


*ಚಂದ್ರಾವತಿ ಬಡ್ಡಡ್ಕ.
ಸಾಮಾನ್ಯಕೆ ರಾಜ್ಯೋತ್ಸವಂತೇಳ್ರೆ ನವಂಬರ್ ಒಂದರಂದ್ ಬಾವುಟ ಹಾರ್ಸಿ ಬಾಸಣ ಮಾಡ್ರೆ ಮತ್ತೆ ಮುಂದೆನ ವರ್ಸದ ನವಂಬರ್ ಬಾಕನ ಕನ್ನಡ ನೆಂಪಾದೂಂತ ಒಂದು ಚೋದ್ಯದ ಮಾತುಟ್ಟು. ಕೆಲವು ಕಡೆ ನವಂಬರ್ ತಿಂಗ ಇಡೀ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡ್ದದೆ. ದೊಡ್ಡ ಮೈಕ, ಬಾಸಣ, ಡೇನ್ಸ್ ಪದ್ಯ ಎಲ್ಲ ಧಾಂ ಧೂಂ ನಡ್ದ್ ಹೊಡಿ ಹಾರ್ಸಿ ಮಲ್ಗಿದ ಕನ್ನಡನ ಎದ್ದ್‌ರ್ಸಿ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳ್ವಾಂಗೆ ಕನ್ನಡಂ ಗಲ್ಲಿಗಲ್ಲಿಗೆ ಮಾಡ್ವೆ. ಈ ಸರ್ತಿ ನವೆಂಬರ್ ಒಂದರಂದ್ ನಾವು ಸುಳ್ಯದ ಹಿರಿಯ ನಾಗರಿಕರ ಸಂಘ ಸಂಧ್ಯಾ ಚೇತನದವರೊಟ್ಟಿಗೆ ಭಾಗಮಂಡ್ಲ ತಲಕಾವೇರಿಗೆ ಟೂರ್ ಹೋಗಿದೋ. ಹಾಂಗೆ ನಮ್ಮ ಕನ್ನಡ ರಾಜ್ಯೋತ್ಸವ ಆಚರ್ಣೆ ಬಸ್ಸ್‌ಲಿ ಆತ್. ಈ ಸಂಧ್ಯಾ ಚೇತನದವರ ಬಗ್ಗೆ ಹೇಳಿಕೆ ಸುಮಾರ್ ಉಟ್ಟು. ಅದರ ಇನ್ನೊಮ್ಮೆ ಮಾತಾಡೊಮೋ.
ನಮ್ಮ ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಘಟಕ ಮತ್ತೆ ಸುವಿಚಾರ ಸಾಹಿತ್ಯ ವೇದಿಕೆನವು ಕನ್ನಡ ರಾಜ್ಯೋತ್ಸವ ಆಚರ್ಣೆ ಪ್ರಯುಕ್ತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಇಸಿಕಂಡೊಳೋ. ಒಂದು ವಾರದ ಈ ಕಾರ್ಯಕ್ರಮಲಿ ಬೇರೆಬೇರೆ ಕಡೆ ಬೇರೆಬೇರೆ ಅರ್ಥಪೂರ್ಣ ಕಾರ್ಯಕ್ರಮಂಗಳ ಹಾಕಂಡೊಳೋ. ಮೊನ್ನೆ ಶನಿವಾರದ ಒಂದು ಕಾರ್ಯಕ್ರಮಕೆ ಹೋಗೀದೆ. ‘ಮಹಿಳಾ ಸಾಹಿತ್ಯ ಸಂಭ್ರಮ’ ಹೆಸರ್ನ ಕಾರ್ಯಕ್ರಮಲಿ ಶ್ರೀ ಶಿವಣ್ಣ ಕೊಳ್ಳೆಗಾಲ ಜಾನಪದ ಸಾಹಿತ್ಯಲಿ ಸ್ತ್ರೀ ಸಂವೇದನೆ ವಿಷಯ ಹಿಡ್ಕಂಡ್ ಆ

ದಿನದ ಮಾತ್ ಮಾತಾಡ್ದೊಣ್ಣಾ… ಎಷ್ಟ್ ಲಾಯ್ಕಿ ಮಾತಾಡ್ದೊ ಗೊತ್ತುಟಾ. ಅಕ್ಷರ ಜ್ಞಾನ ಇಲ್ಲದ, ಶಾಲೆಗೆ ಹೋಗದ ಅವ್ವಂದರ್ ಎಂತಾ ಸಾಹಿತ್ಯ ಕೊಟ್ಟೊಳೋಂತ ಕೆಲವು ಪದ್ಯಗಳ ಹಾಡಿ ಮನ್ಸ್‌ಗೆ ಮುಟ್ಟುವಾಂಗೆ ಅಷ್ಟ್ ಲಾಯ್ಕಿಲಿ ಹೇಳ್ದೋ. ಇದೆಲ್ಲ ಬಾಯಿಂದ ಬಾಯಿಗೆ ಪಗರ್‌ದ ಪದಗ (ಪದ್ಯಗ). ಕವಿರಾಜ ಮಾರ್ಗಂದ ಹಿಡ್ದ್ ಸಿರಿ ಪಾಡ್ದನದ ವರೆಗೆ, ರಾಗಿ ಬೀಸಿಕನ ಹೇಳುವ ಪದ್ಯ, ಅಣ್ಣತಂಗೆನ ಮಾತ್‌ಗ… ಹೀಂಗೆ ಹಲವು ವಿಷಯಗಳ ಪ್ರಸ್ತಾಪ ಆತ್. ಹೆರಿಗೆಗೆ ಬಂದ ಮಗ ಕೂಸುನ ತೆತ್ತಿಕಂಡ್, ಅವ್ವ ಕೊಟ್ಟ ಸೀರೆನ ಉಟ್ಟ್‌ಕಂಡ್, ತೊಟಿಗಿಲ್‌ನ ಹಿಡ್ಕಂಡ್, ಕೂಸುಗೆ ಹಾಲ್ ಕುಡ್ಸಿಕೆ ಅಪ್ಪ ಕೊಟ್ಟ ಎಮ್ಮೆನ ಹೊಡ್ಕಂಡ್ ಗಂಡನ ಮನೆಗೆ ಹೊರ್ಟ್ ಹೋದೆ. ಗುಡ್ಡೆನ ಕೊಡಿಗೆ ಎತ್ತಿಕನ ಇನ್ನ್ ಗುಡ್ಡೆ ಇಳ್ದರೆ ನನ್ನ ತೌರ್ ಕಣ್ಣ್‌ಗೆ ಕಾಂಬೊದ್ಲೇಂತಾಕನ ಯಾವ ಒಂದ್ ಭಾವಲಿ ಅದರ ಮನೆನ ತಿರ್ಗಿ ನೋಡ್ದೇಂತ ಹೇಳ್ದರ ಕಣ್ಣ್‌ಗೆ ಕಟ್ಟುವಾಂಗೆ ನಮ್ಮ ಮುಂದೆ ಇಸಿದೋ. ಇಂತ ಸುಮಾರ್ ಪದಗಳ ಹೇಳ್ದೋ. ಇದೊಂದು ಉದಾಹರ್ಣೆನ ಇಲ್ಲಿ ಬರ್ದಳೆ ಅಷ್ಟೆ. ಅವರ ಮಾತ್‌ನ ಎಡೇಲಿ ಒಂದ್ ಮಾತ್ ಹೇಳ್ದೋ, ಮುಂದೆನ ಕಾಲಲಿ ಮನೆಲಿದ್ದ ಒಬ್ಬ ಅಜ್ಜಿ ತೀರಿ ಹೋದರೆ ಒಂದು ಲೈಬ್ರೆರಿ ಸತ್ತ್ ಹೋದಾಂಗೇಂತ. ಎಷ್ಟ್ ಸತ್ಯ ಅಲಾ…. ಆಗನ ಕಾಲದ ಅವ್ವಂದರ್‌ಗೆ, ಉಗ್ಗವ್ವಂದರಿಗೆ ಇದ್ದ ಜ್ಞಾನ, ತಿಳುವಳಿಕೆ ಅಂತದ್ದಾಗಿತ್ತ್. ಸುಮಾರ್ ಐವತ್ತ್ ನಿಮ್ಶ ಇವು ಮಾತಾಡಿಕನ ಯಾರ್ ಬಾಯಿ ಆಗಳ್ಸಿತ್ಲೆ, ನಿದ್ದೆ ತೂಗಿತ್ಲೆ. ಎಲ್ಲವೂ ಕಣ್ಣ್‌ನ, ಕೆಬಿನ, ಮನ್ಸ್‌ನ ಅವುಕೆ ಫೋಕಸ್ ಮಾಡುವಂತ ಮಂತ್ರಶಕ್ತಿ ಇತ್ತ್ ಅವರ ಮಾತ್‌ಗಳಿಗೆ. ಚೊಮ್ಮುನ ಮಡ್ಕೆಗೆ ಹೊಡ್ದಾಂಗೆ ಅಷ್ಟ್ ಕ್ಲಿಯರ್ ಆಗಿ ಇರುವ ಇವರ ಸೊರ, ರಾಗ ಕೇಳವರ ತಲೆತೂಂಗುವಾಂಗೆ ಮಾಡ್ದೆ. ಇವು ಶಿಕ್ಷಕರ ತರಬೇತುದಾರ ಆಗಿದ್ದವು, ಈಗ ಪಿಂಚಿಣಿ ಆಗುಟು. ಕೊಳ್ಳೆಗಾಲದವು ಆದರೂ ಅವುಕೆ ಸುಳ್ಯ ನಂಟ್ರ ಮನೆ ಇದ್ದಾಂಗೆ. ಸುಮಾರ್ ಹತ್ತ್ ವರ್ಷಂದ ಇಲ್ಲಿಗೆ ಅವು ಬೇರೆಬೇರೆ ಕಾರ್ಯಕ್ರಮಕ್ಕೆ ಬರ್ತಾ ಒಳೋ. ನಾ ಮಾತ್ರ ಅವರ ಕಂಡದ್ – ಕೇಳ್ದ್ ಇದೇ ಸುರು. ಕನ್ನಡ ರಾಜ್ಯೋತ್ಸವದ ಲೆಕ್ಕಲಿ ಇಂತ ಒಳ್ಳೊಳ್ಳ

ಕಾರ್ಯಕ್ರಮಗಳ ಸುಳ್ಯ ಮತ್ತೆ ಸುಳ್ಯ ಸುತ್ತಮುತ್ತ ಬಿತ್ತಿದ ಸುಳ್ಯ ಸಾಹಿತ್ಯ ಪರಿಷತ್ ಮತ್ತೆ ಸುವಿಚಾರ ವೇದಿಕೆನವ್ಕೆ ಅಭಿನಂದನೆಗ.
