
*ಚಂದ್ರಾವತಿ ಬಡ್ಡಡ್ಕ.
ವಿಷಯ ಎಂತಂತೇಳ್ರೆ ನಾ ಒಂದು ಕಾವುಲಿ ತಕಂಡೆ. ಕಾವುಲಿಂತೇಳ್ರೆ, ಕಾವುಲಿಲಿ ಬಗೆ ಸುಮಾರುಟ್ಟಲ್ಲ. ಕಬ್ಬಿಣದ ಕಾವುಲಿ, ಬಳದ ಕಾವುಲಿ, ಓಡಿಟ್ಟ್ ಕಾವುಲಿ, ಅಪ್ಪದ ಕಾವುಲಿ, ಚಪಾತಿ ಕಾವುಲಿ, ಈಗನ ನಿಮ್ಮ ಹೇಳೆತನದ ನಾನ್‌ಸ್ಟಿಕ್ ಕಾವುಲಿ, ಮೊಸಾಯಿಕ್ ಕಾವುಲಿ, ರೌಂಡ್ ಕಾವುಲಿ, ಚೌಕ ಕಾವುಲಿ.. ಹೀಂಗೆ ಸುಮಾರ್ ಬಗೆನ ಕಾವುಲಿಗೆ ಒಳೊ. ದೋಸೆ, ರೊಟ್ಟಿ ಮಾತ್ರ ಅಲ್ಲದೆ ಆಮ್ಲೇಟ್ ಮಾಡಿಕೆ, ಚಪಾತಿ ಕಾಸಿಕೆ, ಮೀನ್ ಕಾಸಿಕೆ, ಬಾಳೆಕಾಯಿ, ಹಾಗಲಕಾಯಿ ಕಾಸಿಕೆ…. ಹೀಂಗೆ ಬೇರೆಬೇರೆ ಕೆಲ್ಸಕೆ (ಕಾಸಿಕೆ) ಬೇರೆಬೇರೆ ಕಾವುಲಿ ಇಸಿಕಂಡವೆ ಮನೆ ಯಜಮಾಂತಿಗ.
ಈಗ ನೀ ಯಾವ ಕಾವುಲಿ ತಕಂಡಾಂತ ನೀವು ಕೇಳ್ರೆ, ನಾ ನಮ್ಮ ಹಿರಿಯವ್ವಂಗೆಲ್ಲ ಹಳೇ ಕಾಲಂದಳೇ ದೋಸೆ ಹೊಯ್ಕಂಡ್ ಬಂದ ಒಂದು ಕಬ್ಬಿಣದ ಕಾವುಲಿ ತಕಂಡೆ. ಕಬ್ಬಿಣದ ಕಾವುಲಿಲಿ ಕಬ್ಬಿಣಾಂಶ ಸಿಕ್ಕಿದೆ, ನಾನ್ ಸ್ಟಿಕ್ ನಾಟ್ ಗುಡ್ ಗುಡ್ ಫಾರ್ ಹೆಲ್ತ್ ಅಲಾ, ಹಾಂಗೆ. ಕಾವುಲಿಗೂ ದೋಸೆಗೂ ಬುಡದ ಬಂಧ. ಇದ್ ನಮ್ಮ ಅರೆಬಾಸೆನ ‘ಬಂದ’ಕೂ ಕನ್ನಡದ ‘ಬಂಧ’ ಎರ್ಡಕ್ಕೂ ಅನ್ವಯ ಆದೆ.
ಎರಡ್ಮೂರು ವರ್ಸದ ಹಿಂದೆ ಹಣದುಬ್ಬರದ ಚರ್ಚೆ ಆಕನ ಒಬ್ಬ ಇಂಜಿನೆರ್ ಕಲಿವ ಗೂಡೆ ಆರ್‌ಬಿಐ ಗವರ್ನರ್‌ಗೆ ಒಂದು ಪ್ರಶ್ನೆ ಕೇಳ್ತ್. “ಹಣದುಬ್ಬರ ಕಮ್ಮಿ ಆದರೂ ದೋಸೆನ ರೇಟ್ ಏಕೆ ಕಮ್ಮಿ ಆದುಲೇಂತ”. ಆಗನ ಗವರ್ನರ್ ರಘುರಾಂ ರಾಜನ್ ಅವು ಅದ್ಕೆ ಕಾವುಲಿನನೇ ಕಾರಣಾಂತ ಹೇಳ್ದೊಗಡ. ಏಕೇಂತೇಳ್ರೆ ಅದೇ ಹಳೇ ಕಾಲದ ಕಾವುಲಿಲೇ ದೋಸೆ ಮಾಡುವ ಕಾರಣ ಮಾಡವನ ಸಂಬಳ ಹೆಚ್ಚಾದೆ ಹಾಂಗಾಗಿ ದೋಸೆನ ರೇಟ್ ಕಮ್ಮಿ ಆದುಲೆ. ದೋಸೆ ಮಾಡಿಕೆ ಹೊಸ ತಂತ್ರಜ್ಞಾನ ಉಪಯೋಗ

ಮಾಡಿ ಅದರ ತಯಾರ್ಸುವ ಕರ್ಚಿ ಕಮ್ಮಿ ಮಾಡಿಕೆ ನೋಡೋಕೂಂತೇಳಿ ಅವು ದೋಸೆನ ರೇಟ್‌ನ ತಕೊಂಡೋಗಿ ಕಾವುಲಿನ ತಲೆಗೆ ಕಟ್ಟಿದ್ದೋ.
