯ್ಕಿಲಿ ಸೋಕುನ ನಕ್ಲೀಸ್ ಕಟ್ಟಿಕಂಡ್ ಬಂದೀದೋ. ಹಿಂದೆನ ದಿನ ನಮ್ಮ ಬಜನೆ ವಾಟ್ಸಾಪ್ ಗ್ರೂಪುಲಿ ನಕ್ಲೀಸ್ ಬಗ್ಗೆ ಬಾರೀ ಚರ್ಚೆ ಆಗೀತಲೆ, ನಮ್ಮ ಜಯಶ್ರೀ ಅಕ್ಕಂಗೆ ತಲೆಬಿಸಿ ಆಗ್ಯೋತ್‌ಗಡ. ಏಕೇಂತೇಳ್ರೆ, ಛೇ… ಬಜನೆವೆಲ್ಲ ನೆಕ್ಲೀಸ್ ಹಾಕೊಕುಕಂಡದೆ, ನಾ ಎಂತ ಮಾಡ್ದೂಂತ. ಮತ್ತೂ ಸಮ್ದಾನ ಮಾಡಿಕಂಡೋಗಡ, ಹೇಂಗೂ ಒಂದೂ ಸಣ್ಣ ನೆಕ್ಲೀಸ್ ಉಟ್ಟಲ್ಲ ಇದೇ ಸಾಕ್ಂತ (ಸಣ್ಣದೊಂದು ಅವರ ಗಂಟ್ಳ್‌ಲಿನೂ ಇತ್ತ್). ಅಷ್ಟೊತ್ತಿಗೆ ಗಲಗಲ ಮಾಡಿಕಂಡ್ ನಾ, ಬಾರತ್ಯಕ್ಕ, ಕೋಮಲಕ್ಕ, ವೇದಕ್ಕ ಎಲ್ಲ ಎತ್ತಿದೋ. ಎದ್‌ರ್ ಸ್ವಾಗತಕ್ಕೆ ನಿತ್ತಿದ್ದ

ಮಮತಕ್ಕ ದಂಪತಿಗ ಮತ್ತೆ ಪ್ರಶಾಂತಣ್ಣನ ಅಕ್ಕ ಅನಿತಕ್ಕ ಎಲ್ಲವು ನಮ್ಮ ಕಂಡ್ ಕುಸೀಲಿ ಮಾತಾಡ್ಸಿದೋ, ನೆಕ್ಲೀಸ್ ಹಾಕಂಡ್ ಹೋದ್ದಕೆ ಒಂದು ಎರ್ಡ್ಮೂರು ನಿಮಿಷ ಎಲ್ಲವೂ ಸೇರಿ ಜೋರು ನೆಗಾಡ್ದೋ. ಈ ಜಯಶ್ರೀ ಅಕ್ಕಂಗೆ ಮತ್ತೂ ಬೆಚ್ಚ ಆಗಿರೊಕು. ಮತ್ತೆ ಬಂದ ನಮ್ಮ ತಂಡದ ಎಲ್ಲವರ ಕುತ್ತಿಗೆಲಿನೂ ನಕ್ಲೀಸ್ ಇಲ್ಲದ್ದ್ ನೋಡಿ ಜಯಶ್ರೀ ಅಕ್ಕಂಗೆ ಸಮದಾನ ಆತ್ಂತ ಮತ್ತೆ ಅವು ಹರ್ಷಕ್ಕನೊಟ್ಟಿಗೆ ಮೆಲ್ಲ ಹೇಳಿಕಂಡೊಗಡ.
ಲಾಯ್ಕಿಲಾಯ್ಕಿ ಹೊರ್ಟ್ ಹೋದ ಮೇಲೆ ಪಟ ತೆಗಿಯದೆ ಇರಿಕೆ ಆದೆನಾ. ಬೇಕಾದಷ್ಟ್ ಸೆಲ್ಪೀಗಳೂ, ಗ್ರೂಪ್ ಪಟಗಳೂ ತಕ್ಕಂಡೋ. ಬಜನೆ ಮಾಡಿ, ಉಂಡ್ ಬಂದ ಮೇಲೆ ಕುದ್ದ್‌ಕಂಡ್ ನೋಡ್ರೆ ಎಲ್ಲ ಪಟಂಗಳ್ಲಿ ಎಲ್ಲವೂ ಲಾಯ್ಕಿಲಾಯ್ಕಿ ಬಂದೊಳೋ. ಬೇಕಾದಷ್ಟ್ ಸ್ಟೇಟಸ್ ಹಾಕ್ಕೊಂಡೋ. ಅದರ್ಂದ ಒಂದು ಪಟ ತೆಗ್ದ್ ವಾಟ್ಸಾಪ್ ಡಿಪಿ ಹಾಕ್ಕಂಡಾತ್. ಆಡಿಯೋ ಕೇಳ್ದವೆಲ್ಲ ಪಟಗಳ ನೋಡಿ ‘ ಅದ್ ಇದೇ ನೆಕ್ಲೀಸಾಂತ’ ಕೇಳಿ ನೆಗಾಡಿ ಆತ್. ಇನ್ನ್ ಫೇಸ್ಬುಕ್‌ಲಿ ಹಾಕಣದಿದ್ದರೆ ಸೈಕಲ್ ಕಂಪ್ಲೀಟ್ ಆದು ಹೇಂಗೆ? ಹಾಂಗೇ ಹಾಕ್ಯಾತ್. ಚಂದ, ಕ್ಯೂಟ್, ಲವ್ಲೀ, ಮತ್ತೊಂದು-ಇನ್ನೊಂದೂಂತ ಕಮೆಂಟ್‌ಗಳ ಎಡೇಲಿ ನಮ್ಮ ಕುಂಟ್‌ಕಾಡ್ ಪುನೀತ್ ಡಾಟ್ರ್, “ಓ ಅತ್ತಿಗೆ… ಇನ್ನೆರ್ಡ್ ಮಾಲೆ ನೇಲ್ಸಿಕಣಿ… ನಾಳ್ದ್ ಹಬ್ಬಕೆ ಮರಹಾಕುದ್ಲೆ, ನಿಮ್ಮನೇ ನಿಲ್ಸಿ ಕೈ ಮುಗ್ದವೆ!!” – ಹೀಂಗೆ ಕಮೆಂಟ್ ಮಾಡೀದೋ. ಅದ್ಕೆ ನಾನೂ ಎಂತದೋ ಅದೇ ದಾಟಿಲಿ ಉತ್ತರ ಕೊಟ್ಟೆ. ಹಬ್ಬಕೆ ಮರಹಾಕುದೂಂತ ಹೇಳಿಕನ ನಾವು ನಮ್ಮ ಮನೆಲಿ ಮರ ಹಾಕ್ತಿದ್ದದ್, ಅದ್ಕೆ ಸಿಂಗಾರ ಮಾಡ್ತಿದ್ದ ರೀಲ್ ಎಲ್ಲ ಕಣ್ಣ್‌ಮುಂದೆ ಓಡ್ದಾಂಗಾತ್. ಏನ್ ಗಮ್ಮತ್, ಏನ್ ಕುಸಿ ಬಲೇಂದ್ರನ ಸಿಂಗಾರ ಮಾಡ್ದು. ಹೇಳಿ ಸುಖಮನಿ ಇಲ್ಲೆ. ಕಿರ್ಸಿ ಹಿನ್ನಲೆಲಿ ಬಂದವುಕೆಲ್ಲ ಹಬ್ಬಂತೇಳ್ರೆ ಅದ್ ದೀಪಾವಳಿ. ವರ್ಷಕ್ಕೆ ಎರ್ಡೇ. ಒಂದು ಹಬ್ಬ ಇನ್ನೊಂದು ಬಿಸು. ಈ ಹಬ್ಬ ಬಾಕೆ ಒಂದು ತಿಂಗಳ ಮುಂದೆನೇ ಬಾಳೆ ಬೊಳ್ಳಿ ಮಾಡಿಕೆ ಬಾಳೆ ರಂಬೆಗಳ ಒಳ್ಂಗಿಕೆ ಹಾಕುವಲ್ಲಿಂದ ನಮ್ಮ ಹಬ್ಬಕೆ ಜೋಡ್ಸಾಟ ಸುರಾತಿತ್ತ್. ಮತ್ತೆ ಬಾಳೆಗೊನೆ ಕಡ್ದಿಸುದು, ಅವ್ಲೆಕಿ ಮಿಜಿದು, ಸಾಮಾನ್ ತಾದು, ಜಾಲ್‌ಗೆ ಸೆಗ್‌ಣಿ ಗುಡ್ಸುದು ಇದೆಲ್ಲ ಹೇಂಗೂ ಉಟ್ಟಲೆ.
