ಸುಳ್ಯ:ಅರೆಭಾಷೆ ಅತ್ಯಂತ ಶ್ರೀಮಂತ ಭಾಷೆ. ಅದ್ಭುತ ಶಬ್ದಗಳ ಭಂಡಾರವನ್ನು ಹೊಂದಿರುವ ಸೊಗಡಿನ ಭಾಷೆ. ಈ ಭಾಷೆಯಲ್ಲಿ ಕ್ರಿಯಾಶೀಲರಾಗಿರುವ ಗ್ರಾಮೀಣ ಭಾಗದ ಬರಹಗಾರರು, ಕಲಾವಿದರಿಗೆ ಪ್ರೋತ್ಸಾಹ ದೊರೆತರೆ ಉತ್ತಮ ಸಾಹಿತಿಗಳಾಗಿ, ಕಲಾವಿದರಾಗಿ ರೂಪುಗೊಳ್ಳಬಲ್ಲರು ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಕೆ.ಆರ್.ಗಂಗಾಧರ ಹೇಳಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು
ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ನಡೆದ ಸಾಹಿತಿಗಳು, ಬರಹಗಾರರು ಮತ್ತು ಕಲಾವಿದರೊಂದಿಗೆ ‘ಸಂವಾದ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಾಲೆಗಳಲ್ಲಿ ಅರೆಭಾಷೆ ಸಾಹಿತ್ಯ ಸಂಘ ರಚನೆ ಮಾಡಬಹುದು ಎಂದು ಸಲಹೆ ನೀಡಿದ ಅವರು ಸಾಹಿತ್ಯ ರಚನೆಯಲ್ಲಿ
ಅರೆಭಾಷೆ ಶಬ್ದಗಳನ್ನು ಬಳಸಿದರೆ ಇನ್ನಷ್ಟು ಆಕರ್ಷಕವಾಗಿಸಬಹುದು ಎಂದ ಅವರು ಒಂದು ಭಾಷೆ ಅಳಿದರೆ ಇಡೀ ಜನಾಂಗವೇ ಅಳಿದಂತೆ ಆದುದರಿಂದ ಮಕ್ಕಳಿಗೆ ಭಾಷೆಯನ್ನು ಕಲಿಸಬೇಕು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.
ಗೌಡರ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ಚಂದ್ರ ಕೋಲ್ಚಾರ್ ಮುಖ್ಯ ಅತಿಥಿಯಾಗಿದ್ದರು.
ಅರೆಭಾಷೆಯಲ್ಲಿ ಉತ್ತಮ ಸಾಹಿತ್ಯ, ಸಂಗೀತ, ನಾಟಕ, ಜನಪದ ಕಲಾ ಪ್ರಕಾರಗಳಿಗಾಗಿ ಒಂದೇ ವೇದಿಕೆಯಲ್ಲಿ ಎಲ್ಲವರನ್ನು ಸೇರಿಸಿ ಸಾಹಿತ್ಯ, ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸಂವಾದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ನಿರ್ವಾಹಕರಾದ ತೇಜಕುಮಾರ್ ಬಡ್ಡಡ್ಕ ಸಂವಾದ ನಿರ್ವಹಿಸಿದರು. ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿ, ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಲತಾ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ಸದಸ್ಯರಾದ ಚಂದ್ರಶೇಖರ ಪೇರಾಲು, ಪಿ.ಎಸ್.ಕಾರ್ಯಪ್ಪ, ಲೋಕೇಶ್ ಊರುಬೈಲು ಉಪಸ್ಥಿತರಿದ್ದರು. ಹಲವು ಮಂದಿ ಬರಹಗಾರರು ಹಾಗೂ ಕಲಾವಿದರು ಸಂವಾದದಲ್ಲಿ ಭಾಗವಹಿಸಿದ್ದರು.