ನಂಗೆ ಊಟ ತಿಂಡಿ ಇಸಯಲಿ ಅಂತದೇ ಇಂತದೇ ಬೇಕೂಂತ ಇಲ್ಲೆ. ಏನಾರ್ ಚಪ್ಪುಡಿ ಮಾಡಿ ಸುಧಾರ್ಸುವ ಜಾತಿ. ಹಾಂಗಾಗಿ ನನಕ್ಕಲೆ ಒಂದೂರೇ ಪಾತ್ರೆ ಇಲ್ಲೆ. ನಾ ಬೇಕಾದ್ ಮಾತ್ರ ಇಸಿಕಂಬೊದು, ಅದ್ ಮನೆಲಾಗಿರ್ದು ಮನ್ಸ್‌ಲಾಗಿರ್ದು. ನಂಗೆ ಬೇಡಾದರ ಬೇಕಾದವ್ಕೆ ಕೊಟ್ಟುಬುಟ್ನೆ ಅತ್ತ. ಹಾಂಗೆ ನನ್ನಕ್ಕಲೆ ಇರುವ ಒಂದೇ ಮುರ್‌ಕ್‌ಲಿ ಕಾವುಲಿಲೇ ಇಷ್ಟ್ ವರ್ಷ ಬದ್ಕಿದ್ದೆ. ಒಂದ್ ಸುಮಾರ್ 15 ವರ್ಷದ ಹಿಂದೆ ತಕಂಡ ಕಾವುಲಿ ಅದ್. ಒಳ್ಳ ಜಾತಕ ನೋಡಿ ಕೂಡಿ ಬಂದ ಸಂಬಂಧದಾಂಗೆ ನಂಗೆನೂ ಅದ್ಕೆನೂ ಫಸ್ಟ್ ಹಿಡ್ದದೆ. ಅದರ ಕೈ ಮುರ್ದ್ ನಡುಲಿ ಕೋಟಿಂಗ್ ಎಲ್ಲ ಹೋಗಿ ಚಾಣೆ ತಲೆನಾಂಗೆ ಆಗುಟು. ನೋಡೋಲಿ ಬಿಳಿ ಆಗಿ ಕರೆಸುತ್ತ ಕಪ್ಪು, ನೋಡಿಕೆ ಏನೇನೂ ಲಾಯ್ಕಿತ್ಲರೂ ನಂಗೆ ಬೇಕಾದ, ‘ಅನೇಕ ಕಾವುಲಿ ಕೆಲ್ಸ ಈ ಏಕ ಕಾವುಲಿಲಿ’ ಆಗ್ತಿತ್ತ್.
ಒಂದು ದಿನ ಪೇಟೆಲಿ ಸಾಲೆ ಕಲಿಯತ್ತಿದ್ದ ನನ್ನ ಅಕ್ಕನ ಮಗ ನನ್ನ ಮನೆಗೆ ಬಂದೀತ್. ಅಕ್ಕನ ಮಗ ಬಾತಲೇಂತ ಮಸಾಲೆ ದೋಸೆ ಮಾಡಿಕೊಡುವ ಉಮೇದ್‌ಲಿ ಇದ್ದೆ. ಮಗ ನನ್ನ ಕಾವುಲಿ ನೋಡಿ, ಚಿಕ್ಕಮ್ಮಾ… ಎಬೇ ಇದಾ ನಿಮ್ಮ ಕಾವುಲಿಂತ ಹೇಳ್ದ್ ನಂಗೆ ಒಂಥರಾ ಪ್ರೆಸ್ಟೀಜ್ ಕ್ವೆಶ್ಚನ್ ಆಗ್ಯೋತ್. ಆಮೇಲೆ ನಂಗೆ ಹೇಂಗಾರ್ ಮಾಡಿ ಒಂದು ಕಾವುಲಿ ತಕೊಣುಕುಂತೇಳ್ವ ಪೇಚಾಟ ಸುರಾತ್. ಅದ್ ಬಂದ್ ಹಾಂಗೆ ಹೇಳಿ 3 ವರ್ಸ ಆಗುಟು. ಅಳ್ದ್ ಸುರ್ದ್‌ತೇಳ್ವಾಂಗೆ ಒಂದು 8 ತಿಂಗಳ ಹಿಂದೆ ಪೇಟೆಗೆ ಹೋಗಿದ್ದಾಕನ ಕಡೆಗೂ ಒಂದು ಕಾವುಲಿ ತಕಂಡೆ. ನನ್ನ ದೋಸ್ತಿನೂ ನನ್ನೊಟ್ಟಿಗಿತ್ತ್. ಹಾಂಗಾಗಿ ಇಬ್ಬರೂ ಸೇರಿ ಕಾವುಲಿನ ನೋಡಿ, ಅದೋ