ಅಮಾಸೆ ದಿನ ಬೆಳ್ಜರ್‌ಗೆ ಕಾಡ್‌ಗೆ ಹೋಗಿ ಕಡ್ಕಂಡ್ ಬಾವ ಬಲೇಂದ್ರ ಮರನ ಅಪ್ಪ ಅದೇ ದಿನ ಕತ್ತಲೆಗೆ ತೊಳ್ಸಿಕಟ್ಟೆ ಹಕ್ಕಲೆ ಮರಊರಿಕೆ ಬೇಕಾದಷ್ಟೇ ದೊಡ್ಡ ಹೊಂಡ ತೆಗ್ದ್ ಊರ್ತಿದ್ದೋ. ಅಲ್ಲಿಂದ ನಮ್ಮ ಹಬ್ಬ ಸುರು. ಕತ್ತಲೆಗೆ ತಂತ್ ಪಿರ್ಕಾರ ಎಂತಾರೊಂದು ಮಾಲೆ ಹಾಕಿಬುಟ್ರೆ ಮರ್ದಿನ ಬಲೇಂದ್ರಂಗೆ ಸಿಂಗಾರ ಮಾಡ್ದು ಒಂದು ದೊಡ್ಡ ಈವೆಂಟ್! ನಮ್ಮನಮ್ಮ ಸಕ್ತ್ಯಾನುಸಾರ, ಬುದ್ಧಿವಂತಿಕೆಗೆ ತಕ್ಕಾಂಗೆ ಬಲೇಂದ್ರಂಗೆ ಸಿಂಗಾರ ಆತಿತ್ತ್. ಈಗ ಮರ ಹಾಕವೇ ಕಮ್ಮಿ. ಮರ ಹಾಕವುಕೆ ಬಲೇಂದ್ರ ಸಿಂಗಾರದ ಪಂತನೂ ಸುರಾಗುಟು. ಯಾರ ಬಲೇಂದ್ರ ಲಾಯ್ಕಿ ಸಿಂಗಾರ ಆಗುಟೋ ಅವುಕೆ ಉಡ್ಗಿರೆ ಸಿಕ್ಕಿದೆ.

ನಮ್ಮಲ್ಲಿ ಜೋಡಿ ಮರ ಹಾಕ್ತಿದ್ದೋ. (ಕೆಲವು ಕಡೆ ಒಂಟಿ ಹಾಕುವೆ) ಬಲೇಂದ್ರನ ಸಿಂಗಾರಕ್ಕಾಗಿಯೇ ಹೂನ ದೈ ನಟ್ಟ್ ಬೆಳ್ಸುದು. ಇಜ್ಜೆಲ್‌ಲಿ, ಚೂಟುಮೊಣ್ಣ್ ಗುಡ್ಡೆಲಿ, ತೋಟಲಿ, ಗುಡ್ಡೆಲಿ ಅಲ್ಲಿಇಲ್ಲಿ ಇರುವ ಎಲ್ಲಾ ಹೂವುಗ, ಮೈನ್ ಆಗಿ ಚೆಂಡ್ ಹೂವು, ಕೋಳಿಜುಟ್ಟು, ಹಂದಿಬೊಳ್ಳಿ ಕಾಯಿ, ಕೇನೆ ಹೂವು, ದಾಸಾಳ, ಗೋರಟೆ, ಪಿಂಗಾರ, ತೇರ್‌ಹೂವು, ನಾಯಿಕರ್ಂಬು ಎಲ್ಲ ಮಾಲೆ ಕಟ್ಟಿ ಏರ್ಸ್‌ತಿದ್ದೋ. ನಮ್ಮ ಅಪ್ಪಂದ್ ಬೇರೇ ಟ್ರಿಕ್ಕ್. ಬಾಳೆರಂಬೆನ ಸಿಗ್ದ್, ಒಳಾ..