‘ವ್ಯವಸ್ಥೆಯ ಪ್ರತಿಬಿಂಬ’ ಪತ್ರಿಕೆಲಿ ಕೆಲ್ಸ ಮಾಡಿಕಂಡಿರಿಕನ ಆಪೀಸ್ ಮೆನೆಜರ್, ಅಸಿಸ್ಟೆಂಟ್ ಎಡಿಟರ್, ಎಡಿಟರ್ ಅಸಿಸ್ಟೆಂಟ್, ಚೀಪ್ ಸಬ್‌ಎಡಿಟರ್, ಆಪೀಸ್ ಎಡ್ಮಿನ್, ಸರ್ಕ್ಯೂಲೇಶನ್ ಇನ್‌ಚಾರ್ಜ್, ಎಡ್ವಟೈಸ್‌ಮೆಂಟ್ ಹೆಡ್, ಎಲ್ಲವು ರಜೆ ಮಾಡ್ರೆ ಅಲ್ಲರೆ ಇದ್ದವು ಬುಟ್ಟು ಹೋದರೆ ಆಪೀಸ್ ಬಾಯ್ (ಗರ್ಲ್) ಎಲ್ಲನೂ ಆಗಿ ಆಲ್‍ರೌಂಡರ್ ಆಗಿದ್ದೆ. ಹಾಂಗಾಗಿ ಬೊಳ್ಪುಗೆ ಆಪೀಸ್‌ಗೆ ಹೋಕನೇ ಪೇಪರ್ ಅಂಗ್ಡಿಂದ ಆಪೀಸ್‌ಗೆ ತರ್ಸುವ ಐದಾರ್ ಪೇಪರ್, ವೀಕ್ಲಿ, ಮಂತ್ಲಿ ಎಲ್ಲ ಹಿಡ್ಕಂಡ್ ಹೋತಿದ್ದೆ. ಹೀಂಗೆ ದಿನಾ ಪೇಪರ್ ತಕಂಬಕೆ ಉರ್ವಾಸ್ಟೋರ್‌ಲಿ ಇದ್ದ ಪ್ರತಾಪ್ ಸ್ಟೋರ್‌ಗೆ ಹೋಕನ ಆ ಅಂಗ್ಡಿಲಿ ಇರ್ತಿದ್ದ ಅಂಕಲ್ ಪೇಪರ್‌ನೊಟ್ಟಿಗೆ ಒಂದು ಗುಡ್‌ಮಾರ್ನಿಂಗ್ ಫ್ರೀ ಕೊಡ್ತಿದ್ದೋ. ಆಮೇಲಾಮೇಲೆ ನಾ ಪೇಪರ್ಲಿ ಕೆಲ್ಸ ಮಾಡಂವಾಂತ ಗೊತ್ತಾದ ಮೇಲೆ ರಾಜಕೀಯ, ಹವಾಮಾನ, ಮಂಗ್ಳೂರ್ ಟ್ರಾಫಿಕ್ ವಿಷಯ ಎಲ್ಲ ಒಂದೆರ್ಡ್ ನಿಮ್ಶ ಮಾತಾಡಿ ಕಳ್ಸ್‌ತ್ತಿದ್ದೋ. ಸುಮಾರ್ ಸಮಯ ಕಳ್ದಮೇಲೆ ಗೊತ್ತಾತ್ ಅವು ಮಂಗ್ಳೂರ್‌ನ ಸುರೂನ ಮೇಯರ್ಂತ. ಯಾಗೋಳು ಬಿಳಿ ಸರ್ಟ್, ಬಿಳಿ ವೇಸ್ಟಿ ಉಡ್‌ತಿದ್ದ ಅವು ಮಾಜಿ ಮೇಯರ್ಂತೇಳ್ವ ಯಾದೇ ಮಟ್ಟ್, ಗತ್ತ್ ಇಲ್ಲದೆ ತುಂಬ ಸಿಂಪಲ್ ಆಗಿ ಇದ್ದೋ.