ಇದೋಂತೇಳಿಕಂಡ್ ಸೆಲೆಕ್ಷನ್ ಮಾಡ್ದೋ. ಕಾವುಲಿನ ಬಾರೀ ಮೋಕೆಲಿ ಸೊಂಟಲಿಸಿ ತೆತ್ತಿಕಂಡೇ ಬಂದೆ. ತಕಂಡ ಕಾವುಲಿ, ಅದರ ಕಾಗದನೂ ಬಿಚ್ಚದೆ, ಹೇಂಗೆ ಅಂಗ್‌ಡಿಂದ ತಂದೆನೋ, ಹಾಂಗೇ ಸುಮಾರ್ ಸಮಯ ಹೊಣಕ್ಯಂಡ್ ಇತ್ತ್. ಒಂದು ದಿನ ನಂಗೆ ಅದೇನ್ ಮನ್ಸಾತೋ ಕಾವುಲಿ ಬಿಚ್ಚಿ ತೊಳ್ದ್ ತೆಳಿ ಹಾಕಿ ಇಸಿದೆ 4 ದಿನ. ನಂಗೊಂದು ಭ್ರಮೆ ಇತ್ತ್. ಎಂಥ ಕಾವುಲಿ ಆದರೂ ನೀರುಳ್ಳಿ ರಸ ತಾಂಗಿರೆ, ನೀರುಳ್ಳಿಲಿ ಎಣ್ಣೆ ಉಜ್ಜಿರೆ ಕಾವುಲಿ ಹದಕ್ಕೆ ಬಂದದೇಂತ. ಮತ್ತೆ ದೋಸೆ ಲಾಯ್ಕಿಲಿ ಎಳ್ಕಿದೇಂತ.
ತೆಳಿ ಹಾಕಿಸಿ, ದಾಸಾಳ ಸೊಪ್ಪು ಚಿರ್ಂಬಿ ಹಾಕಿಸಿ, ಎಣ್ಣೆ ಉಜ್ಜಿ ಇಸಿ, ಎಲ್ಲ ಆದಮೇಲೆ ಇನ್ನ್ ನಾಳೆ ನೀರ್ ದೋಸೆ ಮಾಡೊಕೂಂತ ಅಕ್ಕಿ ನೀರ್ಲಿ ಹಾಕಿಸಿದೆ. ಪುಣ್ಯಕೆ ಬೊಳ್ಪಿಗೆ ಕರೆಂಟುನೂ ಇತ್ತ್. ಅಕ್ಕಿ ಎಲ್ಲ ಕಡ್ಡ್ ಹದಾ ಬಂದ ಮಾಡಿ, ಪುದಿನ ಕೊತ್ತಂಬರಿ ಸೊಪ್ಪು ಎಲ್ಲ ಹಾಕಿ ಸೋಕುನ ಚಟ್ನಿನೂ ಕಡ್ದೆ. ಕಾವುಲಿ ಒಲೆಲಿಸಿ ಚೊಂಯ್ಯಂತ ಊರುಗೇ ಕೇಳುವಾಂಗೆ ದೋಸೆ ಹೊಯ್ದೆ. ನೂರು ಪಾಲುಗೂ ದೋಸೆ ಎದ್ದ್ ಬಂದದೇಂತ ಸೆಟ್ಟ್‌ಗ ಹಿಡ್ದೆ ಕಾದೆ. ದೋಸೆ ಬೆಂದಮೇಲೆ ಬಾವಡೆ ತೆಗ್ದ್ ದೊಸೆ ಎಳ್‌ಕ್ಸಿಕೆ ಹೊರ್ಟೆ. ಹೇಂಗೇಂಗೆ ಮಂಞಣೆ ಮಾಡ್ರೂ ದೋಸೆ ಎದ್ರುದುಲೆ. ಒಳ್ಳ ಫೆವಿಕಾಲ್ ಹಾಕಿದಾಂಗೆ ಕಚ್ಚಿ ಹಿಡ್ಕಂಟು. ಇಡೀ ಚೆಲ್ಲ್ ಚೆಲ್ಲ್ ಆದರೂ ದೋಸೆ ಎದ್ದ್ ಬಾತ್ಲೆ. ಸುರೂದಲ್ಲ, ಇನ್ನೊಂದು ಸೆರಿ ಆದೂಂತ ಮತ್ತೊಂದು ದೋಸೆ ಹೊಯ್ದೆ ಎಳ್‌ಕ್‌ಸಿಕೆ ಹೋದರೆ ಇದ್ ಅದರಪ್ಪ, ಮತ್ತೂ ಅಂಟಿ ಕುದ್ದುಟು. ಅಷ್ಟೋತ್ತಿಗೆ ಹೊತ್ತ್ ಸುಮಾರ್ ಆಗೀತ್ ಇನ್ನ್ ಇದರೊಟ್ಟಿಗೆ ಉರ್ಡಿರೆ ಆಕಿಲೇಂತ “ಹಳೆ ಗಂಡನ ಪಾದನೇ ಗೆತಿಂತೇಳ್ವಾಂಗೆ” ಹಳೆ ಕಾವುಲಿ ತೆಗ್ದ್ ದೋಸೆ ಕಾರ್ಯಕ್ರಮ ಮುಗ್ಸಿದೆ. ಮೈಯೆಲ್ಲ ದೋಸೆ ಮೆತ್ತಿಕಂಡೆ ನನ್ನ ಹಂಗುಸುವಾಂಗೆ ನೋಡ್ತಿದ್ದ ಕಾವುಲಿನ ತೆಗ್ದ್ ನೀರ್‌ಲಿ ಪದನಿಕೆ ಹಾಕಿದೆ.
