ಚಂದ್ರಾವತಿ ಬಡ್ಡಡ್ಕ.
ಈ ವಾರ ನನ್ನ ಮಾಸ್ಟ್ರ್ಗ ತೀರಿ ಹೋದೋ. ಒಬ್ಬ ನನ್ನ ಕೈ ಬೆರ್ಳ್ ಕೊಡಿಲಿ ಅಕ್ಕಿ ಮೇಲೆ ಅಕ್ಷರ ಬರ್ಸಿ ಬರ ಹಿಡ್ಸಿದವು. ನಮ್ಮ ಬಡ್ಡಡ್ಕ ಶಾಲೆನ ಸುರೂನ ಮಾಸ್ಟ್ರ್, ಹೆಡ್ ಮಾಸ್ಟ್ರ್ ಆಗಿದ್ದ್ ಸುಮಾರ್ ಮೂವತ್ತ್ ವರ್ಸ ಕೆಲ್ಸ ಮಾಡ್ದವು. ನಮ್ಮ ಊರುಗೆ ಅವು ಸರ್ವೀಸ್ಲಿ ಇರಿಕನ, ಪಿಂಚಿಣಿ ಆದ ಮೇಲೆನೂ, ಆಗೊಳು, ಈಗೊಳು. ಯಾಗೋಳೂ ಹೆಡ್ಮಾಸ್ಟ್ರೇ. ಅವರ ಮನೆಗೆ ಎಲ್ಲವು ಹೇಳ್ದು ಹೆಡ್ಮಾಸ್ಟ್ರ ಮನೆಂತೇಳಿ. ಬಡ್ಡಡ್ಕ ಅಪ್ಪಯ್ಯ ಗೌಡ್ರು ಸುರು ಮಾಡ್ಡ ನಮ್ಮ ಸಾಲೆನ ಕಟ್ಟಿ ಬೆಳ್ಸಿದವು, ವಾಸಪ್ಪ ಮಾಸ್ಟ್ರ್. ಇವರ ಬಗ್ಗೆ ಬಡ್ಡಡ್ಡ ಶಾಲೆನ ಹೊಸ ಕಟ್ಟೊಣದ ಒಕ್ಲ್ ಬಗ್ಗೆ ಬರ್ದ ಅಂಕಣಲಿ ಬರ್ದೀದೆ. 95 ವರ್ಸ ಬಾಳಿ ಬದ್ಕಿ ಮೊನ್ನೆ ಮೂರ್ನೇ ತಾರೀಕ್ನಂದ್ ತೀರಿಹೋದೋ. ಒಮ್ಮೆ ಹೋಗಿ ಮಾತಾಡ್ಸಿ ಬರೊಕೂಂತ ಸುಮಾರ್

ಐದಾರ್ ವರ್ಸಂದ ಗ್ರೇಸಿಕಂಡಿದ್ದ್ ಕಡೆಗೂ ನಾ ಹೋತ್ಲೆ. ಮನೆಗೆ ಹೋಕನೆಲ್ಲ ಒಂದಲ್ಲರೆ ಒಂದು ಕಾರಣಂದಾಗಿ ಇನ್ನೊಮ್ಮೆ ಬಾಕನ ಪೋಯಿಂತ ಹೇಳಿಹೇಳಿ ಕಡೆಗೂ ಹೋತ್ಲೆ. ಒಮ್ಮೆ ನಾನು ಅಕ್ಕನು ಹೊರ್ಟವು ಸಾ ಏನೋ ಕಾರಣಕ್ಕೆ ಕಡೇ ಗಳ್ಗೆಲಿ ಇನ್ನೊಮ್ಮೆ ಪೋಯೀಂತ ಕೇನ್ಸಲ್ ಮಾಡ್ದೋ. ಅವು ತೀರಿಹೋದೋಂತ ಸುದ್ದಿ ಬಾಕನ ನನ್ನ ಮುಸುಂಡುಗೆ ನಾನೇ ಹೊಡ್ಕೊಣೊಕೂಂತ ಆತ್. ಯಾರಾರ ನೋಡೊಕೂ ಮಾತಾಡೊಕೂಂತ ಮನ್ಸ್ಗೆ ಬಂದರೆ ಕೂಡ್ಲೆ ಹೋಗಿ ಬುಡೊಕು.