ಒಮ್ಮೆ ನವೆಂಬರ್ ಒಂದರಂದ್ ಮಾಮೂಲುನಾಂಗೆ ಪೇಪರ್ ತಕಂಬಕೆ ಹೋಕನ ಗುಡ್ ಮಾರ್ನಿಂಗ್ ಆದ ಮೇಲೆ ಹೆಪಿ ಕನ್ನಡ ರಾಜ್ಯೋತ್ಸವಾಂತ ಹೇಳ್ದೋ. ನಂಗೆ ನೆಗೆಬಾತ್. ಅಷ್ಟೊತ್ತಿಗೆ ಅವುಕೆನೂ ಕನ್ನಡ ರಾಜ್ಯೋತ್ಸವಕೆ ಇಂಗ್ಲೀಸ್‌ಲಿ ಸುಭಾಸಯ ಹೇಳ್ದ್ ಸ್ಟ್ರೈಕ್ ಆಗಿ ಜೋರ್ ನೆಗಾಡ್ದೋ. ಧರಂ ಸಿಂಗ್ ಮುಖ್ಯ ಮಂತ್ರಿ ಆಗಿರಿಕನ ರಾಜ್ಯೋತ್ಸ ಪ್ರಶಸ್ತಿ ಪಟ್ಟಿ ಎರಡ್ಮೂರ್ ಬೇಚ್‌ಲಿ ಬಿಡ್ಗಡೆ ಆಗೀತ್. ಮೇಡಂ ನಿಮ್ಮ ಹೆಸರೇನಾದ್ರೂ ಉಂಟಾ ನೋಡಿ ಮೂರ್ನೇ ಪಟ್ಟಿ ಬಿಡುಗಡೆ ಆಗಿದೇಂತೇಳ್ದೋ. ನಂಗಾ ಸಾರ್, ಒಳ್ಳೆ ತಮಾಷೆ ನಿಮ್ದೂಂತ ಹೇಳಿ ಪೇಪರ್ ತಕಂಡೆ. ಈಗಿನ ಕಾಲದಲ್ಲಿ ಪ್ರಶಸ್ತಿಗೆ ಪ್ರತಿಭೆಯೇ ಬೇಕೂಂತ ಇಲ್ಲ, ಪ್ರಶಸ್ತಿ ತಕಳ್ಳೋದೇ ಒಂದು ಪ್ರತಿಭೇಂತ ಒಗ್ಗರ್ಣೆ ಹಾಕಿದೋ. ಅದರ್ನೂ ಅಲ್ಲಾಂತೇಳಿಕೆ ಆದುಲೆ. ಈ ಪ್ರಶಸ್ತಿ ಪುರಸ್ಕಾರಗಳ ತಕಂಬಂತ ಪ್ರತಿಭೆಗಳೂ ತುಂಬ ಒಳೊ ಅಲ್ಲನೋ.
ಪ್ರಶಸ್ತಿ ಸನ್ಮಾನಂತೇಳಿಕನ ಸುಮಾರ್ ಸಂಗತಿಗ ನೆಂಪುಗೆ ಬಂದವೆ. ಒಮ್ಮೆ ಲಯನ್ ಬ್ರಿಜ್ಜ್ ಕಂಪೆನಿದ್ ಒಂದು ಪ್ರೊಜೆಕ್ಟ್ ಮಾತ್‌ಕತೆ ಆಗೀತ್. ಹಾಂಗೆ ಹಂಞ ಸಮಯ ಬೆಂಗ್ಳೂರ್‌ಲೇ ಇದ್ದೆ. ಆಗ ನನ್ನ ಒಂದು ಜರ್ನಲಿಸ್ಟ್ ಜೋಸ್ತಿನ ಕಾಂಬಕೆ ಇತ್ತ್. ಅದ್ ನಾ ಇಂತ ಕಡೆ ಒಳೆ ಒಂದು ಸಾಹಿತ್ಯ ಕಾರ್ಯಕ್ರಮಲಿ ಒಳೆ ನೀ ಅಲ್ಲಿಗೆ ಬಾಂತ ಹೇಳೀತ್. ಹಾಂಗೆ ನಾ ಅದರ ಕಾಂಬಕೆ ಅಲ್ಲಿಗೆ ಹೋಕನ ಆ ಕಾರ್ಯಕ್ರಮ ನಡ್ಸವುಕೆ ಅದ್ ನನ್ನ ಪರಿಚಯ ಮಾಡ್ತ್. ಇವ್ರು ನನ್ನ ಹಳೇ ಕಲೀಗ್, ಅನುವಾದಕಿ, ಲೇಖನಗಳನ್ನೆಲ್ಲ ಬರೀತಾಳೇಂತ ಹೇಳ್ತ್. ಅಷ್ಟೆ. ಆಮೇಲೆ ಅಲ್ಲಿಂದ ಹೊರ್ಟ್ ಬಂದೊ. ಅಲ್ಲಿಂದ ಬಂದ್ ಒಂದ್ ವಾರ ಕಳ್ದ ಮೇಲೆ ನನ್ನ

ವಾಟ್ಸಾಪ್‌ಗೊಂದು ಇನ್ವಿಟೇಶನ್ ಬಾತ್. ತೆಗ್ದ್ ನೋಡ್ರೆ ಆ ಕಾರ್ಯಕ್ರಮದ ಪಟ್ಟಿಲಿ ಸನ್ಮಾನದ ಎದ್‌ರ್ ನನ್ನ ಹೆಸ್ರ್ ಮತ್ತೆ ‘ಸಾಹಿತ್ಯ ಚಿಂತಕಿಂತ’ ಪ್ರಿಂಟ್ ಆಗುಟು. ಇದ್‌ಯಾರ್ಂತ ಆಲ್ಸಿಕಂಡಿರಿಕನನೇ ಪೋನ್ ಬಾತ್. ಮೇಡಂ ನಮ್ಮ ಮುಂದಿನ ತಿಂಗಳ ಕಾರ್ಯಕ್ರಮದಲ್ಲಿ ನಿಮ್ಮನ್ನು ಸನ್ಮಾನ ಮಾಡ್ತೇವೇಂತ. ನಂಗೆ ಒಮ್ಮೆಗೆ ಅದ್ ಯಾರ್ಂತಳೇ ಗೊತ್ತಾತ್ಲೆ. ನೀವು ಯಾರು ನಂಗೆಂತಕೆ ಸನ್ಮಾನ ಮಾಡ್ದೂಂತ ಕೇಳ್ದೆ. ಮೊನ್ನೆ ಬಂದಿದ್ರಲ್ಲ …. ಮೇಡಂ ಜೊತೆಗೇಂತ ಹೇಳಿಕನ ಯಾರ್ಂತ ಗೊತ್ತಾತ್. “ನಂಗೆ ನನ್ನ ಚಿಂತೆಯೇ ಮುಗ್ದಿಲ್ಲ, ನಾನು ನೀವು ಹೇಳಿದಂತ ಚಿಂತಕಿ ಅಲ್ಲಾಂತೇಳಿ” ಫೋನ್ ಇಸಿದೆ. ಮತ್ತೆ ಅತ್ತ ತಲೆಹಾಕಿನೂ ಮಲ್ಗಿತ್ಲೆ. ನನ್ನ ದೋಸ್ತಿಗೆ ಪೋನ್ ಮಾಡಿ ಹೀಂಗೀಂಗೆಂತ ಹೇಳ್ದೆ. ಅದ್ಕೆ ಅದ್ ಓ…. ಅದ್ಕೆ ಇರೊಕು ನನ್ನಕ್ಕಲೆ ನಿನ್ನ ಪೋನ್ ನಂಬರ್ ತಕಂಡೋ. ನಾ ಅವುಕೆ ಟ್ರಾನ್ಸ್‌ಲೇಶನ್ ಏನಾರ್ ಬೇಕಾಯ್ತೋಂತ ಗ್ರೇಸಿದೇಂತ ಹೇಳ್ತ್. “ಹೋಗಿ ಚಿಂತನೆ ಮಾಡಿ ಸನ್ಮಾನ ಮಾಡ್ಸಿಕಂಬದೊದಲ್ಲ, ನಿನ್ನ ಸಾಧನೆಗಳ ಪಟ್ಟಿ ಉದ್ದ ಆಗ್ತಿತ್ತ್ಂತ” ನೆಗಾಡ್ತ್.