ಆಮೇಲೆ ತೊಳ್ದ್ ಎಣ್ಣೆ ಉಜ್ಜಿ ಸಂಭ್ರುಮ ಮಾಡಿ ಇಸಿದೆ. ಆಮೇಲೆ ಹಂಞ ದಿನ ಕಳ್ದ ಮೇಲೆ ಹುಳಿ ದೋಸೆ ಎದ್ರುದೇನೋಂತ ಅಕ್ಕಿ ಕಡ್ದ್ ಇಸಿ ಹುಳಿ ದೋಸೆ ಹೊಯ್ದೆ. ಒಳ್ಳ ಕರುಕುರು ಆಗಿ ಪುಸ್ಕ ಎದ್ದ್ ಬರೋಕೂಂತ ಅಕ್ಕಿಕಡಿಯಕನ ಒಂದು ಪುಂಡಿ ಕಡ್ಲೆ ಬೇಳೆನೂ ಹಾಕಿದ್ದೆ. ಇಂದ್ ದೋಸೆ ಎದ್ದೇ ಎದ್ದದೇಂತ ಗುರು ಕಾರ್ನೂರು, ಗಣಪತಿ ದೇವ್ರ ಎಲ್ಲ ಮನ್ಸ್‌ಲೇ ಗ್ರೇಸಿ ದೋಸೆ ಹೊಯ್ದೆ. ಸುರೂನ ದಿನದಾಂಗೆ ಚೊಂಯ್ಯ ಸಬ್ದ ಬಾತ್. ದೋಸೆ ಎಳ್ಕ್‌ಸಿ ಮೊಗ್ಚಿ ಹಾಕೊನೋಂತೇಳ್ರೆ ವಾಪಾಸ್ ಅದೇ ರಾಗ. ನಂಗೆ ಸಿಟ್ಟೇ ಬಾತ್. ಎದ್ರದಿದ್ದರೆ ಇಂದ್ ನಾ ಬುಡಿಕೆಲೇಂತೇಳಿ ಸಟ್ಟುಗ ಹಿಡ್ದ್ ಎಳ್ಕ್‌ಸಿಕೆ ಹೊರ್ಟೆ. ಏನೇನ್ ಮಾಡ್ರೂ ದೋಸೆ ಎದ್ರುದುಲೆ. ಅದ್ ಕೊಡಿಕಿಲೇಂತ ಮೈಯಿಡೀ ಶಕ್ತಿ ಹಾಕಿರೆ ನಾ ಬುಡಿಕಿಲೇಂತ ಸೆಟ್ಟ್‌ಗದ ಮೇಲೆ ಇಡೀ ಶಕ್ತಿಹಾಕಿದೆ. ಜೋರ್ ಜೋರ್ ಲಡಾಯಿ ಆತ್. ಕಾವುಲಿಗೂ ನಂಗೂ, ಒಂದು ನಮೂನೆ ಉರ್ಡಾಪತ್ತನೇ ಆತ್. ಅಷ್ಟೋತ್ತಿಗೆ ನನ್ನ ಅಕ್ಕನ ಮಂಞ ಅಡ್ಗೆ ಒಳಗೆ ಬಂದ್ ನಿಲ್ಕಿ ನೋಡಿ ಹೋತ್. ಇನ್ನ್ ಇದರೊಟ್ಟಿಗೆ ಹೊಣ್ಕಿರೆ ಆಕಿಲೆ ಇವಂಗೆ ಹೊತ್ತಾದೇಂತೇಳಿ, ಆ ಕಾವುಲಿನ ಸಿಟ್ಟ್‌ಲಿ, ಮತ್ತೆ ಬಿಸಿ ಇತ್ತಲೆ ಹಾಂಗೆ ಒಲೆಂದ ದೂಡಿ ಆಚೆ ಇಸಿದೆ. ನನ್ನ ಎಲ್ಲೂ ಸಲ್ಲುವ ಹಳೆ ಕಾವುಲಿನನೇ ತೆಗ್ದ್ ಕರುಕುರು ದೋಸೆ ಮಾಡಿ ಅವಂಗೂ ಕೊಟ್ಟೆ ನಾನೂ ತಿಂದೆ.