ಗೆನ ಬಿಳಿಬಾಗದರ ತೆಗ್ದ್ ಕೊಯ್ದ್, ಅದರ ಒಂದು ಕರೆಲಿ ಹಲ್ಲ್‌ಹಲ್ಲ್ ಕತ್ತರ್ಸಿ, ಆದಾರಕ್ಕೆ ಬಲೇಂದ್ರ ಮರಕ್ಕೆ ಅತ್ತಇತ್ತ ಬೆದ್‌ರ್‌ನ ತಟ್ಟೆ ಕಟ್ಟಿ ಬಾಳೆರಂಬೆನ ಲಾಯ್ಕಿ ಮೇಲೆಂದ ಕೆಳಗೆಮುಟ್ಟ ಒಟ್ಟ್‌ತ್ತಿದ್ದೋ. ಯಾದೇ ಹೂವುನ ಮಾಲೆ ಇತ್ಲರೂ ಬಲೇಂದ್ರ ಬಿಳಿಬಿಳಿ ಬಣ್ಣಲಿ ಎದ್ದ್ ಕಾಂಬೊತ್ತಿತ್ತ್. ಅದ್ಕೆ ಮೇಲೆಂದ ಹೂವುಗಳ ಮಾಲೆ ಎಲ್ಲ ಹಾಕಿ, ಅತ್ತ ಇತ್ತ ಕ್ರಾಸ್‌ಗೆ ಎರ್ಡ್ ತಟ್ಟೆಕಟ್ಟಿ ಕೈ ಮಾಡಿ, ಅದರ ಕೊಡಿಗೆ ಕೆಂಪುಬಣ್ಣದ ನಾಯಿಕರ್ಂಬ್ ಹೂವು ಸೆಕ್ಕ್‌ಸ್‌ತ್ತಿದ್ದೋ. ತಲೆಗೆ ಚೆಂಡ್ ಹೂವು ಸೆಕ್ಕ್‌ಸಿದ ಪರ್ಬಾಳೆ (ಪ್ರಭಾವಳಿ) ಇಸಿ, ಕೊಡೆ ಬುಳ್ಗಿ ಕಟ್ಟಿ ಅದರ ಕಡ್ಡಿಗಳಿಗೆ ನೂಲುಲಿ ಚುರ್ದ ಹಣ್ಣಡ್ಕೆ ನೇಲ್ಸಿ ……… ಎಷ್ಟೊಂದು ಅಸ್ಥೆಲಿ, ತಾಳ್ಮೆಲಿ ಸಿಂಗಾರ ಮಾಡ್ತಿದ್ದೋ… ಇದರ ನೋಡಿಕೆ ಎರ್ಡ್ ಕಣ್ಣ್ ಸಾಕಾತ್ತಿತ್ಲೇ. (ಈಗಾರ್ ನಾಕ್ ಕಣ್ಣ್ ಉಟ್ಟು, ಕನ್ನಡ್ಕ ಇಸಿಕಂಡ್ರೆ) ಆ ಸಮಯಲಿ ನೆರೆಕರೆನವರೊಟ್ಟಿಗೆ ಒಂದು ನಮುನೆನ ಅಘೋಷಿತ ಪಂತ ಇರ್ತಿತ್ತ್. ಯಾರ ಬಲೇಂದ್ರ ಲಾಯ್ಕಿಂತ. ನಮ್ಮ ಮನೆಕೆಲ್ಸ ಎಲ್ಲ ಆದ ಮೇಲೆ ಹಿಂಬೊತು ಅತ್ತ-ಇತ್ತ ಮನೆಗಳಿಗೆ ಒಂದು ರೌಂಡ್ ಹೋಗಿ ಯಾರೆಲ್ಲ, ಹೇಂಗೆಲ್ಲ ಬಲೇಂದ್ರನ ಸಿಂಗಾರ ಮಾಡ್ಯೊಳೋಂತ ನೋಡಿ ಬರ್ತಿದ್ದೋ. ನಮ್ಮಲ್ಲಿ ಇಲ್ಲದ್ದೇನಾರ್ ಬೇರೆಕಡೆ ಇದ್ದರೆ ಬರುವ ವರ್ಸಕೆ ಪಾಯಿಂಟ್ ನೋಟ್ ಮಾಡಿಕಂಬೊತ್ತಿದ್ದೋ.