ಒಂದೆರ್ಡ್ ವರ್ಸದ ಹಿಂದೆ ಒಂದು ಪೋನ್ ಬಂದೀತ್. ನಾವು …… ವೇದಿಕೆಯಿಂದ ನಿಮ್ಗೆ …… ಪ್ರಶಸ್ತಿ ಕೊಡುವ ಬಗ್ಗೆ, ನಿಮ್ಗೆ ….ರತ್ನ ಟೈಟಲ್ ಕೊಡ್ತೇವೆ ಐದು ಸಾವಿರ ಕೊಡೀಂತ ಸೀದ ವ್ಯವಹಾರ ಮಾತಾಡ್ದೋ. ನಾ ಯಾವ ಲೆಕ್ಕಲೀಂತ ಕೇಳ್ದೆ. ಅಲ್ಲ ನೀವು ಫೇಸ್ಬುಕ್ಕಲ್ಲಿ ತುಂಬ ಆಕ್ಟೀವ್ ಇದ್ದೀರಿ, ಏನ್ ಬರ್ದಿದ್ದೀರಿಂತ ಕೇಳ್ದೋ. ಅದ್ಕೆ ನಾ, “ನಾನು ಈಗ ಮೊಬೈಲ್ ಕಂಪ್ಯೂಟರ್ ಆದ ಮೇಲೆ ಏನೂ ಬರಿಯುವುದಿಲ್ಲ, ಟೈಪ್ ಮಾಡುದು. ಮೊದಲಾದ್ರೆ ಮನೆಯವರಿಗೆ ಪತ್ರ, ಚಿಕ್ಕದಿರುವಾಗ ಕೋಪಿ, ನೋಟ್ಸ್ ಎಲ್ಲ ಬರೀತಿದ್ದೆಂತ” ಹೇಳ್ದೆ. ಫೇಸ್ಬುಕ್ ರತ್ನನೋ, ಫೇಸ್ಬುಕ್ ಶ್ರೀ…. ಹೀಂಗೆ ಎಂತಾರ್ ಪ್ರಶಸ್ತಿ ಆಗಿದರೆ ತಕಣಕಾಯ್ತೋ ಏನೋ ಐದ್ ಸಾವ್ರ ಕೊಟ್ಟ್.

ನನ್ನ ಮೈಸೂರು ದೋಸ್ತಿ ಪುಷ್ಪಂಗೆ ಹೀಂಗೀಂಗಾತ್ಂತ ಹೇಳ್ದೆ. ಅದ್ಕೆ ಅದೊಂದು ಕತೆ ಹೇಳ್ದ್ ಇನ್ನೂ ಲಾಯ್ಕಿ ಉಟ್ಟು. ಹೀಂಗೆ ಪ್ರಶಸ್ತಿ ಕೊಡುವ/ಸನ್ಮಾನ ಮಾಡುವ ಒಂದು ಸಂಸ್ಥೆವು ಸಮಾಜಲಿ ಒಳ್ಳ ಕೆಲ್ಸ ಮಾಡ್ದವು ಯಾರಾರ್ ಇದ್ದರೆ ಹೇಳಿ, ನಾವು ಅವರ ಗುರ್ತ್‌ಸಿ ಸನ್ಮಾನ ಮಾಡುವೇಂತ ಹೇಳೀದೋ ಗಡ. ಆದ್ಕೆ ಒಬ್ಬ ಸೋಶಿಯಲ್ ವರ್ಕರ್‌ನ ರೆಫರ್ ಮಾಡೀದೋ. ಒಂದು ಹತ್ತ್ ಜನಕೆ ಒಟ್ಟಿಗೆ ಸನ್ಮಾನ ಮಾಡಿ, ಪೇಟ ಇಸಿ, ಸಾಲ್ ಹೋಸಿ, ಫಲಕ ಕೊಟ್ಟ್ ಉದ್ದ ಭಾಷಣ ಮಾಡಿ ಹಾಡಿ ಹೊಗಳಿ ಎಲ್ಲ ಆಗಿ ಕಾರ್ಯಕ್ರಮ ಮುಗ್ದ ಮೇಲೆ ನಮ್ಮ ಸಂಸ್ಥೆಗೇನಾರ್ ಕೊಡೀಂತ ಕೇಳ್ದೊಗಡ! ಅಗಿಯಕೂ ಅಲ್ಲ ನುಂಗಿಕೂ ಅಲ್ಲ! ಪಾಪ, ಅವ್ಕೆಲ್ಲ ಆ ಸನ್ಮಾನದ ಪೇಟ ನೋಡಿಕನ ಎಷ್ಟ್ ಲಾಯ್ಕಿಲಿ ಟೊಪ್ಪಿ ಹಾಕೀದೋಂತ ಆತಿರ್ದು!