ಇನ್ನೊಬ್ಬ ನಾ ಬಿಕಾಂ ಓದಿಕನ ಕಾಸ್ಟಿಂಗ್ ಪಾಠ ಹೇಳ್ದವು. ಶ್ರೀಕೃಷ್ಣ ಭಟ್. ಇಡೀ ಸರ್ವೀಸ್ಲಿ ಒಂದೇ ಒಂದು ರಜೆಹಾಕದೆ ಕೆಲ್ಸ ಮಾಡ್ದ್ ಇವರ ಪೆರ್ಮೆ. ಅವರ ಅಪ್ಪ ತೀರಿ ಹೋದಂದ್ನೂ, ಆ ದಿನ ಅವು ಮಾಡಿಕೆ ಇದ್ದ ಪಾಠಗಳ ಮಾಡಿಯೇ ಹೋದವು. ಲಾಯ್ಕಿಲಿ ಪಾಠ ಮಾಡ್ತಿದ್ದೊ. ಮಾತ್ ಕಮ್ಮಿ. ಯಕ್ಷಗಾನಂತೇಳ್ರೆ ಇಷ್ಟ. ಅದರ ಪೋಷಕರಾಗಿದ್ದವು. ಅದ್ ಒಳ್ಳದ್, ಇದ್ ಕೆಟ್ಟದ್, ಹಾಂಗೆ ಮಾಡಿಕೆ ಬೊತ್ತ್, ಹೀಂಗೆ ಮಾಡೊಕೂಂತ ಹೇಳ್ದರ ಮೇಲೆಲ್ಲ ನಂಬಿಕೆ ಇತ್ಲೆ. ಅವು ಭರ್ಣಿ-ಕಿರ್ತಿಕೆ ದಿನನೇ ಕೆಲ್ಸಕೆ ಸೇರ್ದ್ ಗಡ. ಭರ್ಣಿ ಕಿರ್ತಿಕೆಗೆ ಒಳ್ಳ ಕೆಲ್ಸ ಮಾಡಿಕೆ ಬೊತ್ತೂಂತ ಹೇಳವುಕೆ, ಒಳ್ಳ ಕೆಲ್ಸನ ಒಳ್ಳ ರೀತಿಂದ, ಒಳ್ಳ ಮನ್ಸ್ಂದ ಮಾಡ್ರೆ ಎಲ್ಲ ಒಳ್ಳದಾದೇಂತ ತಿಳ್ಸಿಕೆ ಸ್ವತ ಅವ್ವೇ ಉದಾರ್ಣೆ ಆದವು. ಇವು ಅವರ ಎಪ್ಪತ್ತೈದ್ನೇ ವರ್ಸಲಿ ತೀರಿಹೋದೋ. ನನ್ನ ಈ ಇಬ್ಬೊರೂ ಮಾಸ್ಟ್ರ್ಗಳೂ ಸೊರ್ಗಕ್ಕೇ ಹೋಗಲಿ, ನಾರಾಯಣ!

ಕಾಂತಾರಾಂತೇಳುವ ಪಿಂಗಾರ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ (ಹೊಂಬಾಳೆಂತೇಳ್ರೆ ಪಿಂಗಾರ) ಕಾಂತಾರ ಸಿನ್ಮಾ ನೋಡೊಕೂಂತ ಗ್ರೇಸಿಕಂಡಿದ್ದೆ. ಮೊನ್ನೆ ಆ ಪಂಜುರ್ಲಿ ದೆವ್ವನೇ ನಂಗೆ ಸಿನಿಮಾಗೆ ಹೋಕೆ ಅನ್ಕೂಲ ಮಾಡಿ ಕೊಟ್ಟತ್ಂತ ಹೇಳಕ್. ಸಿನಿಮಾಗೆ ಪೋಯಿ ಎಂ ಟೀಂ ಹೇಳ್ದ ಮಕ್ಕಳಿಗೆ(ಅಕ್ಕ, ಅಣ್ಣನ) ಹಂಞ ತೆರ್ಕ್ (ರಶ್ಶ್) ಕಮ್ಮಿ ಆಗಲಿ ಮತ್ತೆ ಪೋಯಿ, ಈಗ ತಿಕೆಟ್ ಸಿಕ್ಕುದ್ಲೆಗಡಂತಾ ಹೇಳೀದೆ. ಆದರೆ ಮೊನ್ನೆ ಅದ್ಯಾವ ಮಾಯಕಲಿಯೋ, ನೆನ್ಸದೇ ಸಿನಿಮಾ ನೋಡಿಕೆ ಆತ್. ಬುಧವಾರ ದಿನ ಒಂದು ಮನೆ ಒಕ್ಲು ಮತ್ತೆ ಮದ್ಯಾನ ಮೇಲೆ ಕಾಯರ್ತೋಡಿ ದೇವಸ್ಥಾನಕೆ ಹೋಗಿ ಬಂದ್ ಮೊಬೈಲ್ ಹಿಡ್ದ್ ಕುರ್ಸಿಲಿ ದೆವ್ವದಾಂಗೆ ಕುತ್ತ ಕುದ್ದೀದೆ. ಬಟ್ಟೆ ಸಮೆತ ಬದಲ್ಸಿತ್ಲೆ. ಹಿಂಬೊತ್ ಒಂದು ಏಳ್ವರೆ ಗಂಟೆಸ್ಟೊತ್ತಿಗೆ ಸುಮತಿ ಫೋನ್ ಮಾಡ್ತ್. ಅಕ್ಕಾ ಕಾಂತಾರ ಸಿನಿಮಾಗೆ ಹೋಗ್ವ, ಪ್ರಭನ ಫೇಮಿಲಿ, ನಾನು, ಸಿಲ್ಪಾ ಹೋಗುದು. ನಿಮ್ಮನ್ನು ನಿಮ್ಮ ಮನೆ ಹತ್ರವೇ ಪಿಕ್ ಮಾಡಿ ಅಲ್ಲೇ ತಂದು ಬಿಡ್ತೇವೇಂತ ಹೇಳಿಕನ ಯಾವ ಬಾಯಿಲಿ ಇಲ್ಲೇಂತೇಳ್ದು. ಲಡ್ಡು ಬಂದು ಬಾಯಿಗೆ ಬಿತ್ತು! (ಈ ಇಡೀ ಗ್ಯಾಂಗ್ಗೆ ನನ್ನ ಒಂದು ದೊಡ್ಡ ಥೇಂಕ್ಸ್) ಕೂಡ್ಲೆ ಧಡ್ಕ ಎದ್ದ್, ಮೊರೆಗಂಞ ಫೇರೆಂಡ್ ಲವ್ಲಿ ಮೆತ್ತಿ, ಬೊಟ್ಟು ಅಂಟ್ಸಿ, ಮೆಲ್ಲ ಬಾಗಿಲ್ ಹಾಕಿ, ನಿಧಾನಕೆ ಸಬ್ದ ಆಗದಾಂಗೆ ಗೇಟ್ ತೆಗ್ದ್ ಬೇರೆವುಕೆ ಉಪದ್ರ ಆಕೆ ಬೊತ್ತೂಂತ ಕೊತ್ತಿನಾಂಗೆ ಹೋದೆ. (ಮಕ್ಕಳೇ, ಬುಟ್ಟು ಹೋದೇಂತ ನಂಗೆ ಬೊಡಿಬಡಿ, ನಿಮ್ಮೊಟ್ಟಿಗೆ ಇನ್ನೊಮ್ಮೆ ಬನ್ನೆ ಆತಾ) ಕಾಂತಾರ ಸಿನಿಮಾದ

ಬಗ್ಗೆ ಬೇಕಾದಷ್ಟ್ ವಿಮರ್ಷೆಗ, ಅಭಿಪ್ರಾಯಗ ಅಲ್ಲಿ, ಇಲ್ಲಿ ಎಲ್ಲಕಡೆ ಕೇಳಿರುವರಿ. ಲಾಯ್ಕಿನ ಸಿನಿಮಾಂತ. ನಂಗೆ ಸಿನಿಮಾಗಿಂತ ಸಿನಿಮಾ ಥಿಯೇಟರ್ಲಿ ಜನಂಗಳ ನೋಡಿ ಅಚ್ಚರಿ ಆದ್ದ್. ನಮ್ಮ ಸಂತೋಸ್ ಥಿಯೇಟರ್ಲಿ ಇತ್ತೀಚೆಗೆ ಹೀಂಗೆ ಜನಂಗ ತಿಕೆಟ್ಗೆ ಬೇಕಾಗಿ ಗಂಟೆಕಟ್ಲೆ ಕಾದ್ ನಿತ್ತದರ ನೋಡ್ದ್ ಇದೇ. ಎಂತ ಜನ, ಎಂತಾ ಜನ. ಜಾತ್ರೆನೇ. ನಾ ವಾಪಾಸ್ ಸುಳ್ಯಕೆ ಬಂದ ಮೇಲೆ ಸಂತೋಸ್ಲಿ ಸುಮಾರ್ ಸಿನಿಮಾ ನೋಡ್ಯಳೆ. ಆಚೆ ಮನೆಲಿದ್ದ ಇಂಜಿನೆರ್ ಶ್ರೀದೇವಿ ಗೂಡೆ ಇರಿಕನ ಅದುನು- ನಾನು ಸರಾಗ್ ಪಿಚ್ಚರ್ಗೆ ಹೋತಿದ್ದೋ. ಇಲ್ಲರೆ ಮಕ್ಕ ಬಾಕನ ಒಂದು ರೌಂಡ್ ಪೇಟೆ ಸುತ್ತಿ, ಸಿನಿಮಾ ನೋಡಿ, ಹೋಟ್ಲ್ಲಿ ತಿಂದ್ ಬಾದು ರೂಢಿ. ಆಗೆಲ್ಲ ಒಂದಂಞ ಉಮ್ಮುಣಿಗಳು, ಬರೀ ಎರ್ಡೊಡ್ಡಿ, ಮೂರೊಡ್ಡಿ ಜನಂಗ ಬಾಲ್ಕನಿಲಿ ಇರ್ತಿದ್ದೊ. ಥಿಯೇಟರ್ ಸುರು ಆದ ಸಮಯಲಿ, ಆಗ ನಾ ಭಾರೀ ಸಣ್ಣಿತ ಇದ್ದೆ. ಹೌದೋ ಅಲ್ಲನೋಂತ ನೆಂಪಾದೆ. ಅಕ್ಕನವರೊಟ್ಟಿಗೆ ನಾನೂ ಬನ್ನೇಂತ ಮರ್ಟ್ ಹಟಮಾಡಿ ಸೀತಾರಾಮು ಪಿಚ್ಚರ್ ನೋಡ್ಯಳೆ. ಆಗ ಹೀಂಗೆ ರಶ್ಶ್, ಜನಂಗ ಟಿಕೇಟ್ಗೆ ಸಾಲ್ ನಿಲ್ಲುದು, ಉರ್ಡುದ, ಜಗಳಾಡ್ದರ ನೋಡೀದೆ. ಥಿಯೇಟರ್ಲಿ ಇದ್ದ ಕುರ್ಸಿ ಸಾಲದೆ ಎಕ್ಸ್ಟ್ರಾ ಕುರ್ಸಿ ಇಸಿ ಜನಂಗಳ ಕುದ್ರುಸುದರನೂ ನೋಡ್ಯಳೆ. ಮೊನ್ನೆ ಅದೆಲ್ಲ ನೆಂಪಾತ್.

ಇತ್ತನವು ಗಟ್ಟದವರಾಂಗೆ ಪಿಚ್ಚರ್ ನೋಡುವ ಮೊರ್ಲರಲ್ಲ. ಅಂತಾ ಪಿಚ್ಚರ್ ಆದರೆ ಮಾತ್ರ ಥಿಯೇಟರ್ಗೆ ಹೊರ್ಡೊವು. ಆದರೆ, ಮೊನ್ನೆ ಜನಂಗಳ ನೋಡ್ರೆ, ಥಿಯೇಟರ್ ಒಳಗೆ ಬುಟ್ರೆ ಸಾಕ್, ಬೇಕರೆ ನೆಲಲಿ ಕುದ್ದಾರ್ ನೋಡುವೋಂತೇಳ್ವ ಒಂದು ಪೋರ್ಸುಲಿ ಜನಂಗ ಇದ್ದೊ. ಅದ್ ಕಾಂತಾರ ಸಿನಿಮಾದ ಶಕ್ತೀಂತ ಆತ್ ನಂಗೆ. ಸಿನಿಮಾ ಬಂದ್ ಒಂದು ವಾರ ಕಳ್ದರೂ ರಶ್ಶ್ ಮುಗ್ತ್ಲೆ. ಬರೀ ಸುಳ್ಯ ಮಾತ್ರ ಅಲ್ಲ, ಜನಂಗ ದೂರದೂರಂದ ಬಂದ್ ಥಿಯೇಟರ್ಲಿ ಸಿನಿಮಾ ನೋಡಿಕಂಡ್ ಹೋದವೆ. ಟಿಕೇಟ್ ಕೊಟ್ಟ್ ಜನಂಗಳ ಒಳಗೆ ಬುಟ್ಟ್ ಹಂಞ ಹೊತ್ತುಲಿ ನ್ಯೂಸ್ ರೀಲ್ಗಳ ಬುಡಿಕೆ ಸುರಾಕನ ಜನಂಗ ಕಾಯುವ ಪುರ್ಸೊತ್ತಿಲ್ಲದಾಂಗೆ, ‘ಕಾಂತಾರ’ ಪಾಡ್ಲೆಯೇಂತ ಬೊಬ್ಬೆ ಹೊಡಿಯತ್ತಿದ್ದೋ. ಎಲ್ಲವರ ಬೊಬ್ಬೆ, ವಿಶಲ್ ಎಲ್ಲ ಕಾಲೇಜಿಗೆ ಹೋವ ದಿನಗಳ್ಲಿ ಕದ್ದ್ ಪಿಚ್ಚರ್ಗೆ ಹೋತಿದ್ದದರ ನೆಂಪು ಮಾಡ್ತ್. ಹಕ್ಕಲೆ ಕುದ್ದ ಸುಮತಿ ಓ..