ಹೀಂಗೆ ಒಂದು ವರ್ಸ ಹೂವುಗೆ ಬರ್ಗಾಲ ಬಂದೀತ್. ಎಲ್ಲಕಡೆ ಹೂವು ಇತ್ಲೆ. ಅಂತಾ ಸಮಯಲಿ ನಮ್ಮ ದೊಡ್ಡಕ್ಕ ಹೊಸ ಐಡಿಯಾ ಮಾಡೀತ್. ಅದ್ ಟೈಲರ್ ಕೆಲ್ಸ ಮಾಡ್ತಿತ್ತ್. ಹಾಂಗಾಗಿ ಬಣ್ಣದ ಕಾಗದನ

ಹೂಮಾಲೆನಾಂಗೆ ಹೊಲ್ದ್, ಬಲೇಂದ್ರಂಗೆ ಬೇರೆಬೇರೆ ಬಣ್ಣದ ಕಾಗದಲಿ ಮಾಡ್ದ ಸಿಂಗಾರ ನಮ್ಮ ಊರುಲಿ ಸೂಪರ್ ಹಿಟ್ ಆಗೀತ್. ಪಾಪ ಬೇರೆವು ಬಣ್ಣದ ಕಾಗದ ತಂದರೂ ಹೊಲಿಯಕೆ ಎಲ್ಲ ಮನೆಗಳ್ಲಿ ಹೊಲ್ಗೆ ಮಿಸನ್ ಇತ್ಲೆಲೇ. ಈಗಾರ್ ಸಾಧಾರ್ಣ ಎಲ್ಲ ಮನೆಗಳ್ಲಿ ಉಟ್ಟುತೇಳೊಮೋ. ಹೀಂಗೆಲ್ಲ ಸಿಂಗಾರ ಮಾಡಿ ಕತ್ತಲೆಗೆ ಚಿಬುಳೆಲಿ ದೀಪ ಇಸಿ ಅಕ್ಕಿಕಾಯಿ ಇಸಿ, ಅವುಲೆಕ್ಕಿ ಹಾಕಿ, ಬಲೇಂದ್ರನ ಕರ್ದ್ “ಪೊಲಿಕೊಂಡ್ ಬಲಾ ಬಲೇಂದ್ರ, ಹರಿಯೇ ಚಿ(ಸಿ)ರಿಯೇ” ಹೇಳಿ ಕೂ… ಹಾಕಿ ಸಂಭ್ರುಮ ಮಾಡ್ದ ಬಲೇಂದ್ರನ ಮೂರ್ನೇ ದಿನ ಇಜ್ಜೆಲ್ಂದ ಎದ್ರ್‌ಸಿ ಚೋಡಿಕರೆಲೆ ತಕಂಡೋಗಿ ಇಸ್ತಿದ್ದೋ. ಮೂರ್ ದಿನ ಸರ್ವಸ್ವನೇ ಆಗಿದ್ದ ಬಲೇಂದ್ರನ ಜಾಲ್ಂದ ಎದ್ರುಸುದು ಬಯಂಕರ ಬೇಜಾರದ ಸಂಗತಿ ಆಗ್ತಿತ್ತ್.