ಎಲಾ ಕತೆನೆ, ಈ ಕಾವುಲಿಂದ ದೋಸೆನ ಇಡೀ ಆಗಿ ಹೇಂಗೆ ತೆಗಿದೂಂತ ನನ್ನ ಬೇರೆ ಎಲ್ಲ ಕೆಲ್ಸ ಬುಟ್ಟ್ ಗೂಗಲ್‌ಗೆ ಓಡಿ ಹೋಗಿ ಹುಡ್ಕಿದೆ. ಒಂದು ರಾಸಿ ಟಿಪ್ಸ್ ಸಿಕ್ಕಿತ್. ಯಾದ್‌ಕೂ, ಹೊಸ ಕಾವಲಿ ಬೊಗ್ಗುವಾಂಗೆ ಕಂಡತ್ಲೆ. ತೊಳ್ದ್ ಎಣ್ಣೆ ಉಜ್ಜಿ ಇಸಿದ ಕಾವುಲಿನ ನೋಡಿಕನೆಲ್ಲ ಅದ್ ನನ್ನ ಅವಸ್ಥೆ ನೋಡಿ ತಮಾಸೆ ಮಾಡಿ ನೆಗಾಡ್ವಾಂಗೇ ಕಾಂಬೊತ್ತಿತ್ತ್ ನಂಗೆ.
ಹೀಂಗೆ ಕಾವುಲಿನ ಕಾವುಲಿ ಬೆಂದ್ಕಂಡ್ ಇದ್ದ ಒಂದು ದಿನ ಬೊಳ್ಪಿಗೆ ಹೂವು ಕೊಯಕೆ ಕೆಳಗೆ ಹೋಗಿದ್ದೆ. ಆಗ ನಮ್ಮ ಓನರ್ ಚಿಕ್ಕಮ್ಮನ ಮನೆಂದ ದಡ್ ಬಡ್ ಸಬ್ದ ಕೇಳ್ದೆ. ಕೈಲಿದ್ದದರ ಅಲ್ಲೇ ಇಟ್ಟ್ ಏನಾತಪ್ಪಾಂತ ಓಡಿ ಹೋಗಿ ನೋಡ್ರೆ ಚಿಕ್ಕಮ್ಮನೂ ಅವರ ಹೊಸ ಓಡಿಟ್ಟ್ ಕಾವುಲಿನೊಟ್ಟಿಗೆ ಕಾಳಗ ಮಾಡ್ತಿದ್ದೋ. ಅವರ ಮನೆಂದ ಸರೀ ಮೇಲೆನ ಮನೆಲಿ ನಾ ಇರುವ ಕಾರಣ ಅವರ ಕಾವುಲಿಲಿನೂ ಹಿಟ್ಟ್ ಎದ್ರದುಲೆಂತಾಕನ, ಇದ್ ವಾಸ್ತು ದೋಷ ಇರೊಕೂಂತ ಗ್ರೇಸಿಕಂಡೆ. ಚಿಕ್ಕಮ್ಮ ರಿಟಾಯರ್ಡ್ ಟೀಚರ್, ಅವು ಕಲ್ತ ಬುದ್ಧಿನ ಎಲ್ಲ ಕರ್ಚಿ ಮಾಡಿ, ನೀನೋ.. ನಾನೋಂತೇಳ್ವಾಂಗೆ ವಾಪಾಸ್ ವಾಪಾಸ್ ಒಡಿಟ್ಟ್ ಮಾಡಿಯೇ ಮಾಡ್ದೋ. ಹೀಂಗೆ, ಹಿಟ್ಟ್ ಮಾಡಿ ಮಾಡಿಯೇ ಕಾವುಲಿನ ಒಗ್ಗ್‌ಸಿಕಂಡೊ, ಬಗ್ಗ್‌ಸಿಕಂಡೋ……. ಅದೂ, ಬರೀ ಹದ್ನೈದೇ ದಿನಲಿ. ಅದೂ ಅಲ್ಲದೆ ನಂಗೆನೂ ಕರ್ದ್ ಎರ್ಡ್ ಓಡಿಟ್ಟೋ ಕೊಟ್ಟೋ ನೋಡು ಎಷ್ಟ್ ಲಾಯ್ಕಾಗುಟೂಂತ. ನಂಗಾತ್, ಅಂದರೆ…….. ಇದ್ ವಾಸ್ತು ದೋಸ ಅಲ್ಲ, ನನ್ನದೇ ದೋಸಾಂತ. ಓ ದೇವ್ರೆ, ಒಂದು ದೋಸೆ ಎದ್ರ್‌ಸಿಕ್ಕಾಗದ ನನ್ನದೊಂದ್ ಯಾವ ಜಲ್ಮ ಇದ್!
ಕಬ್ಬಿಣದ ಕಾವುಲಿಗೆ ಚಿಕ್ಕಮ್ಮ ಕೊಟ್ಟ ಒಂದೆರ್ಡ್ ಉಪಾಯದೊಟ್ಟಿಗೆ ಮತ್ತೆ ಒಂದು ದಿನ ದೋಸೆ ಮಾಡಿಕೆ ಹೊರ್ಟೆ. ದೋಸೆನ ದೆಸೆಂದಾಗಿ ನಂಗೆ ಈಗ ಬೇರೆ ಎಲ್ಲಾ ಪ್ರೋಜೆಕ್ಟ್‌ಗ ಸೈಡಿಗೋಗಿ ಇದೇ ಮೈನ್ ಪ್ರೊಜೆಕ್ಟ್ ಆಗಿತ್ತ್. ಇಂದ್ ಇದೇ ಕಾವುಲಿಲಿ ಮಾಡ್ದ ದೋಸೆನೇ ತಿಂಬೊದೂಂತ ಗಟ್ಟಿ ಮನ್ಸ್ ಮಾಡಿ, ಎಲ್ಲ ದೆವ್ವದೇವ್ರುಗಳ ಮನ್ಸ್‌ಲಿ ನೆನ್ಸಿಕಂಡ್ ದೋಸೆ ಹೊಯ್ದೆ. ವಾಪಾಸ್ ಚೊಂಯ್ಯೀಂತೇಳ್ತ್. ಇಂದ್ ಎದ್ದೇ ಎದ್ರುದು

ಖಂಡಿತಾಂತೇಳಿ ಎಳ್ಕ್‌ಸಿಕೆ ನೋಡ್ರೆ ಎಲ್ಲಿ ಎದ್ದದೇ? ಅದೇ ರಾಗ ಅದೇ ಹಾಡ್. ನನ್ನ ಬಿಪಿ ಒಮ್ಮೆಗೇ ಶೂಟಪ್ ಆತ್. ಗೋಡೆಗೆ ಕಾಲ್ ಕೊಟ್ಟಾರ್ ದೋಸೆ ಎದ್ರುಸೋಕೇಂತ ನಂಗೇನೂ ಹಠ ಹುಟ್ಟಿತ್. ಸರಿಯಾಗಿ ಎದ ಸಿಕ್ಕೊಕೂಂತ ಸ್ಟೌ ಇರುವ ಕಡೆ ಕಾಲ್ ಕೊಡಿಕೆ ನೋಡ್ರೆ ಸರಿಯಾದ ಗೋಡೆ ಇತ್ಲೆ. ಜೀವಮಾನಲಿ ಸುರೂಗೆ ನಂಗೆ ಒಂದು ಸ್ವಂತ ಮನೆ ಕಟ್ಟ್‌ಸೊಕುಂತ ಆತ್. ಇಲ್ಲರೆ ಸಾಮಾನ್ಯಕ್ಕಾದರೆ, ನಮ್ಮ ದೇಹನೇ ಒಂದು ಬಾಡಿಗೆದ್. ಅದರೊಳಗೆ ನಮ್ಮ ಆತ್ಮ ಇರ್ದು. ಮೂರು ದಿನ ಈ ದೇಹಲಿ ಬದ್ಕುವ ನಾವೇ ಬಾಡಿಗೆಲಿ ಇರಿಕಾಕನ ಇನ್ನ್ ಸ್ವಂತ ಮನೆ ಏಕೆ. ಮನೆಗಿನೆ ಮಾಡಿಸಿ ನಾಳೆ ನಾ ಸತ್ತ ಮೇಲೆ ಒಳ್ದವು ಅದ್ಕೆ ಬೇಕಾಗಿ ಹೊಡ್ಕಂಡ್ ಬೊಡ್ಕಂಡ್ ಸಾಯುದು ಬೇಡ. ಬಾಡಿಗೆ ಮನೆ ಆದರೆ ನಾವು ಹೇಂಗೆ ತೀರ್ದೆನೋ ಹಾಂಗೆ; ಎಲ್ಲಿ ಬೇಕೋ ಅಲ್ಲಿ ಹೋಗಿ ಇರಕ್. ಹೀಂಗೆ, ಆಧ್ಯಾತ್ಮ, ವೇದಾಂತ, ಅನುಕೂಲಶಾಸ್ತ್ರ ಎಲ್ಲ ಹೇಳಿಕಂಡ್ ಬಾಡಿಗೆ ಮನೆನೇ ಒಳ್ಳದ್ ಮನ್ಸಂಗೆಂತೇಳಿ ಬಲವಾದ ವಾದ ಮಾಡಿಕಂಡೇ ಬಂದ ನಂಗೆ, ಒಂದು 450 ರೂಪಾಯಿನ ಕಾವುಲಿನ ದೆಸೆಂದ, ಅದರ ಪಳ್‌ಗ್‌ಸಿಕೆ ಅನುಕೂಲ ಆವಾಂಗೆ, ಕಾಲ್ ಕೊಡಿಕೆ ಗೋಡೆ ಇಸಿ, ಒಂದು ಸ್ವಂತ ಮನೆ ಕಟ್ಟ್‌ಸೊಕೂಂತ ಆತ್. ಅದರೊಟ್ಟಿಗೆ ಒಂದು ಕಾವುಲಿನನೂ ಬೊಗ್ಗ್‌ಸಿಕೆ ಆದ್ಲೆಲೇಂತ ಸಂಕಟನೂ ಆತ್. ಎಳ್ಕ್‌ಸಿಕನ ಎದ್ರದೆ ಅತ್ತಳೆ ಅಂಟಿಕಂಡ್ ಒಳ್ಳ ಮಾಸ್ಕ್ ಹಾಕಿದಾಂಗೆ ದೋಸೆನ ಕಿರ್ಂಟ್ ಹಿಡ್ಸಿಕಂಡ್ ಕುದ್ದ ಕಪ್ಪಟೆ ಕಾವುಲಿನ ನೋಡಿ, ಆ ಕಾವುಲಿಗೇ ಅತ್ತ ತಲೆ ಹೊಡ್ದ್ ಸಾಯೋನೋಂತ ಗ್ರೇಸಿದೆ ಒಮ್ಮೆ. ಮತ್ತೂ ಬೇಡ, ಬದ್ಕಿ ಈ ಕಾವುಲಿಲಿ ಒಂದಾರ್ ದೋಸೆ ಎದ್ದ್‌ರ್ಸಿ ತಿಂದೇ ಸಾಯೋಮೋಂತ ಕಾವುಲಿಗೆ ತಲೆ ಹೊಡಿವ ಪ್ರೋಗ್ರಾಂ ಕೇನ್ಸಲ್ ಮಾಡ್ದೆ.

ಈಗ ನಂಗೆ ಹೋದಲ್ಲಿ ಬಂದಲ್ಲಿ ಕಾವುಲಿದೇ ಚಿಂತೆ ಆಗಿತ್. ದಾರಿ ತಪ್ಪಿದ ಮಕ್ಕಳ ಹೇಂಗೆ ಸೆರಿ ಮಾಡ್ದೂಂತ ಚಿಂತೆ ಆವಾಂಗೆ. ಏನಾರ ಒಂದು ದಾರಿ ಹುಡ್ಕುದೋ ಇಲ್ಲರೆ ಈ ಕಾವುಲಿನನೇ ಅತ್ತ ಯಾರಿಗಾರ್ ದಾಟ್‌ಸಿ ಬುಡ್ದೋಂತ ಯೇಚನೆಲಿದ್ದೆ. ಏನಾರ್ ಕೊಲೆ ಉಪದ್ರಮನಿಯೋ…… ಇದ್ಕೆ ಏನ್ ಕಾರಣಂತೇಳಿ ಪತ್ತೆ ಮಾಡಿಕೆ ಜೋಯಿಸರಕ್ಕಲೆ ಹೋಗಿ ಪಂಚಾಂಗ ಕೇಳ್ರಾದೋಂತಳೂ ಆತ್ ಒಮ್ಮೆ.
ಒಂದ್ವಾರ ಕಳ್ದ್ ಅದೇ ಬೇಜಾರ್ಲಿ ಅದೇ ಕಾವುಲಿನ ತೆಗ್ದ್ ಗೋಧಿ ದೋಸೆ ಹೊಯ್ದೆ. ಈ ಸಣ್ಣಮಕ್ಕ ಎಲ್ಲ ಎಂತಾರ್ ಮಾಡ್ಬಡೀಂತ ಹೇಳ್ರೆ, ಮಾಡ್ಬೋಡೀಂತ ಹೇಳ್ದರನೇ ಮಾಡ್ವಾಂಗೆ. ದೋಸೆ ಬಂದಕೆ ಕಾಯಿನೂ ಹಾಕಿದ್ದರ್ಂದ ಕಂಡಿತ ಎದ್ರಿಕಿಲೇಂತಳೇ ನೆಗೆಟೀವೇ ನೆನ್ಸಿಕಂಡ್, ಸೆಟ್ಟ್‌ಗ ಹಿಡ್ದ್ ಕಾದ್ ನಿತ್ತೆ, ದೋಸೆ ಬೇಯಕೆ. ನಿನ್ನ ಸೆನಿ ಬುಡ್ಸೋಕು ಇಂದ್‌ಂತ ದೋಸೆ ಬೇಯಕೆ ಕಾದೆ. ಎಷ್ಟೋತ್ತಾರ್ ತೊಂದರೆ ಇಲ್ಲೆ, ಹೇಂಗೂ ಅಕ್ಕನ ಮಂಞ ಮನೆಗೆ ಹೋಗುಟು. ಮಧ್ಯಾಹ್ನ ಆದರೂ ಇದೇ ಕಾವುಲಿಲಿ ಹೊಯ್ದ್ ಎಳ್ಕ್‌ಸಿದ ದೋಸೇನೇ ತಿಂಬೋದು. ಇಲ್ಲರೆ ಬೇಡೇ ಬೇಡಾಂತ, ಉಪವಾಸ ಸತ್ಯಾಗ್ರಹದೊಟ್ಟಿಗೇ ಯುದ್ಧಕ್ಕೆ ಹೋರ್ಟಾಂಗೆ, ಹೆಗಲ್‌ಲಿ ಇದ್ದ ದುಪ್ಪಟನ ಸೊಂಟಕ್ಕೆ ಸುತ್ತಿ ಗಟ್ಟಿಕಟ್ಟಿ ನಿತ್ತೆ. ದೊಸೆ ಬೆಂದಾಕನ ಜೈ ಗುರುದೇವ್‌ಂತ ಜೋರ್ಲೇ ಹೇಳ್ದೆ. ಹಕ್ಕಲೆ ಮನೆ ಹೈದ ಬಂದ್ ನಿಲ್ಕಿ ನೋಡಿ ಹೋತ್, ನಿನ್ನೆ ಸರಿ ಇದ್ದ ಇದ್ಕೆ ಇದ್ದಕ್ಕಿದ್ದಂಗೆ ಏನಾತ್‌ಂತ ಆಗಿರೊಕು.

ದೋಸೆ ಎದ್ರುದ್ದೇಲೇಂತ 120 ಪರ್ಸಂಟ್ ಗೇರೆಂಟಿಲಿ, ಒನಕೆ ಓಬವ್ವನಾಂಗೆ ಸಟ್ಟ್‌ಗ ಹಿಡ್ದ್ ನಿತ್ತಿದ್ದ ನಂಗೆ, ದೊಸೆ ಎಳ್ಕ್‌ಸಿಕಾಕನ ಸೋಜಿಗ. ಸೆಟ್ಟ್‌ಗದೊಟ್ಟಿಗೆ ಸಾಂಕಿದ ನಾಯಿನಾಂಗೆ ದೋಸೆ ಸೀದಾ ಎದ್ದ್ ಬಾತಲೇ, ಯಾವ ತಕರಾರು ಇಲ್ಲದೆ. ಯುದ್ಧೋನ್ಮಾನದಲಿ ಇದ್ದ ನಂಗೆ ಮುಸುಂಡ್‌ಗೆ ಫ್ರಿಜ್ಜ್ ನೀರ್ ಚೋಂಪಿದಾಂಗಾತ್. ಒಟ್ಟಿಗೆ ಕುಸಿನೂ ಆತ್. ಹುರ್ರೇ …ಕಾವುಲಿ ದಾರಿಗೆ ಬಾತ್. ಕುಸಿಲಿ ಏನ್ ಮಾಡೊಕೂಂತ ಗೊತ್ತಾಗದೆ ಎರಡ್ನೇ ದೋಸೆ ಹೊಯ್ದ್ ಓಡಿ ಹೋಗಿ, ಅಕ್ಕಂಗೆ ಫೋನ್ ಮಾಡಿ ಹೇಳ್ದೆ ದೋಸೆ ಎಳ್ಕಿತ್. ಬೊಳ್ಪೋಳ್ಪಿಗೆ ಇದ್ ಏಕೆ ಫೋನ್ ಮಾಡ್ತ್‌ತ್‌ಂತ ಟೆನ್ಷನ್‌ಲೇ ಫೋನ್ ತಕಂಡ ಅಕ್ಕ ದೋಸೆ ಎದ್ದ ಕತೆ ಕೇಳಿ, ಪುಣ್ಯಕೆ ದೋಸೆ ಎದ್ದತ್ತ್‌ತ ನೀ ಬಿಸಿಬಿಸಿ ಕಾವುಲಿಗೆ ಮುತ್ತು ಕೊಟ್ಟತ್ಲೆಲೇಂತ ತಮಾಸೆ ಮಾಡ್ತ್. ಅದರೊಟ್ಟಿಗೆ ಕತೆ ಹೇಳಿ ಬಾಕನ ಇಲ್ಲಿ ದೋಸೆ ಕರ್ಂಟಿಟು. ಆ ಕರ್ಂಟಿದ ದೋಸೆನೂ ಅಷ್ಟ್ ಲಾಯ್ಕ್‌ಲಿ ಎದ್ದತ್. ನಂಗೆ ಕುಸಿನ ಮೇಲೆ ಕುಸಿ. ಆ ಕುಸಿಲಿ ಎರ್ಡ್ ದೋಸೆ ಹೆಚ್ಚೇ ಹೊಯ್ದ್ ತಿಂದೆ…!

(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ವೃತ್ತಿಪರ ಅನುವಾದಕರು)