ಂತ ಎಲ್ಲವರೊಟ್ಟಿಗೆ ಕಿರ್ಂಚಿ ಬೊಬ್ಬೆ ಹೊಡ್ದ್, ಚಂದ್ರಕ್ಕ ಬೊಬ್ಬೆ ಹೊಡೀರಿ ಕತ್ತಲೆಯಲ್ಲಿ ಯಾರೂಂತ ಗೊತ್ತಾಗುದಿಲ್ಲಾಂತ ನಂಗೆ ಕೀ ಕೊಟ್ಟತ್. ಒಟ್ಟಿಗಿದ್ದ ಪ್ರಭಕ್ಕನ ಮಕ್ಕ, ಶಿಲ್ಪ ಎಲ್ಲವರ ಬೊಬ್ಬೆನೊಟ್ಟಿಗೆ ನನ್ನ ಬೊಬ್ಬೆನೂ ಸೇರಿ ಪಿಚ್ಚರ್ ಸುರಾಕೆ ಮುಂದೇ ಎಲ್ಲವುಕೂ ಆವೇಶ ಬಂದಾಂಗಾಗೀತ್. ನನ್ನೊಟ್ಟಿಗೆ ಸಿನಿಮಾಗೆ ಹೋವ ಪ್ಲಾನ್ ಮಾಡ್ದ ಅಕ್ಕನ ಮಗ ಗೌತಮಿ, ಇದರ (ನನ್ನ) ನಂಬಿರೆ ಆಕಿಲೇಂತ, ಯೇವುರ ತಡಿಯಕೆ ಆಗದೆ ಆನ್ಲೈನ್ ಟಿಕೆಟ್ ಬುಕ್ ಮಾಡಿ ಸೀದ ಮಂಗ್ಳೂರುಗೆ ಹೋಗಿ ಮಾಲ್ಲಿ ಸಿನಿಮಾ ನೋಡಿಕಂಡ್ ಬಂದುಟು. ಎಲ್ಲವು ಒಟ್ಟಿಗೆ ಪೋಯೀಂತ ಸುರೂಗೆ ಎಲ್ಲವುಕೆ ನೊಡ್ಸಿದೂ ಅದೇ. ಈಗ, ಪಾಪದ ವಿಗ್ಗಿನೂ ಪುಟ್ಟಕ್ಕನೂ ಬಾಕಿ.

ವರ್ಸಕ್ಕೊಮ್ಮೆ ಕುಡಕಲ್ಲ್ಲಿ ಆವ ದೆವ್ವ ನಾವುಗೆ ವರ್ಸಕ್ಕೊಮ್ಮೆನ ಎಂಟರ್ಟೇನ್ಮೆಂಟ್ ಕಂ ಔಟಿಂಗ್. ಅಲ್ಲಿ ಸುರೂಗೆ ಐತಪ್ಪಮಾವನ ಮನೆಗೆ ಹೋಗಿ ಕುಡಿಯಕೆ ಕುಡ್ದ್, ತೊಂಬರದ ಊಟ ಇನ್ನೂ ಇಕ್ಯಂಡ್ ಒಳೋಂತಾರೆ, ಅಲ್ಲಿಗೆ ಹೋಗಿ ಉಂಡ್, ವಾಪಾಸ್ ಮಾವನ ಮನೆಗೆ ಬಂದ್ ಕುದ್ದ್, ದೆವ್ವ ಸುರಾಕನ ದೆವ್ವಕೊಣಿವ ಜಾಲ್ಗೆ ಹೋತಿದ್ದೋ. ಆಗೆಲ್ಲ ಕತ್ತಲಾದಮೇಲೆ ಸೂಟೆ ಹೊತ್ತ್ಸಿಕಂಡ್, ಗದ್ದೆ ಪುಣಿಲಿ ನಡ್ದ್ ಸುಮಾರ್ ನಾಕೈದ್ ಕಿಲೋಮೀಟರ್ ದೂರ ಹೋತಿದ್ದೋ. ಮೊನ್ನೆ ಸೆಕೆಂಡ್ ಶೋ ಸಿನಿಮಾಗೆ ಹೋಕನನೂ, ಮುಂದೆಲ್ಲ ದೆವ್ವಕೆ ಹೊರ್ಟ್ ಹೋತಿದ್ದ ಅದೇ ಟೈಮ್ಗೇ ದೆವ್ವದ ಕೋಲ ಇರುವ ಸಿನಿಮಾಗೆ ಹೋಕಂಡೊಳೋಂತ ಮನ್ಸ್ಲಿ ಆತ್.
‘More regional is more universal’ ಹೀಂಗೇಂತ ರಿಷಬ್ ಶೆಟ್ರ್ ಯಾದೋ ಒಂದು ಕಾರ್ಯಕ್ರಮಲಿ ಈ ಸಿನಿಮಾ ಬಗ್ಗೆ ಹೇಳ್ದ್ ಅದರ ರಿಸಲ್ಟ್ ಹಾಂಗೇ ಆಗುಟು. ಏಕೆತೇಳ್ರೆ ಒಂದು ಪ್ರದೇಶದ, ಒಂದು ಪ್ರಾಂತ್ಯದ ನಂಬಿಕೆ, ಸಂಸ್ಕೃತಿ, ಆಚಾರ-ವಿಚಾರನ ಬೇರೆವುಕೆ ಯಾದ್ಕೂ ಸೂನೆ ಆಗದಾಂಗೆ ಹೇಳ್ದು, ರೀಲ್ಲಿ ಕಟ್ಟಿಕೊಡ್ಡು ಅಷ್ಟ್ ಸುಲಭನಾ? ದೆವ್ವ ದೇವ್ರು ಇಂತ ವಿಚಾರಕೆ ಕೈ ಹಾಕೊಕೊರೇ ಧೈರ್ಯಬೇಕು. ಅಂತ ಇಸಯಕೆ ಕೈ ಹಾಕಿ ಸೈ ಅಂತ ಹೇಳ್ಸಿಕಂಡುಟು ಈ ‘ಎಂಟೆದೆ ಬಂಟ’.

ಒಂದು ನಂಬಿಕೆನ, ಅದರ ಹಾಂಗೇ ನಂಬಿ, ನಂಬಿಕೆಲೇ ನಿರೂಪಣೆ ಮಾಡ್ದ್ ಸಿನಿಮಾದ ಸ್ಟ್ರೆಂತ್. ಒಬ್ಬ ಯಾದೇ ಜಬಾವುದಾರಿಕೆ ಇಲ್ಲದ ತುಕ್ಕಿತಿರ್ಗು, ಬೇರೆ ಹೈದಂಗಳ ಕಟ್ಟಿಕಂಡ್ ಊರು ಸುತ್ತುವ ಪೋಲಿ, ಒಬ್ಬ ಪ್ರೇಮಿ, ಒಬ್ಬ ದೆವ್ವ ಕಟ್ಟಂವ, ಒಬ್ಬ ಊರು (ಕಾಡ್) ಒಳ್ಸಂವ, ಒಬ್ಬ ಕ್ರಾಂತಿಕಾರಿ, ಒಬ್ಬ ಸೋಶಿಯಲ್ ವರ್ಕರ್, ಕಂಬಳದ ಕೋಣಂಗಳ ಒಡ್ಸಂವ, ಇಸ್ಪೀಟ್-ಕೋಳಿಕಟ್ಟದ ಚಟದಂವ, ಹೆಂಡ ಕುಡ್ಕ, ಬೀಡಿದಾಸ, ಆಂಗ್ರಿ ಯಂಗ್ ಮ್ಯಾನ್ – ಈ ಎಲ್ಲ ರೋಲ್ಗ ಹೀರೋನ ಒಳಗೆ. ಇದೆಲ್ಲದರ ಅಷ್ಟ್ ಲಾಯ್ಕಿಲಿ ಮಾಡಿಟು ರಿಷಭಣ್ಣ. ನಂಗೆ ಕುಸಿ ಆದ್ದ್ ದಕ್ಷಿಣ ಕನ್ನಡದ ಕನ್ನಡ ಬಾಸೆನ ಅಷ್ಟ್ ಸೋಕುಲಿ ಕೇಳ್ಸ್ಯೊಳೋ. ಇಲ್ಲರೆ ಬೇರೆ ಸಿನಿಮಾಗಳ್ಲಿ “ಎಂತದು ಮಾರಾಯ, ನಿಂಗೆ ಮಂಡೆ ಸಮ ಉಂಟಾಂತ” ಅದರ ಒಂದು ವಿಚಿತ್ರ ರೀತಿಲಿ, ಗೇಲಿ ಮಾಡ್ವಾಂಗೆ ಉಪಯೋಗಮಾಡಿ, ಹಾಸ್ಯಮಾಡಿಕೆ ಹೋಗಿ ಹಾಸ್ಯಾಸ್ಪದ ಆವಾಂಗೆ ಮಾಡಿ ತೋರ್ಸ್ತ್ತಿದ್ದದೇ ಹೆಚ್ಚಿ. ರಿಷಬಣ್ಣ ಹೇಳ್ದಾಂಗೆ ಹೆಚ್ಚಿ ಪ್ರಾಂತೀಯ ಇರುವಂತದ್ದೆ ಹೆಚ್ಚಿ ಯೂನಿವರ್ಸಲ್ ಆಗುಟು. ಒಂದು ಪರಿಸರದ ಒಂದು ನಂಬಿಕೆ ಮೈಯ್ನ್ ಆಗಿರುವ ಸಿನಿಮಾ ದೇಸದ ಗಡಿದಾಟಿ ವಿದೇಸಕೂ ಹೋಗಿ ಅಲ್ಲಿನೂ ಎಲ್ಲವುಕೆ ಕುಸಿ ಆಗುಟೂಂತ ಹೇಳ್ದರ ಕೇಳಿಕೆ ನಾವುಗೆನೂ ಕುಸಿ ಆದೆ. ಹಾಂಗೆ ನೋಡ್ರೆ ಈ ಸಿನಿಮಾ ತಂಡಕೂ ಸಿನಿಮಾಕೂ ನಾವುಗೆ ಏನಾರ್ ಸಮ್ಮಂದ ಉಟ್ಟೋ? ಆದರೂ ಅದರ್ಲಿ ಇರುವ ನಮ್ಮ ಸಂಸ್ಕೃತಿ ನಾವುಗೆ ನಮ್ಮದ್ಂತೇಳ್ವ ಫೀಲ್ ಕೊಟ್ಟದೆ ಮತ್ತೆ ಇದ್ ನಮ್ಮದೇ ಸಿನಿಮಾ. ಇದರ್ಲಿ ನಾವು ಒಳೋ. ನಮ್ಮ ಅಯ್ಯೆಕ – ಅಪ್ಪಂದರ್ ಒಳೋ. ನಮ್ಮ ದೆವ್ವ ದೇವ್ರುಗ ಒಳೋ. ನಮ್ಮ ಜಾತ್ರೆ, ನಮ್ಮ ಕೋಳಿ ಕಟ್ಟ, ಕಂಬಳ ಎಲ್ಲ ಉಟ್ಟು.
ಸಿನಿಮಾಲಿ ಬಾವ ಡೈಲಾಗ್ಗ ಪಂಚ್ಗ ನಿಮ್ಮ ನೆಗಾಡ್ಸಿ ನೆಗಾಡ್ಸಿ ಸಾಯ್ಸಿದೆ. ಹಡ್ಬೆ, ಬೇವಾರ್ಸಿ, ಬೊಜ್ಜ, ಸಾವು ಸಬ್ದಗಳ ಉಪಯೋಗ ಆಗುಟು. ಇದೆಲ್ಲ ತುಂಬ ನ್ಯಾಚುರಲ್ ಆಗಿ ಉಟ್ಟು. ಫೇಸ್ಬುಕ್ಲಿ ಯಾರೋ ಇದ್ ಅತೀ ಆತ್ಂತ ಬರ್ದೀದೋ. ನಂಗೇನ್ ಹಾಂಗೇ ಆತ್ಲೆ. ಸಮಯ ಸಂದರ್ಭಕೆ ತಕ್ಕಾಂಗೆ ಉಪಯೋಗ ಮಾಡಿಕೆ ಇನ್ನೂ ಬೇಕಾದಷ್ಟ್ ಅವ್ಕಾಸ ಇತ್ತ್ಂತಳೇ ಆತ್. ಮರದ ಮೇಲೆ ಅಟ್ಟೊಳ್ಕೆ ಅದ್ಕೆ ಕೈಲಾಸಾಂತ ಹೆಸ್ರ್. ಅಲ್ಲಿ ಹಿರೋ ಶಿವ ಮತ್ತೆ ಹೀರೋಯಿನ್ ಲೀಲಾನ ರೊಮಾನ್ಸ್. ಕಾಡ್, ಊರ್, ಕತ್ತಲೆ, ಬೊಳ್ಪು ಎಲ್ಲ ಇಷ್ಟ್ ಲಾಯ್ಕಿ ಉಟ್ಟೂಂತ ಆವ ಸಿನೆಮೆಟೊಗ್ರಫಿ ಭಾರೀ ಪೊರ್ಲು.