ಒಂದ್ ಸರ್ತಿ ಮನೆಲಿ ಅಪ್ಪ ನಾಳೆ ಬಲೇಂದ್ರ ಕೀಳ್ದುಂತ ಹೇಳ್ದು ನನ್ನ ಕೆಬಿಗೆ ಬಿದ್ದ್, ನಾ ಅಪ್ಪನೊಟ್ಟಿಗೆ ಬಲೇಂದ್ರನ ಕೀಳ್ದು ಬೇಡೇಬೇಡಂತ ಹಟಮಾಡ್ದೆ. ಆ ಗಳ್ಗೆಗೆ “ಆತ್ ಚೆಂದುಕುಟ್ಟೀ ಕೀಳ್ದುಲೆ ಬಲಾ, ಈಗ ಹೋಗಿ ಮಲ್ಗ್ಂತ” ಸಮ್ದಾನ ಮಾಡೀದೋ. ಅದೇನೋ ಸಿಕ್‌ಸ್ತ್ ಸೆನ್ಸ್ ಕಂಡದೆ, ಮೊರ್ದಿನ ಬೆಳ್ಜರ್‌ಗೇ ನಂಗೆ ಎಚ್ಚಿರ್ಕೆ ಆತ್. ಆಗೆಲ್ಲ ಎದ್ದಾಂಗೆ ಹೋಗಿ ನಿಲ್ಲುದು ಬಲೇಂದ್ರನ ಎದ್‌ರೇ. ನೋಡ್ರೆ ಅಪ್ಪ ಬಲೇಂದ್ರನ ಪೊಕ್ಕುಸ್ತಿದ್ದೊ. ಅಯ್ಯೋದೇವ್ರೇ.. ಬೇಜರಾಗಿ ಬೊತ್ತ್. ಓಡಿ ಹೋಗಿ ಬೇಡಾಂತೇಳಿ ಪ್ರತಿಭಟನೆ ಮಾಡ್ದೆ. ಯಾರ್ ಕೇರ್ ಮಾಡುವೆ? ಅಪ್ಪ ಅವರಷ್ಟಕೆ ಬಲೇಂದ್ರನ ಬೆನ್ನ್ ಮೇಲೆ ಇಸಿ ಒಬ್ಬನೇ ಶೋಭಾಯಾತ್ರೆ ಹೊರ್ಟೋ. ನಾನೂ ಮೆಲ್ಲ ಕೊತ್ತಿನಾಂಗೆ ಕಣ್ಣ್‌ಲಿ ನೀರೀಳ್ಸಿಕಂಡ್, ದುಕ್ಕ್‌ಡ್ಸಿಕಂಡ್ ಅಪ್ಪನ ಹಿಂದೇ ಹೋದೆ. ಚೋಡಿಕರೆಲಿ ಬೆನ್ನ್‌ಮೇಲೆ ಇದ್ದ ಬಲೇಂದ್ರನ ಇಳ್ಸಿ ಇಸಿ ತಿರ್ಗಿ ನೋಡಿಕನ ಉರಿಯೊಳುನಾಂಗೆ ಕಣ್ಣ್‌ಲಿ ನೀರ್ ಅರ್ಸಿಕಂಡ್ ನಾ ನಿತ್ತೀದೆ. ಅಪ್ಪಂಗೂ ನನ್ನ ನೋಡಿ ಬೇಜಾರಾಗಿರೊಕು. ತಿರ್ಗಿ ಬಾಕನ ಅಪ್ಪ ನನ್ನ ಹೆಗಲ್ ಮೇಲೆ ಕುದ್ದ್‌ರ್ಸಿ ವಾಪಾಸ್ ಕರ್ಕಂಡ್ ಬಂದೀದೋ.
ಈಗ ಗದ್ದೆ ಇಲ್ಲೆ. ಹಟ್ಟಿಲಿ ಒಂದು ಹಸ್ ಕರ್ ಮಾತ್ರ ಒಳಾದ್, ಕಾಡ್‌ಲಿ ಮರ ಸಿಕ್ಕುದುಲೆ(ಗಡ), ಹಾಂಗೆ-ಹೀಂಗೇಂತ ಮರ ಹಾಕುದು ಅಪ್ಪನ ಕಾಲ ಮುಗಿಯಕನ ನಿತ್ತ್ ಹೋಗುಟು! ಹುಳಿದೋಸೆ ಅಪ್ಪದಿಟ್ಟ್, ಬಾಳೆಹಣ್ಣ್ ಯಾರಿಗೆ ಬೇಕು? ಪಟಾಕಿ ಮಾತ್ರ ಇಜ್ಜೆಲ್‌ಲಿ ಒಸಿ ಸಬ್ದ ಮಾಡ್ದೆ!
“ನೀವುಗೆ ದೀಪಾವಳಿ ಹಬ್ಬ ಒಳ್ಳದ್ ಮಾಡಲಿ. ದೀಪಗಳ ಆವಳಿ ದೀಪಾವಳಿ. ತೇಳ್ರೆ ದೀಪಗಳ ಸಾಲ್. ಎಲ್ಲವರ ಬೊದ್ಕ್‌ಲಿನೂ ಸುಖಸಂತೋಷ ದೀಪಗಳ ಸಾಲ್‌ನಾಂಗೆ ಹರ್ದ್ ಬರ್ಲಿ.”

(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ವೃತ್ತಿಪರ ಅನುವಾದಕಿ)