ಮೊನ್ನೆ ಹೀಂಗೆ ಯಾರೊಟ್ಟಿಗೋ ಸಾಂಪ್ರತ ಉಭಯ ಕುಶಲೋಪರಿ ಮಾತಾಡಿಕಂಡಿಕನ ಪ್ರಶಸ್ತಿ ಪುರಸ್ಕಾರಗಳ ಮಾತ್ ಬಾತ್. ಆಗ ಅವು ಹೇಳ್ದೋ, ಇದ್ಕೆಲ್ಲ ಯೋಗ್ಯತೆ ಮಾತ್ರ ಅಲ್ಲ ಯೋಗನೂ ಬೇಕುಗಡ. ಬರೀ ಆಯಾ ಕ್ಷೇತ್ರಲಿ ಪ್ರತಿಭೆ ಇದ್ದರೆ, ಯೋಗ್ಯತೆ ಇದ್ದರೆ ಸಾಲದ್. ಲಾಬಿ ಮಾಡುವ ವಸೂಲಿಬಾಜಿ ಮಾಡುವ ಪ್ರತಿಭೆ, ಅವರವರ ಬೆನ್ನ್‌ನ ಅವ್ವವೇ ತಟ್ಟಿಕಂಡ್, ಅವರವರ ತುತ್ತೂರಿನ ಅವ್ವವೇ ಉರ್ಗುವ ಪ್ರತಿಭೆನೂ ಬೇಕಾದೇಂತ ಹೇಳ್ದೋ.

ಎಲ್.ಕೆ. ಆಡ್ವಾಣಿಯವು ಸುಳ್ಯಕೆ ಬಂದಿರಿಕಾಕನ ಇಲ್ಲಿನ ಶಿಕ್ಷಣ ಸಂಸ್ಥೆಗಳ ನೋಡಿ ಬರೀ ಒಬ್ಬನೇ ಮೊಂಯಿಂಸಂದ ಇದ್ ಸಾಧ್ಯನೋಂತ ಮೂಕುನ ಮೇಲೆ ಬೆರ್ಳ್ ಇಸೀದೋ ಗಡ. ಇಷ್ಟ್ ಸಣ್ಣ ಊರುನ ಒಂದು ‘ಎಜುಕೇಶನ್ ಹಬ್’ ಮಾಡ್ದ ಕುರುಂಜಿಯವುಕೆ ಸಿಕ್ಕದ ಪದ್ಮ ಪ್ರಶಸ್ತಿ ಎಂತಕೆ? ಒಮ್ಮೆ ಎಂತದೋ ಮಾತಾಡಿಕನ ಐಲೇಸಾ ತಂಡದ ಶಾಂತಣ್ಣ (ಶಾಂತರಾಮ್ ವಿ ಶೆಟ್ಟಿ) ಹೇಳ್ತಿದ್ದೊ. ಸುಬ್ರಾಯ ಚೊಕ್ಕಾಡಿ ಸರ್‌ಗ್ ನನಲಾ ರಾಜ್ಯೋತ್ಸವ ಪ್ರಶಸ್ತಿ ಕೊರ್ತುಜಿ. ಆರೆಗ್ ಕೊರಂದಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದಾಯೆಗ್ಂತ. ಇಲ್ಲರೂ ಅವು ದಾಯೆಗ್…..?????!!!!

(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ ಹಾಗು ಅಂಕಣಕಾರರು. ವೃತ್ತಿಪರ ಅನುವಾದಕರು)