ಕಾಂತಾರಂತ ಹೇಳುವ ಸಿನಿಮಾದ ಹೆಸ್ರ್ನ ವಿನ್ಯಾಸಲಿ ಗಗ್ಗರ ಉಟ್ಟು. ಇಡೀ ಸಿನಿಮಾಲಿ ಆಗಾಗ ಗಗ್ಗರದ ಸಬ್ದ ಕೇಳಿಕಂಡೇ ಇದ್ದದೆ. ಇದುನೂ ದೆವ್ವ ಕಟ್ಟಿದವನ ಓ….ಂತೇಳುವ ಆರ್ಭಟೆ, ದರ್ಸನ ಪಿಚ್ಚರ್ ಮುಗ್ಸಿ ಮನೆಗೆ ಬಂದ ಮೇಲೆನೂ ಕೆಬಿಗೆ ಕೇಳ್ದಾಂಗೆ ಆದೆ. ಪಿಚ್ಚರ್ಲಿ ಮೈಯ್ನ್ ಆಗಿ ಕಾಡ್ ಉಟ್ಟು. (ಕಾಂತಾರಾಂತ ಹೇಳ್ರೆನೇ ಗೊಂಡಾರಣ್ಯ ಅಲ್ಲರೆ ದಟ್ಟ ಕಾಡ್ಂತೇಳುವ ಅರ್ಥ) ಕಿಚ್ಚಿ ಉಟ್ಟು. ಹಾಂಗೇ ಈ ಸಿನಿಮಾ ಕಾಡ್ಕಿಚ್ಚಿನಾಂಗೆ ಓಡ್ತಾ ಉಟ್ಟು! ನಾವು ಪೇಪರ್ಲಿ ಕೆಲ್ಸ ಮಾಡಿಕಾಕನ, ನಾ, ಪುಷ್ಪ, ನಯನ, ಸುದಾ, ನಾರಾಯಣ, ಶಿಪ್ರ ಎಲ್ಲ ಮಾತಾಡಿಕಂಬೊದಿತ್ತ್. ನಾವೊಂದು ಸಿನಿಮಾ ಮಾಡೊಮೋ, ನಮ್ಮ ಎಲ್ಲ ಜಾನಪದ ಪ್ರಕಾರ, ಊರು ಸಂಸ್ಕೃತಿ ಆಚಾರ-ವಿಚಾರ, ಬಾಸೆ ಎಲ್ಲನೂ ‘ನಿಂಗೆ ಮಂಡೆ ಸಮ ಉಂಟಾಂತ’ ಹೇಳವರ ಮಂಡೆಗೆ ಹುಗುವಾಂಗೆ ಮಾಡೊಮೋಂತ ಮಾತಾಡಿಕಂಬೊತ್ತಿದ್ದೋ. (ಹೀಂಗೆ ಮಾತಾಡಿಕಂಡ ಐಡಿಯಾಗ ಸಾವಿರ ಒಳೋ). ನಮ್ಮಂಗೆ ಬೇರೆವುಕೆನೂ ಇದೇ ಫೀಲಿಂಗ್ ಇದ್ದಿರ್ದು. ಕಾಂತಾರಲಿ ಇಂತಾ ಒಂದು ಅದ್ಭುತ ದೃಶ್ಯ-ಕಾವ್ಯನ ಮಾಡಿ ಇಕ್ಯೊಳೋ. ಕಂಗ್ರಾಜುಲೇಶನ್ಸ್ ರಿಷಬ್ ಶೆಟ್ರೇ, ಲವ್ಯೂ!

(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಬಹು ಭಾಷಾ ಅಂಕಣಕಾರರು. ವೃತ್ತಿಪರ ಅನುವಾದಕಿ)